ತುಮಕೂರು

ಚುನಾವಣೆಗೆ ಬಿಜೆಪಿ ಸಿದ್ಧ, ಸ್ವತಂತ್ರ ಸ್ಪರ್ಧೆ

Published On :

ಕನ್ನಡಪ್ರಭ ವಾರ್ತೆ ತುಮಕೂರು  ಜ.1
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಸಂಪೂರ್ಣ ಸರ್ವ ಸನ್ನದ್ದವಾಗಿದ್ದು, ಸ್ವತ್ರಂತ್ರವಾಗಿ ಚುನಾವಣೆ ಎದುರಿಸಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಹೇಳಿದ್ದಾರೆ.
ಅವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳು ಹಾಗೂ ಪ್ರಮುಖರೊಂದಿಗೆ ನಡೆಸಿದ ಚುನಾವಣಾ ಪೂರ್ವಸಿದ್ಧತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಭ್ರಷ್ಟಾಚಾರ ಮುಕ್ತ, ಬೆಲೆ ಏರಿಕೆ ನಿಯಂತ್ರಣ, ಅಭಿವೃದ್ಧಿ, ರು. ಅಪಮೌಲ್ಯ ತಡೆಗಟ್ಟುವುದು, ಕೈಗಾರಿಕೆ ಮತ್ತು ಔದ್ಯೋಗಿಕರಣದ ಪ್ರಗತಿ, ರೈತರಿಗೆ ಬೆಂಬಲ ಬೆಲೆ, ಶಿಕ್ಷಣ, ಆರೋಗ್ಯ, ಗಡಿ ರಕ್ಷಣೆ, ಭಯೋತ್ಪಾದನೆ ನಿಯಂತ್ರಣಗಳ ಬಗ್ಗೆ ಪ್ರಮುಖ ವಿಚಾರಗಳನ್ನು ಚುನಾವಣೆಯಲ್ಲಿ ಜನತೆ ತಿಳಿಸಿ, ದೇಶದ ಸಮಗ್ರ ಅಭಿವೃದ್ಧಿ ಚಿಂತಿಸುವ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಅವರನ್ನು ಬೆಂಬಲಿಸೋಣ ಎಂದು ತಿಳಿಸಿದರು.
ದೇಶದಲ್ಲಿ ನರೇಂದ್ರ ಮೋದಿ ಅಲೆ ಎದ್ದಿದೆ. ಎಲ್ಲಾ ವರ್ಗಗಳ ಜನತೆ ಬಿಜೆಪಿ ಆಡಳಿತವನ್ನು ಎದುರು ನೋಡುತ್ತಿದ್ದು, ವಾಜಪೇಯಿ ನಂತರ ನರೇಂದ್ರಮೋದಿ ದೇಶಕ್ಕೆ ಉತ್ತಮ ಆಯ್ಕೆಯಾಗಲಿದ್ದಾರೆಂದರು. ಮುಂದಿನ ಲೋಕಸಭೆಗೆ 272 ಕ್ಕೂ ಹೆಚ್ಚು ಲೋಕಸಭಾ ಸದಸ್ಯರ ಆಯ್ಕೆಯಲ್ಲಿ, ತುಮಕೂರು ಲೋಕಸಭೆಯಿಂದ ಬಿಜೆಪಿ ಅಭ್ಯರ್ಥಿ ಗೆಲವಿಗೆ ಶ್ರಮವಹಿಸಿ, ಕಾರ್ಯನಿರ್ವಹಿಸಿ ಅಭ್ಯರ್ಥಿ ಗೆಲ್ಲಿಸಲು ಮುಂದಾಗಬೇಕೆಂದು ವಿನಂತಿಸಿದರು.
ಬಿಜೆಪಿಗೆ ಒಳ್ಳೆಯ ಕಾಲ ಆರಂಭವಾಗಿದ್ದು, ಲೋಕಸಭೆಗೆ ಸೆಮಿಫೈನಲ್ ಚುನಾವಣೆಗಳಾದ ರಾಜ್ಯಗಳಲ್ಲಿ ಬಿಜೆಪಿ ಬಹುಮತ ಪಡೆದು ಗೆದ್ದಿದೆ ಎಂದರು. ದೇಶದಲ್ಲಿ ನರೇಂದ್ರ ಮೋದಿ ಪರ ಅಭೂತಪೂರ್ವ ಒಲವು, ಅಲೆ ಕಂಡು ಬರುತ್ತಿದ್ದು, ಜನರ ಬಳಿ ತೆರಳಿ, ಬಿಜೆಪಿ ಪರವಾಗಿ ಮತ ಪರಿವರ್ತನೆಗೆ ಮುಂದಾಗಿ ಎಂದರು.
ಉತ್ತಮ ಆಡಳಿತ: ದೇಶದಲ್ಲಿ ಉತ್ತಮ, ದಕ್ಷ ಆಡಳಿತ ಹಾಗೂ ಅಭಿವೃದ್ಧಿ ಪರ ಭಾವನೆ ಬೆಳೆಯುತ್ತಿದ್ದು, ಬಿಜೆಪಿ ಘೋಷಿತ ಪ್ರಧಾನಿ ಅಭ್ಯರ್ಥಿ ಪರ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಾಗಿ ಕಾರ್ಯನಿರ್ವಹಣೆ ಮಾಡೋಣ ಎಂದು ಮಾಜಿ ಸಚಿವ ಎಸ್.ಶಿವಣ್ಣ ವಿನಂತಿಸಿದರು.
ನಮೋಗೆ ಪ್ರಧಾನಿ ಪಟ್ಟ: ಮುಂದಿನ ಲೋಕಸಭೆಗೆ ಬಿಜೆಪಿಯು ತನ್ನ  ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಘೋಷಿಸಿದ್ದು, ಗುಜರಾತ್ ಮಾದರಿ ಅಭಿವೃದ್ಧಿಯಂತೆ, ದೇಶದಲ್ಲೂ ಅಭಿವೃದ್ಧಿ, ಪ್ರಗತಿ ಕಾಣಲು ನಮೋ ಬೆಂಬಲಿಸಿ ಮತ ನೀಡಿ  ಚುನಾವಣೆ ಎದುರಿಸೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಎಸ್. ಸುರೇಶ್‌ಗೌಡ ಕರೆ ನೀಡಿದರು. ಅವರು ಸಭೆ ಅಧ್ಯಕ್ಷತೆ ವಹಿಸಿ, ಬಿಜೆಪಿ ಪ್ರಮುಖರಲ್ಲಿ ಹುಮ್ಮಸ್ಸು ತುಂಬುವ ನುಡಿಗಳನ್ನಾಡಿದರು.
ಈ ಸಭೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಬಿ. ನಂದೀಶ್,  ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ತುಮಕೂರು ವಿಭಾಗದ ಪ್ರಭಾರಿ ನಿರ್ಮಲ್ ಕುಮಾರ್ ಸುರಾನ, ಮಾಜಿ ಶಾಸಕ ಬಿ.ಸಿ. ನಾಗೇಶ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್, ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಗಂಗರಾಜು, ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ. ಅರುಣ್ ಕುಮಾರ್, ರಾಷ್ಟ್ರೀಯ ಪರಿಷತ್ ಸದಸ್ಯ ಡಿ.ಟಿ. ರಾಜಶೇಖರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.