ತುಮಕೂರು

20 ನಿಮಿಷ 20 ಸುದ್ದಿ

Published On :

ಕುಣಿಗಲ್: ರೇಷ್ಮೆ ಇಲಾಖೆಗೆ ಕಾಯಕಲ್ಪ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು, ಇದರಿದಾಗಿ ಇಲಾಖೆ ಮುಚ್ಚುವ ಹಂತಕ್ಕೆ ತೆರಳಿರುವುದು ದುರದೃಷ್ಟಕರ ಎಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು. ರೇಷ್ಮೆ ಇಲಾಖೆ ಮೈಸೂರು ಬಿತ್ತನೆ ವಲಯದ ಕಿಸಾನ್ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಮೈಸೂರು ಬಿತ್ತನೆ ವಲಯದ ಸಂರಕ್ಷಣೆಗೆ ತಾಲೂಕಿನ ಮಾಜಿ ರೇಷ್ಮೆ ಸಚಿವರಾದ ಮಾಯಣ್ಣ, ವೈ.ಕೆ. ರಾಮಯ್ಯ ಅವರು ವಿಶ್ವಾ ಬ್ಯಾಂಕ್ನ ಧನಸಹಾಯದಿಂದ ಮೈಸೂರು ಬಿತ್ತನೆ ವಲಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಆದರೆ ಸರ್ಕಾರವು ದೇಶದ ರೇಷ್ಮೆ ಉದ್ಯಮಕ್ಕೆ ಮಾತೃ ಸ್ಥಾನದಲ್ಲಿರುವ ಮೈಸೂರು ಬಿತ್ತನೆ ವಲಯಕ್ಕೆ ಸರ್ಕಾರ ಹೆಚ್ಚಿನ  ಆದ್ಯತೆ ನೀಡುತ್ತಿಲ್ಲ. ನೀತಿ ನಿಯಮಗಳನ್ನು ಗಾಳಿಗೆ ತೂರಿ ಅತಿ ಸೂಕ್ಷ್ಮ ಮೈಸೂರು ಬಿತ್ತನೆ ವಲಯವನ್ನು ಕಡೆಗಣಿಸಿದ ಪರಿಣಾಮವಾಗಿ ಮಿಶ್ರತಳಿ ಬೇಳೆ ಪ್ರವೇಶಿಸಿದೆ. ಈ ಮಧ್ಯೆ ಮಾರುಕಟ್ಟೆಯಲ್ಲಿನ ಕೆಲ ಅಧಿಕಾರಿಗಳು ರೈತರ ಶೋಷಣೆ ಮಾಡುತ್ತ ಹಲವು ಸಮಸ್ಯೆಗೆ ಕಾರಣವಾಗಿದೆ. ಇನ್ನಾದರೂ  ಅಧಿಕಾರಿ ವರ್ಗದವರು ಎಚ್ಚೆತ್ತು ಕಾರ್ಯತಂತ್ರ ರೂಪಿಸಬೇಕಿದೆ ಎಂದರು.

