ಮಕ್ಕಳ ಸುರಕ್ಷತೆ, ಭದ್ರತೆ ಕಾರ್ಯಾಗಾರ
ತುಮಕೂರು: ತುಮಕೂರಿನ ಕೆಂಪೇಗೌಡ ರೆಸಿಡೆನ್ಷಿಯನ್ ಸ್ಕೂಲ್ ಆವರಣದಲ್ಲಿ ಮಕ್ಕಳ ಸುರಕ್ಷತೆ ಹಾಗೂ ಭದ್ರತೆ ಕುರಿತಂತೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಟಿ. ದಾಸೇಗೌಡ, ಲೇಖಕಿ ಬಾ.ಹ. ರಮಾಕುಮಾರಿ, ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದರಾಜು, ಬಿಇಒ ಕುಮುದಾ, ಎಎಸ್ಐ ಶೋಭಾ, ಮುಖ್ಯ ಶಿಕ್ಷಕಿ ಕನಕಲಕ್ಷ್ಮಿ, ಬಶೀರ್ ಅಹಮದ್, ಮಮತಾ, ಮಾತನಾಡಿದರು.
ಆಧ್ಯಾತ್ಮಿಕ ಚಿಂತನೆಯಿಂದ ಮಾತ್ರ ಪ್ರಗತಿ ಸಾಧ್ಯ
ಮಧುಗಿರಿ: ಅಧ್ಯಾತ್ಮಿಕ ಚಿಂತನೆಯಿಂದ ಮಾತ್ರ ಮಾನವೀಯ ಮೌಲ್ಯ ಮತ್ತು ದೇಶದ ಪ್ರಗತಿ ಸಾಧ್ಯ ಎಂದು ತಗ್ಗಿಹಳ್ಳಿ ಶ್ರೀರಾಮಕೃಷ್ಣಾಶ್ರಮದ ಶ್ರೀರಮಾನಂದ ಚೈತನ್ಯ ಸ್ವಾಮೀಜಿ ನುಡಿದರು. ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ತನ್ಮಯಿ ಪ್ರಕಾಶನ ಮತ್ತು ಕಸಾಪ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅನ್ನಪೂರ್ಣಮ್ಮ ಎನ್. ನಾಗಕೃಷ್ಣಯ್ಯ ಬಂದ್ರೇಹಳ್ಳಿ ಬರೆದಿರುವ ಭಕ್ತಿ ಸುಧಾ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ತಪ್ಪು ಹೆಜ್ಜೆ ಇಡುತ್ತಿರುವ ಸಮಾಜವನ್ನು ಸರಿಪಡಿಸಲು ಅಧ್ಯಾತ್ಮಿಕ ಚಿಂತನೆ ಅತಿ ಮುಖ್ಯ ಎಂದ ಅವರು, ಜೀವನದೂದ್ದಕ್ಕೂ ಕೃಷಿ ಚಟುವಟಿಕೆ ಅವಲಂಬಿಸಿ ಬೆಳದು ಬಂದ ಮಹಿಳೆ ಅನ್ನಪೂರ್ಣಮ್ಮ ಇಂತಹ ಇಳಿ ವಯಸ್ಸಿನಲ್ಲೂ ಉತ್ತಮ ಕೃತಿ ರಚಿಸಿ ಎಲ್ಲರೂ ಓದುವ ಪುಸ್ತಕ ಬರೆದು ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಲ್ಲದೆ ಈ ಭಕ್ತಿ ಸಧಾ ಕೃತಿಯಲ್ಲಿ ಉತ್ತಮ ಅಂಶಗಳು ಅಡಗಿದ್ದು, ಪುಸ್ತಕದಲ್ಲಿರುವ ವಿಚಾರಧಾರೆಗಳನ್ನು ಓದಿ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳುವ ಮೂಲಕ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಇತಿಹಾಸದ ಪಾಠ ಅರಿತವನ ಭವಿಷ್ಯ ಸುಂದರವಾಗಿರುತ್ತದೆ ಎಂಬುದಕ್ಕೆ ಹಿಂಬು ಕೊಟ್ಟಂತೆ ಸಾಹಿತ್ಯ ಅಧ್ಯಯನ ಮಾಡಿ ಈ ಇಳಿ ವಯಸ್ಸಿನಲ್ಲೂ ಪುಸ್ತಕ ಬರೆಯುವ ಅನ್ನಪೂರ್ಣಮ್ಮ ಅವರ ಭಕ್ತಿಸುಧಾ ಕೃತಿ ಸಮಾಜಕ್ಕೆ ಮಾದರಿಯಾಗಿದೆ ಎಂದರು. ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ, ಸದಸ್ಯ ಅಯೂಬ್, ಬಿಇಒ ವೈ.ಎನ್. ರಾಮಕೃಷ್ಣಯ್ಯ, ತಾ. ನೌಕಕರರ ಸಂಘದ ಅಧ್ಯಕ್ಷ ನಾ. ಮಹಾಲಿಂಗೇಶ್, ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಪ್ರಾಂಶುಪಾಲ ಚಿನ್ನ ತಿಮ್ಮಪ್ಪ, ಪಿಎಸೈ ಅಂಬರೀಶ್, ಸಿಪಿಐ ಗಿರೀಶ್ ನಾಯ್ಕ್, ಖ್ಯಾತ ವಕೀಲ ಎಚ್.ಕೆ.ವಿ.ರೆಡ್ಡಿ, ಮಧುಗಿರಿ ರಾಮು ಟ್ರಸ್ಟ್ ಅಧ್ಯಕ್ಷ ಎಂ.ಜಿ. ಮುಂಜುನಾಥ್, ಎಂ.ಜಿ.ರಘು, ಮೊದಲಾದವರು ಉಪಸ್ಥಿತರಿದ್ದರು.
