ಕಾಲುಬಾಯಿ ರೋಗ: ದನಗಳ ಜಾತ್ರೆ ಮುಂದೂಡಿಕೆ
ಶಿರಾ: ಕಾಲುಬಾಯಿ ರೋಗ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರೂ ಶೀಘ್ರ ಹತೋಟಿಗೆ ಬಾರದೆ ರಾಜ್ಯದಾದ್ಯಂತ ಹರಡುತ್ತಿದೆ.
ಜಾತ್ರೆಗೆ ಬರುವ ಸಾವಿರಾರು ರಾಸುಗಳು ಒಂದೆಡೆ ಸೇರಿ ರೋಗ ಉಲ್ಬಣಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತ ಕ್ರಮವಾಗಿ ಮತ್ತು ಪಶುಸಂಗೋಪನಾ ಇಲಾಖೆ ಮನವಿ ಮೇರೆಗೆ ಪ್ರತಿ ವರ್ಷದಂತೆ ನಡೆಯಬೇಕಿದ್ದ ದನಗಳ ಜಾತ್ರೆ ಈ ವರ್ಷದ ಮಟ್ಟಿಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಶ್ರೀಗುರುಗುಂಡಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತಸ್ವಾಮಿ ತಿಳಿಸಿದರು.
ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀಮಠದ ಆವರಣದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮರದ ತೇರು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತನ ಜೀವನಾಡಿಯಾದ ಪಶುಸಂಪತ್ತನ್ನು ರಕ್ಷಿಸುವ ತೀವ್ರ ಕಾಳಜಿಯಿಂದ ಶ್ರೀಮಠ ಮಹತ್ವದ ನಿರ್ಧಾರ ಕೈಗೊಂಡಿದ್ದು, ಉಳಿದಂತೆ ಸಂಪ್ರದಾಯ ಬದ್ಧವಾಗಿ ನಡೆಯುವ ದೇವತಾಕಾರ್ಯ ಮತ್ತು ಐತಿಹಾಸಿಕ ಪ್ರಸಿದ್ಧ ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ ನಡೆಯಲಿದೆ. ಕೃಷಿ ಮತ್ತು ಕೈಗಾರಿಕ ವಸ್ತುಪ್ರದರ್ಶನದಲ್ಲಿ ರೈತರ ಅಭ್ಯುದಯಕ್ಕೆ ಹೆಚ್ಚು ಒತ್ತು ನೀಡಿದ್ದು ನಿರಂತರವಾಗಿ ಕಾಡುತ್ತಿರುವ ಬರ, ಅಂತರ್ಜಲ ಮಟ್ಟ ಕುಸಿತದಂತಹ ಸ್ಥಿತಿಯಲ್ಲಿ ರೈತ ಕಂಗಾಲಾಗಿದ್ದಾರೆ ಎಂದರು.
ಇಂದಿನ ವ್ಯವಸಾಯ ಪದ್ಧತಿಯಲ್ಲಿ ಬದಲಾವಣೆತರುವ ಸದುದ್ದೇಶದಿಂದ ಕೃಷಿ, ತೋಟಗಾರಿಕೆ, ಜಲಾನಯನ ಇಲಾಖೆಯ ಅಧಿಕಾರಗಳು ಕಡಿಮೆ ನೀರಿನ ಪ್ರಮಾಣದಲ್ಲಿ ಹೆಚ್ಚು ಲಾಭಗಳಿಸುವ ಕೃಷಿಪದ್ಧತಿಯ ನೂತನ ತಾಂತ್ರಿಕತೆ ಬಗ್ಗೆ ಬೆಳೆಯ ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶನ ಏರ್ಪಡಿಸಿದ್ದು ಇದರ ಸಂಪೂರ್ಣ ಪ್ರಯೋಜನ ಎಲ್ಲಾ ರೈತಾಪಿ ವರ್ಗ ಪಡೆದುಕೊಂಡು, ಲಾಭದಾಯಕ ಕೃಷಿ ಚಟುವಟಿಕೆ ಮಾಡಿ ಆರ್ಥಿಕವಾಗಿ ಸಬಲರಾಗಬೇಕೆಂದರು. ಅಲ್ಲದೆ ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾಶಿಬಿರ, ಯುವಕರ ಕ್ರೀಡಾಸಕ್ತಿಗೆ ಯುವಜನೋತ್ಸವ ಹಾಗೂ ಮಕ್ಕಳ ಮನರಂಜನೆ ಹಾಗೂ ಪ್ರತಿಭಾ ಪ್ರದರ್ಶನದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮಡಿತೇರು ಕಟ್ಟು ಕಾರ್ಯದ ಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