ರಾಹುಲ್ ಗಾಂಧಿ ರೋಡ್ ಶೋಗೆ ಕುಣಿಗಲ್ ಸಜ್ಜು
ಕುಣಿಗಲ್: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅಗಮನಕ್ಕೆ ಪಟ್ಟಣದ ಹೃದಯಭಾಗವಾದ ಗ್ರಾಮದೇವತೆ ವೃತ್ತ ಹುಚ್ಚಮಾಸ್ತಿಗೌಡ ವೃತ್ತ ಕಾಂಗ್ರೆಸ್ ಬ್ಯಾನರ್, ಬಂಟಿಂಗ್ಸ್ನಿಂದ ತುಂಬಿ ತುಳುಕುತ್ತಿದ್ದು, ಕಾರ್ಯಕರ್ತರು, ಮುಖಂಡರ ಓಡಾಟ ಒಂದು ತೆರನಾದರೆ, ವಿವಿಧ ಇಲಾಖಾಧಿಕಾರಿಗಳ ಓಡಾಟದ ಭರಾಟೆ ಮತ್ತೊಂದು ತೆರೆನಾಗಿದೆ.   ಭಾನುವಾರ, ಮಹಿಳಾ ಸಮಾವೇಶದ ನಂತರ ಕುಣಿಗಲ್ ಮಾರ್ಗವಾಗಿ ಮಂಡ್ಯ ಜಿಲ್ಲೆಕಡೆಗೆ ತೆರಳುವ ರಾಹುಲ್ ಗಾಂಧಿ, ಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದು, ರೋಡ್ ಶೋ ನಡೆಯುವ ಗ್ರಾಮದೇವತೆ ವೃತ್ತದಲ್ಲಿ ವಿವಿಧ ಮುಖಂಡರ ಆಳೆತ್ತರದ ಭಾವಚಿತ್ರಗಳು ಪಕ್ಷದ ರಾಜ್ಯ, ರಾಷ್ಟ್ರ ನಾಯಕರ ಬ್ಯಾನರ್ ಜೊತೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ರಾರಾಜಿಸುತ್ತಿದೆ.
ಕೆಲ ಮುಖಂಡರು ಯುವನಾಯಕನ, ರಾಜ್ಯ ನಾಯಕರ ಮನ ಒಲಿಸಲು, ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುವ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಹಾಕಿ ತಮ್ಮ ಛಾಪು ಮೂಡಿಸಲು ತಮ್ಮದೇ ಆದ ವಿಭಿನ್ನ ತಂತ್ರ ಅನುಸರಿಸಿದ್ದು, ಶುಕ್ರವಾರ ರಾತ್ರಿಯಿಂದಲೇ ಕಾರ್ಯಕರ್ತರು ಮುಖಂಡರು ಪ್ರಚಾರದ ಕಾರ್ಯದಲ್ಲಿ ನಿರತರಾಗಿದ್ದಾರೆ. ಲೋಕೋಪಯೋಗಿ ಇಲಾಖಾಧಿಕಾರಿಗಳು ಕಳೆದ ಎರಡು ದಿನಗಳಿಂದಲೂ ತುಮಕೂರು-ಕುಣಿಗಲ್ ಹುಲಿಯೂರುದುರ್ಗ- ಕೆಸ್ತೂರು-ಮದ್ದೂರು ರಾಜ್ಯಹೆದ್ದಾರಿಯಲ್ಲಿ ಹಲವು ತಿಂಗಳಿನಿಂದ ಗುಂಡಿ ಸರಿಪಡಿಸುವ ಕೆಲಸ ಕೈಗೊಂಡಿದ್ದಾರೆ.

ಹುಳಿಯಾರು ಹೋಬಳಿ ರೈತಸಂಘದ ಪದಾಧಿಕಾರಿಗಳ ಆಯ್ಕೆ
ಹುಳಿಯಾರು: ರಾಜ್ಯ ರೈತಸಂಘದ ನಾಯಕರಾದ ಪುಟ್ಟಣ್ಣಯ್ಯ ಬಣದ  ಹುಳಿಯಾರು ಹೋಬಳಿ ರೈತಸಂಘ ಘಟಕದ ಪದಾಧಿಕಾರಿಗಳ ಆಯ್ಕೆ ಪಟ್ಟಣದ ಗಣಪತಿದೇವಾಲಯದಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಲಿಂಗರಾಜು, ಅಧ್ಯಕ್ಷರಾಗಿ ಬಸವರಾಜು,  ಉಪಾಧ್ಯಕ್ಷಾರಾಗಿ ನಾಗರಾಜು,  ಕಾರ್ಯದರ್ಶಿಯಾಗಿ ಕೆಂಕೆರೆಗೊಲ್ಲರ ಹಟ್ಟಿ ಕೋಟ್ರೇಶ್, ರಾಜಣ್ಣ, ಸಂಚಾಲಕರಾಗಿ ಅರುಣ್, ರಂಗನಾಥ್, ವೆಂಕಟರಾಯ, ಮೋಹನ್, ಸುದರ್ಶನ್,ಚಿಕ್ಕೀರಣ್ಣ ಸೇರಿದಂತೆ ಇತರರನ್ನು ಆಯ್ಕೆ ಮಾಡಲಾಯಿತು.

ಅಭಿನಂದನೆ...
ಗುಬ್ಬಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಂ. ಹಿತೇಶ್ ಅವಿರೋಧವಾಗಿ  ಆಯ್ಕೆಯಾದರು. ನೂತನ ಅಧ್ಯಕ್ಷರನ್ನು ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪಿ.ಬಿ. ಚಂದ್ರಶೇಖರಬಾಬು, ಎಪಿಎಂಸಿ ಸದಸ್ಯ ಜಿ.ಎನ್. ಬೆಟ್ಟಸ್ವಾಮಿ ಸೇರಿದಂತೆ ಮುಖಂಡರು ಅಭಿನಂದಿಸಿದರು.

