ತುಮಕೂರಿಗೆ ತರಹೇವಾರಿ ಪಕ್ಷಿಗಳ ರಂಗು
ಉಗಮ ಶ್ರೀನಿವಾಸ್
ತುಮಕೂರು: ಕಣ್ಮನ ಸೆಳೆಯುವ, ಮನಮೋಹಕ ಪಕ್ಷಿಗಳು ತುಮಕೂರಿನ ಹೊರ ವಲಯದ ಹೊಲಗಳಲ್ಲಿ ಕಂಡಿವೆ. ತುಮಕೂರಿನ ಹೊರವಲಯದ ಭೀಮಸಂದ್ರ, ಮೆಳೆಕೋಟೆಯ ಹೊಲಗಳಲ್ಲಿ ಮಂಗಳವಾರ ಈ ಜಿಟ್ಟಿಂಗ್ ಸಿಸ್ಟಿಕೋಲಾ ಮತ್ತು ನೀಲಿ ಬಾಲದ ಜೇನು ಹಿಡುಕ ಪಕ್ಷಿ ಎಂಬ ಪ್ರಭೇದದ ಪಕ್ಷಿಗಳು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ. ಗುಂಡಪ್ಪ ಅವರ ಕ್ಯಾಮರಾ ಕಣ್ಣಿಗೆ ಸಿಕ್ಕಿವೆ.
ತುಮಕೂರು ಹೊರವಲಯದ ಮೆಳೆಕೋಟೆ ಕೆರೆ ಹಿಂಭಾಗ ಬಯಲು ಪ್ರದೇಶದಲ್ಲಿ ಬಜೆ ಕಟಾವು ಮಾಡಿದ್ದ ಹೊಲಗಳಲ್ಲಿ ಜಿಟ್ಟಿಂಗ್ ಸಿಸ್ಟಿಕೋಲಾ ಪಕ್ಷಿ ಕಾಣಸಿಕ್ಕಿವೆ. ಇದು ಗುಬ್ಬಚ್ಚಿಗಿಂತ ಚಿಕ್ಕ ಗಾತ್ರದ ಪಕ್ಷಿ. 10 ಸೆ.ಮೀ. ಉದ್ದದ ದೇಹವನ್ನು ಹೊಂದಿರುತ್ತದೆ. ಆದರೆ ಇದರ ಬಾಲ ತುಂಬಾ ಕಿರಿದಾಗಿದ್ದು ಅದರ ತುದಿಯಲ್ಲಿ ಬಿಳಿ ಬಣ್ಣದ ಮಚ್ಚೆಗಳು ಇರುತ್ತವೆ. ಇದು ದೇಶದ ಎಲ್ಲಾ ಕಡೆಗಳಲ್ಲೂ ಕಾಣ ಸಿಗುತ್ತವೆ. ನಂತರ ಸಂತಾನಾಭಿವೃದ್ಧಿ ಸಂದರ್ಭದಲ್ಲಿ ಇದರ ಬಾಲ ಚಿಕ್ಕದಾಗಿದ್ದು ಬಾಲದ ತುದಿಯಲ್ಲಿ ಚುಕ್ಕಿಗಳಿರುತ್ತವೆ.
ಅದರ ಮೈ ಮೇಲೆ ಕಂದು ಮಿಶ್ರಿತ ಕಪ್ಪು ಬಣ್ಣದ ಗರಿಗಳನ್ನು ಕಾಣಬಹುದು. ಅದರ ಕೊಕ್ಕು ತುಂಬಾ ಚಿಕ್ಕದಾಗಿದ್ದು ಹುಳುಗಳು, ಕೀಟಗಳನ್ನು ಆಹಾರವಾಗಿ ಭಕ್ಷಿಸುತ್ತದೆ. ಅದರ ಕಾಲುಗಳು ಸಪೂರ ಇದ್ದು ದುಂಡು ಬಣ್ಣವನ್ನು ಹೊಂದಿರುತ್ತವೆ. ಎಳೆಗಂದು ಬಣ್ಣ ಹೊಂದಿರುತ್ತವೆ. ಅದರ ಗಂಟಲು ಮತ್ತು ಹೊಟ್ಟೆಯ ಭಾಗ ಬೂದು ಮಿಶ್ರಿತ ಬಿಳಿ ಬಣ್ಣಗಳಿಂದ ಕೂಡಿರುತ್ತದೆ. ಇದು ಹೆಚ್ಚಾಗಿ ಕೃಷಿ ಭೂಮಿ ಹಾಗೂ ಹುಲ್ಲುಗಾವಲಿನಂತಹ ಪ್ರದೇಶಗಳಲ್ಲಿ ಕಂಡು ಬರುತ್ತವೆ ಎನ್ನುತ್ತಾರೆ ಗುಂಡಪ್ಪ.
