ತುಮಕೂರು

ನಮ್ಮವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ

Published On :

ಕ.ಪ್ರ. ವಾರ್ತೆ ,  ತುಮಕೂರು ,  ಜ. 8
ರಾಜ್ಯದಲ್ಲಿ ಪ್ರಧಾನ ಬುಡಕಟ್ಟು ಲಕ್ಷಣವುಳ್ಳ, ಬಹುಸಂಖ್ಯಾತ ಅಲೆಮಾರಿ, ಅರೆ-ಅಲೆಮಾರಿಗಳಾದ ಕಾಡುಗೊಲ್ಲರನ್ನು ಶೀಘ್ರ  ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ರಾಜ್ಯ ಕಾಡುಗೊಲ್ಲರ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಬಿ. ಚಿಕ್ಕಪ್ಪಯ್ಯ ಅವರು ಒತ್ತಾಯಿಸಿದ್ದಾರೆ.
ಅವರು ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರ ನಂತರ ಕಾಡುಗೊಲ್ಲ ಜಾತಿ ಸಂಬಂಧ ಸಂಶೋಧಕರು, ಇತಿಹಾಸಕಾರರು, ಮಾನವಶಾಸ್ತ್ರ ತಜ್ಞರು ಅಧ್ಯಯನ ನಡೆಸಿರುವ ದಾಖಲೆಗಳು ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿವೆ. ಈ ಹಿಂದೆ ಮೈಸೂರು ಗೆಜಿಟಿಯರ್ ಮತ್ತು ಕರ್ನಾಟಕ ಗೆಜಿಟಿಯರ್‌ನಲ್ಲಿ ಅಧ್ಯಯನ ನಡೆಸಿರುವ ಬಗ್ಗೆ ದಾಖಲೆಗಳಿವೆ. ಎಲ್ಲಾ ಸಂಶೋಧನೆಯು ಕಾಡುಗೊಲ್ಲರು ಬುಡಕಟ್ಟು ಲಕ್ಷಣದಿಂದ ಕೂಡಿದ್ದಾರೆ ಎಂದು ತಿಳಿಸಿವೆ. ಇದರಿಂದ ಕಾಡುಗೊಲ್ಲರನ್ನು ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಸಕ್ತಿವಹಿಸಬೇಕು ಎಂದು ಮನವಿ ಮಾಡಿದರು. ಅಡವಿಗೊಲ್ಲ ಪದಕ್ಕೆ ಪರ್ಯಾಯವಾಗಿ ಕಾಡುಗೊಲ್ಲ ಹಾಗೂ ಹಟ್ಟಿಗೊಲ್ಲ ಎಂಬ ಪದಗಳನ್ನು ಜಾತಿವಾರು ಪಟ್ಟಿಯಾದ ವರ್ಗ-1ರಲ್ಲಿ ಸೇರಿಸಿ ಸರ್ಕಾರ ಶೀಘ್ರವಾಗಿ ಆದೇಶ ಹೊರಡಿಸಬೇಕು ಎಂದು ಬಿ. ಚಿಕ್ಕಪ್ಪಯ್ಯ ಅವರು ಆಗ್ರಹಿಸಿದರು.
2009-10 ರಲ್ಲಿ ರಾಜ್ಯ ಹಿಂದುಳಿದ ಆಯೋಗ ಸಲಹಾ ಸಂಖ್ಯೆ 24ರಲ್ಲಿ ಗೊಲ್ಲ-ಅಡವಿಗೊಲ್ಲ-ಜೊತೆಗೆ ಕಾಡುಗೊಲ್ಲ, ಹಟ್ಟಿಗೊಲ್ಲ ಎಂಬ ಪರ್ಯಾಯ ಪದಗಳನ್ನು ಸೇರಿಸಿ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದರೆ ರಾಜ್ಯ ಸರ್ಕಾರ ಇಲ್ಲಿಯವರೆಗೂ ಜಾರಿಮಾಡಿಲ್ಲ ಎಂದರು.