ವಿದ್ಯಾರ್ಥಿಗಳು ಸಂಪನ್ಮೂಲ ಪದವೀಧರರಾಗಬೇಕು
ಮಧುಗಿರಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು, ಸಂಪನ್ಮೂಲ  ಪದವೀಧರರಾಗಬೇಕು ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಎಂ.ಎಂ. ಮಲ್ಲಿಕಾರ್ಜುನ್ ತಿಳಿಸಿದರು. ಇಲ್ಲಿನ ನೌಕರರ ಭವನದಲ್ಲಿ ಏರ್ಪಟಾಗಿದ್ದ ರಾಜ್ಯಶಾಸ್ತ್ರ ವಿಚಾರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯಶಾಸ್ತ್ರ ಹಲವು ಮುಖಗಳನ್ನು ಹೊಂದಿದ್ದು ಅರ್ಥಶಾಸ್ತ್ರ, ಇತಿಹಾಸ ಮತ್ತು ಸಮಾಜಶಾಸ್ತ್ರಗಳ ಜೊತೆ ಬೆಸೆದಿರುವ ವಿಷಯವಾಗಿದ್ದು ಪ್ರಸ್ತುತ ದಿನಗಳಲ್ಲಿ ರಾಜ್ಯಶಾಸ್ತ್ರದ ಪಾತ್ರ ಅತಿ ಮುಖ್ಯ ಎಂದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ
ತುಮಕೂರು: ಯಾರು ತಮ್ಮ ಜೀವನವನ್ನು ಬೇರೆಯವರ ಸೇವೆಗೆ ಮುಡಿಪಾಗಿಡುತ್ತಾರೋ ಅಂತವರು ಮಾತ್ರ ಚರಿತ್ರಾರ್ಹರಾಗುತ್ತಾರೆ ಎಂದು ಅಟವಿ ಶಿವಲಿಂಗ ಸ್ವಾಮೀಜಿ ಹೇಳಿದರು. ಅವರು ಚಿಕ್ಕತೊಟ್ಲುಕೆರೆ ಅಟವಿ ಜಂಗಮ ಕ್ಷೇತ್ರದಲ್ಲಿ ವಿವಿ ವಿಜ್ಞಾನ ಕಾಲೇಜು ಹಮ್ಮಿಕೊಂಡಿದ್ದ 7 ದಿನಗಳ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಮಾತನಾಡಿದರು. ಜಗತ್ತಿನೊಳಗೆ ಕೋಟ್ಯಾನುಕೋಟಿ ಮಂದಿ ಹಣ ಮತ್ತು ಅಧಿಕಾರವನ್ನು ಅನುಭವಿಸಿ ಹೋಗಿದ್ದಾರೆ. ಇವರ್ಯಾರು ಚರಿತ್ರೆಯ ಒಳಗೆ ದಾಖಲಾಗಿಲ್ಲ ಎಂದರು. ಇವತ್ತಿನ ಶಿಕ್ಷಣ ವ್ಯವಸ್ಥೆ ಉದ್ಯೋಗ ಪಡೆದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿದೆ. ಉತ್ತಮ ಬದುಕನ್ನು ಬಾಳುವುದಕ್ಕಲ್ಲ ಎಂದರು. ಕಾರ್ಯಕ್ರಮಾಧಿಕಾರಿ ಡಾ. ನಾಗಭೂಷಣ ಬಗ್ಗನಡು ಅವರು ಗಾಂಧೀಜಿಯನ್ನು ಸ್ಮರಿಸುತ್ತಾ ಈ ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಬಂದಾಗ ದಿಲ್ಲಿಯಲ್ಲಿ ಸಂಭ್ರಮ  ಆಚರಿಸುತ್ತಿದ್ದರೆ ಗಾಂಧೀಜಿಯವರು ಕೋಲ್ಕತ್ತಾ ನಗರಿಯಲ್ಲಿ ಕೋಮು ದಳ್ಳುರಿಗೆ ಸಿಕ್ಕ ಸತ್ತ ಹೆಣಗಳ ನಡುವೆ ಸಂಕಟಪಡುತ್ತಿದ್ದರು ಎಂದರು.

ನೂತನ ತಾಪಂ ಕಚೇರಿ
ಗುಬ್ಬಿ ಪಟ್ಟಣದ ತಾಲೂಕು ಪಂಚಾಯ್ತಿ ಆವರಣದಲ್ಲಿ ನಿರ್ಮಿಸಿರುವ ನೂತನ  ತಾಪಂ ಕಚೇರಿಯನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ಉದ್ಘಾಟಿಸಿದರು. ತಾಪಂ ಅಧ್ಯಕ್ಷ ಕೆ.ಎನ್.ಬಾಲಕೃಷ್ಣ ಮುಂತಾದವರು ಭಾಗವಹಿಸಿದ್ದರು.

