ತುಮಕೂರು

ಇನ್ನೂ ಬಿಡುಗಡೆಯಾಗದ ವಿದ್ಯಾರ್ಥಿ ವೇತನ

Published On :

ಕುಣಿಗಲ್: ಪ್ರಸಕ್ತ ಶೈಕ್ಷಣಿಕ ವರ್ಷ ಕೊನೆಗೊಳ್ಳುತ್ತಾ ಬಂದರೂ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ವಿತರಿಸಲಾಗುವ ವಿದ್ಯಾರ್ಥಿ ವೇತನ ಇನ್ನೂ ಬಿಡುಗಡೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ  ತಾಪಂ ಅಧ್ಯಕ್ಷರು, ಸಮಾಜಕಲ್ಯಾಣ ಇಲಾಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಕೂಡಲೆ ಅಗತ್ಯಕ್ರಮಕೈಗೊಂಡು ವೇತನ ಬಿಡುಗಡೆ ಮಾಡುವಂತೆ ತಾಕೀತು ಮಾಡಿದ ಘಟನೆ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಡೆಯಿತು.
ಶುಕ್ರವಾರ, ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣಗದಲ್ಲಿ ತೇಜಸ್ವಿನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಪ್ರಾರಂಭಕ್ಕೆ ಸಮಾಜ ಕಲ್ಯಾಣ ಇಲಾಖೆಯ ವಿಳಂಬ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಇನ್ನು ವಿದ್ಯಾರ್ಥಿ ವೇತನ ವಿತರಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿ ಪ್ರಕಾಶ್, ಇಲಾಖೆ ಆನ್‌ಲೈನ್ ಮೂಲಕ  ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿ ವೇತನ ಜಮಾ ಮಾಡಲು ಸಿದ್ಧತೆ ನಡೆಸುತ್ತಿದ್ದು ಶೀಘ್ರವೇ ವಿತರಿಸಲಾಗುವುದೆಂದರು.
ನಿಂತ ಅನುದಾನ: ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್ ಸ್ಥಿತಿಗತಿಯ ಬಗ್ಗೆ ಪ್ರಶ್ನಿಸಿದಾಗ, ತಾಲೂಕಿನ ಎಂಟು ಹಾಸ್ಟೆಲ್‌ಗಳಿಂದ 436 ವಿದ್ಯಾರ್ಥಿಗಳಿಗೆ ಅವಕಾಶ ಇದೆ. ಆದರೆ ದಾಖಲಾತಿ ಕೊರತೆಯಿಂದಾಗಿ ಕೇವಲ 268 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅಗತ್ಯ ಮತ್ತು ಸಮರ್ಪಕ ದಾಖಲೆಗಳನ್ನು ಸಲ್ಲಿಸಿದ ತಾಲೂಕಿನ ಎರಡು ಖಾಸಗಿ ವಿದ್ಯಾರ್ಥಿ ನಿಲಯಗಳಿಗೆ ಅನುದಾನ ನಿಲ್ಲಿಸಲಾಗಿದೆ ಎಂದರು.
ಇಒ ಶಂಕರಪ್ಪ, ಇತ್ತೀಚೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಹಲವು ಸಾರ್ವಜನಿಕ ಆಸ್ತಿಗಳು ಒತ್ತುವರಿಯಾಗಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಶಾಲೆ ಕಟ್ಟಡ, ಮೈದಾನ ಪ್ರದೇಶಗಳನ್ನು ಹಲವರು ದಾನಪತ್ರಗಳ ಮೂಲಕ ಉಚಿತವಾಗಿ ಜಮೀನು ನೀಡಿದ್ದಾರೆ. ಹಾಗೆಯೆ ಪಶುವೈದ್ಯ, ಸಾರ್ವಜನಿಕ ಆರೋಗ್ಯ ಇಲಾಖೆಗೂ ನೀಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಇಂತಹ ಜಾಗಗಳನ್ನು ತಮ್ಮ ಇಲಾಖೆ ಹೆಸರಿನಲ್ಲಿ ಆ ವ್ಯಾಪ್ತಿಯ ಗ್ರಾಪಂಗಳನ್ನು ಸಮರ್ಪಕ ದಾಖಲೆಗಳನ್ನು ಹೊಂದದೆ ವ್ಯಾಪಕ ಒತ್ತುವರಿಯಾಗುತ್ತಿದೆ ಎಂದರು.
