ತುಮಕೂರು

3 ತಿಂಗಳಿಗೊಮ್ಮೆ ನಗರಪಾಲಿಕೆಗಳಿಗೆ ಭೇಟಿ

Published On :

ಕ.ಪ್ರ.ವಾರ್ತೆ ,  ತುಮಕೂರು ,  ಜ.8
ಇನ್ನು ಮುಂದೆ ಪ್ರತಿ 3 ತಿಂಗಳಿಗೊಮ್ಮೆ ರಾಜ್ಯದ ಎಲ್ಲಾ ನಗರಪಾಲಿಕೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುವ ಚಿಂತನೆ ನಡೆಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಪೌರಾಡಳಿತ ಸಚಿವ ಸೊರಕೆ ತಿಳಿಸಿದರು.
ಅವರು ತುಮಕೂರು ನಗರಪಾಲಿಕೆ ಕಚೇರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಸರಕಾರ ಬಜೆಟ್ ಭಾಷಣದಲ್ಲಿ ನೀಡಿದ್ದ ಭರವಸೆಯಂತೆ ತುಮಕೂರು, ಬಿಜಾಪುರ ಮತ್ತು ಶಿವಮೊಗ್ಗ ನಗರಸಭೆಗಳನ್ನು ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಮುಂದಿನ 20 ವರ್ಷಗಳ ಜನಸಂಖ್ಯೆಯನ್ನು ಆಧರಿಸಿ ಮಾಸ್ಟರ್ ಪ್ಲಾನ್  ಸಿದ್ಧಪಡಿಸಲು ಮುಂದಾಗಿದ್ದು, ಇದೇ ಉದ್ದೇಶದಿಂದ ತುಮಕೂರು ಮಹಾನಗರಪಾಲಿಕೆಗೆ ಇಂದು ಖುದ್ದು ಭೇಟಿ ನೀಡಿ ಚುನಾಯಿತ ಸದಸ್ಯರ ಅಭಿಪ್ರಾಯಗಳನ್ನು ಆಲಿಸಲಾಗಿದೆ ಎಂದು ತಿಳಿಸಿದರು.
22 ರಂದು ಸಿಎಂ ಸಭೆ: ಜನತೆಯಿಂದ ಆಯ್ಕೆಯಾದವರು ಕನಿಷ್ಠ 5 ವರ್ಷ ಕೆಲಸ ಮಾಡಬೇಕು ಎಂಬ ನಿಯಮದಡಿ ಮಹಾನಗರಪಾಲಿಕೆಯಾಗಿ ಪರಿವರ್ತನೆಯಾಗಿರುವ ಕಡೆಗಳಲ್ಲಿ ತಮ್ಮನ್ನೇ ಮುಂದುವರೆಸಲು ಜನಪ್ರತಿನಿಧಿಗಳು ಕೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೆಲವು ಕಾನೂನು ತೊಡಕುಗಳಿದ್ದು, ಅವುಗಳ ಬಗ್ಗೆ ಚರ್ಚೆ ನಡೆಸಲು ಜ.22 ರಂದು ಸಿ.ಎಂ.ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸೊರಕೆ ತಿಳಿಸಿದರು.
2040ರ ಜನಸಂಖ್ಯೆಗೆ ಯೋಜನೆ ರೂಪಿಸಿ: 2040 ರ ವೇಳೆಯ ಜನಸಂಖ್ಯೆಗನುಗುಣವಾಗಿ ಯೋಜನೆ ರೂಪಿಸುವಂತೆ. ಯೋಜನೆ ರೂಪಿಸಲು ಅಗತ್ಯವಿರುವ ತಾಂತ್ರಿಕ ವರ್ಗ, ಯೋಜನಾ ವಿಭಾಗ ಮತ್ತು ಪರಿಸರ ವಿಭಾಗವನ್ನು ಸಶಕ್ತಗೊಳಿಸಲು ಅಗತ್ಯ ಸಿಬ್ಬಂದಿ ನೇಮಿಸಲು ತೀರ್ಮಾನಿಸಲಾಗಿದೆ. ನಗರ ಪ್ರದೇಶದ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ಅಗತ್ಯ ಸಿಬ್ಬಂದಿಯನ್ನು ಒದಗಿಸುವ ಕೆಲಸ ಸರಕಾರದಿಂದ ನಡೆದಿದೆ. ಬೆಂಗಳೂರು ಬೆಳೆದಂತೆ ನಗರ ಪ್ರದೇಶಕ್ಕೆ ಬರುತ್ತಿರುವ ಜನಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಸುತ್ತಮುತ್ತ ಇರುವ ನಗರಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಅವರ ಬೆಂಗಳೂರು ನಗರಕ್ಕೆ ವಲಸೆ ಬರದಂತೆ ತಡೆಯುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲಿನ ಎಲ್ಲಾ ನಗರಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಸತಿ, ರಸ್ತೆ, ಬೀದಿ ದೀಪ, ಯುಜಿಡಿ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. 2040 ರ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
