ಮೆಡಿಕಲ್ ಕಾಲೇಜು ಸ್ಥಾಪನೆಗೆ ಸೊಗಡು ಒತ್ತಾಯ
ತುಮಕೂರು: ಮಾಜಿ ಸಚಿವ ಸೊಗಡು ಶಿವಣ್ಣ ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಬಡ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಿದ್ದಾರೆ. ರದ್ದಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹಿನ್ನೆಲೆಯಲ್ಲಿ ಹೋರಾಟದ ಹಾದಿ ತುಳಿಯುವ, ಸತ್ಯಾಗ್ರಹ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದ್ದಾರೆ. ವಿದ್ಯಾರ್ಥಿ ಸಂಘಟನೆಯೊಂದು ಮಾಡುವ ಕೆಲಸವನ್ನು ತಾವೇ ಮಾಡಲು ಮುಂದಾಗಿದ್ದಾರೆ.
ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ತುಮಕೂರಿಗೆ ಮಂಜೂರಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ರದ್ದಾಗಲು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ಕಾರಣ ಎಂದು ನೇರವಾಗಿ ಆರೋಪಿಸಿದ್ದ ಸೊಗಡು, ಈ ಬಾರಿಯ ಬಜೆಟ್ನಲ್ಲಿ ರದ್ದಾಗಿರುವ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಬೇಕು. ಇಲ್ಲದಿದ್ದಲ್ಲಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ನಾವಿರೋದು ಸಾರ್ವಜನಿಕರನ್ನು ಬದುಕಿಸಲು, ಖಾಸಗಿಯವರನ್ನಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಾ.ಜಿ. ಪರಮೇಶ್ವರ್ ಹಾಗೂ ಡಾ. ಎಂ. ಆರ್. ಹುಲಿನಾಯ್ಕರ್ ವಿರುದ್ಧ ಮತ್ತೊಮ್ಮೆ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದ್ದಾರೆ.
ಅನ್ಯಾಯ: ಮಂಜೂರಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ರದ್ದಾಗಿರುವುದರಿಂದ ಬಡ ಮಕ್ಕಳಿಗೆ ಅನ್ಯಾಯವಾದಂತಾಗಿದೆ. ಎಲ್ಲ ಸವಲತ್ತುಗಳಿದ್ದರೂ, ಮಂಜೂರಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ರದ್ದಾಗಲು ಒತ್ತಡ ಕಾರಣ ಎಂದು ಈ ಹಿಂದೆ ಆರೋಪಿಸಿದ್ದ ಸೊಗಡು, ಯಾವ ಕಾರಣದಿಂದ ತುಮಕೂರಿನ ಸರ್ಕಾರಿ ಮೆಡಿಕಲ್ ಕಾಲೇಜು ರದ್ದಾಗಿದೆ ಎಂಬುದನ್ನು ಮುಖ್ಯಮಂತ್ರಿಗಳು ಪರಿಶೀಲಿಸಲಿ. ನ್ಯಾಯ ಒದಗಿಸಲಿ ಎಂದು ಮನವಿ ಮಾಡಿದ್ದಾರೆ.
ಹಿನ್ನೆಲೆ: 2012-13 ನೇ ಸಾಲಿನಲ್ಲಿ ತುಮಕೂರಿನಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸುವ ಸಂಬಂಧವಾಗಿ 12-9-2012 ರಲ್ಲಿ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೆಂಗಳೂರು, ರಿಜಿಸ್ಟ್ರಾರ್ ಸೂಚನೆ ಮೇರೆಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಸಭೆ ನಡೆಸಲಾಗಿದೆ. 22-9-2012 ರಂದು ಜಿಲ್ಲಾಧಿಕಾರಿಗಳು ಅರ್ಜಿ ಸಲ್ಲಿಸಿರುವುದು ದಾಖಲಾಗಿದೆ. 27-9-2012 ರಲ್ಲಿ ವೈದ್ಯಕೀಯ ಶಿಕ್ಷಣದ ಉಪನಿರ್ದೇಶಕರು ದೂರವಾಣಿ ಮೂಲಕ ಮೂರುವರೆ ಲಕ್ಷ ರು. ಡಿಡಿಯನ್ನು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹೆಸರಿಗೆ ತೆಗೆಯುವಂತೆ ಸೂಚಿಸಿದ್ದು, ದೆಹಲಿಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಿದೆ.
