ಅಂಗನವಾಡಿ ಖಾಸಗೀಕರಣಕ್ಕೆ ವಿರೋಧ: ಪ್ರತಿಭಟನೆ
ಮಧುಗಿರಿ: ಕೇಂದ್ರ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕ್ರಮ ವಿರೋಧಿಸಿ ಮತ್ತು ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು, ಕಟ್ಟಡ ಕಾರ್ಮಿಕರು ಹಾಗೂ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಮಕ್ಕಳ ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು ಮಧುಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ವರದಿ ಕಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ರಮೇಶ್ ಅವರಿಗೆ ಮನವಿ ಅರ್ಪಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತೆಯರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರದ ಆಹಾರ ನಿರ್ವಹಣೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರ ಕ್ರಮ ವಿರೋಧಿಸಿ ಧಿಕ್ಕಾರ ಕೂಗಿದರು. ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ಶಾಂತಮ್ಮ ಮಾತನಾಡಿ, ಜನರ ಮನೆ ಬಾಗಿಲಲ್ಲಿ ಐಸಿಡಿಎಸ್ ಮೌಲ್ಯಯುತ ಸೇವೆ ಪಡೆಯುತ್ತಿರುವ ಫಲಾನುಭವಿಗಳಿಗೆ ಸರ್ಕಾರ ಐಸಿಡಿಎಸ್ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಗೊಳಿಸಬಾರದು. ಸೂಕ್ತ ಹಣಕಾಸು ನೀಡಬೇಕು. ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸಬೇಕು ಎಂದು ಕಾರ್ಯಕರ್ತೆಯರು ಒತ್ತಾಯಿಸಿದರು.
ಬಿ.ಎಚ್. ಲಕ್ಷ್ಮೀಕಾಂತಗೆ ಅಭಿನಂದನೆ
ಮಧುಗಿರಿ: ಬಡ ಕುಟುಂಬದಲ್ಲಿ ಜನಿಸಿದ ಹಳ್ಳಿ ಪ್ರತಿಭೆ ನ್ಯೂಯಾರ್ಕ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ತೆರಳುತ್ತಿರುವ ಬಿ.ಎಚ್. ಲಕ್ಷ್ಮೀಕಾಂತನ ಸಾಧನೆ ಶಿಕ್ಷಣ ಇಲಾಖೆಗೆ ಸಂದ ಗೌರವ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವಿ.ಕೆ.ನಾಗರಾಜು ಹರ್ಷ ವ್ಯಕ್ತಪಡಿಸಿ ಅಬಿನಂದಿಸಿದರು.
ಇಲ್ಲಿನ ಗೌತಮಬುದ್ಧ ಪಪೂ ಕಾಲೇಜಿಗೆ ಬೇಟಿ ನೀಡಿ ವಿದ್ಯಾರ್ಥಿ ಬಿ.ಎಚ್. ಲಕ್ಷ್ಮೀಕಾಂತನ ಸಾಧನೆ ಮೆಚ್ಚಿ ಅಭಿನಂದಿಸಿ, ಗ್ರಾಮೀಣ ಪ್ರದೇಶದ ಬಡತನದ ಹಳ್ಳಿ ಹೈದ ಮೇ ತಿಂಗಳಲ್ಲಿ ನ್ಯೂಯಾರ್ಕನಲ್ಲಿ ನಡೆಯಲಿರುವ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗುವ ನಿಟ್ಟಿನಲ್ಲಿ ಭಾರತಕ್ಕೆ, ರಾಜ್ಯಕ್ಕೆ ಹಾಗೂ ಗುರು ಹಿರಿಯರಿಗೆ ಕಾಲೇಜಿಗೆ ಕೀರ್ತಿ ತಂದಿದ್ದಾನೆ ಎಂದು ಸಂತಸ ಪಟ್ಟರು. ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯಪ್ರಕಾಶ್ ವಿದ್ಯಾರ್ಥಿ ಬಿ.ಎಚ್. ಲಕ್ಷ್ಮೀಕಾಂತಗೆ ನಗದು ಬಹುಮಾನ ನೀಡಿ ಗೌರವಿಸಿದರು. ಕಾಲೇಜು ಪ್ರಾಂಶುಪಾಲ ಟಿ. ಗೋವಿಂದರಾಜು, ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಶ್ರೀಚಿದಂಬರಾಶ್ರಮದಿಂದ ಮಹತ್ವದ ಸಾಧನೆ: ಶಾಸಕ
ಗುಬ್ಬಿ: ಶಿಕ್ಷಣ ಮತ್ತು ಆಧ್ಯಾತ್ಮಿಕತೆಗೆ ಚಿದಂಬರಾಶ್ರಮ ಕಳೆದ ಹಲವು ವರ್ಷಗಳಿಂದಲೂ ಮಹತ್ವದ ಸಾಧನೆ ಮಾಡಿದ್ದು ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಜೊತೆಗೆ ಆಧ್ಯಾತ್ಮಿಕ ಮನೋಭಾವನೆಗಳನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಿದ್ದಾರೆಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಶ್ರೀಚಿದಂಬರಾಶ್ರಮದಲ್ಲಿ ಚಿದಂಬರಸ್ವಾಮಿಗಳ 125ನೇ ಜನ್ಮದಿನಾಚರಣೆ ಹಾಗೂ ಶ್ರೀ ಚಿದಂಬರಾಶ್ರಮದ ಅಮೃತ ಮಹೋತ್ಸವ ವರ್ಷಾಚರಣೆ ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಆರ್.ಕೃಷ್ಣಭಟ್ ಮಾತನಾಡಿದರು.
ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಿ
ಪಾವಗಡ: ಸ್ವರ್ಧಾತ್ಮಕ ಯುಗದಲ್ಲಿ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಉಪ ಪ್ರಾಂಶುಪಾಲ ಪಿ. ಗೋವಿಂದಪ್ಪ ಕರೆ ನೀಡಿದರು.
ಇತ್ತೀಚಿಗೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಏರ್ಪಡಿಸಿದ್ದ ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆ ಹಾಗೂ ಶಿಕ್ಷಣ ಮಾರ್ಗದರ್ಶನದ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರ ಸೇರಿದಂತೆ ಇಂದು ಪ್ರತಿ ಕ್ಷೇತ್ರದಲ್ಲಿಯೂ ಸ್ವರ್ಧೆ ಇದ್ದು ಸ್ವರ್ಧೆಯಲ್ಲಿ ಭಾಗವಹಿಸಿ ಯಶಸ್ವಿಯಾಗಬೇಕಾದರೆ ಇಂದು ಶಿಕ್ಷಣದ ಆಗತ್ಯವಿದೆ. ತಮ್ಮ ಭವಿಷ್ಯದ ಹಿತದೃಷ್ಟಿಯಿಂದ ಹದಿ ಹರೆಯದ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು. ಶಿಕ್ಷಣ ಮಹತ್ವದ ಬಗ್ಗೆ ಶಾಲಾ ಹೆಣ್ಣು ಮಕ್ಕಳಿಗೆ ವಿವರಿಸಿದರು.
ಶಾಲಾ ಶಿಕ್ಷಕಿ ಶ್ರೀಮತಿ ಸುಜಾತಾ ಮಾತನಾಡಿ ಹದಿ ಹರೆಯದ ಹೆಣ್ಣು ಮಕ್ಕಳ ಸಮಸ್ಯೆ ವಿವರಿಸಿ ಮುಂಜಾಗ್ರತೆ ಕ್ರಮಗಳ ಬಗ್ಗೆ ಎಚ್ಚರಿಸಿದರು. ಉಡುಗೆ, ತೊಡುಗೆ ಸೇರಿದಂತೆ ಸಮಾಜದಲ್ಲಿ ಹೆಣ್ಣು ಮಕ್ಕಳು ಯಾವ ರೀತಿ ವರ್ತಿಸಬೇಕು. ಹಿರಿಯ ಕಿರಿಯರೊಂದಿಗೆ ನಡವಳಿಕೆ ಯಾವ ರೀತಿ ಇರಬೇಕೆಂಬ ಎಂಬ ಕುರಿತು ವಿವರಿಸಿದರು. ವಿದ್ಯಾವಂತರಾಗಿ ಪರೀಕ್ಷೆಯಲ್ಲಿ ಹೆಚ್ಚಿನ ಆಂಕಗಳನ್ನು ಪಡೆಯುವಂತೆ ಅವರು ತಿಳಿಸಿದರು.
