ಸ್ನೇಹ ಶಿಕ್ಷಣ ಅಭಿಯಾನ; ಸಾಮರಸ್ಯದ ಪಾಠಕ್ಕೆ ಒತ್ತು
ಕನ್ನಡಪ್ರಭ ವಾರ್ತೆ ತುಮಕೂರು ಫೆ.18
ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆಯನ್ನು ಕಡಿಮೆ ಮಾಡುವ, ಜಾತಿ, ಲಿಂಗ, ಧರ್ಮ ಜನಾಂಗಗಳ ಕಾರಣದಿಂದ ನಡೆಯುವ ತಾರತಮ್ಯವನ್ನು ಹೋಗಲಾಡಿಸುವ ಪ್ರಯತ್ನ ಇಂದಿನ ತುರ್ತಾಗಿದ್ದು,
ಈ ಹಿನ್ನೆಲೆಯಲ್ಲಿ ಸ್ನೇಹ ಶಿಕ್ಷಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಿಜ್ಞಾ ಯುವ ಸಂವಾದ ಕೇಂದ್ರ ತಿಳಿಸಿದೆ.
ಇದಕ್ಕೆ ಪೂರಕವಾದಂತಹ ಶಿಕ್ಷಣ ಶಾಲಾ ಕಾಲೇಜುಗಳಲ್ಲೇ ದೊರೆಯಬೇಕೆಂಬ ಉದ್ದೇಶದಿಂದ ನಮ್ಮದು ವಿದ್ಯಾರ್ಥಿ ಸ್ನೇಹಿ ಮತ್ತು ಹಿಂಸೆ ಮುಕ್ತ ಕ್ಯಾಂಪಸ್ ಎಂಬ ಫೋಷ ವಾಕ್ಯದೊಂದಿಗೆ ಸ್ನೇಹ ಶಿಕ್ಷಣ ಅಭಿಯಾನವು ಇದೇ ತಿಂಗಳ 3 ರಿಂದ ಆರಂಭವಾಗಿದೆ.
ಈಗಾಗಲೇ ಈ ಅಭಿಯಾನವು ಕರಪತ್ರ, ಹಾಡು, ನಾಟಕ, ಮಾತುಕತೆಗಳ ಮೂಲಕ, ತುಮಕೂರಿನ 16 ಕಾಲೇಜುಗಳ ಸುಮಾರು 6000 ವಿದ್ಯಾರ್ಥಿಗಳನ್ನು ತಲುಪಿದೆ. ಕೆಲಸದ ಜಾಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013 ರ ರ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳ ದೂರು ಸಮಿತಿಯನ್ನು ನೇಮಿಸಬೇಕು. ಸಂವಿಧಾನದ ಆಶಯದಂತೆ ಭಿನ್ನ ಭಿನ್ನ ಜನ ಸಮುದಾಯಗಳ ಯುವಜನರು ಸ್ನೇಹ ಸಾಮರಸ್ಯದಿಂದ ಇರುವಂತಹ ಪಾಠವನ್ನು ಕಾಲೇಜುಗಳಲ್ಲಿ ಬೋಧಿಸಬೇಕೆಂಬ ಬೇಡಿಕೆಗೆ ಹೆಚ್ಚಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗೂ ಸುಮಾರು 2000 ವಿದ್ಯಾರ್ಥಿಗಳು ಸಹಿ ಮಾಡುವ ಮೂಲಕ ಕ್ಯಾಂಪಸ್ನಲ್ಲಿ ಸ್ನೇಹ ಮತ್ತು ಪರಸ್ಪರ ಗೌರವ ನೀಡುವುದಕ್ಕೆ ತಾವು ಬದ್ಧ ಎಂದು ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸ್ನೇಹ ಶಿಕ್ಷಣ ಅಭಿಯಾನವು ಸಂವಾದ, ಸಖಿ, ಮತ್ತು ಅರಿವು ಸಂಸ್ಥೆಗಳಿಂದ ಜರುಗಿದೆ. ಇದರ ಸಮಾರೋಪ ಕಾರ್ಯಕ್ರಮ ಫೆ.15 ರಂದು ಯುವಧ್ವನಿ-ಯುವಜನೋತ್ಸವ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜರುಗಲಿದೆ. ತುಮಕೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಪಾಲ್ಗೊಳ್ಳಲ್ಲಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಯುವನಜರು ಹೆಚ್ಚಿನ ಸಂಖ್ಯೆಯಲ್ಲಿ ಈ ಯುವಜನೋತ್ಸವದಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಹಾಗೆಯೇ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಈ ಕೆಳಗಿನಂತೆ ಮನವಿ ಮಾಡಿದ್ದಾರೆ.
