ವೈಕುಂಠ ಏಕಾದಶಿ ಪ್ರಯುಕ್ತ 11 ರಂದು ವಿಶೇಷ ಪೂಜೆ
ಮಧುಗಿರಿ: ಪಟ್ಟಣದ ಐತಿಹಾಸಿಕ ಸುಪ್ರಸಿದ್ಧ ಶ್ರೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಜ.11 ರ ಶನಿವಾರ ವಿಶೇಷ ಪೂಜೆ, ದ್ವಾರದರ್ಶನ ಹಾಗೂ ಪುಣ್ಯದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಧಾರ್ಮಿಕ ಮುಖಂಡ ಎಂ.ಜಿ. ಶ್ರೀನಿವಾಸಮೂರ್ತಿ ಭಕ್ತ ಮಂಡಳಿ ಪರವಾಗಿ ತಿಳಿಸಿದರು. ದೇವಸ್ಥಾನದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈ ವಿಷಯ ತಿಳಿಸಿದ ಅವರು,ಅಂದು ಮುಂಜಾನೆ ರಾತ್ರಿ 2 ಗಂಟೆಗೆ ಅಭಿಷೇಕ, ವಿಶೇಷ ಪೂಜೆ, ಬೆಳಿಗ್ಗೆ 5 ರಿಂದ ರಾತ್ರಿ 12ರವ ರೆಗೆ ದ್ವಾರದರ್ಶನ ಹಾಗೂ ಬೆಳಿಗ್ಗೆ 5.45 ರಿಂದ ರಾತ್ರಿ 7.30ರವರೆಗೆ ವಿವಿಧ ಭಕ್ತ ಮಂಡಳಿ ಮತ್ತು ಸಂಘ ಸಂಸ್ಥೆ ಭಜನೆ ತಂಡಗಳಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ.
ಕಥಕ್ ನೃತ್ಯ: ವಿಶೇಷ ಕಾರ್ಯಕ್ರಮದ ಅಂಗವಾಗಿ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದರಾದ ಚೆನ್ನೈನ ಡಾ.ಟಿ.ಪೂಜಾ ಮತ್ತು ಡಾ.ಟಿ.ಪ್ರಾರ್ಥನ ಅವರಿಂದ ಆಕರ್ಷಕ ಭರತ ನಾಟ್ಯ ಮತ್ತು ಕಥಕ್ ನೃತ್ಯ ಪ್ರದರ್ಶನ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು. ಗೋಷ್ಠಿಯಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸಭಟ್, ಪುರಸಭೆ ಮಾಜಿ ಸದಸ್ಯ ಆರ್ಎಲ್ಎಸ್ ರಮೇಶ್ ಇದ್ದರು.
ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳಿಗೆ ಆಹ್ವಾನ
ತುಮಕೂರು: ರಾಮಕೃಷ್ಣ-ವಿವೇಕಾನಂದ ಆಶ್ರಮದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವೇಕಾನಂದ ಯುವಕ ಸಂಘ ಹಾಗೂ ನಿವೇದಿತಾ ನಿಕೇತನ ಯುವತಿಯರ ಸತ್ಸಂಗ ಕೇಂದ್ರದ ವತಿಯಿಂದ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನೋತ್ಸವ ವರ್ಷಾಚರಣೆಯ ಅಂಗವಾಗಿ ಜ.17 ರಿಂದ ಮೂರು ದಿವಸಗಳ ಕಾಲ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದರ ಸಾನಿಧ್ಯದಲ್ಲಿ ನೆರವೇರಲಿದೆ.
ಜನವರಿ 17 ರಂದು ಶುಕ್ರವಾರ ಬೆಳಗ್ಗೆ 9.30 ಕ್ಕೆ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಾಗತೀಕರಣದಿಂದ ಸಂಸ್ಕೃತಿಯು ಅಧಃಪತನದತ್ತ ಸಾಗುತ್ತಿದೆ ಎಂಬ ವಿಷಯದ ಕುರಿತು ಕನ್ನಡ ಚರ್ಚಾಸ್ಪರ್ಧೆಯು ನೆರವೇರಲಿದ್ದು ಅಂದಿನ ಉದ್ಘಾಟನೆಯನ್ನು ಕೋರ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಆರ್. ವಾಸುದೇವಮೂರ್ತಿ ಉದ್ಘಾಟಿಸಲಿದ್ದಾರೆ.
