ಬಾರದ ಶಿಕ್ಷಕರು; 2 ದಿನಗಳಿಂದ ಶಾಲೆಗೆ ಬೀಗ
ಕುಣಿಗಲ್: ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಮಾಗಡಿಪಾಳ್ಯ ಸಮೀಪದ ಮೇಗಲಪಾಳ್ಯ ಸರ್ಕಾರಿ ಕನ್ನಡ ಕಿರಿಯಪ್ರಾಥಮಿಕ ಶಾಲೆಗೆ ಎರಡು ದಿನಗಳಿಂದ ಶಿಕ್ಷಕರು ಹಾಜರಾಗದೆ ಶಾಲೆಗೆ ಬೀಗಹಾಕುವ ಸ್ಥಿತಿ ನಿರ್ಮಾಣವಾದ್ದರಿಂದ, ಪೋಷಕರು ಮಕ್ಕಳೊಂದಿಗೆ, ಕನ್ನಡಸೇನೆ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.
ಎಡೆಯೂರು ಹೋಬಳಿಯ ಮೇಗಲಪಾಳ್ಯಗ್ರಾಮದಲ್ಲಿ ಬಹುತೇಕ ಮುಸ್ಲಿಂ ಸಮುದಾಯದವರಿದ್ದು ಸಮೀಪದಲ್ಲಿ ಉರ್ದುಶಾಲೆ ಇದ್ದರೂ, ತಮ್ಮ ಮಕ್ಕಳನ್ನು ಕನ್ನಡ ಕಿರಿಯ ಪ್ರಾಥಮಿಕಶಾಲೆಗೆ ಕಳಿಸುತ್ತಾ, ತಮ್ಮ ಕನ್ನಡ ಪ್ರೇಮಮೆರದಿದ್ದಾರೆ. ಬುಧವಾರದಂದು ಶಾಲೆಯಲ್ಲಿದ್ದ ಮುಖ್ಯಶಿಕ್ಷಕ ಎಂಬಾತನನ್ನು ಅಮಾನತ್ತುಪಡಿಸಿ ಇಲಾಖೆ ಆದೇಶ ಹೊರಡಿಸಿದ್ದು ಆತಗೈರಾದ, ಇನ್ನೋರ್ವ ಶಿಕ್ಷಕ ತನಗೆ ತರೆಬೇತಿಗೆ ಹಾಕಿದ್ದಾರೆಂದೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಬೀಗದ ಕೈಕೊಟ್ಟುಹೋಗಿದ್ದರಿಂದ ಶಾಲೆಗೆ ರಜೆ ಘೋಷಿಸುವ ಅನಿವಾರ್ಯಸ್ಥಿತಿಯಾಯಿತು. ಗುರುವಾರವೂ ಯಥಾಸ್ಥಿತಿ ನಿರ್ಮಾಣವಾದ್ದರಿಂದ, ಬೇಸತ್ತ ಸಮಿತಿ ಅಧ್ಯಕ್ಷ ಶಬ್ಬೀರ್ ಅಹಮದ್, ಸಿಆರ್ಪಿಗೆ ಕರೆಮಾಡಿದರೂ ಸೂಕ್ತ ಉತ್ತರ ನೀಡದಕಾರಣ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ವಿಷಯ ತಿಳಿಸಿ ಪೋಷಕರು, ಮಕ್ಕಳೊಂದಿಗೆ ಬಿಇಒ ಕಚೇರಿಗೆಆಗಮಿಸಿ ಧರಣಿ ಪ್ರಾರಂಭಿಸಿದರು.
ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್, ಅಲ್ಪಸಂಖ್ಯಾತ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಹಮದ್ ಜಬೀವುಲ್ಲಾ, ಪದಾಧಿಕಾರಿಗಳಾದ ಇಂತಿಯಾಜ, ಕರೀಂ ಇತರರು ಧರಣಿಗೆ ಬೆಂಬಲಿಸಿದರು.
