ಅನ್ನದಾತಗೆ ಆತ್ಮವಿಶ್ವಾಸ ತುಂಬಬೇಕಿದೆ
ಶಿರಾ: ರೈತರು ಅತ್ಯಂತ ಮುತುವರ್ಜಿಯಿಂದ ನೀರನ್ನು ಬಳಸಬೇಕಾಗಿದೆ. ಹನಿ ನೀರಾವರಿ- ತುಂತುರು ನೀರಾವರಿ ಸೌಲಭ್ಯ ಉಪಯೋಗಿಸಿಕೊಂಡು ಲಾಭದಾಯಕ ಬೆಳೆ ಬೆಳೆಯಬೇಕು ಎಂದು ರೈತ ಸಮುದಾಯಕ್ಕೆ ಸಚಿವ ಟಿ.ಬಿ.ಜಯಚಂದ್ರ ಕಿವಿಮಾತು ಹೇಳಿದರು.
ತಾಲೂಕಿನ ಚಿಕ್ಕನಹಳ್ಳಿ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಕೃಷಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಮವಿಶ್ವಾಸ ತುಂಬಬೇಕಿದೆ: ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ವಿಕೋಪಗಳು ರೈತರನ್ನು ಧೃತಿಗೆಡಸಿವೆ. ವ್ಯವಸಾಯ ಲಾಭದಾಯಕವಲ್ಲ ಎಂಬ ತೀರ್ಮಾನಕ್ಕೆ ರೈತ ಬಂದಿದ್ದಾನೆ.
ಈ ನಿಟ್ಟಿನಲ್ಲಿ ಅನ್ನದಾತನಿಗೆ ಆತ್ಮವಿಶ್ವಾಸ ತುಂಬಿ ಕೃಷಿಯತ್ತ ರೈತನ ಚಿತ್ತ ಹರಿಸುವ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದು ತಿಳಿಸಿದ ಸಚಿವರು. ಕೃಷಿಯಿಂದ ಬದುಕು ಸಾಧ್ಯ ಎನ್ನುವ ಮನಸ್ಥಿತಿ ರೈತರಿಗೆ ಬಂದುಬಿಟ್ಟರೆ ಕೃಷಿ ವ್ಯವಸ್ಥೆ ತಾನೇ ತಾನಾಗಿ ಸರಿದಾರಿಗೆ ಬರುತ್ತದೆ.
ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಮಾರಾಟ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆಯಾಗುವುದು ಅಗತ್ಯವಾಗಿದೆ. ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಮಾರುಕಟ್ಟೆ ವ್ಯವಸ್ಥೆ ಸುಧಾರಿಸಲಿ: ಉಪ ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, ರೈತರ ಎಲ್ಲಾ ರೀತಿಯ ಕಷ್ಟ ನೀವಾರಣೆಗೆ ಸಂಘಟನೆ ಅತಿ ಮುಖ್ಯ. ಸಂಘಟನೆಯ ಬಲದಿಂದ ತಾವು ಬೆಳೆದ ಬೆಳೆಗಳ ಮಾರುಕಟ್ಟೆಯಲ್ಲಿ ತಾವೇ ವ್ಯವಸ್ಥೆ ಮಾಡಿಕೊಂಡಲ್ಲಿ ದುಪ್ಪಟ್ಟು ಲಾಭ ಪಡೆಯಬಹುದು. ವ್ಯಾಪಾರದಲ್ಲಿ ಮಧ್ಯವರ್ತಿಗಳ ಕಾಟ ತಪ್ಪಿಬಿಟ್ಟರೆ ರೈತ ತಾನು ಬೆಳೆದ ಬೆಳೆಗೆ ಯೋಗ್ಯ ಬೆಲೆ ಪಡೆಯುವುದರಲ್ಲಿ ಸಂದೇಹವಿಲ್ಲ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಪ್ರಾಸ್ತವಿಕವಾಗಿ ಮಾತನಾಡಿದರು. ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಆರ್.ಗೌಡ ಸ್ವಾಗತಿಸಿದರು. ತಾಪಂ ಅಧ್ಯಕ್ಷೆ ಗಂಗಮ್ಮ ಸಿದ್ದಹನುಮಯ್ಯ, ಉಪಾಧ್ಯಕ್ಷ ಉದಯಶಂಕರ್, ಜಿಪಂ ಸದಸ್ಯ ಅರೆಹಳ್ಳಿ ರಮೇಶ್, ಪಿ.ಕೆ.ಪುರುಷೋತ್ತಮ್, ಯೋಜನಾಧಿಕಾರಿ ದಿನೇಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

