ಕೋಳಿ ಫಾರಂ ಎತ್ತಂಗಡಿ ವಿವಾದ: ಸಂಯಮ ವಹಿಸಿ
ಶಿರಾ: ಪ್ರಸ್ತುತ ಹಲ್ಕೂರು ಕೋಳಿಫಾರಂ ವಿಚಾರ ಕೋರ್ಟಿನಲ್ಲಿದ್ದು ಮಾ.1 ರಂದು ವಿಚಾರಣೆ ನಡೆಯಲಿದೆ.ಅಲ್ಲಿಯವರೆಗೂ ಈ ಬಗ್ಗೆ ಸಂಯಮ ವಹಿಸುವಂತೆ ಪ್ರತಿಭಟನೆ ನಿರತ ರೈತರಲ್ಲಿ ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ ಮನವಿ ಮಾಡಿದರು.
ಅವರು ಕಳೆದ 10 ದಿನಗಳಿಂದ ಹಲ್ಕೂರು ಭಾಗದ ರೈತರು ಇಲ್ಲಿನ ತಾಲೂಕು ಕಚೇರಿ ಮುಂದೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ನಿರತರೊಂದಿಗೆ ಮಾತನಾಡಿದರು. ಕೋಳಿ ಫಾರಂನ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ನಲ್ಲಿರುವ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವುದು ಸಾಧುವಲ್ಲ. ಈ ಬಗ್ಗೆ ರೈತರು ಕೋರ್ಟಿನ ತೀರ್ಪು ಬರುವವರೆಗೂ ಸಂಯಮದಿಂದಿರಿ ಎಂದರು.
ಈಗಾಗಲೇ ಹಲ್ಕೂರು ಕೋಳಿ ಫಾರಂ ಬಳಿ ಮತ್ತು ಸುತ್ತಮುತ್ತ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು 8 ಮಂದಿ ಅಧಿಕಾರಿಗಳನ್ನು ನೇಮಿಸಿ ಪರಿಶೀಲನಾ ವರದಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದು, ಈ ವರದಿಯನ್ನು ನಾವು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದರು.
ಪ್ರತಿಭಟನೆ ನಿಲ್ಲುವುದಿಲ್ಲ: ಸಚಿವರ ಮಾತಿಗೆ ಕೆರಳಿದ ಪ್ರತಿಭಟನಾಕಾರರು ನೀವೇ ಒಂದು ಸಾರಿ ನಮ್ಮ ಊರಿಗೆ ಬಂದು ಪರಿಶೀಲಿಸಿ. ಅಲ್ಲಿ ನಿಲ್ಲಲೂ ನಿಮಗೆ ಆಗುವುದಿಲ್ಲ. ನೊಣಗಳ ಕಾಟ ಅಷ್ಟಿದೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು.
ಉಪವಿಭಾಗಾಧಿಕಾರಿ ಆದೇಶ ಪಾಲಿಸಿಲ್ಲ: ದಿನಾಂಕ 14-11-2013 ರಂದು ಮಧುಗಿರಿ ಉಪವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೋಳಿ ಫಾರಂ ಮುಚ್ಚಿಸುವಂತೆ ಆದೇಶ ನೀಡಿದ್ದರು. ಈ ಆದೇಶವನ್ನು ಅಂದೇ ಶಿರಾ ತಹಸೀಲ್ದಾರ್ ಪಾಲಿಸಿದ್ದರೆ ಇಂದು ನೂರಾರು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುವ ಪ್ರಸಂಗ ಬರುತ್ತಿರಲಿಲ್ಲ ಎಂದು ಸಚಿವ ಟಿ.ಬಿ.ಜಯಚಂದ್ರ ಅವರ ಮುಂದೆ ಜಿಲ್ಲಾ ರೈತ ಸಂಘದ ಮುಖಂಡ ಧನಂಜಯ ಆರಾಧ್ಯ ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