ದಾಖಲೆ ಸರಿಪಡಿಸಿಕೊಳ್ಳಿ: ಆದ್ದರಿಂದ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರು ಕೂಡಲೆ ತಮ್ಮ ಇಲಾಖಾ ವ್ಯಾಪ್ತಿಯ ಜಾಗಗಳನ್ನು ಸಂಬಂಧಪಟ್ಟ ಇಲಾಖೆಯ ಮೂಲಕ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು. ಸಮಸ್ಯೆಗಳಿದ್ದಲ್ಲಿ ತಹಸೀಲ್ದಾರ್ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಬೇಕೆಂದು, ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದರು.
ತಾಪಂ ಅಧ್ಯಕ್ಷೆ, ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಪಂ ಎಂಜಿನಿಯರಿಂಗ್ ಇಲಾಖೆಗೆ ಸೂತಿಸಿದಾಗ, ಎಇಇ ಸಣ್ಣಮರಿಗೌಡ, ಬೆಸ್ಕಾಂ ಅಸಹಕಾರದಿಂದ ಹಲವು ಕಡೆ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿವೆ. ತಾಲೂಕಿನ 35ಕಡೆಗಳಲ್ಲಿ ಕೊಳವೆಬಾವಿ ಕೊರಸಿ, ಬೆಸ್ಕಾಂಗೆ ಹಣಪಾವತಿಸಿದ್ದರೂ, ಕ್ರಮ ಕೈಗೊಳ್ಳದಕಾರಣ ನೀರಿದ್ದರೂ ನೀಡಲಾಗುತ್ತಿಲ್ಲ. 168 ಕಡೆ ಜಲಮೂಲ ಬತ್ತಿಹೋಗಿದೆ. 108 ಕಡೆ ಜಲಮೂಲ ಗುರುತಿಸಿ 3.66ಲಕ್ಷ ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇದರ ಜೊತೆಯಲ್ಲಿ 60 ಗ್ರಾಮಗಳಲ್ಲಿ ನೀರು ಪೂರೈಕೆ ಕೊಳವೆ ವ್ಯವಸ್ಥೆಗೆ 70 ಲಕ್ಷ ರು.ಗಳ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಸಿಡಿಪಿಒ ಅಕ್ರಂವುಲ್ಲಾ ಅಂಗನವಾಡಿ ಮೇಲ್ವಿಚಾರಕರ ಕೊರತೆ ತೀವ್ರವಾಗಿರುವ ಕಾರಣ ಯೋಜನೆಯ ಸಮರ್ಪಕ ನಿರ್ವಹಣೆಗೆ ತೊಂದರೆಯಾಗಿದೆ. 14 ಮೇಲ್ವಿಚಾರಕರಿಗೆ ಕೇವಲ ಮೂರು ಮಂದಿ ಇದ್ದಾರೆಂದು ಅಸಹಾಯಕತೆ ವ್ಯಕ್ತಪಡಿಸಿದರು. ಪ್ರಸಕ್ತ ಸಾಲಿನ ಆರ್ಥಿಕ ವರ್ಷಕೊನೆಗೊಳ್ಳುವ ಹಂತದಲ್ಲಿದ್ದರೂ, ಕೆಲ ಇಲಾಖೆಯಲ್ಲಿ ಶೇ.40ರಷ್ಟು ಅನುದಾನ ಉಳಿದಿರುವ ಬಗ್ಗೆ ತಾಪಂ ಇಒ ಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದಾಗ, ಅಧಿಕಾರಿಗಳು ಉಳಿಕೆ ಇರುವ ಒಂದೂವರೆ ತಿಂಗಳಿನಲ್ಲಿ ಅನುದಾನ ಪೂರ್ಣಬಳಕೆ ಮಾಡುತ್ತೇವೆಂದು ಬಹುತೇಕ ಅಧಿಕಾರಿಗಳು ತಿಳಿಸಿದ್ದು  ವಿಶೇಷವಾಗಿತ್ತು.
ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.