ನಿವೇಶನದಲ್ಲಿನ ಗುಡಿಸಲು ಧ್ವಂಸ ಆರೋಪ
ತುಮಕೂರು: ವೇಶನಕ್ಕೆ ನ್ಯಾಯಾಲಯ ನೀಡಿದ ತಾತ್ಕಾಲಿಕ ನಿರ್ಬಂಧಕಾಜ್ಞೆ ಆದೇಶ ತಿರಸ್ಕರಿಸಿ ಅಧಿಕಾರಿಗಳು ನಿವೇಶನದಲ್ಲಿನ ವಾಸಸ್ಥಳವಾದ ಗುಡಿಸಲನ್ನು ಧ್ವಂಸಮಾಡಿ ರಸ್ತೆ ನಿರ್ಮಿಸಿ, ಬಡ ಕೂಲಿಕಾರರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಧುಗಿರಿ ತಾಲೂಕಿನ ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಾಪುರ ಗ್ರಾಮದಲ್ಲಿ ನಡೆದಿದೆ.
ದೊಡ್ಡೇರಿ ಮಂಡಲ ಪಂಚಾಯ್ತಿಯು 1993ರಲ್ಲಿ ಆಶ್ರಯ ಯೋಜನೆಯಡಿ ನಿವೇಶನವನ್ನು ನೀಡಿದ್ದು, ಈ ನಿವೇಶನದಲ್ಲಿ ಬಡಕೂಲಿಕಾರ ಮತ್ತು ಕಾಡುಗೊಲ್ಲ ಜನಾಂಗದ ತಮ್ಮ ಕುಟುಂಬ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದು, ತಮ್ಮ ಕುಟುಂಬದ ಮೇಲೆ ಮಧುಗಿರಿ ತಹಸೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಪಿಡಬ್ಲ್ಯುಡಿ ಎಂಜಿನಿಯರ್ ಮತ್ತು ಬಡವನಹಳ್ಳಿ ಪೊಲೀಸರು ಯಾವುದೇ ಲಿಖಿತ ಅಥವಾ ಮೌಖಿಕವಾಗಿ ಸೂಚನೆ ನೀಡದೆ ದಿಢೀರ್ ದಾಳಿ ನಡೆಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ನಿವಾಸಿ ಚಿಕ್ಕಣ್ಣ ಆರೋಪಿಸಿದ್ದಾರೆ.
ಆರೋಪ: 2003 ರ ಡಿಸೆಂಬರ್ 27 ರಂದು ನ್ಯಾಯಾಲಯ ನೀಡಿದ ತಾತ್ಕಾಲಿಕ ನಿರ್ಬಂಧಕಾಜ್ಞೆ ಆದೇಶವನ್ನು ಉಲ್ಲಂಘನೆ ಮಾಡಿದ ಅಧಿಕಾರಿಗಳು ತಮ್ಮ ಕುಟುಂಬದ ಮೇಲೆ ಜಾಮೀನು ರಹಿತ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಚಿಕ್ಕಣ್ಣ ಅವರು ದೂರಿದ್ದಾರೆ.
ನಿವೇಶನದ ಸಮೀಪ ಗ್ರಾಮದ ನಕಾಶೆಯಲ್ಲಿ ರಸ್ತೆ ಇರುವುದನ್ನು ಬಿಟ್ಟು, ನಕಾಶೆಯಲ್ಲಿ ರಸ್ತೆಯಿಲ್ಲದಿದ್ದರು ನೂತನವಾಗಿ ನಿವೇಶನದಲ್ಲಿ ರಸ್ತೆ ನಿರ್ಮಿಸಿದ್ದಾರೆ. ಈ ರಸ್ತೆಯು ಹೆಚ್ಚು ಸಾರ್ವಜನಿಕರಿಗೆ ಅನುಕೂಲವಲ್ಲದ್ದು, ಗ್ರಾಮದ ಬೆರಳು ಎಣಿಕೆ ಕೆಲ ಮಂದಿ ಜಮೀನುಗಳಿಗೆ ಓಡಾಡಲು ಅನುಕೂಲವಾಗಬಹುದು ಎಂದು ಅವರು ಆರೋಪಿಸಿದ್ದಾರೆ.