ಗುಬ್ಬಿ ತಾಲೂಕಿನಿಂದ 15 ಸಾವಿರ ಮಂದಿ
ಗುಬ್ಬಿ: ಬೆಂಗಳೂರಿನಲ್ಲಿ ಫೆ.16 ರಂದು ನಡೆಯಲಿರುವ ರಾಜ್ಯ ತಿಗಳ ಕ್ಷತ್ರಿಯರ ಬೃಹತ್ ಸಮಾವೇಶಕ್ಕೆ ಗುಬ್ಬಿ ತಾಲೂಕಿನಿಂದ ಸುಮಾರು 15 ಸಾವಿರಕ್ಕೂ ಹೆಚ್ಚು ತಿಗಳ ಸಮುದಾಯ ಬಂಧುಗಳು ಹೊರಡಲಿದ್ದಾರೆಂದು ಪಟ್ಟಣ ಪಂಚಾಯ್ತಿ ಸದಸ್ಯ ಜಿ.ಸಿ.ಲೋಕೇಶ್ ಬಾಬು ತಿಳಿಸಿದರು. ಪಟ್ಟಣದಲ್ಲಿ ಮಾತನಾಡಿದ ಅವರು ಅತಿ ಹಿಂದುಳಿದ ಜನಾಂಗವಾದ ತಿಗಳ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು ತಿಗಳ ಜನಾಂಗದಲ್ಲಿ ಜಾಗೃತಿ ಮೂಡಿಸಿ ಸಮಪಾಲು, ಸಮಬಾಳು ಹಾಗೂ ಜನಾಂಗದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ಬೃಹತ ಸಮಾವೇಶವನ್ನು ಏರ್ಪಡಿಸಲಾಗಿದ್ದು ಸಮಾವೇಶದ ಯಶಸ್ಸಿಗೆ ಸಹಕರಿಸಬೇಕೆಂದರು. ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ ಮಾತನಾಡಿದರು. ಸಭೆಯಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಶಶಿಧರ್,ಪಟ್ಟಣ ಪಂಚಾಯ್ತಿ ಸದಸ್ಯರಾದ ಕುಮಾರ್, ಕೃಷ್ಣಮೂರ್ತಿ,ತಿಗಳ ಸಮುದಾಯದ ಮುಖಂಡರಾದ ಹುಚ್ಚೇಗೌಡ, ಎಸ್.ನಂಜೇಗೌಡ, ಯಜಮಾನ್ ಸಂಜೀವಯ್ಯ, ಜುಂಜೇಗೌಡ, ಜಿ.ಗೋವಿಂದಯ್ಯ, ಜಿ.ಸಿ.ಕೃಷ್ಣಮೂರ್ತಿ, ಯೋಗಾನಂದಕುಮಾರ್  ಮುಂತಾದವರು ಭಾಗವಹಿಸಿದ್ದರು.

ಪಂಡಿತ್ ದೀನ್ ದಯಾಳ್ ಆದರ್ಶ ಅಳವಡಿಸಿಕೊಳ್ಳಿ
ಗುಬ್ಬಿ: ಪಂಡಿತ್ ದೀನ್ ದಯಾಳ್ ಅವರ ತತ್ವಾದರ್ಶಗಳು ಪ್ರಸ್ತುತ ಸಮಾಜಕ್ಕೆ ಮಾರ್ಗದರ್ಶನಗಳಾಗಿದ್ದು ಸಮಾಜದಲ್ಲಿ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ  ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಬಿಜೆಪಿ ಪಕ್ಷದ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಉಪಾಧ್ಯಕ್ಷರಾದ ಸುಲೋಚನಾ ಭಟ್ ತಿಳಿಸಿದರು. ಪಟ್ಟಣದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಪಂಡಿತ್ ದೀನ್ದಯಾಳ್ರ ಸಮರ್ಪಣಾ ದಿನ ಮತ್ತು ರಾಜ್ಯ ಮಟ್ಟದ ಸ್ವಾಭಿಮಾನಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಭೆಯಲ್ಲಿ ಪ್ರೇಮಾ ಹೆಗ್ಗಡೆ, ದಯಾನಂದ್, ಶಿವಕುಮಾರ್ ಸಾಕೇತ್, ಬಿ.ಕೆ ಮಂಜುನಾಥ್, ನಾಗರತ್ಮಮ್ಮ, ಲೋಕೇಶ್, ಎಸ್. ವಿಜಯಕುಮಾರ್ ಮುಂತಾದವರು ಭಾಗವಹಿಸಿದ್ದರು.

