ವಿಕಾಸಸೌಧದ ಎದುರು ಆತ್ಮಹತ್ಯೆ ಹೈಡ್ರಾಮಾ
ಬೆಂಗಳೂರು: ಆಸ್ತಿ ವಿಚಾರವಾಗಿ ಮಡಿವಾಳ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸುಬ್ಬಣ್ಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತುಮಕೂರು ಮೂಲದ ಒಂದೇ ಕುಟುಂಬದ ಆರು ಮಂದಿ ವಿಕಾಸಸೌಧ ಗೇಟ್ ಮುಂದೆ ಒಮ್ನಿ ವ್ಯಾನ್ನಲ್ಲಿ ಕುಳಿತು ಪೆಟ್ರೋಲ್ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ಸೃಷ್ಟಿಸಿದ್ದರು.
ತುಮಕೂರು ಕೆ.ಆರ್ ಬಡಾವಣೆ ನಿವಾಸಿಗಳಾದ ಕೆ.ಮಹೇಶ್(38), ಪತ್ನಿ ದಾಕ್ಷಾಯಣಿ (32), ಅತ್ತೆ ಮಾವ ಕರಿಯಪ್ಪ (77) ಅತ್ತೆ ಗಿರಿಜಮ್ಮ (68) ಮಕ್ಕಳಾದ ವಿದ್ಯಾ (17), ಚಂದನ್ (11) ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದವರು.
ಶುಕ್ರವಾರ ಬೆಳಗ್ಗೆ ಒಮ್ನಿ ಕಾರಿನ ಮೂರು ಕಡೆ ಕರಪತ್ರ ಅಂಟಿಸಿ, ನಮಗೆ ರಾಜ್ಯ ಮುಖ್ಯಮಂತ್ರಿ, ಗೃಹ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ನ್ಯಾಯ ಕೊಡಿಸಬೇಕು. ಬೇರೆ ಯಾರಾದರೂ ವ್ಯಾನ್ನ್ನು ಮುಟ್ಟಿ ನಮ್ಮನ್ನು ಸ್ಥಳಾಂತರಿಸಲು ಯತ್ನಿಸಿದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಸುತ್ತಿದ್ದರು. ದಾಕ್ಷಾಯಣಿ ಕೈಯಲ್ಲಿ ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಮತ್ತೊಂದು ಕೈಯಲ್ಲಿ ಬೆಂಕಿ ಪೊಟ್ಟಣ ಹಿಡಿದುಕೊಂಡು ಬೆದರಿಕೆ ಹಾಕುತ್ತಿದ್ದರು. ವಿಧಾನಸೌಧ ಹಾಗೂ ವಿಕಾಸಸೌಧ ಸಿಬ್ಬಂದಿ ಓಡಾಡುವ ಗೇಟ್ ಬಳಿಯೇ ಇವರ ವ್ಯಾನ್ ನಿಂತಿದ್ದರಿಂದ ಸಂಚಾರಕ್ಕೆ ತಡೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲದೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯಿಂದ ಕರೆಸಿಕೊಳ್ಳಲಾಯಿತು. ತುರ್ತು ಪರಿಸ್ಥಿತಿ ಎದುರಿಸಲು ಅಂಬುಲೆನ್ಸ್ ಕರೆಸಿಕೊಳ್ಳಲಾಗಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾಲ ವಿಕಾಸಸೌಧ ಗೇಟ್ ಮುಂದೆ ನಡೆದ ಹೈಡ್ರಾಮಾದಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹೈರಾಣಾಗಿ ಹೋಗಿದ್ದರು. ಒಂದು ಹಂತದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರಿನ ಗಾಜು ಒಡೆದು ಎಲ್ಲರನ್ನು ಹೊರಗೆ ಎಳೆಯುವ ಪ್ರಯತ್ನ ನಡೆಸಿದ್ದರು. ಈ ನಡುವೆ ಹಿರಿಯ ಪೊಲೀಸ್ ಅಧಿಕಾರಿಗಳು ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು. ವ್ಯಾನಿನ ಒಳಗೆ ಕುಳಿತವರಿಂದ ಟಿವಿ ಚಾನಲ್ನವರೊಂದಿಗೆ ಮಾತಾಡಲು ಮಹೇಶ್ ಗಾಜು ಇಳಿಸಿದಾಗ ಪೊಲೀಸರು ಎಲ್ಲರನ್ನು ಹೊರಗೆ ಎಳೆದು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದರು.
