ಪ್ರಸ್ತಾವಿತ ಜಾಗದಲ್ಲೇ ಅಂಬೇಡ್ಕರ್ ಭವನ ನಿರ್ಮಾಣ
ಕುಣಿಗಲ್: ತಾಲೂಕಿನ ಹುತ್ರಿದುರ್ಗ ಹೋಬಳಿಯ ಯಲಿಯೂರು ಗ್ರಾಪಂವ್ಯಾಪ್ತಿಯ ಕಲ್ಲನಾಯ್ಕನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಶಾಂತಿ ಸಭೆ ನಡೆದು, ವಾದ ವಿವಾದದ ನಡುವೆ ಪ್ರಸ್ತಾವಿತ ಜಾಗದಲ್ಲಿ ಭವನ ನಿರ್ಮಿಸಲು ತೀರ್ಮಾನಿಸಲಾಯಿತು.
ಕಲ್ಲನಾಯ್ಕನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ನಿವೇಶನದಲ್ಲಿ ಅಂಬೇಡ್ಕರ ಭವನ ನಿರ್ಮಾಣ ಸಂಬಂಧಿಸಿದಂತೆ ಗ್ರಾಮದಲ್ಲಿ ಪರ- ವಿರೋಧ ಗುಂಪುಗಳಾಗಿ ಗೊಂದಲವಾಗಿದ್ದು, ಭವನ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಎರಡೂ ಗುಂಪಿನವರೊಂದಿಗೆ ಚರ್ಚಿಸಿ, ಭವನ ನಿರ್ಮಾಣ ಕಾರ್ಯಪ್ರಾರಂಭಿಸಲು ತಹಸೀಲ್ದಾರ್ ಪುಟ್ಟನರಸಯ್ಯ, ಅಧ್ಯಕ್ಷತೆಯಲ್ಲಿ ಡಿವೈಎಸ್ಪಿ ಗಣೇಶ್, ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್, ಸಿಪಿಐ ಧರ್ಮೇಂದ್ರ, ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ ನೇತೃತ್ವದಲ್ಲಿ ಪಟ್ಟಣದ ಕಂದಾಯಭವನದಲ್ಲಿ ನಡೆದ ಶಾಂತಿಸಭೆಯಲ್ಲಿ, ಜಿಪಂ ಮಾಜಿ ಸದಸ್ಯ ಶಿವಣ್ಣ, ಪ್ರಸ್ತಾವಿತ ಜಮೀನು ಗೋಕಟ್ಟೆ ಪ್ರದೇಶವಾಗಿದ್ದು ಸದರಿ ಪ್ರದೇಶವನ್ನು ಗೋಕಟ್ಟೆಯಾಗಿ ಮೀಸಲಿಟ್ಟು, ಪರ್ಯಾಯ ಪ್ರದೇಶದಲ್ಲಿ ಭವನ ನಿರ್ಮಿಸುವಂತೆಒತ್ತಾಯಿಸಿದರೆ, ದಲಿತ ಮುಖಂಡರಾದ ದಲಿತನಾರಾಯಣ, ಶಿವಶಂಕರ್ ಈಗಾಗಲೆ ಸದರಿ ಪ್ರದೇಶದಲ್ಲಿ ಭವನಿರ್ಮಿಸುವ ಸಲುವಾಗಿ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಳಿಸಿ, ನಕ್ಷೆ ಸಿದ್ಧಪಡಿಸಲಾಗಿ ಅನುಮೋದನೆ ಸಲ್ಲಿಸಿದ್ದು, ಅಲ್ಲಿಯೇ ನಿರ್ಮಿಸುವಂತೆ ಆಗ್ರಹಿಸಿದರು. ಸಭೆಯಲ್ಲಿ ಈ ವಿಷಯವಾಗಿ ಹಾಜರಿದ್ದವರ ಪೈಕಿ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿ ಹಲವು ಬಾರಿ ಗೊಂದಲವಾಯಿತು.
