ಸುಳ್ಳು ದಾಖಲೆ ನೀಡಿದ್ದ ಕುಣಿಗಲ್ ಮೂಲದ ವ್ಯಕ್ತಿ ಸೆರೆ
ಬೆಂಗಳೂರು: ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ನೇಹಿತನಿಗೆ ಜಾಮೀನು ಕೊಡಿಸಲು ನ್ಯಾಯಾಲಯಕ್ಕೆ ಮೃತ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆಗಳ ಶ್ಯೂರಿಟಿ ನೀಡಿ ನ್ಯಾಯಾಲಯಕ್ಕೆ ಮೋಸ ಮಾಡಿದ್ದ ವ್ಯಕ್ತಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ಮೂಲದ ಕಳಸೇಗೌಡ (38) ಬಂಧಿತ ಆರೋಪಿ.
ಡಕಾಯಿತಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಂಜುನಾಥ ಎಂಬಾತನಿಗೆ ಜಾಮೀನು ಶ್ಯೂರಿಟಿ ನೀಡಲು ಆರೋಪಿ ಕಳಸೇಗೌಡ, ಕುಣಿಗಲ್ ಮೂಲದ ಮೃತ ಉತ್ತಯ್ಯ ಹೆಸರಿನಲ್ಲಿ ಪಹಣಿ ದಾಖಲೆಗಳು ಹಾಗೂ ಉತ್ತಯ್ಯ ಹೆಸರಿನಲ್ಲಿದ್ದ ಮತದಾರರ ಗುರುತಿನ ಚೀಟಿಯಲ್ಲಿ ತನ್ನ ಫೋಟೋ ಅಂಟಿಸಿ ಅವುಗಳು ತನ್ನದೇ ಎನ್ನುವಂತೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ.
ಇತ್ತೀಚೆಗೆ ಆರೋಪಿ ಮಂಜುನಾಥನ ವಿಚಾರಣೆಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು. ಆದರೆ ಮಂಜುನಾಥ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಲಯ ಶ್ಯೂರಿಟಿ ನೀಡಿದ್ದ ಉತ್ತಯ್ಯನಿಗೆ ನೋಟಿಸ್ ಜಾರಿ ಮಾಡಿತ್ತು. ಪೊಲೀಸರು ಶ್ಯೂರಿಟಿ ನೀಡಿದ್ದ ಉತ್ತಯ್ಯನ ದಾಖಲೆಗಳನ್ನು ಹಿಡಿದುಕೊಂಡು ಕುಣಿಗಲ್ಗೆ ತೆರಳಿದ್ದರು. ಆದರೆ ಉತ್ತಯ್ಯನ ಮನೆಗೆ ಹೋದಾಗ ಪೊಲೀಸರಿಗೆ ಆಶ್ಚರ್ಯವಾಗಿತ್ತು. ಏಕೆಂದರೆ, ಉತ್ತಯ್ಯ ಹೆಸರಿನ ವ್ಯಕ್ತಿ ನಾಲ್ಕು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ. ಅಲ್ಲದೇ ಉತ್ತಯ್ಯನ ಮತದಾರರ ಗುರುತಿನ ಚೀಟಿಯಲ್ಲಿರುವ ಫೋಟೋದಲ್ಲಿರುವ ವ್ಯಕ್ತಿ ಉತ್ತಯ್ಯ ಅಲ್ಲ. ಬದಲಿಗೆ ಅದು ಅದೇ ಊರಿನ ಕಳಸೇಗೌಡನದ್ದು ಎಂದು ಉತ್ತಯ್ಯ ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಕಳಸೇಗೌಡನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನ್ಯಾಯಾಲಯಕ್ಕೆ ಮೋಸ ಮಾಡಿರುವುದು ತಿಳಿದು ಬಂದಿದೆ. ಉತ್ತಯ್ಯ ಅವರ ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದ ಕಳಸೇಗೌಡ, ಅವರ ಮಾಲೀಕತ್ವದ ಜಮೀನಿನ ಬಗ್ಗೆ ಮಾಹಿತಿ ಹೊಂದಿದ್ದ. ಹೀಗಾಗಿ ಮೃತ ಉತ್ತಯ್ಯನ ಜಮೀನಿನ ಸರ್ವೇ ನಂಬರ್ ನೀಡಿ ಪಹಣಿ ಪಡೆದುಕೊಂಡು ಮಂಜುನಾಥನ ಜಾಮೀನಿಗೆ ಶ್ಯೂರಿಟಿ ನೀಡಿದ್ದಾಗಿ ಕಳಸೇಗೌಡ ತಿಳಿಸಿದ್ದಾನೆ.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