ಏನಿದು ಪ್ರಕರಣ: ಮಹೇಶ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಾರೆ. 2005-06ರಲ್ಲಿ ದಾಕ್ಷಾಯಿಣಿ ಸಹೋದರರಾದ ಕಾಂತರಾಜು, ಸೋಮಶೇಖರ್ ಪಾಲುದಾರಿಕೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಮೂವರು ಸೇರಿ ಆಸ್ತಿ ಖರೀದಿ ಮಾಡಿದ್ದರು. ಇದರಲ್ಲಿ ಮಹೇಶ್ ರು. 45 ಕೋಟಿ ಹೂಡಿದ್ದರು ಎನ್ನಲಾಗಿದೆ. ಪಾಲುದಾರಿಕೆಯಲ್ಲಿ ಕೊಂಡುಕೊಂಡ ಆಸ್ತಿ ಮೌಲ್ಯ ಸುಮಾರು ರು. 20 ಕೋಟಿಯಾಗಿತ್ತು. ವ್ಯವಹಾರ ಪೂರ್ಣಗೊಂಡ ಬಳಿಕ ಕಾಂತರಾಜು ಹಾಗೂ ಸೋಮಶೇಖರ್, ರು. 45 ಲಕ್ಷ ಹಣ ಹೂಡಿದ್ದ ಮಹೇಶ್ಗೆ ಪಾಲು ನೀಡಲು ನಿರಾಕರಿಸಿ ವಂಚಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಮಹೇಶ್ ಪೊಲೀಸ್ ಠಾಣೆ ಮೊರೆ ಹೋಗಿದ್ದರು. ಸೋಮಶೇಖರ್ ಹಾಗೂ ಕಾಂತರಾಜುಗೆ ಪರಿಚಿತರಾಗಿದ್ದ ಅಂದಿನ ತುಮಕೂರು ಇನ್ಸ್ಪೆಕ್ಟರ್ ಸುಬ್ಬಣ್ಣ ಪಕ್ಷಪಾತ ಮಾಡಿ ಪ್ರಕರಣವನ್ನು ಸೋಮಶೇಖರ್ ಹಾಗೂ ಕಾಂತರಾಜು ಪರವಾಗಿ ಮಾಡಿದ್ದಾರೆ ಎಂದು ದಾಕ್ಷಾಯಿಣಿ ಆರೋಪಿಸಿದ್ದಾರೆ. ಇದಾದ ಬಳಿಕ ನ್ಯಾಯಾಕ್ಕಾಗಿ ಮಹೇಶ ಕುಟುಂಬ ತುಮಕೂರು ಎಸ್ಪಿ ಮೊರೆ ಹೋಗಿದ್ದರು. ಆದರೂ ನ್ಯಾಯ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿಗಳು, ರಾಜ್ಯಪಾಲರು, ಲೋಕಾಯುಕ್ತ ಹೀಗೆ ಎಲ್ಲಾ ಹಿರಿಯ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರು.
ಆತ್ಮಹತ್ಯೆ ಯತ್ನ ಎರಡನೇ ಬಾರಿ!: 2013 ಜೂನ್ ತಿಂಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕುಟುಂಬ, ನಂತರ ದೂರು ನೀಡಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ತೆರಳಿತ್ತು. ಸ್ವಾಗತಕಾರರ ಕೊಠಡಿಯಲ್ಲಿ ದೂರು ನೀಡಿ ಮಹೇಶ್ ದಂಪತಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡಿದ್ದ ನಾಲ್ವರನ್ನು ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬಳಿಕ ಹಿರಿಯ ಅಧಿಕಾರಿಗಳು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಕೆಲ ತಿಂಗಳ ಕಾಲ ದಂಪತಿ ತುಮಕೂರಿಗೆ ತೆರಳಿದ್ದರು. ಇದಾದ ಬಳಿಕ ಎಸಿಪಿ ಸುಬ್ಬಣ್ಣ ವಿನಾ ಕಾರಣ ಮತ್ತೆ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಕೆಲ ದಿನಗಳಿಂದ ಧರಣಿ ನಡೆಸುತ್ತಿದ್ದರು. ಸರ್ಕಾರ ಅಥವಾ ಅಧಿಕಾರಿಗಳಿಂದ ಯಾವುದೇ ಭರವಸೆ ಸಿಕ್ಕಿಲ್ಲ ಎಂದು ಆರೋಪಿಸಿ ಶುಕ್ರವಾರ ಬೆಳಗ್ಗೆ ವಿಧಾನಸೌಧ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದರು.
