ತುಮಕೂರು

ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಿ

Published On :

ತುರುವೇಕೆರೆ: ಬೇಸಿಗೆ ಕಾಲ ಸನ್ನಿಹಿತವಾಗಿದ್ದು ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳು ಇರುವುದರಿಂದ ಪ್ರಥಮ ಆದ್ಯತೆ ನೀಡಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ತಾಲೂಕು ಆಡಳಿತ ಮುಂದಾಗಬೇಕು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲೂಕು ಪಂಚಾಯ್ತಿಯ ಸಭೆಯಲ್ಲಿ ಮಾತನಾಡಿದ ಅವರು ಅವಧಿಗೆ ಮುನ್ನವೇ ಬೇಸಿಗೆಯ ತಾಪ ಹೆಚ್ಚಿದೆ. ತಾಲೂಕಿನ ಹಲವಾರು ಕಡೆ ನೀರಿನ ಸಮಸ್ಯೆ ಎದುರಾಗಿದೆ. ಅಂತರ್ಜಲ ಕುಸಿದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಕೊಳವೆ ಬಾವಿಗಳೂ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಜನ ಹಾಗೂ ಜಾನುವಾರುಗಳಿಗೂ ನೀರಿನ
ತೊಂದರೆ ಬರಲಿದೆ. ಆದ್ದರಿಂದ ಅಧಿಕಾರಿಗಳು ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ನೀರನ್ನು ಒದಗಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
 ಜಿಲ್ಲಾ ಪಂಚಾಯ್ತಿ ಇಲಾಖೆ ಸಾರ್ವಜನಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಲು ಸೂಚಿಸಿದರು. ಡಾ. ನಂಜುಂಡಪ್ಪ ವರದಿಯನ್ವಯ ಬಿಡುಗಡೆಯಾಗಿರುವ ಒಂದು ಕೋಟಿ ರು. ಅನಿರ್ಬಂಧಿತ ಕಾಮಗಾರಿಗೆ ಸಂಬಂಧಿಸಿದಂತೆ ಈ ತಿಂಗಳ ಅಂತ್ಯದೊಳಗೆ ನೀಲನಕ್ಷೆ ತಯಾರಿಸಿ ಕಾಮಗಾರಿಗೆ ಚಾಲನೆ ನೀಡದಿದ್ದಲ್ಲಿ ಅನುದಾನ ವಾಪಸಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಕೂಡಲೇ ಕಾರ್ಯೋನ್ಮುಖವಾಗಬೇಕು ಎಂದು ಸದಸ್ಯರು ಸೂಚಿಸಿದರು.
ದೂರುತ್ತಲೇ ಬಂದಿದ್ದೇವೆ: ತಾಲೂಕು ಪಂಚಾಯ್ತಿ   ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರೂ ಆಗಿರುವ ಎಂ.ಡಿ.ರಮೇಶ್ ಗೌಡ ಹಾಗೂ  ಎಂ.ಜಿ.ಲಕ್ಷ್ಮೀಕಾಂತ್ ಮಾತನಾಡಿ ತಾವು ಅಧ್ಯಕ್ಷರಾಗಿದ್ದ ವೇಳೆಯಿಂದಲೂ ದಬ್ಬೇಘಟ್ಟ ಹಾಗೂ ಗೋಣಿತುಮಕೂರಿನ ಸರ್ಕಾರಿ ಆಸ್ಪತ್ರೆಗಳ ಕರ್ಮಕಾಂಡಗಳ ಬಗ್ಗೆ ದೂರುತ್ತಲೇ ಬಂದಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರಿಗೆ ಸೂಕ್ತವಾದ ಸೌಕರ್ಯ ಈ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತಿಲ್ಲ ಎಂದು ಹೇಳಿ ಹೇಳಿ ಸಾಕಾಗಿ ಹೋಗಿದೆ. ತಾಲೂಕು ಅಧಿಕಾರಿಗಳಾಗಲೀ ಅಥವಾ ಜಿಲ್ಲಾ ಆರೋಗ್ಯ ಇಲಾಖಾ ಅಧಿಕಾರಿಗಳಾಗಲೀ ಇತ್ತ ಗಮನ ಹರಿಸಿಲ್ಲ. ತಾಲೂಕು ಪಂಚಾಯ್ತಿ ಸದಸ್ಯರ ಮಾತಿಗೇ ಕಿಮ್ಮತ್ತಿಲ್ಲ ಎಂದ ಮೇಲೆ ಜನಸಾಮಾನ್ಯರ ಮಾತಿಗೆ ಎಲ್ಲಿದೆ ಬೆಲೆ ಎಂದು ಕಿಡಿಕಾರಿದರು. ಕಣತೂರು ತಾಲೂಕು ಪಂಚಾಯ್ತಿ ಸದಸ್ಯೆ ನಾಗಮಣಿ ಮಾತನಾಡಿ ತಮ್ಮ ಕ್ಷೇತ್ರದ ಕಣತೂರು ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ಗಳೇ ಇಲ್ಲ. ಇನ್ನು ವೈದ್ಯರು ಯಾವಾಗ ಬರುತ್ತಾರೋ, ಹೋಗುತ್ತಾರೋ ಗೊತ್ತಿಲ್ಲ ಎಂದು ದೂರಿದರು. ಇದರಿಂದ ಕುಪಿತಗೊಂಡ ಅಧ್ಯಕ್ಷ ಗಂಗಾಧರ್ ಕಳೆದ ಹಲವಾರು ಸಭೆಗಳಿಗೆ ತಾಲೂಕಿನ ಆರೋಗ್ಯ ಇಲಾಖಾ ಅಧಿಕಾರಿಗಳು ಬಾರದೇ ಕರ್ತವ್ಯ ನಿರ್ಲಕ್ಷ್ಯ ಮಾಡುವ ಮೂಲಕ ಸಭೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿ ಕೂಡಲೇ ನೊಟೀಸ್ ನೀಡುವಂತೆ ಆಗ್ರಹಿಸಿದರು.
ಸಭೆಯಲ್ಲಿ ಇಓ ವಾಳ್ವೇಕರ್, ಉಪಾಧ್ಯಕ್ಷ ಶಬನಾಬಿ ಉಪಸ್ಥಿತರಿದ್ದರು. ಎಲ್ಲಾ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.