ಕುರಿ ಸಾಕಣೆ ಉಚಿತ ತರಬೇತಿ
ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪರೀಕ್ಷಕರ ತರಬೇತಿ ಕೇಂದ್ರದ ವತಿಯಿಂದ ಇದೇ ತಿಂಗಳ 6 ಹಾಗೂ 7ರಂದು ಉಚಿತ ಕುರಿ ಸಾಕಣೆ ತರಬೇತಿ ನೀಡಲಾಗುವುದು ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ತರಬೇತಿ ಅವಧಿಯಲ್ಲಿ ಯಾವುದೇ ಭತ್ಯೆ ನೀಡುವುದಿಲ್ಲ. ಆಸಕ್ತರು ಕುಣಿಗಲ್ ರಸ್ತೆಯಲ್ಲಿರುವ ಜಿಲ್ಲಾ ಪಶು ಆಸ್ಪತ್ರೆ ಆವರಣಕ್ಕೆ ಆ.6 ರಂದು ಬೆಳಗ್ಗೆ 10-30ಕ್ಕೆ ಹಾಜರಾಗುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ 0816-2251214 ಸಂಪರ್ಕಿಸುವಂತೆ ಕೋರಲಾಗಿದೆ.
ಡಿವೈಎಫ್ಐ ಸದಸ್ಯತ್ವಕ್ಕೆ ಚಾಲನೆ
ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವಜನರನ್ನು ಕೇವಲ ಓಟ್ ಬ್ಯಾಂಕ್ ಆಗಿ ಮಾತ್ರ ಬಳಸುತ್ತಿದ್ದು, ಯುವಜನಾಂಗವನ್ನು ಸಂಪೂರ್ಣವಾಗಿ ಕಡೆಗಣಿಸಿವೆ ಎಂದು ಡಿವೈಎಫ್ಐನ ಜಿಲ್ಲಾ ಉಪಾಧ್ಯಕ್ಷ ಎಂ.ಜಿ. ಮಂಜುನಾಥ್ ವಿಷಾದಿಸಿದರು.
ತುಮಕೂರಿನ ಬಿಎಸ್ಎನ್ಎಲ್ ಕಚೇರಿ ಬಳಿ ಡಿವೈಎಪ್ಐ ಸದಸ್ಯತ್ವ ಆಂದೋಲನ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಒಂದರಲ್ಲೇ 2 ಲಕ್ಷಕ್ಕೂ ಹೆಚ್ಚಿನ ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಇದುವರೆಗೂ ಆ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಮಾಡಿಲ್ಲ. ಸರ್ವರಿಗೂ ಶಿಕ್ಷಣ, ಉದ್ಯೋಗ ಮೂಲಭೂತ ಹಕ್ಕಾಗಬೇಕೆಂದು ಹೋರಾಟ ನಡೆಸಿಕೊಂಡು ಬರುತ್ತಿರುವ ಡಿವೈಎಫ್ಐ 15 ರಿಂದ 40 ವರ್ಷದೊಳಗಿನ ಯುವಕ ಯುವತಿಯನ್ನು ಸದಸ್ಯರನ್ನಾಗಿ ಮಾಡುತ್ತಿದೆ ಎಂದು ತಿಳಿಸಿದರು. ಡಿವೈಎಫ್ಐ ನ ಜಿಲ್ಲಾ ಮುಖಂಡ ಪ್ರವೀಣ್ ಆರ್. ಮಾತನಾಡಿ ಡಿವೈಎಫ್ಐನ ಮೇಲೆ ಮಹತ್ತರ ಜವಾಬ್ದಾರಿಯಿದ್ದು, ಯುವಜನರನ್ನು ಸೈದ್ಧಾಂತಿಕವಾಗಿ ಮತ್ತು ಬೌದ್ಧಿಕವಾಗಿ ತಯಾರು ಮಾಡುವ ಕೆಲಸವನ್ನು ಮಾಡಬೇಕಾಗಿದೆ ಎಂದರು. ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ಇ. ಶಿವಣ್ಣ, ದಿವ್ಯ, ಜಿಲ್ಲಾ ಮುಖಂಡ ದರ್ಶನ್ ಮಾತನಾಡಿದರು. ಸದಸ್ಯತ್ವದ ನೇತೃತ್ವನ್ನು ಡಿವೈಎಫ್ಐನ ಅಜಯ್, ಹರೀಶ್, ಸುನಿಲ್ನಾಯಕ್, ಶಿವರಾಜು, ಜಯಚಂದ್ರ, ರಘುಪ್ರಸಾದ್, ಎಂ. ಆರ್. ನಾಗರಾಜು, ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಣಕಯಂತ್ರ ವಿತರಣೆ
ಕೊರಟಗರೆ: ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ 2013-14ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಗಣಗ ಯಂತ್ರ ಮತ್ತ ಪ್ರಶಸ್ತಿ ಪತ್ರ ನೀಡಲಾಯಿತು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಜಿ.ಅಂಕಿತಾ, ಜಿ. ಎನ್. ವಿನೂತಾ, ಬಾಲಕೀಯರ ಸರ್ಕಾರಿ ಪ್ರೌಢ ಶಾಲೆಯ ಜವೇರಿಯಾ, ಐಶ್ವರ್ಯ, ಹೊಳವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಮತಾ, ಅಕ್ಷತಾ, ಎಲೇರಾಂಪುರ ಸರ್ಕಾರಿ ಪ್ರೌಢಶಾಲೆಯ ನಿಖಿಲ್ಕುಮಾರ್, ಬುಕ್ಕಾಪಟ್ಟಣ ಸರ್ಕಾರಿ ಪ್ರೌಢಶಾಲೆಯ ಆರ್. ವೀಣಾ ಅವರಿಗೆ ಗಣಕ ಯಂತ್ರ ಮತ್ತು ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಹಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲಾಧಿಕಾರಿ ಶ್ರೀನಿವಾಸರೆಡ್ಡಿ, ಬಿಇಒ ಕಚೇರಿಯ ವ್ಯವಸ್ಥಾಪಕ ನಿಸಾರ ಅಹಮದ್, ವೇಣುಗೋಪಾಲ್, ವೀರಭದ್ರಯ್ಯ, ರಂಗರಾಜು, ಉಪ ಪ್ರಾಂಶುಪಾಲೆ ಪುಷ್ಪವಲ್ಲಿ, ಶಿಕ್ಷಕ ಮಂಜುನಾಥ್, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಗೋಂದಿಹಳ್ಳಿ ನಟರಾಜು, ಮುಖ್ಯಶಿಕ್ಷಕ ಪುಟ್ಟಸ್ವಾಮಿ, ಸೇರಿದಂತೆ ಇನ್ನಿತರರು ಹಾಜರಿದ್ದರು.
ಶೇಂಗಾ ಬೆಳೆಗೆ ಮಳೆ ಕೊರತೆ
ಶಿರಾ: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆಕಾಯಿ ಬೆಳೆಯುವ ರೈತನ ಉತ್ಸಾಹಕ್ಕೆ ಮಳೆ ತಣ್ಣೀರೆರಚುತ್ತಿದೆ. ಮುಂಗಾರು ಪ್ರಾರಂಭಗೊಂಡಾಗಿನಿಂದಲೂ ತಾಲೂಕಿನಲ್ಲಿ ನಿರೀಕ್ಷಿತ ಮಳೆ ಬೀಳದ ಕಾರಣ ಈಗಾಗಲೇ ಜಮೀನು ಹಸನು ಮಾಡಿಕೊಂಡು ಕಾಯುತ್ತಿರುವ ರೈತರಿಗೆ ನಿರಾಸೆ ಮೂಡಿಸಿದೆ.