ಶಿಕ್ಷಕರಾದ ರಾಮಕೃಷ್ಣಪ್ಪ, ವೆಂಕಟೇಶಲು, ಎನ್.ವಿ. ಭಾಗ್ಯಲಕ್ಷ್ಮೀ, ಶಾರದಮ್ಮ, ಕೌಸರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಲಾಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಕೋನೆಗೌಡನಪಾಳ್ಯದ ಶ್ರೀ ಪಟ್ಟಾಭಿರಾಮರ ನೂತನ ದೇವಾಲಯ ಪ್ರವೇಶ ಹಾಗೂ ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ, ನೂತನ ಶಿಲಾಮೂರ್ತಿ, ಗರುಡಗಂಭ ಪ್ರತಿಷ್ಠಾಪನಾ ಮಹೋತ್ಸವವು ಫೆ.9 ಮತ್ತು 10ರಂದು ಆಯೋಜಿಸಲಾಗಿದೆ.
ಫೆ.9ರಂದು ನವಗ್ರಹ ಕಳಸ ಸ್ಥಾಪನೆ, ಅಷ್ಟಲಕ್ಷ್ಮಿಪೂಜೆ, ನವಗ್ರಹ ಪೂಜೆ, ಶಿಲಾಮೂರ್ತಿಗೆ ಜಲಾಧಿವಾಸ ಕ್ಷೀರಾಧಿವಾಸ, ಧಾನ್ಯಾದಿವಾಸ ಇತ್ಯಾದಿ ಆದಿವಾಸಗಳು ನಡೆಯಲಿವೆ. ಫೆ.10ರಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಶಿಲಾಮೂರ್ತಿ ಮತ್ತು ಗರುಡಗಂಭ ಪ್ರತಿಷ್ಠಾಪನೆ ಮಾಡಲಿದ್ದಾರೆ. ಅಲ್ಬೂರಿನ ಶ್ರೀ ನರಸಿಂಹಸ್ವಾಮೀಜಿ ನೂತನ ಶಿಖರಕ್ಕೆ ಕಳಸ ಪ್ರತಿಷ್ಠಾಪನೆ ಮಾಡಲಿದ್ದು, ನೊಣವಿನಕೆರೆಯ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಬೆಲಗೂರಿನ ಶ್ರೀ ಬಿಂಧು ಮಾದವಶರ್ಮ ಸ್ವಾಮೀಜಿ ಮತ್ತಿತರರು ಸಾನಿಧ್ಯ ವಹಿಸಲಿದ್ದು, ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆ ವಹಿಸಲಿದ್ದಾರೆ.
ದಲಿತರ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ
ಮಧುಗಿರಿ: ಸರ್ಕಾರ ದಲಿತರ ಸಾಮಾಜಿಕ ಮತ್ತು ಶೈಕ್ಷಣಿಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಧುಗಿರಿ ತಾಲೂಕು ಶಾಖೆ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಪತ್ರ ಅರ್ಪಿಸಿದರು.
ತಾಲೂಕಿನ ದಲಿತರ ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿ ನಿಲಯ ಮಂಜೂರು ಮಾಡಬೇಕು ಹಾಗೂ ಸ್ಪರ್ಧಾತ್ಮಕ ತರಬೇತಿ ಕೇಂದ್ರ ತೆರೆದು ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಬೇಕು. ಗ್ರಾಮಗಳಲ್ಲಿ ದಲಿತರಿಗೆ ಪ್ರತ್ಯೇಕ ರುದ್ರಭೂಮಿ ಮೀಸಲಿಡಬೇಕು. ವಸತಿ ರಹಿತ ದಲಿತರಿಗೆ ಅತಿ ಶೀಘ್ರ ನಿವೇಶನ ನೀಡಿ ಮನೆ ಕಟ್ಟಿಸಿ ಕೊಡಲು ಮುಂದಾಗಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. ಜಿಲ್ಲಾ ಅಧ್ಯಕ್ಷ ಪಿ.ಎನ್.ರಾಮಯ್ಯ, ತಾ. ಅಧ್ಯಕ್ಷ ಮದ್ಲೇಟಪ್ಪ, ಉಪಾಧ್ಯಕ್ಷೆ ಹನುಮಂತರಾಜು, ಕಾರ್ಯದರ್ಶಿ ನಾಗರಾಜು, ಪದಾಧಿಕಾರಿಗಳಾದ ಮಲ್ಲೇಶ, ನರಸಿಂಹಮೂರ್ತಿ,ನಾಗೇಶ, ಕೃಷ್ಣಮೂರ್ತಿ, ಗಂಗಣ್ಣ, ಲಕ್ಷ್ಮೀನರಸಯ್ಯ, ಅನೇಕ ದಲಿತ ಮುಖಂಡರು ಭಾಗವಹಿಸಿದ್ದರು.