ಆದೇಶ ಹೊರಡಿಸಿಲ್ಲ: ರಾಜ್ಯದ ಕಾಡುಗೊಲ್ಲರ ಹಿತರಕ್ಷಣ ಸಮಿತಿಯಿಂದ ಈಗಾಲೇ ಹಲವಾರು ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಲವಾರು ಬಾರಿ ರಾಜ್ಯದ ಸಮಾಜ ಕಲ್ಯಾಣ ಸಚಿವರನ್ನು ನೇರವಾಗಿ ವಿನಂತಿಸಲಾಗಿದೆ. ಅದರೆ ಇಲ್ಲಿಯವರೆಗೂ ರಾಜ್ಯ ಹಿಂದುಳಿದ ಆಯೋಗ ಸಲಹಾ ಸಂಖ್ಯೆ 24ರಲ್ಲಿ ಶಿಫಾರಸು ಮಾಡಿದ ಕಾಡುಗೊಲ್ಲ, ಹಟ್ಟಿಗೊಲ್ಲ ಪದಗಳನ್ನು ಸೇರಿಸಿ ಆದೇಶ ಹೊರಡಿಸಿರುವುದಿಲ್ಲ ಎಂದು ಅವರು ಹೇಳಿದರು. ಅದರೆ ರಾಜ್ಯ ಸರ್ಕಾರ ಜಾತಿವಾರು ಪಟ್ಟಿಯಲ್ಲಿ ಕಾಡುಗೊಲ್ಲ ಹಾಗೂ ಹಟ್ಟಿಗೊಲ್ಲ ಎಂಬ ಪದಗಳನ್ನು ಬಿಟ್ಟಿದೆ. ಬುಡಕಟ್ಟು ಲಕ್ಷಣವುಳ್ಳ ಕಾಡುಗೊಲ್ಲರ ಬಗ್ಗೆ ಸಂಶೋಧನೆ ನಡೆಸಿದ ಡಾ. ತಿ.ನಂ.ಶಂಕರನಾರಯಣ, ಪ್ರೊ. ರವಿವರ್ಮ ಕುಮಾರ್, ಡಾ.ಸಿ.ಎಸ್. ದ್ವಾರಕನಾಥ್ ಅವರ ವರದಿಯಲ್ಲಿ ಇತರ ಗೊಲ್ಲರಿಗಿಂತ ಕಾಡುಗೊಲ್ಲರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಬಹು ಹಿಂದುಳಿದಿದ್ದಾರೆ. ಇದರಿಂದ ರಾಜ್ಯದ 10 ಜಿಲ್ಲೆ ಮತ್ತು 37 ತಾಲೂಕಿನಲ್ಲಿ ವಾಸಿಸುವ ಬಹುಸಂಖ್ಯಾತ ಕಾಡುಗೊಲ್ಲರನ್ನು ಸರ್ಕಾರ ವಿವಿಧ ಕ್ಷೇತ್ರದಲ್ಲಿ ಕಾಡುಗೊಲ್ಲರಿಗೆ ಪ್ರಾಧಾನ್ಯತೆ ನೀಡಬೇಕು ಎಂದು ತಿಳಿಸಿದರು. ಹಿಂದುಳಿದ, ಬುಡಕಟ್ಟು ಲಕ್ಷಣವುಳ್ಳ ಕಾಡುಗೊಲ್ಲರ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಶೇಷ ಆರ್ಥಿಕ ಪ್ಯಾಕೇಜ್: ಕಾಡುಗೊಲ್ಲರ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ರೂಪಿಸಿ, ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ ತಿಂಗಳ 12 ರಂದು ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ದಶಮಾನೋತ್ಸವ ಮತ್ತು ಹಿಂದುಳಿದ ಜಾತಿಗಳ ಜಾಗೃತಿ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಕಾಡುಗೊಲ್ಲರು ಭಾಗವಹಿಸಬೇಕು ಎಂದು ಚಿಕ್ಕಪ್ಪಯ್ಯ ಅವರು ಕೋರಿದರು.
ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿ ಮಾಗೋಡ ನಾಗರಾಜ್, ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಗುಡದಹಳ್ಳಿ ಬಸವರಾಜು, ಜಿಲ್ಲಾಧ್ಯಕ್ಷ ಹಾರೋಗೆರೆ ಮಾರಣ್ಣ, ಶಿರಾ ಸಮಿತಿ ಅಧ್ಯಕ್ಷ ಗೌಡಗೆರೆ ಚಂದ್ರಶೇಖರ್, ಚಿಕ್ಕನಾಯಕನಹಳ್ಳಿ ಸಮಿತಿ ಅಧ್ಯಕ್ಷ  ಕದರೆಗೌಡರು ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.