ಬಿಸಿಯೂಟ ಯೋಜನೆಯಿಂದ ಹೆಚ್ಚಿದ ಶಿಕ್ಷಕರ ಜವಾಬ್ದಾರಿ
ಕ.ಪ್ರ.ವಾರ್ತೆ ಮಧುಗಿರಿ ಜ.5
ಸರ್ಕಾರ ಶಾಲಾ ಮಕ್ಕಳಿಗೆ ಬಿಸಿಯೂಟ- ಕ್ಷೀರಭಾಗ್ಯ ಹಲವು ಯೋಜನೆ ಜಾರಿಗೊಳಿಸಿ ಶಿಕ್ಷಕರ ಜವಾಬ್ದಾರಿ ಹೆಚ್ಚಿಸಿರುವ ಕಾರಣ ಶೈಕ್ಷಣಿಕ ಪ್ರಗತಿಗೆ ತೊಡಕಾಗಿದೆ ಎಂದು ಪ್ರತಿಪಕ್ಷದ ವಿದ್ಯಾರ್ಥಿಗಳು ಸರ್ಕಾರದ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.
ಶನಿವಾರ ಮಧುಗಿರಿ ಡಿಡಿಪಿಐ ಕಚೇರಿ ಸಭಾಂಗಣದಲ್ಲಿ ಏರ್ಪಟಾಗಿದ್ದ 2014ನೇ ಸಾಲಿನ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳು ಸ್ವಾಗತಾರ್ಹ, ಆದರೆ ಶಿಕ್ಷಕರಿಗೆ ಇದರಿಂದ ಹೆಚ್ಚು ಹೊರೆಯಾಗಿ ಬೋಧನೆ ವಿಚಾರದಲ್ಲಿ ತೊಡಕಾಗಿದ್ದು ಸರಿಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸೈಕಲ್ ಯೋಜನೆಗೆ ಸರ್ಕಾರ ಸಾವಿರಾರು ರು. ವೆಚ್ಚ ಮಾಡುತ್ತಿದೆ. ಆದರೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸೈಕಲ್ ವಿತರಿಸುತ್ತಿಲ್ಲ, ಆ ಸೈಕಲ್ನಲ್ಲಿ ಬಂಡವಾಳವೇ ಇಲ್ಲ ಅಂದರೆ ಟೈರು, ಟ್ಯೂಬು, ಬೆಲ್ ಇಲ್ಲ. ಇದ್ದರೂ ಅವು ಸಮರ್ಪಕ ಕೆಲಸ ಮಾಡುವುದಿಲ್ಲ. ರಿಪೇರಿ ಮಾಡುವ ವ್ಯಕ್ತಿ ಹತ್ತಿರ ವಿದ್ಯಾರ್ಥಿಗಳು ಕೊಂಡೊಯ್ದರೆ 400 ರು. ರಿಪೇರಿ ಖರ್ಚು ಕೊಡಬೇಕು. ಬಡ ಮಕ್ಕಳಿಗೆ ಅನುಕೂಲವಾಗಲಿ ಎಂಬ ಸರ್ಕಾರದ ಯೋಜನೆ ಇಂತಹ ಸೈಕಲ್ಗಳಿಂದ ಹೇಗೆ ಅನುಕೂಲವಾಗಲು ಸಾಧ್ಯ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸ್ಥಳೀಯ ಸೈಕಲ್ ರಿಪೇರಿ ಮಾಡುವ ವ್ಯಕ್ತಿಗಳನ್ನು ಬಳಸಿಕೊಂಡು ರಿಪೇರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ಕಾಡು ಪ್ರಾಣಿಗಳು ನಾಡಿಗೆ ಬಂದು ಜನರ ನೆಮ್ಮದಿ ಹಾಳು ಮಾಡುತ್ತಿವೆ. ಗುಟ್ಕಾ ಸೇವನೆ ಆರೋಗ್ಯಕ್ಕೆ ಹಾನಿಕರ, ಗ್ರಾಮೀಣ ಪ್ರದೇಶದ ಕೆಲ ಗ್ರಾಮಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಗಣತಿ ಕುಂಟುತ್ತಾ ಸಾಗಿದೆ. ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ. ನಿಮ್ಮ ಸರ್ಕಾರದಲ್ಲಿ ಯಾವುದು ಸರಿಯಿದೆ, ಎಲ್ಲ ವಿಚಾರದಲ್ಲಿ ತಾರತಮ್ಯ ತುಂಬಿ ತುಳುಕುತ್ತಿದೆ ಎಂದು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.
