'ಉತ್ತಮ ಸಂಸ್ಕಾರದಿಂದ ದೇಶ ಕಟ್ಟಲು ಸಾಧ್ಯ'
ತುಮಕೂರು: ಉತ್ತಮ ಸಂಸ್ಕಾರದಿಂದ ಮಾತ್ರ ದೇಶ ಕಟ್ಟಲು ಸಾಧ್ಯ. ಕೇವಲ ಶಿಕ್ಷಣಕ್ಕಷ್ಟೇ ಆದ್ಯತೆ ನೀಡಿ, ಪಠ್ಯೇತರ ಚಟುವಟಿಕೆ ನಿರ್ಲಕ್ಷ್ಯಿಸುವುದು ಸಲ್ಲದು ಎಂದು ಗುಬ್ಬಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಬಸವರಾಜು ಅಭಿಪ್ರಾಯಪಟ್ಟರು.
ಅವರು ಗುಬ್ಬಿಯ ವಿನಾಯಕನಗರದ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ ಏರ್ಪಾಟಾಗಿದ್ದ ಸ್ಪೆಕ್ಟ್ರಾ- 2014 ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಿಗೆ ಸೀಮಿತರಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು
ತಾವು ತೊಡಗಿಸಿಕೊಳ್ಳಬೇಕಾಗುತ್ತದೆ. ಇಂದು ವಿಜ್ಞಾನ, ತಂತ್ರಜ್ಞಾನ ನಾಗಾಲೋಟದಲ್ಲಿ ಚಲಿಸುತ್ತಿದೆ. ಅದಕ್ಕೆ ತಕ್ಕುದಾದ ಶೈಕ್ಷಣಿಕ ಜ್ಞಾನದ ಅವಶ್ಯಕತೆಯಿದೆ. ಶೈಕ್ಷಣಿಕ ಜ್ಞಾನದ ಜತೆಗೆ ಉತ್ತಮ ಸಂಸ್ಕಾರದ ಅಗತ್ಯವೂ ಇದೆ. ಉತ್ತಮ ಸಂಸ್ಕಾರ ನೀಡಲು ತಾಯಂದಿರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ತಾಯಿಯೂ
ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವ ಅನಿವಾರ್ಯತೆಯಿದೆ ಎಂದರು. ಈ ಹಿಂದೆ ಕಡುಬಡತನವಿದ್ದರೂ, ಕಷ್ಟಪಟ್ಟು ಓದಿ ಸಾಧನೆ ಮಾಡಿ ಸಮಾಜಕ್ಕೆ ಗೌರವ ತರುತ್ತಿದ್ದರು. ಯಾವ ವಿದ್ಯಾರ್ಥಿ ಕಠಿಣ ಶ್ರಮ, ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಾನೋ ಅಂತಹ ವಿದ್ಯಾರ್ಥಿ ಸಮಾಜದ ಆಸ್ತಿಯಾಗುತ್ತಾನೆ ಎಂದರು.
ಸ್ಟೆಲ್ಲಾ ಮೇರಿಸ್ ಶಾಲೆ ಸತತವಾಗಿ 10 ನೇ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ತರುವುದರ ಮೂಲಕ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದನ್ನು ಶ್ಲಾಘಿಸಿದರು.
ಬಹುಮಾನ ವಿತರಣೆ: ಗುಬ್ಬಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಡಿ. ಸುರೇಶ್‌ಗೌಡ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಶಾಲೆಯ ಮಕ್ಕಳು ಸತತವಾಗಿ ಉತ್ತಮ ಫಲಿತಾಂಶ ತಂದು ಕೊಡುವುದರ ಮೂಲಕ ಪೋಷಕರು ಹಾಗೂ ಶಾಲೆಗೆ ಗೌರವ ತಂದಿದ್ದಾರೆ. ಮುಂದೆಯೂ ಇದೇ ತರಹದ ಸಾಧನೆ ಮಕ್ಕಳಿಂದ ಸಾಧ್ಯವಾಗಲಿ. ಇದಕ್ಕೆ ಪೋಷಕರ ಸಹಕಾರವಿರಲಿ ಎಂದರು.
ತುಮಕೂರು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿ ಎಂ.ಎಸ್. ಶಂಕರ್ ಮಾತನಾಡಿ, ಶಿಕ್ಷಣವು ಇಂದು ಮಹತ್ವದ ಘಟ್ಟ ತಲುಪಿದ್ದು, ಸ್ಪರ್ಧಾತ್ಮಕ ಸ್ವರೂಪವನ್ನು ತಾಳಿದೆ. ಇದರಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಬೇಕಾದರೆ, ಇರುವುದು ಒಂದೇ ದಾರಿ. ಇದು ಶ್ರಮ. ಇದಕ್ಕೆ ಪರ್ಯಾಯವಿಲ್ಲ. ಈ ನಿಟ್ಟಿನಲ್ಲಿ ಸ್ಟೆಲ್ಲಾ ಮೇರಿಸ್ ಶಾಲೆ ಉತ್ತಮ ಫಲಿತಾಂಶ ಪಡೆದು ತಾಲೂಕು ಪ್ರಾಂಶುಪಾಲರ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಯರ ಸಂಘದಿಂದ ಹಲವಾರು ಬಾರಿ ಪ್ರಶಸ್ತಿ ಪಡೆದಿದೆ. ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.ಸಮಾರಂಭದಲ್ಲಿ ಪಪಂ ಸದಸ್ಯ ಕೃಷ್ಣಮೂರ್ತಿ, ಶಾಲಾ ಮುಖ್ಯೋಪಾಧ್ಯಾಯರಾದ ಬಸವರಾಜ್ ಚಿರಂತಿಮಠ್, ಕಾರ್ಯದರ್ಶಿ ಮುಷ್ತಾಕ್ ಅಹಮದ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