ಇಂದಿನಿಂದ ಮೆಗಾ ಲೋಕ ಅದಾಲತ್ ಕಾರ್ಯಕ್ರಮ
ತಿಪಟೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ತಿಪಟೂರಿನ ನ್ಯಾಯಾಲಯಗಳಲ್ಲಿ ಎರಡನೇ ರಾಷ್ಟ್ರೀಯ ಮೆಗಾ ಲೋಕಾ ಅದಾಲತ್ ಕಾರ್ಯಕ್ರಮವನ್ನು ಶನಿವಾರದಿಂದ ಏ.12ರವರೆಗೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕೆಂದು ವಕೀಲರ ಸಂಘದ ಅಧ್ಯಕ್ಷ ಎಸ್. ಜಯಣ್ಣ ಮನವಿ ಮಾಡಿದ್ದಾರೆ.
ಮಾರ್ಗದರ್ಶಿ ಕಾರ್ಯಕ್ರಮ ಉದ್ಘಾಟನೆ
ತಿಪಟೂರು: ಪಟ್ಟಣದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿಭಾಗದ ವತಿಯಿಂದ ಮಾರ್ಗದರ್ಶಿ-2014 ಕಾರ್ಯಕ್ರಮವನ್ನು ಅಂತಿಮ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಅನುಕೂಲವಾಗುವಂತೆ ಉಚಿತ ತರಬೇತಿಯನ್ನು ತುಮಕೂರಿನ ವಿ.ಎಫ್.ಟಿ.ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕೆ.ವಿ. ಎಸ್.ಅಧ್ಯಕ್ಷ ಎನ್.ಬಸವಯ್ಯ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಎಂ.ಎಂ. ಶಶಿಧರ, ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಪ್ರೊ.ದೀಪ್ತಿ ಅಮಿತ್, ಗ್ರಂಥಾಲಯ ಮುಖ್ಯಸ್ಥ ಡಾ.ಎಂ.ಎಂ. ಬಾಚಲಾಪುರ ಹಾಗೂ ಎಂ.ಬಿ.ಎ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕಾಲೇಜುಗಳಿಂದ ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದಲಿತರ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ
ಮಧುಗಿರಿ: ಸರ್ಕಾರ ದಲಿತರ ಸಾಮಾಜಿಕ ಮತ್ತು ಶೈಕ್ಷಣಿಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಧುಗಿರಿ ತಾಲೂಕು ಶಾಖೆ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಪತ್ರ ಅರ್ಪಿಸಿದರು.
ತಾಲೂಕಿನ ದಲಿತರ ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿ ನಿಲಯ ಮಂಜೂರು ಮಾಡಬೇಕು ಹಾಗೂ ಸ್ಪರ್ಧಾತ್ಮಕ ತರಬೇತಿ ಕೇಂದ್ರ ತೆರೆದು ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಬೇಕು. ಗ್ರಾಮಗಳಲ್ಲಿ ದಲಿತರಿಗೆ ಪ್ರತ್ಯೇಕ ರುದ್ರಭೂಮಿ ಮೀಸಲಿಡಬೇಕು. ವಸತಿ ರಹಿತ ದಲಿತರಿಗೆ ಅತಿ ಶೀಘ್ರ ನಿವೇಶನ ನೀಡಿ ಮನೆ ಕಟ್ಟಿಸಿ ಕೊಡಲು ಮುಂದಾಗಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. ಜಿಲ್ಲಾ ಅಧ್ಯಕ್ಷ ಪಿ.ಎನ್.ರಾಮಯ್ಯ, ತಾ. ಅಧ್ಯಕ್ಷ ಮದ್ಲೇಟಪ್ಪ, ಉಪಾಧ್ಯಕ್ಷೆ ಹನುಮಂತರಾಜು, ಕಾರ್ಯದರ್ಶಿ ನಾಗರಾಜು, ಪದಾಧಿಕಾರಿಗಳಾದ ಮಲ್ಲೇಶ, ನರಸಿಂಹಮೂರ್ತಿ,ನಾಗೇಶ, ಕೃಷ್ಣಮೂರ್ತಿ, ಗಂಗಣ್ಣ, ಲಕ್ಷ್ಮೀನರಸಯ್ಯ, ಅನೇಕ ದಲಿತ ಮುಖಂಡರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

