ನೇರ ಸಬ್ಸಿಡಿ ಯೋಜನೆಯಿಂದ ಜನರಿಗೆ ಟೋಪಿ
ಚಿಕ್ಕನಾಯಕನಹಳ್ಳಿ: ಕೇಂದ್ರ ಸರ್ಕಾರದ ಅಡಿಗೆ ಅನಿಲ ನೇರ ಸಬ್ಸಿಡಿ ಯೋಜನೆ ಜನರಿಗೆ ಟೋಪಿ ಹಾಕುವ ಯೋಜನೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಆರೋಪಿಸಿದೆ.
ಬುಧವಾರ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಕಚೇರಿ ಬಳಿ ಹಮ್ಮಿಕೊಂಡಿದ್ದ ಅಡಿಗೆ ಅನಿಲ ನೇರಸಬ್ಸಿಡಿ ಯೋಜನೆ ಹಾಗೂ ದರ ಏರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮೇಲಿನಂತೆ ಮಾತನಾಡುತ್ತಿದ್ದರು. ಸಬ್ಸಿಡಿ ಯೋಜನೆ ಅವೈಜ್ಞಾನಿಕವಾಗಿದ್ದು, ಕೆಲವರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮೆಯಾಗಿದ್ದರೆ, ಕೆಲವರಿಗೆ ಒಂದು ಬಾರಿಯು ಜಮೆಯಾಗಿಲ್ಲ. ಆದ್ದರಿಂದ ಮೊದಲಿನಂತೆ ಸಿಲಿಂಡರ್ ಖರೀದಿಸುವಾಗಲೇ ಸಬ್ಸಿಡಿ ಕಡಿತಗೊಳಿಸಿ. ಇಲ್ಲದಿದ್ದರೆ ಯಾರದೋ ಹಣ ಯಾರದೋ ಖಾತೆಗೆ ಜಮೆಯಾಗಿರುವ ನಿದರ್ಶನಗಳು ನೂರಾರಿವೆ. ಇದರಿಂದ ಗ್ರಾಮೀಣ ಭಾಗದ ರೈತರು ಮತ್ತು ಅಮಾಯಕರಿಗೆ ಬಹಳ ತೊಂದರೆಯಾಗಿದೆ. ನಮ್ಮಿಂದ ಆಯ್ಕೆಯಾಗಿ ಹೊಗುವ ಜನಪ್ರತಿನಿಧಿಗಳಿಗೆ ಸಾಮಾನ್ಯ ಜ್ಞಾನದ ಕೊರತೆಯಿದೆ. ಆದ್ದರಿಂದ ಕೇಂದ್ರ ಸರ್ಕಾರದ ಇಂತಹ ಹುಚ್ಚು ನಿರ್ಧಾರಗಳನ್ನು ಕೈಗೊಳ್ಳುವಾಗ ತುಟಿ ಹೊಲಿದುಕೊಂಡು ಸುಮ್ಮನೆ ಕುಳಿತಿದ್ದಾರೆ. ಇಂತಹ ಘನಂದಾರಿ ಕೆಲಸ ಮಾಡುವುದಕ್ಕಾಗಿ ನಾವು ಇವರನ್ನು ಆಯ್ಕೆ ಮಾಡಿ ಕಳುಹಿಸಬೇಕೆ ಎಂದು ಪ್ರಶ್ನಿಸಿದರು.
ನೈತಿಕ ದಿವಾಳಿತನ: ಓಟು ಕೇಳುವಾಗ ಮನೆ ಬಾಗಿಲಿಗೆ ಬರುವ ರಾಜಕಾರಣಿಗಳು ನಮ್ಮ ಸಮಸ್ಯೆಗಳ ಬಗ್ಗೆ ಅವರನ್ನು ಕಾಣಲು ಹೋದಾಗ ಅಪಾಯಿಂಟ್ಮೆಂಟ್ ಪಡೆಯಬೇಕಂತೆ. ಇದು ಅವರ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಈ ಅಡುಗೆ ಅನಿಲದ ಗೊಂದಲವನ್ನು ನಿವಾರಿಸದಿದ್ದರೆ ಬಿಜೆಪಿ ಮಹಿಳಾ ಮೋರ್ಚಾ ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಂತರ ಸರ್ಕಾರ್ಕಕೆ ನೀಡಿದ ಲಿಖಿತ ಮನವಿಯನ್ನು ತಹಸೀಲ್ದಾರ್-ಗ್ರೇಡ್ 2 ಪುಟ್ಟರಾಮಯ್ಯನವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿಮ್ಮ ಹೋರಾಟದ ಉದ್ದೇಶದ ಲಿಖಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಕೆಂಪಮ್ಮ, ಮಾಲಾಬಸವರಾಜು, ಪಾರ್ವತಮ್ಮ, ಗುಲ್ಜಾರ್ ಬಾನು, ಮುಬಿನಾ ಭಾನು, ರೇಷ್ಮಾಬಾನು, ಷಾತಾಜ್ ಬಾನು, ಮಾಸಿಯಾ, ಕವಿತಾ, ಜಯಂತಿ, ಸಾಯಿರಾ ಬಾನು, ಗಂಗಾಧರ್, ನರಸಮ್ಮ, ಲಕ್ಷ್ಮಮ್ಮ, ಪ್ರೇಮ, ತಾಯಮ್ಮ, ಮುದ್ದೇನಹಳ್ಳಿ ದಯಾನಂದ್ ಮುಂತಾದವರಿದ್ದರು.ಬಿಜೆಪಿ ಪ್ರಧಾನಕಾರ್ಯದರ್ಶಿ ಲಕ್ಷ್ಮಣಪ್ಪ, ಮಾಜಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ನಗರಾಧ್ಯಕ್ಷ ನರಸಿಂಹಮೂರ್ತಿ, ಶರತ್ಕುಮಾರ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