ತಲೆತಗ್ಗಿಸುವ ವಿಷಯ: ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ಯಾವುದೇ ವ್ಯಕ್ತಿ ತನ್ನ ಅಧಿಕಾರದಿಂದ ಉತ್ತಮನಾಗೊಲ್ಲ, ಆತ ನ್ಯಾಯ,ನೀತಿ,ತತ್ವ, ಸಿದ್ಧಾಂತಗಳಿಗೆ ಬದ್ಧನಾಗಿ ಜನತೆಯ ಒಳಿತಿಗಾಗಿ ಸೇವೆ ಸಲ್ಲಿಸಿದಾಗ ಆತ ಉತ್ತಮನಾಗುತ್ತಾನೆ. ಅಂಬೇಡ್ಕರ್ ಭವನ ನಿರ್ಮಾಣದಂಥ ವಿಷಯಕ್ಕೆ ಗ್ರಾಮದಲ್ಲಿ ಎರಡು ಗುಂಪುಗಳಾಗುವುದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವ ವಿಷಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ವಿಶಾಲ ಮನೋಭಾವದಿಂದ ನೋಡಿ, ಭವನ ನಿರ್ಮಾಣಕ್ಕೆ ಶ್ರಮಿಸಬೇಕೆಂದರು. ಜಿಪಂ ಮಾಜಿ ಸದಸ್ಯ ಶಿವಣ್ಣ, ಸದರಿ ನಿವೇಶನದ ಪಕ್ಕದಲ್ಲೆ ರಸ್ತೆ ಹಾದುಹೋಗಿದೆ. ಈಗ ರಸ್ತೆ ಅಭಿವೃದ್ಧಿಯಾಗುವಾಗ ನಿವೇಶನ ಜಾಗ ಕಡಿಮೆಯಾಗುವುದರಿಂದ ಈ ಪ್ರದೇಶ ಕೈಬಿಡುವಂತೆ, ಸದರಿ ಪ್ರದೇಶದಲ್ಲಿ ಈ ಹಿಂದೆ ಇದ್ದಂತೆ ಜನಜಾನುವಾರುಗಳ ನೀರಿನ ಕಟ್ಟೆಯನ್ನು ಮೀಸಲಿಡುವಂತೆ ಪಟ್ಟುಹಿಡಿದರು.
ಒಂದು ಗುಂಪಿಗೆ ಸೀಮಿತವಲ್ಲ: ವಾದವಿವಾದದ ನಂತರ ತಹಸೀಲ್ದಾರ್ ಪುಟ್ಟನರಸಯ್ಯ, ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗುವುದರಿಂದ ಅದು ಕೇವಲ ಒಂದುವರ್ಗ, ಗುಂಪಿನವರಿಗೆ ಮಾತ್ರ ಸೀಮಿತವಾಗುವುದಿಲ್ಲ.
ಅದೂ ಇಡೀ ಗ್ರಾಮದ ಸ್ವತ್ತಾಗುವುದರಿಂದ ಈಗಾಗಲೆ ಗುರುತಿಸಿರುವ ಜಾಗದಲ್ಲೆ ಭವನ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು. ಸಮಾಜಕಲ್ಯಾಣಾಧಿಕಾರಿ ಪ್ರಕಾಶ್ ಈಗಾಗಲೆ ಹತ್ತು ಲಕ್ಷ ರು. ಅನುದಾನ ಸಿದ್ಧವಿದ್ದು, ನಿವೇಶನ ಹಸ್ತಾಂತರಿಸಿದ ಕೂಡಲೆ ಕಾಮಗಾರಿ ಪ್ರಾರಂಭಿಸಲಾಗುವುದು. ಸ್ಥಳೀಯ ಗ್ರಾಪಂನಲ್ಲಿ ಇತರೆ ಅನುದಾನವಿದ್ದಲ್ಲಿ ಅದನ್ನು ಈ ಕಾಮಗಾರಿಗೆ ತೊಡಗಿಸಿ ಮತ್ತಷ್ಟು ಉತ್ತಮವಾಗಿ ಅಂಬೇಡ್ಕರ್ ಭವನ ನಿರ್ಮಿಸಿಕೊಳ್ಳಬಹುದಾಗಿದೆ ಎಂದರು. ಪ್ರಮುಖರಾದ ರಂಗಪ್ಪ, ಚಂದ್ರಣ್ಣ,ನಾಗಣ್ಣ, ಮರಿಯಪ್ಪ, ಕೃಷ್ಣಪ್ಪ, ಬಿ.ಡಿ.ಕುಮಾರ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