ಅಕ್ರಮ ಮರಳು ಮಾರಾಟ: ಶಿರಾ ತಾಲೂಕಿನ ಮದಲೂರು ಕೆರೆಯಲ್ಲಿ ಅಕ್ರಮ ಮರಳು ಸಾಗಾಟ ರಾಜರೋಷವಾಗಿ ನಡೆಯುತ್ತಿದ್ದರೂ ಪೊಲೀಸರು ನಿದ್ದೆಗೆ ಜಾರಿದ್ದಾರೆಯೇ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ತಕ್ಕಂತೆ ಮಕ್ಕಳಿಗೆ ತಟ್ಟೆ, ಲೋಟ ನೀಡಬೇಕು, ಇಲ್ಲದಿದ್ದರೆ ಪ್ರತಿ ಮಗು ಹಲವು ಬಗೆಯ ತಟ್ಟೆ, ಲೋಟ ತರುವ ಮೂಲಕ ಭಿಕ್ಷುಕರಂತೆ ಕಾಣುತ್ತಾರೆ. ಅತಿಥಿ ಉಪನ್ಯಾಸಕರ ನೇಮಕದ ಬಗ್ಗೆ ಚರ್ಚೆ ನಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ರೈತರ ಸಾಲ ಮನ್ನಾ ಮಾಡುವ ಬದಲು ಕೃಷಿಗೆ ಸಹಾಯವಾಗುವ ಯೋಜನೆ ರೂಪಿಸಿ, ವಿದ್ಯುತ್ ಲೋಡ್ ಶೆಡ್ಡಿಂಗ್ನಿಂದ ವಿದ್ಯಾರ್ಥಿಗಳು ಓದಲು, ಬರೆಯಲು ಆಗುತ್ತಿಲ್ಲ. ಆದ ಕಾರಣ ಸಿಎಂ ವಾರಕ್ಕೊಮ್ಮ ಜನತಾದರ್ಶನ ಮಾಡುವ ಮೂಲಕ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂತಾಪ: ಕಲಾಪ ಪ್ರಾರಂಭಕ್ಕೂ ಮುನ್ನ ಸಭಾಧ್ಯಕ್ಷರು ಈಚೆಗೆ ನಿಧನರಾದ ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪ ಮತ್ತು ಮೈಸೂರು ಯದು ವಂಶದ ಕೊನೆ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಸಂತಾಪ ಸೂಚಿಸಿ ಕಲಾಪ ಪ್ರಾರಂಭಿಸಿದರು. ವಿದ್ಯಾರ್ಥಿಗಳಿಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಬಗ್ಗೆ ಪ್ರಶ್ನೆ ಕೇಳುವ ಮೂಲಕ ಶಾಸಕಾಂಗದ ಬಗ್ಗೆ ತಿಳುವಳಿಕೆ ನೀಡಲಾಯಿತು.
ಜ.10 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಮಧುಗಿರಿ ಎಂಜಿಎಂ ಪ್ರೌಢಶಾಲೆ ವಿದ್ಯಾರ್ಥಿನಿ ಎಸ್.ಭಾರತಿ ಮತ್ತು ಶಿರಾ ತಾ.ಹೊನ್ನಗೊಂನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಯಶಸ್ವಿನಿ ಆಯ್ಕೆಯಾದರು. ಈ ಸ್ಪರ್ಧೆಯಲ್ಲಿ ಶೈಕ್ಷಣಿಕ ಜಿಲ್ಲೆಯ 22 ಶಾಲೆಗಳಿಂದ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