ಆತ್ಮಹತ್ಯೆ ಯತ್ನ ಕೇಸ್: ದಂಪತಿ ಸೇರಿ ಐವರ ವಿರುದ್ಧ ಪೊಲೀಸರು, ನಿಷೇಧಾಜ್ಞೆ ಪ್ರದೇಶದಲ್ಲಿ ಗುಂಪು ಸೇರುವುದು, ಆತ್ಮಹತ್ಯೆ ಯತ್ನ, ಸಂಚಾರ ದಟ್ಟಣೆ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ಐಜಿಪಿ ನೇತೃತ್ವದಲ್ಲಿ ತನಿಖೆ
ಪ್ರಕರಣ ಸಂಬಂಧ ಈಗಾಗಲೇ ಮಧುಗಿರಿ ಡಿವೈಎಸ್ಪಿ ತನಿಖೆ ನಡೆಸುತ್ತಿದ್ದಾರೆ. ಒಮ್ಮೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಕುಟುಂಬ ಆತ್ಮಹತ್ಯೆಗೆ ಯತ್ನಿಸಿತ್ತು. ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೀಗಾಗಿ ಕೇಂದ್ರ ವಲಯ ಐಜಿಪಿ ನೇತೃತ್ವದಲ್ಲಿ ತನಿಖೆ ನಡೆಸಲು ನಿರ್ದೇಶನ ನೀಡಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ತಿಳಿಸಿದರು.
ನನ್ನ ಗಂಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆಗೆಸುತ್ತೇನೆ ಎಂದು ಬೆದರಿಸಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ನಮಗೆ ಅನ್ಯಾಯ ಮಾಡಿ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಎಸಿಪಿ ಸುಬ್ಬಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಟಿ ದಾಕ್ಷಾಯಿಣಿ, ಆತ್ಮಹತ್ಯೆ ಬೆದರಿಕೆ ಹಾಕಿದವರು
ನನ್ನ ತಪ್ಪಿಲ್ಲ
ತುಮಕೂರಿನಿಂದ ವರ್ಗಾವಣೆಗೊಂಡು ಬೆಂಗಳೂರಿಗೆ ಎಸಿಪಿಯಾಗಿ ಪದೋನ್ನತಿ ಪಡೆದ ಬಳಿಕ ನಾನು ಮಹೇಶ್ ಕುಟುಂಬದೊಂದಿಗೆ ಸಂಪರ್ಕದಲ್ಲಿಲ್ಲ. ಅಲ್ಲದೇ ವರ್ಷದ ಹಿಂದೆಯೇ ನಾನು ನಿವೃತ್ತನಾಗಿದ್ದೇನೆ. ನನ್ನನ್ನು ಪ್ರಕರಣದಲ್ಲಿ ಅನಗತ್ಯವಾಗಿ ಸಿಕ್ಕಿಸಲಾಗುತ್ತಿದೆ. ಅವರು ನಾನು ಮಾತ್ರವಲ್ಲದೇ ಇತರ ಅಧಿಕಾರಿಗಳ ಮೇಲೆ ಕೂಡಾ ಆರೋಪ ಮಾಡುತ್ತಿದ್ದಾರೆ.
ಟಿ ಸುಬ್ಬಣ್ಣ, ನಿವೃತ್ತ ಎಸಿಪಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