ದೊಡ್ಡರಂಗೇಗೌಡರಿಗೆ ಅರ್ಪಣೆ
ತುರುವೇಕೆರೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರಿಗೆ ಹುಲಿಕೆರೆ ಚಿತ್ರಕಲಾ ಶಿಕ್ಷಕ ಸಿದ್ದಲಿಂಗಪ್ಪ ಕುರುಬರ ಅವರು ಸ್ಥಳದಲ್ಲೇ ರಚಿಸಿದ್ದ ಗೌಡರ ಭಾವಚಿತ್ರ ಅರ್ಪಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖ ಮತ್ತಿತರ ಶಿಕ್ಷಕರು ಇದ್ದಾರೆ.

ಮಹಿಳೆಯರಿಂದ ಸಾಮೂಹಿಕ ಲಲಿತಾ ಸಹಸ್ರನಾಮ
ತುರುವೇಕೆರೆ: ಸ್ಥಳೀಯ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ಸಹಿತ ವರದ ಬೇಟೇರಾಯಸ್ವಾಮಿ ದೇವಾಲಯದ ರಾಜಗೋಪುರದ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಪ್ರಾರಂಭದ ದಿನವಾಗಿ ಶ್ರೀ ಮಹಾಗಣಪತಿ ಪೂಜೆ, ಅಭಿಷೇಕ ಹಾಗೂ ನೂರಾರು ಮಹಿಳೆಯರಿಂದ ಸಾಮೂಹಿಕ ಲಲತಾ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು. ಸುಮಾರು 800 ಕ್ಕೂ ಹೆಚ್ಚು ಮಹಿಳೆಯರು ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಭಾಗವಹಿಸಿದ್ದರು.  ಮಹಿಳೆಯರೇ ದೇವರ ಉತ್ಸವವನ್ನು ಹೊತ್ತು ಮೆರವಣಿಗೆ ಮಾಡಿದದು ಇದೇ  ಪ್ರಥಮವಾಗಿದೆ.  ಧಾರ್ಮಿಕ ಸಭೆಯಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯವಾದಿ ಎಚ್. ಸುಬ್ರಹ್ಮಣ್ಯ ಜೋಯಿಸ್, ಲೋಕಸಾಭಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಎಂ.ಟಿ. ಕೃಷ್ಣಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್ ಭಾಗವಹಿಸುವರು.

ಮೂಢನಂಬಿಕೆ ಬಿಟ್ಟು ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿಸಿ
ಚಿಕ್ಕನಾಯಕನಹಳ್ಳಿ: ರೈತರು ಮತ್ತು ಸಾರ್ವಜನಿಕರು ಮೂಢನಂಬಿಕೆಗೆ ಬಿಟ್ಟು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರಕ್ಕೆ ಸಂಬಂದಿಸಿದ ಲಸಿಕೆಯನ್ನು ಹಾಕಿಸುವಂತೆ ತಾಲೂಕು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಾದ ಎಂ.ಪಿ. ಶಶಿಕುಮಾರ್ ತಿಳಿಸಿದರು. ಅವರು ಪಟ್ಟಣದ ಪಶುವೈದ್ಯ ಆಸ್ಪತ್ರೆಯಲ್ಲಿ ಕಾಲುಬಾಯಿ ಜ್ವರಕ್ಕೆ ಸಂಬಂಧಿಸಿದಂತೆ ಕರೆದಿದ್ದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಇದೊಂದು ಮಾರಣಾಂತಿಕ ಮತ್ತು ಸಾಂಕ್ರಾಮಿಕ ರೋಗವಾಗಿದ್ದು, ರೋಗದ ಬಗ್ಗೆ ನಿರ್ಲಕ್ಷ ಮಾಡಬಾರದು. ಈ ರೋಗದಿಂದಾಗಿ ಭಾರತದಾದ್ಯಂತ ರೈತರು 18 ಸಾವಿರ ಕೋಟಿ ನಷ್ಟವನ್ನುನುಭವಿಸಿದ್ದಾರೆ. ಆದ ಕಾರಣ ಇದನ್ನು ಮಕ್ಕಳಿಗೆ ತಗಲುವ ಪೊಲಿಯೋ ರೋಗ ನಿರ್ಮೂಲನೆಗೆ ಹಮ್ಮಿಕೊಂಡಿರುವ ಪಲ್ಸ್ ಪೊಲಿಯೋ ರೀತಿ ದೇಶದಾದ್ಯಂತ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಸಕ್ತ ತಾಲೂಕಿನಲ್ಲಿ 27 ಸಾವಿರ ಜಾನುವಾರುಗಳಿದ್ದು, ಫೆಬ್ರವರಿ 15ರಿಂದ ಮಾರ್ಚ್ 15ರವರಗೆ ಕಾಲುಬಾಯಿ ಜ್ವರದ ಲಸಿಕೆಯನ್ನು ಸಾಮೂಹಿಕವಾಗಿ  ಹಾಕಲಾಗುವುದು. ಫೆ. 15ರಂದು ಶೆಟ್ಟೀಕೆರೆ ಹೋಬಳಿ ಗೋಡೇಕೆರೆಯಿಂದ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ರೈತರು ಈ ಕಾರ್ಯಕ್ರಮಕ್ಕೆ ಸ್ಪಂದಿಸಿ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ಕಾಲುಬಾಯಿ ಜ್ವರದ ನಿಯಂತ್ರಣ ಕಾರ್ಯಕ್ರಮದಲ್ಲಿ ಸಹಕರಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಪಶುವೈದ್ಯರಾದ ಕಾಂತರಾಜು ಉಪಸ್ಥಿತರಿದ್ದರು.

ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ
ಗುಬ್ಬಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಆವರಣದಲ್ಲಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆಯನ್ನು ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್ ನೆರವೇರಿಸಿದರು. ಶಾಸಕ ಎಸ್.ಆರ್.ಶ್ರೀನಿವಾಸ್, ಜಿಪಂ ಅಧ್ಯಕ್ಷೆ ಸಾಕಮ್ಮ ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿಯಲ್ಲಿ  ನಮೋ ಭಾರತ್ ರಥಯಾತ್ರೆ
ಚಿಕ್ಕನಾಯಕನಹಳ್ಳಿ: ಭಾರತ ಪುರಾತನ ಕಾಲದಿಂದಲು ಪಾಶ್ಚಾತ್ಯರಿಗೆ ಕೌತುಕದ ಭೂಮಿಯಾಗಿದೆ. ಈ ಮೂರಕ್ಷರದ ಮೋಡಿ ಸೆಳೆತ ಪ್ರಪಂಚದ ಯಾರನ್ನು ಬಿಟ್ಟಿಲ್ಲ ಎಂಬುದು ನಮೋ ಭಾರತ್  ಪ್ರತಿಪಾದನೆ.  ಇತ್ತೀಚೆಗೆ ಪಟ್ಟಣಕ್ಕೆ ಬಂದ ನಮೋ ಭಾರತ್ ರಥಯಾತ್ರೆಯ ಸಂದರ್ಭದಲ್ಲಿ ರಥದ ಉಸ್ತುವಾರಿಯಲ್ಲಿದ್ದ ನಮೋ ಬ್ರಿಗೇಡ್ ಕಾರ್ಯಕರ್ತರು ಜನತೆಯೊಂದಿಗೆ ಸಂಭಾಷಿಸುತ್ತಾ, ದೇಶ ಇಂದು  ಆತಂಕದ ಸ್ಥಿತಿ  ಎದುರಿಸುತ್ತಿದೆ. ದಶಕಗಳಿಂದ ದೇಶವನ್ನು ದುರ್ಬಲ ಶಕ್ತಿ ಆಳುತ್ತಿದ್ದು, ರಾಷ್ಟ್ರದ ಒಳಗೆ ಮತ್ತು ಹೊರಗೆ ಎರಡು ಬದಿಯಿಂದ  ರಕ್ಷಣೆ ಕುಸಿದಿದೆ ಎಂದರು. ಹೀಗೆ ಅದ್ಭುತವಾಗಿಯೇ ಕಾಣುವ ಭಾರತ ತರ್ಕಕ್ಕೆ ಸಿಲುಕದ, ಎಂದೂ ತಣಿಯದ ಕೌತುಕ ಎಂದರು.

ಡಾ. ಜಿ. ಪರಮೇಶ್ವರ್ಗೆ ಡಿಸಿಎಂ ಸ್ಥಾನ ನೀಡಿ
ತುಮಕೂರು: ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆದಿಜಾಂಬವ ಸಂಘದ ಅಧ್ಯಕ್ಷ ಎನ್. ಚಿಕ್ಕರಂಗಯ್ಯ ತಿಳಿಸಿದ್ದಾರೆ. ಒಂದು ವೇಳೆ ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೇ ಇದ್ದರೆ ದಲಿತ ಮತಗಳ ಬಹಿಷ್ಕಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಪರಮೇಶ್ವರ್ ಮುಖ್ಯಮಂತ್ರಿಯಾಗುತ್ತಾರೆಂದು ತಿಳಿದ ಕೂಡಲೇ ಅನೇಕ ಕಾಂಗ್ರೆಸ್ ಹಿರಿಯ ಮುಖಂಡರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುವ ಮುಂಚೆಯೇ ಸೋಲಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯಾದ್ಯಂತ ಎಡಗೈ ಮತ್ತು ಬಲಗೈ ಜನಾಂಗದ ದಲಿತ ಮತಗಳೇ ನಿರ್ಣಾಯಕ. ಲೋಕಸಭಾ ಚುನಾವಣೆಗೆ ಮುಂಚೆ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕು. ಒಂದು ವೇಳೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗುತ್ತದೆ. ತಪ್ಪಿದ್ದಲ್ಲಿ ತೊಂದರೆ ಹೆಚ್ಚು ಎಂದು ಅವರು ತಿಳಿಸಿದ್ದಾರೆ.

