ಸುದ್ದಿ ಸಂಕ್ಷೇಪ
ಯುವಕರಿಗೆ ಕೃಷಿ ಬಗ್ಗೆ ತಾತ್ಸಾರ ಬೇಡ: ಡಾ.ವೆಂಕಟೇಶ್
ತಿಪಟೂರು: ಯುವಕರಲ್ಲಿ ಕೃಷಿಯ ಬಗ್ಗೆ ಉಂಟಾಗಿರುವ ನಕಾರಾತ್ಮರ ಭಾವನೆಯನ್ನು ಹೋಗಲಾಡಿಸಲು ಕೃಷಿ ವಿಶ್ವ ವಿದ್ಯಾಲಯಗಳು ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಕೃಷಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ ಎಂದು ಉಪನ್ಯಾಸಕ ಡಾ.ಎಲ್.ಎಂ. ವೆಂಕಟೇಶ್ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ 4ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅವರು ವಿದ್ಯಾವಂತ ಗ್ರಾಮೀಣ ಯುವ ಸಮುದಾಯ ಗ್ರಾಮಗಳನ್ನು ತೊರೆದು ಐಷರಾಮಿ ಜೀವನಕ್ಕಾಗಿ ಕಾಂಕ್ರಿಟ್ ನಗರಗಳತ್ತ ವಲಸೆಹೋಗುತ್ತಿದ್ದು, ಗ್ರಾಮಗಳ ವಯೋವೃದ್ಧ ಆಶ್ರಯಗಳಾಗಿವೆ. ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಕೆಲಸ ನಿರ್ವಹಿಸಬೇಕಿದೆ. ಆಧುನಿಕ ಕೃಷಿ ಪದ್ಧತಿಯಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವ ಕೃಷಿ ವಿಶ್ವವಿದ್ಯಾಲಯಗಳು ಈ ಪದ್ಧತಿಗಳನ್ನು ಗ್ರಾಮೀಣ ಮಟ್ಟದವರೆಗೂ ತಲುಪುವ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದ ಪಾರಂಪರಿಕ ಕೃಷಿ ಪದ್ಧತಿಯನ್ನು ಪಠ್ಯಗಳಲ್ಲಿ ಅಳವಡಿಸುವುದರಿಂದ ಕೃಷಿಯ ಮಹತ್ವದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಅಶ್ವಾಕ್ ಅಹಮದ್ ಶಿಬಿರದ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ಮಾಡಬಲ್ಲವು. ಇಂದಿನ ಯುವ ಸಮಾಜ ಗ್ರಾಮೀಣ ಜನತೆಯೊಂದಿಗೆ ಅನುಸಂಧಾನ ನಡೆಸಲು ಶಿಬಿರಗಳು ಸಹಾಯಕವಾಗಿದೆ ಎಂದರು. ಶಿಬಿರಾಧಿಕಾರಿಗಳಾದ ಡಾ.ಹೊನ್ನಾಂಜಿನಯ್ಯ, ಡಿ.ಆರ್. ನಾಗರಾಜು, ಜ್ಯೋತಿಕಿರಣ್ ಎಸ್. ನೀಲಕಂಠಸ್ವಾಮಿ, ಸಹ ಶಿಬಿರಾಧಿಕಾರಿಗಳಾದ ವಾತ್ಸಲ್ಯ, ಉಪನ್ಯಾಸಕರಾದ ಜಗದೇವಪ್ಪ, ಬಾಲಸುಬ್ರಮಣ್ಯ, ಮನೋಜ್ಕುಮಾರ್, ದೀಪಕ್ ಮತ್ತಿತರರಿದ್ದರು.
ಇಂದು ಗಿರಿಜಾ ಕಲ್ಯಾಣೋತ್ಸವ
ಹುಳಿಯಾರು: ಇಲ್ಲಿನ ಆರ್ಯವೈಶ್ಯ ಮಂಡಳಿಯವರು ಪಟ್ಟಣದ ಗಾಂಧಿಪೇಟೆಯ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಂಗವಾಗಿ ಬೆಳಿಗ್ಗೆ 6ರಿಂದ 7 ರವರೆಗೆ ಪಾರ್ವತಿ ಪರಮೇಶ್ವರರಿಗೆ ನಾಂದಿ, ವರಪೂಜೆ, ನಿಶ್ಚಿತಾರ್ಥ ನಂತರ ವೃಷಭ ಲಗ್ನದಲ್ಲಿ ಮಹೂರ್ತ ಕಾರ್ಯ ನಡೆಯಲಿದೆ. ಮಧ್ಯಾಹ್ನ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಪ್ರಾಕಾರೋತ್ಸವ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಚಾಲಕ ಶ್ರೀನಿವಾಸ್ ಕೋರಿದ್ದಾರೆ.
ಯುವಜನರಲ್ಲಿ ನೈರ್ಮಲ್ಯ, ಸ್ವಚ್ಛತೆ ಅರಿವು ಮುಖ್ಯ
ತುಮಕೂರು: ಯುವಜನರಲ್ಲಿ ನೈರ್ಮಲ್ಯ ಹಾಗೂ ಸ್ವಚ್ಛತೆಯ ಅರಿವು ಮುಖ್ಯ ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಯರಾಮು ತಿಳಿಸಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಗೂಳೂರು ಹೋಬಳಿಯ ಕೆ. ಪಾಲಸಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ವಾರದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ನೈರ್ಮಲ್ಯದ ಕುರಿತು ತಾವು ಜಾಗೃತರಾಗುವುದಲ್ಲದೆ ಇಡೀ ಸಮಾಜವನ್ನು ಪ್ರೇರೇಪಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದರು.
ಎನ್.ಎಸ್.ಎಸ್. ಸ್ವಯಂಸೇವಕರು ಶಿಸ್ತು, ಸಂಯಮ, ಪರಿಶ್ರಮಗಳನ್ನು ಮೈಗೂಡಿಸಿಕೊಂಡು ಸ್ವಯಂ ವಿಕಸನ ಹೊಂದುವುದರೊಂದಿಗೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು. ಕನ್ನಡ ನಾಡು ನುಡಿಯ ಹಿರಿಮೆ, ನೈತಿಕ ಮೌಲ್ಯಗಳು, ಮಾಧ್ಯಮಗಳ ಜವಾಬ್ದಾರಿ, ಇತಿಹಾಸದ ಮಹತ್ವ ಮೊದಲಾದ ವಿಷಯಗಳ ಬಗ್ಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದ್ದು ವಿದ್ಯಾರ್ಥಿಗಳು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಪಾಲಸಂದ್ರ ಗ್ರಾಮಪಂಚಾಯತ್ ಸದಸ್ಯ ಗೋವಿಂದರಾಜು, ಶಿಬಿರಾಧಿಕಾರಿಗಳಾದ ಶ್ರೀಪಾದ ಕುಲಕರ್ಣಿ, ಶ್ರೀನಿವಾಸ್, ಎಸ್. ದೇವರಾಜಪ್ಪ ಮತ್ತಿತರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