ಈ ಹಂತದಲ್ಲಿ ಬಿಇಒ ಕಚೇರಿಯ ಸಿಬ್ಬಂದಿಯೊಬ್ಬರು ಗುರುವಾರ ರಜೆಮಾಡಿ ನಂತರ ರಜೆ ದಿನದಲ್ಲಿ ಕ್ಲಾಸ್ ಮಾಡಿಹೊಂದಿಸಿಕೊಳ್ಳಿ ಎಂದು ಧರಣಿ ನಿರತರಿಗೆ ತಿಳಿಸಿದ್ದು, ಧರಣಿ ನಿರತರನ್ನು ಆಕ್ರೋಶಕ್ಕೆ ಕಾರಣವಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಬ್ಬೀರ್ ಅಹಮದ್, ಬಿಇಒ ಸಿದ್ದಯ್ಯನವರೊಂದಿಗೆ ವಾಗ್ವಾದಕ್ಕೆ ಇಳಿದು, ಸಮೀಪದಲ್ಲಿ ಉರ್ದುಶಾಲೆ ಇದ್ದರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುತ್ತಿದ್ದೇವೆ. ಆದರೆ ನೀವು ನೋಡಿದರೆ ತಾತ್ಸಾರ ಮನೋಭಾವ ತೋರಿ, ರಜೆಮಾಡಿ ಬೇರೊಂದು ದಿನ ನಡೆಸಿ ಎನ್ನುತ್ತಿದ್ದೀರಾ. ಈ ಕೂಡಲೆ ಕನ್ನಡ ಶಾಲೆ ಮುಚ್ಚಿ, ತಮ್ಮ ಮಕ್ಕಳನ್ನು ಉರ್ದುಶಾಲೆಗೆ ದಾಖಲಿಸುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರನ್ನು ನೇಮಿಸಿ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್, ಶಾಲೆ ಮುಚ್ಚುವುದು ಬೇಡ, ಶಿಕ್ಷಕರನ್ನು ಸಮರ್ಪಕವಾಗಿ ನಿಯೋಜಿಸದೆ ಎರಡು ದಿನಶಾಲೆ ಮುಚ್ಚಲು ಕಾರಣವಾದ ಕೆಳಹಂತದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ, ಕೂಡಲೆ ಶಿಕ್ಷಕರನ್ನು ನಿಯೋಜಿಸಿ ಶಾಲೆಪ್ರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕನ್ನಡಶಾಲೆಗಳ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿಗಳು ನಿರ್ಲಕ್ಷ್ಯಧೋರಣೆ ವಹಿಸದಲ್ಲಿ ಸಂಘಟನೆ ವತಿಯಿಂದ ಉಗ್ರಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು ಎಚ್ಚರಿಸಿದರು. ಧರಣಿ ನಿರತರನ್ನು ಸಮಾಧಾನಗೊಳಿಸಿದ ಬಿಇಒ ಸಿದ್ದಯ್ಯ, ಧರಣಿಗೆ ಆಗಮಿಸಿದ್ದ ಮಕ್ಕಳಿಗೆ ಸ್ಥಳೀಯ ಶಾಲೆಯಲ್ಲಿ ಮಧ್ಯಾಹ್ನದ ಭೋಜನ
ವ್ಯವಸ್ಥೆಮಾಡಿಸಿ, ಕೂಡಲೆ ಇಬ್ಬರು ಶಿಕ್ಷಕರನ್ನು ನಿಯೋಜಿಸಿದ್ದು, ಮಧ್ಯಾಹ್ನದಿಂದಲೇ ಪಾಠ ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದಮೇರೆಗೆ ಪ್ರತಿಭಟನೆ ಹಿಂಪಡೆದರು. ಪೋಷಕರಾದ ಆಯಿಶಾಬೀ, ಶಹಾತಾಜ್, ರೇಷ್ಮ, ತನ್ನು ಇತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