ಜಂಗಮರಹಳ್ಳಿಯಲ್ಲಿ ಮಾರಮ್ಮನ ಜಾತ್ರೆ
ಪಾವಗಡ: ವಿರೋಧದ ನಡುವೆಯೂ ದೇವರ ಹೆಸರಿನಲ್ಲಿ ಮನೆಗಳ ಬಳಿ ಸಾಕು ಪ್ರಾಣಿಗಳನ್ನು ಬಲಿ ಕೊಡುವ ಮೂಲಕ 2 ದಿನಗಳ  ಮಾರಮ್ಮನ ಜಾತ್ರೆಗೆ ತಾಲೂಕಿನ ಜಂಗಮರಹಳ್ಳಿ ಗ್ರಾಮಸ್ಥರು ಚಾಲನೆ ನೀಡಿದರು. ತಮ್ಮ ಜಮೀನುಗಳಲ್ಲಿ ಬೆಳೆದ ಶೇಂಗಾ ಹಾಗೂ ಇತರೆ ಬೆಳೆಗಳು ಕಟಾವು ಪೂರೈಸಿದ ನಂತರ ತಾಲೂಕಿನ ಗ್ರಾಮದಲ್ಲಿ ಪ್ರತಿ ವರ್ಷ ಫೆಬ್ರವರಿ ಮಾಹೆಯಲ್ಲಿ ದೇವರಿಗೆ ಕುರಿ, ಮೇಕೆ, ಕೋಳಿ ಸೇರಿದಂತೆ ಇತರೆ ಸಾಕು ಪ್ರಾಣಿಗಳನ್ನು ಬಲಿ ಕೊಡುವ ಮೂಲಕ ಗ್ರಾಮಸ್ಥರೆಲ್ಲ ಸೇರಿ 2ದಿನಗಳ ಕಾಲ ಗ್ರಾಮದ ಮಾರಮ್ಮನ ಜಾತ್ರೆ ನಡೆಸಿ ಸಂಭ್ರಮಿಸುವುದು ಗ್ರಾಮದ ಸಂಪ್ರದಯ.  ಗ್ರಾಮದಲ್ಲಿ ಭಿನ್ನಾಭಿಪ್ರಾಯ ಮತ್ತು ಒಮ್ಮತ  ಕೊರತೆ ಹಿನ್ನೆಲೆಯಲ್ಲಿ ಕಳೆದ ಸುಮಾರು 12ವರ್ಷಗಳಿಂದ ಮಾರಮ್ಮ ಜಾತ್ರೆ ನಿಂತು ಹೋಗಿತ್ತು. ಜಾತ್ರೆ ಪ್ರಯುಕ್ತ ದೇವರಿಗೆ ಪ್ರಾಣಿ ಬಲಿ ತಡೆಯುವ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತಪಡಿಸಿದ ಗ್ರಾಮದ ಕೆಲವರು ಜಿಲ್ಲಾ ಎಸ್ಪಿ ಕಚೇರಿ ಮತ್ತು ಸಂಬಂಧಪಟ್ಟ ಅರಸೀಕೆರೆ ಗ್ರಾಪಂಗೆ ದೂರು ನೀಡಿದ್ದರೆನ್ನಲಾಗಿದ್ದು ದೂರಿನ ಮೇರೆಗೆ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಿದ್ದರು.