ಇಷ್ಟೇ ಅಲ್ಲದೆ ಕಳೆದೊಂದು ದಶಕದಿಂದ ಅನೇಕ ಕಾರಣಗಳಿಂದಾಗಿ ಬೆಳೆ ನಷ್ಟವಾಗುತ್ತಿದೆ. ಮಳೆ ಕೊರತೆ ಪ್ರಮುಖವಾದ ಸಮಸ್ಯೆ ಆದರೆ, ಅಷ್ಟಿಷ್ಟು ಬೆಳೆದ ಶೇಂಗಾವನ್ನು ಕಾಡುವ ಅನೇಕ ಹುಳುಗಳು ಮತ್ತು ರೋಗಗಳು ನಷ್ಟದಲ್ಲಿರುವ ರೈತನ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದರಲ್ಲಿ ಮುಖ್ಯವಾಗಿ ಕೆಂಪು ತಲೆ ಕಂಬಳಿ ಹುಳು, ಗೊಣ್ಣೆ ಹುಳು, ಕತ್ತು ರೋಗ, ಬೂದಿ ರೋಗದ ಜೊತೆಗೆ ಅಕಾಲಿಕ ಮಳೆಯೂ ರೈತರ ಸಂಕಷ್ಟಕ್ಕೆ ಕೊಡುಗೆ ಕೊಟ್ಟಿವೆ. ಬಿತ್ತನೆಯಾದ ಶೇಂಗಾ ಬೆಳೆಯಲ್ಲಿ ಮುಖ್ಯವಾಗಿ ಕರಿಹೇನು (ಸಸ್ಯ ಹೇನು), ಸುರಳಿ ಪೂಚಿ ಮತ್ತು ಎಲೆ ತಿನ್ನುವ ಹುಳುಗಳು (ಹಸಿರು ಹುಳು) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ಕೀಟಗಳ ಹತೋಟಿಗೆ ಕೃಷಿ ಇಲಾಖೆ ಸಂಪರ್ಕಿಸಿದರೆ, ಅದರ ಪೂರ್ಣ ವಿವರ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಭಾಷೆ ಕಲಿಯಲು ಮುಂದಾಗಿ
ಚಿಂತಾಮಣಿ: ಕನ್ನಡ ಭಾಷೆ ಕಲಿಯಲು ಅನ್ಯ ಭಾಷಿಗರು ಮುಂದಾಗಬೇಕೆಂದು ಶಿಡ್ಲಘಟ್ಟ ಶಾಸಕ ಎಂ. ರಾಜಣ್ಣ ಕರೆ ನೀಡಿದರು. ನಗರದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಏರ್ಪಡಿಸಿದ್ದ ತೃತೀಯ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿ, ಗಡಿ ವ್ಯಾಪ್ತಿಯಲ್ಲಿ ವಾಸವಿರುವ ಅನ್ಯ ಭಾಷಿಗರು ಕನ್ನಡ ಭಾಷೆ ಮತ್ತು ಕನ್ನಡ ಕಲಿಯಲು ಮುಂದಾಗಬೇಕೆಂದು ಹೇಳಿದರು. ಕಾರ್ಯ ಕ್ರಮದಲ್ಲಿ ವಿವಿಧ ಕ್ಷೆತ್ರಗಳಲ್ಲಿ ಸಮಾಜ ಸೇವೆ ಸಲ್ಲಿಸಿದ ಡಾ.ಎಂ.ಆರ್. ಜಯರಾಂ, ಡಾ. ರಾಮೇಗೌಡ, ಐಪಿಎಸ್ ಅಧಿಕಾರಿ ರಮೇಶ್ ಬಾನೂತ್ರನ್ನು ಸನ್ಮಾನಿಸಲಾಯಿತು.
ಸಮಸ್ಯೆ ಪರಿಹರಿಸಿ, ಸಂಘಟನೆ ಬಲಗೊಳಿಸಿ
ಕೋಲಾರ: ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ನಂಬಿಕೆ ಉಳಿಸಿಕೊಂಡು ಸಂಘಟನೆಯನ್ನು ಬಲಗೊಳಿಸಿ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ಕರೆ ನೀಡಿದರು.ನೌಕರರ ಭವನದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು. ಶಿಕ್ಷಕರು ವೇತನ ತಾರತಮ್ಯ ಸೇರಿದಂತೆ ಹಲವಾರು ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಅವರ ನಾಯಕತ್ವ ವಹಿಸಿದವರು, ಅವರ ಸೇವೆಗೆ ಸದಾ ಸಿದ್ಧರಾಗಿರಬೇಕು. ನೌಕರರ ಸಂಘ ಈಗಾಗಲೇ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಸರ್ಕಾರದ ಮೇಲೆ ಒತ್ತಡ ಹಾಕಿದೆ ಎಂದರು.
ಪ್ರಾಮಾಣಿಕ ಕಾರ್ಯ: ಸಹ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಶಂಕರಪ್ಪ, ಮತ ನೀಡಿದ ಶಿಕ್ಷಕರ ಋಣ ತೀರಿಸಲು, ತಾವು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಸಮಸ್ಯೆಗಳನ್ನು ತಿಳಿಸಿದರೆ ಅವರ ನೆರವಿಗೆ ಸದಾ ನಿಂತಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