1997 ರ ಸುಪ್ರೀಂ ಕೋರ್ಟ್ ತೀರ್ಪು (ವಿಶಾಖ ತೀರ್ಪು) ಮತ್ತು ಮಾಗದರ್ಶನ, 1998 ರಿಂದ ಯು.ಜಿ.ಸಿ. (ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗ )ಸುತ್ತೋಲೆ, ಕೆಲಸದ ಜಾಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013 ರ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳ ದೂರು ಸಮಿತಿಯನ್ನು ನೇಮಿಸುವಂತೆ ಮನವಿ ಮಾಡಿದೆ.
ಭಾರತದ ಸಂವಿಧಾನವು ಸಾರುವ ಸಮಾನತೆಯ ಆಶಯದಡಿ ಲಿಂಗ, ಜಾತಿ, ಧರ್ಮ, ಭಾಷೆ, ಜನಾಂಗ, ಅಂಗವಿಕಲತೆಯ ತಾರತಮ್ಯವನ್ನು ನಿರ್ಮೂಲನೆಗೊಳಿಸಲು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ತಾರತಮ್ಯದ ನಿವಾರಣ ಸಮಿತಿಯನ್ನು ಸೂಕ್ತವಾದ ನಿಯಮಗಳೊಂದಿಗೆ ರಚಿಸುವಂತೆ ಕೋರಿದೆ.
ಸಂವಿಧಾನದ ಆಶಯದಂತೆ ಮತ್ತು ನ್ಯಾಕ್ನ ಮಾಗದರ್ಶನದಂತೆ ಸಮಾನತೆ, ಬಹುತ್ವ ಮತ್ತು ಏಕತೆಯ ಮೌಲ್ಯಗಳನ್ನು ತಿಳಿಸುವ, ಲೈಂಗಿಕ ದೌರ್ಜನ್ಯ, ತಾರತಮ್ಯ, ರ್ಯಾಗಿಂಗ್ ಕುರಿತ ಕಾನೂನಿನ ಪರಿಚಯ ಮಾಡಿಸುವ, ಲೈಂಗಿಕ ಕಿರುಕುಳ ದೂರು ಸಮಿತಿ ಮತ್ತು ತಾರತಮ್ಯ ನಿವಾರಣ ಸಮಿತಿಗಳ ವಿವರ ನೀಡುವ ಓರಿಯೆಂಟೇಶನ್ ಕಾರ್ಯಕ್ರಮಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಾಡಿ, ವಿದ್ಯಾರ್ಥಿಗಳಲ್ಲಿ ಹಕ್ಕುಗಳ ಅರಿವು ಮೂಡಿಸಿ, ಜವಾಬ್ದಾರಿಗಳಿಗೆ ಬದ್ಧರನ್ನಾಗಿಸುವಂತೆಯೂ ಸಿಜ್ಞಾ ಮನವಿ ಮಾಡಿದೆ.
ಎಲ್ಲಾ ಶಿಕ್ಷಣ ಸಂಸ್ಥೆಗಳು ಕೆಲಸದ ಜಾಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013 ರ ಪ್ರಕಾರ ಲೈಂಗಿಕ ಕಿರುಕುಳ ದೂರು ಸಮಿತಿಯನ್ನು ನೇಮಕ ಮಾಡಿವೆ ಎಂಬುದನ್ನು ಖಾತರಿಪಡಿಸಿಕೊಳ್ಳವಂತೆ ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ, ಜಾತಿ, ಧರ್ಮ, ಭಾಷೆ, ಜನಾಂಗ, ಅಂಗವೈಕಲ್ಯತೆಯ ತಾರತಮ್ಯವನ್ನು ನಿರ್ಮೂಲನೆಗೊಳಿಸಲು ತಾರತಮ್ಯ ನಿವಾರಣ ಸಮಿತಿಯನ್ನು ರಚಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ರಾಜ್ಯ ಸರಕಾರವನ್ನು ಕೋರುವುದಾಗಿ ಸಿಜ್ಞಾ ಯುವ ಸಂವಾದ ಕೇಂದ್ರದ ಸ್ವಾಮಿ, ಯುವ ಮುನ್ನಡೆ ಪರವಾಗಿ ಧನಂಜಯ, ಆರ್. ಮಧು, ಎಂ. ಮಮತಾ, ಕೆ.ಆರ್. ಕವಿತಾ, ಜಗದೀಶ್, ಸುಜಾತ, ಹೊನ್ನೇಶ್, ಜಿ.ಎಲ್. ಲಕ್ಷ್ಮೀಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