ತುಮಕೂರು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಹೊಸದಾಗಿ ಆರಂಭಿಸಲು 450 ಹಾಸಿಗೆಗಳ ಸಾಮರ್ಥ್ಯವುಳ್ಳ ಜಿಲ್ಲಾಸ್ಪತ್ರೆಯನ್ನೊಳಗೊಂಡಂತೆ ಅವಶ್ಯವಿರುವ 25 ಎಕರೆ ಜಮೀನು ಲಭ್ಯವಿರುವುದಾಗಿಯೂ, ಮೊದಲನೇ ವರ್ಷದ ತರಗತಿಗಳ ಆರಂಭಕ್ಕೆ ಅವಶ್ಯವಿರುವ ಕೊಠಡಿ, ಪ್ರಯೋಗಾಲಯ ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಕ್ಕೂ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಲಾಗಿತ್ತು. ಯಾವುದೇ ಸಮಸ್ಯೆ ಇಲ್ಲದ ಕಾರಣ, ಎಂಸಿಐ ಮಾರ್ಗಸೂಚಿಯನ್ವಯ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿತ್ತು. ಜತೆಗೆ 5 ಕೋಟಿ ರು.ಗಳನ್ನು 2012-13 ನೇ ಸಾಲಿನಲ್ಲಿ ವಿತರಿಸಲಾಗುವುದು ಎಂದು ತಿಳಿಸಲಾಗಿತ್ತು. ಜತೆಗೆ ಮಂಜೂರಾಗಿದ್ದ 3.50 ಲಕ್ಷ ರು. ಹಣವನ್ನು ಹಿಂತಿರುಗಿಸಿ, ತುಮಕೂರು ಜಿಲ್ಲೆ ವೈದ್ಯಕೀಯ ಕಾಲೇಜು ಸೌಲಭ್ಯದಿಂದ ವಂಚಿತವಾಗುವಂತೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ಜಿಲ್ಲೆ: ತುಮಕೂರು ಜಿಲ್ಲೆ ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಬಡ, ಹಿಂದುಳಿದ, ದಲಿತ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ರದ್ದಾಗಿರುವುದು ನೋವಿನ ಸಂಗತಿಯಾಗಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ 1500 ಕ್ಕೂ ಹೆಚ್ಚು ಜನ ರೋಗಿಗಳು ವೈದ್ಯಕೀಯ ಸೌಲಭ್ಯ ಪಡೆಯುತ್ತಿದ್ದು, ವೈದ್ಯಕೀಯ ಕಾಲೇಜು ತೆರೆಯಲು ಪ್ರಶಸ್ತವಾಗಿದೆ. ಜತೆಗೆ ತುಮಕೂರು ಜಿಲ್ಲೆಯಲ್ಲಿರುವ ಯಾವುದೇ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲೂ ಇಂತಹ ಅವಕಾಶ ಇಲ್ಲದೇ ಇರುವುದರಿಂದ ಜಿಲ್ಲಾಸ್ಪತ್ರೆಯನ್ನೇ ಖಾಸಗಿ ಕಾಲೇಜುಗಳ ಪ್ರಾಯೋಗಿಕ ಆಸ್ಪತ್ರೆಯನ್ನಾಗಿ ಉಪಯೋಗಿಸಿಕೊಳ್ಳುತ್ತಿರುವುದು ಸಾಕ್ಷಿಯಾಗಿದೆ. ಜತೆಗೆ ಎಲ್ಲ ಉಪಕರಣಗಳ ಸೌಲಭ್ಯವಿರುವ, ತಜ್ಞ ವೈದ್ಯರಿರುವ, ಯಾವುದೇ ಸರ್ಕಾರಿ ಸ್ವಾಮ್ಯದ ಹೈಟೆಕ್ ಆಸ್ಪತ್ರೆ, ಮಹಾವಿದ್ಯಾಲಯ ಇಲ್ಲದ ಕಾರಣ ಬಿಜೆಪಿ ಸರ್ಕಾರ ಬೆಂಗಳೂರು ಉಪನಗರದಂತಿರುವ ತುಮಕೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿತ್ತು ಎಂದು ಸೊಗಡು ನೆನಪಿಸಿಕೊಂಡಿದ್ದಾರೆ.
ನ್ಯಾಯಯುತವಾಗಿ ತುಮಕೂರು ಜಿಲ್ಲೆಗೆ ದೊರಕಬೇಕಾಗಿರುವ ವೈದ್ಯಕೀಯ ಕಾಲೇಜನ್ನು ಪ್ರಸಕ್ತ 2014-15 ನೇ ಸಾಲಿನಲ್ಲಿ ಪ್ರಾರಂಭಿಸಲು ಆದೇಶ ಹೊರಡಿಸುವಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಸೊಗಡು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೆ.ಪಿ. ಮಹೇಶ್, ಕುಬೇರ ನಾಗಭೂಷಣ್, ಸ್ನೇಕ್ ನಂದೀಶ್, ನಾಗರಾಜ್, ಅವಿನಾಶ್, ಸನತ್ ಜಯಸಿಂಹ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