4200 ಸಿಬ್ಬಂದಿ ನೇಮಕಕ್ಕೆ ಚಾಲನೆ: ನಗರಾಭಿವೃದ್ಧಿಗೆ ಇಲಾಖೆಗೆ ಇಂದು ಗುತ್ತಿಗೆ, ಹೊರ ಗುತ್ತಿಗೆ ನೌಕರರಿಂದ ಕೆಲಸ ನಡೆಯುತ್ತಿದೆ. ತಪ್ಪು ಮಾಡಿದಾಗ ಅವರ ಮೇಲೆ ಕ್ರಮ ಜರುಗಿಸುವ ಯಾವ ಜವಾಬ್ದಾರಿಯೂ ನಮಗೆ  ಇಲ್ಲದಂತಾಗಿದೆ. ಆದ್ದರಿಂದ ನೀರು ಸರಬರಾಜು 402 ಪ್ಲಾನಿಂಗ್‌ಗೆ 202 ನೌಕರರನ್ನು ನೇಮಕ ಮಾಡಿಕೊಳ್ಳಲಾಗುವುದು. ಇವರಿಗೆ ಸೂಕ್ತ ತರಬೇತಿ ನೀಡಲು ಕೆಪಾಸಿಟಿ ಬಿಲ್ಡಿಂಗ್  ನಿರ್ಮಿಸಲಾಗುತ್ತಿದ್ದು, ತುಮಕೂರು ನಗರದಲ್ಲಿಯೂ ಒಂದು ಕೆಪಾಸಿಟಿ ಬಿಲ್ಡಿಂಗ್ ನಿರ್ಮಾಣಗೊಳ್ಳಲಿದೆ. ಗ್ರಾಮಪಂಚಾಯಿತಿಗಳ ರೀತಿ ನಗರಗಳಲ್ಲಿಯೂ ವಾರ್ಡ್ ಸಮಿತಿಗಳನ್ನು ರಚಿಸಿ, ವಾರ್ಡ್ ಸಭೆಗಳನ್ನು ನಡೆಸಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ವರ್ಷ ಇಲಾಖೆಗೆ 4200 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇರುವ ನೌಕರರ ಸಮಸ್ಯೆಯನ್ನು ನೀಗಿಸಲು ಈಗಾಗಲೇ ಸಿಬ್ಬಂದಿ ನೇಮಕಕ್ಕೆ ಹಣಕಾಸು ಇಲಾಖೆ ಅನುಮತಿ ನೀಡಿದೆ ಎಂದರು.
ಹಿರೇಮಠ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ
ತುಮಕೂರು: ಡಿ.ಕೆ. ಶಿವಕುಮಾರ ವಿರುದ್ಧ ಸಮಾಜ ಪರಿವರ್ತನಾ ಟ್ರಸ್ಟ್‌ನ ಎಸ್.ಆರ್. ಹಿರೇಮಠ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಅಭಿಪ್ರಾಯಪಟ್ಟರು. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿರೇಮಠ ಹೇಳಿದ ತಕ್ಷಣ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರೇನು ಅಥಾರಿಟಿನಾ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳಿಗೆ ಚಾರ್ಜ್ ಶೀಟ್ ಪ್ರತಿ ಕಳುಹಿಸಲು ಇವರ್ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೇಶನಕ್ಕೆ ಮನವಿ
ತುಮಕೂರು: ತುಮಕೂರು ನಗರದಲ್ಲಿ ಕೊಳಗೇರಿಗಳ ಸಂಖ್ಯೆ ಹೆಚ್ಚಿದ್ದು, ಕಳೆದ 20 ವರ್ಷಗಳಿಂದ ಬಡವರಿಗೆ ನಿವೇಶನ ನೀಡಿಲ್ಲ. ಈಗಿರುವ ಜಾಗಗಳಲ್ಲಿ ಅವರಿಗೆ ಯಾವುದೇ ರೀತಿಯ ಭದ್ರತೆಯಿಲ್ಲ. ಆದ್ದರಿಂದ ಸರಕಾರ ಖಾತೆ ಆಂದೋಲನದ ರೀತಿಯಲ್ಲಿ ಕಾರ್ಯಕ್ರಮ ಜರುಗಿಸಿ ಬಡವರಿಗೆ, ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕೆಂದು ಪಾಲಿಕೆ ಸದಸ್ಯ ಹನುಮಂತರಾಯಪ್ಪ ಸಚಿವರಿಗೆ ಮನವಿ ಮಾಡಿದರು. ಕಾರ್ಪೋರೇಟರ್   ನಯಾಜ್ ಮಾತನಾಡಿ, ಕಳೆದ 20 ವರ್ಷಗಳಿಂದಲೂ ವಾಲ್ವಮನ್‌ಗಳು ಮತ್ತು ಪೌರಕಾರ್ಮಿಕರು ಅತಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.