ಬೀದಿಪಾಲು: ಕುರಿ ಮರಿ, ಕಡ್ಲೆಕಾಯಿ ಮಾರಾಟ ಮಾಡಿದ್ದ 1 ಲಕ್ಷಕ್ಕೂ ಹೆಚ್ಚು ನಗದು, ಸರ ಸೇರಿದಂತೆ 40 ಗ್ರಾಂ ನ ಚಿನ್ನ, ದವಸ, ಧಾನ್ಯ, ಪಾತ್ರೆ, ಬಟ್ಟೆ ಸೇರಿದಂತೆ ಒಟ್ಟು ಮೌಲ್ಯ 5 ಲಕ್ಷ ರು. ನಷ್ಟವಾಗಿದೆ. ತಮ್ಮ ಕುಟುಂಬಕ್ಕೆ ಈ ನಿವೇಶನ ಬಿಟ್ಟರೆ ಯಾವುದೇ ನಿವೇಶನವಿಲ್ಲದೆ ಇರುವುದರಿಂದ ತಮ್ಮ ಕುಟುಂಬ ಬೀದಿ ಪಾಲಿಗಿದೆ ಎಂದು ಚಿಕ್ಕಣ್ಣ ಹೇಳಿದ್ದಾರೆ.
ಆತ್ಮಹತ್ಯೆ ಎಚ್ಚರಿಕೆ: ತಪ್ಪತಸ್ಥ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧ ಪಟ್ಟ ಉನ್ನತಾಧಿಕಾರಿಗಳು, ಸ್ಥಳೀಯ ಶಾಸಕ ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇತರೆ ಮಂತ್ರಿಗಳು ಕ್ರಮ ಕೈಗೊಳ್ಳಬೇಕು. ದಾಖಲೆಗಳನ್ನು ಪರಿಶೀಲಿಸಿ ಕಾನೂನು ರೀತಿಯಲ್ಲಿ ತಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಂಡು ಪರಿಹಾರ ನೀಡದಿದ್ದರೆ ತಮ್ಮ ಕುಟುಂಬದವರೆಲ್ಲರು ನಮ್ಮ ನಮ್ಮ ನಿವೇಶನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ ಎಂದು ಚಿಕ್ಕಣ್ಣ ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಈಗಾಗಲೇ ಸಂಬಂಧ ಪಟ್ಟ ದಾಖಲೆಗಳೊಂದಿಗೆ ಮಧುಗಿರಿ ಉಪವಿಭಾಗಾಧಿಕಾರಿ, ಉಪ ಅಧೀಕ್ಷಕರು, ಶಾಸಕ ಕೆ.ಎನ್. ರಾಜಣ್ಣ ಅವರಿಗೆ ಮನವಿ ನೀಡಲಾಗಿದೆ. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಚಂದ್ರಶೇಖರ್ ಗೌಡ, ಮಧುಗಿರಿ ಯಾದವ ಸಂಘದ ಕಾರ್ಯದರ್ಶಿ ಕರಿಯಣ್ಣ, ಜಿಲ್ಲಾ ಕಾಡುಗೊಲ್ಲರ ಹಿತರಕ್ಷಣ ಸಮಿತಿಯ ಅಧ್ಯಕ್ಷ ಹಾರೋಗೆರೆ ಮಾರಣ್ಣ, ಮುಖಂಡರಾದ ನೇರಳಕೆರೆ ಸಿದ್ಧಪ್ಪ, ಇ.ಗೋವಿಂದರಾಜು, ಪಿ.ಸಿ. ಪೂಜಣ್ಣ ಮತ್ತಿತರರು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