ನೀಲಿ ಬಾಲದ ಜೇನು ಹಿಡುಕ ಪಕ್ಷಿ: ತುಮಕೂರಿನ ಭೀಮಸಂದ್ರ ಕೆರೆ ಮತ್ತು ಮೆಳೆಕೋಟೆಯ ವಿದ್ಯುತ್ ತಂತಿ ಮೇಲೆ ನೀಲಿ ಬಾಲದ ಜೇನು ಹಿಡುಕ ಎಂಬ ಅಪರೂಪದ ಪಕ್ಷಿ ಕೂಡ ಗುಂಡಪ್ಪ ಅವರಿಗೆ ಕಾಣಸಿಕ್ಕಿದೆ. ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಿಂದ ಈ ಪಕ್ಷಿಗಳು ವಲಸೆ ಬರುತ್ತದೆ. ಮಾರ್ಚ್ ಏಪ್ರಿಲ್ ತಿಂಗಳ ಹೊತ್ತಿಗೆ ಈ ಪ್ರದೇಶದಲ್ಲಿದ್ದು ಕೀಟಗಳು, ಜೇನು ಹುಳು, ಇಂತಹ ಆಹಾರ ಪದಾರ್ಥಗಳನ್ನು ತಿಂದು ಬೇಸಿಗೆ ಮುಗಿಯವಷ್ಟರಲ್ಲಿ ಪುನಃ ಸ್ವಸ್ಥಾನಕ್ಕೆ ಹಿಂದುರಿಗುತ್ತವೆ. ಇದು ಹೆಚ್ಚಾಗಿ ವಿದ್ಯುತ್ ತಂತಿಗಳ ಮೇಲೆ ಕೂತಿದ್ದು ಹಾರಾಡುವ ಕೀಟಗಳನ್ನು ಆಕಾಶದಲ್ಲೇ ಹಿಡಿದು ಪುನಃ ಅದೇ ತಂತಿಯ ಮೇಲೆ ಕುಳಿತು ತಂತಿಗೆ ಆಹಾರ ಜೀವಿಗಳನ್ನು ಬಡಿದು ನಂತರ ನುಂಗುವ ದೃಶ್ಯ ಮನಮೋಹಕವಾಗಿರುತ್ತವೆ. ಇದರ ಮೈ ಬಣ್ಣ ತಿಳಿ ಹಸಿರಿನಿಂದ ಕೂಡಿದ್ದು ಬಾಲದ ಭಾಗದಲ್ಲಿ ನೀಲಿ ಬಣ್ಣವಿರುತ್ತವೆ. ಬಾಲದ ತುದಿಯಲ್ಲಿ ಚೂಪಾದ ಕವಲೊಡೆದ ಸಪೂರದ ಗರಿಗಳಿರುತ್ತವೆ. ಇದರ ಕೊಕ್ಕು ಕಪ್ಪು ಬಣ್ಣದಿಂದ ಕೂಡಿದ್ದು ಕುಡುಗೋಲಿನಂತೆ ಸ್ವಲ್ಪ ಭಾಗಿರುತ್ತದೆ. ಕುತ್ತಿಗೆಯ ಭಾಗ ಕೆಂಪು ಮಿಶ್ರಿತ ಕಿತ್ತಳೆ ಬಣ್ಣ ಹೊಂದಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