ಪ್ರಾಣಿ ರಕ್ಷಣೆ ಎಲ್ಲರ ಜವಾಬ್ದಾರಿ: ಟಿಬಿಜೆ
ಚೇಳೂರು: ಕಾಲುಬಾಯಿ ರೋಗ ಹರಡದಂತೆ ರೈತರು ಎಚ್ಚೆತ್ತುಕೊಂಡು ಹತ್ತಿರದ ಪಶು ಇಲಾಖೆಯಲ್ಲಿ ವರ್ಷಕ್ಕೆ ಎರಡು ಬಾರಿ ಚಿಕಿತ್ಸೆ ಹಾಕಿಸಬೇಕು ಮಾತುಬರದ ಪ್ರಾಣಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ. ಜಯಚಂದ್ರ ತಿಳಿಸಿದರು. ಗುಬ್ಬಿ ತಾಲೂಕು ಹೊಸಕೆರೆ ಗ್ರಾಮದಲ್ಲಿ 2013-14 ನೇ ಸಾಲಿನ 6ನೇ ಹಂತದ ಕಾಲುಬಾಯಿ ರೋಗಕ್ಕೆ ಪಶು ಸಂಗೋಪನ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಲಸಿಕೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಶುಗಳಿಗೆ ಮಾತುಬರುವುದಿಲ್ಲ ಅಂತ ಪ್ರಾಣಿಗಳಿಗೆ ಕಾಲುಬಾಯಿ ರೋಗ ಬರುತ್ತಿದ್ದು, ಆ ರೋಗವನ್ನು ತಡೆಯಲು ಭಾರತ ಸರ್ಕಾರದ ವತಿಯಿಂದ ಉಚಿತವಾಗಿ ಲಸಿಕೆಯನ್ನು ಎಲ್ಲಾ ಪ್ರಾಣಿಗಳಿಗೂ ಎರಡು ಬಾರಿ ಹಾಕಲಾಗುತ್ತದೆ ಎಂದರು. ನಮ್ಮ ರೈತರು ಆ ಲಸಿಕೆಯನ್ನು ಹಾಕಿಸಲು ಮುಂದೆ ಬರಬೇಕು ಎಂದರು.

ಶಾಲೆಗಳಲ್ಲಿ ಶೌಚಾಲಯ ಕಡ್ಡಾಯ: ಶಾಸಕ ಸುಧಾಕರ್
ತುಮಕೂರು: ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದು, ಅದೇ ರೀತಿ ಶೌಚಾಲಯಕ್ಕೂ ಆದ್ಯತೆ ನೀಡಬೇಕಿದೆ ಎಂದು ಕೊರಟಗೆರೆ ಶಾಸಕ ಪಿ. ಸುಧಾಕರ್ ಲಾಲ್ ಅಭಿಪ್ರಾಯಪಟ್ಟರು. ಅವರು ಕೊರಟಗೆರೆ ತಾಲೂಕು ದೊಡ್ಡಸಾಗ್ಗೆರೆ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಹಾಗೂ ಬಯಲು ರಂಗಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪ್ರತಿ ಕುಟುಂಬದಲ್ಲಿ ದೇವರ ಕೋಣೆಗಿಂತ ಶೌಚಾಲಯ ಕಡ್ಡಾಯವಾಗಿರಬೇಕು. ಸರ್ಕಾರದ ಸವಲತ್ತು ಬಳಸಿಕೊಂಡು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸುಧಾಕರ್ ಲಾಲ್ ಕಿವಿ ಮಾತು ಹೇಳಿದರು. ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮಿಗಳು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಟಿ.ಎಸ್. ಆಂಜಿನಪ್ಪ, ಬಿಇಓ ಪಿ.ಎಸ್. ಮಹೇಶ್ ಉಪಸ್ಥಿತರಿದ್ದರು.

ಜಿಲ್ಲಾ ಜೆಡಿಎಸ್ ಮಹಿಳಾ ಸಭೆ
ತುಮಕೂರು: ತುಮಕೂರು ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಸಭೆಯನ್ನು ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಪಕ್ಷದ ಜಿಲ್ಲಾಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ಪಕ್ಷದ  ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಹಿರಿದು. ಹೀಗಾಗಿ ಮಹಿಳೆಯರು ಹೆಚ್ಚು-ಹೆಚ್ಚು ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಅನೇಕ ಮಹಿಳೆಯರು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ರಾಜಕೀಯವಾಗಿ ಹೆಸರು ಮಾಡಿರುವುದನ್ನು ನೋಡಿದ್ದೇವೆ. ಜನಸಂಖ್ಯೆಯ ಅರ್ಧಭಾಗದಲ್ಲಿರುವ ಮಹಿಳೆಯರು ಕೇವಲ ಓಟ್ ಬ್ಯಾಂಕ್ ಆಗದೆ, ಅಧಿಕಾರ ನಡೆಸುವಲ್ಲಿಯೂ ತನ್ನ ಕ್ಷಮತೆಯನ್ನು ತೋರಿಸಬಲ್ಲರು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಅವರನ್ನು ಗುರುತಿಸಿ, ಬೆಳೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಜಿಪಂ ಸದಸ್ಯರಾದ ನಳಿನಾ ಗೋವಿಂದಪ್ಪ, ಚೌಡಾರೆಡ್ಡಿ, ಲಕ್ಷ್ಮಮ್ಮ, ಮೋಸಿನಾಬಾನು, ರಷೀದಾ ಬಾನು ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.