18 ರಂದು ಶಕ್ತರಾಷ್ಟ್ರ ನಿರ್ಮಾಣಕ್ಕೆ ಧರ್ಮ ಮತ್ತು ವಿಜ್ಞಾನಗಳ ಅವಶ್ಯಕತೆ - ಸ್ವಾಮಿ ವಿವೇಕಾನಂದರ ಪರಿಕಲ್ಪನೆ ಎಂಬ ವಿಷಯದ ಕುರಿತು ಕನ್ನಡ ಭಾಷಣ ಸ್ಪರ್ಧೆ ನೆರವೇರಲಿದ್ದು ಉದ್ಘಾಟನೆಯನ್ನು ಸಿದ್ಧಾರ್ಥ ತಾಂತ್ರಿಕ ಮಹಾವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಕರುಣಾಕರ್ ಅವರು ಉದ್ಘಾಟಿಸಲಿದ್ದಾರೆ.
19 ರಂದು ಮನುಕುಲದ ಪ್ರಗತಿಗೆ ನೈಜಧರ್ಮದ ಅರಿವು ಅತ್ಯಗತ್ಯ ಎಂಬ ವಿಷಯದ ಕುರಿತು ಕನ್ನಡ ಭಾಷಣ ಸ್ಪರ್ಧೆಯು ನೆರವೇರಲಿದ್ದು ಅಂದಿನ ಉದ್ಘಾಟನೆಯನ್ನು ತುಮಕೂರು ವಿವಿ ಇತಿಹಾಸ ಮತ್ತು ಪುರಾತತ್ವ ವಿಭಾಗದ ಕೊಟ್ರೇಶ್ ಉದ್ಘಾಟಿಸಲಿದ್ದಾರೆ.
ಹಮಾಲಿ ಕಾರ್ಮಿಕರ ಪ್ರತಿಭಟನೆ
ಕೊರಟಗೆರೆ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಗಾಗಿ ಬೆನ್ನು ಮೂಳೆ ಮುರಿದುಕೊಂಡು ದುಡಿಯುತ್ತಿರುವ ಕಾರ್ಮಿಕರ ಕೂಲಿ ಹೆಚ್ಚಳ ಮಾಡಲು ನಿರ್ಲಕ್ಷ್ಯ ಮನೋಭಾವ ತಾಳಿರುವ ಸರ್ಕಾರದ ಕ್ರಮ ಖಂಡಿಸಿ ಪಟ್ಟಣದ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಪಟ್ಟಣದ ಮಂಜುನಾಥ ಹಮಾಲಿಗಳ ಸಂಘ ಕೆಎಫ್ಸಿಎಸ್ಸಿ ಗೋಡನ್ ಬಳಿ ಸಮಾವೇಶಗೊಂಡ ಕಾರ್ಮಿಕರು ಸಾಂಕೇತಿಕವಾಗಿ ಒಂದು ದಿನದ ಕೆಲಸ ಸ್ಥಗಿತಗೊಳಿಸಿ ಗೋಡೌನ್ ಮುಂದೆ ಧರಣಿ ನಡೆಸಿದರು. ನಂತರ ಮಾತನಾಡಿದ ಸಂಘದ ಅಧ್ಯಕ್ಷ ಮಹಮದ್ ಭಾಷಾ ಅನ್ನಭಾಗ್ಯ ಹಮಾಲಿ ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಯುತ ಕೂಲಿ ಹಾಗೂ ಕಾರ್ಮಿಕ ಕಾಯ್ದೆ ಪ್ರಕಾರ ಸಿಗಬೇಕಾದ ಹಕ್ಕುಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಸಂಬಂದಿಸಿದ ಸಚಿವರಾದ ದಿನೇಶ್ ಗುಂಡುರಾವ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಮಾಲಿ ಕೂಲಿ ಕಾರ್ಮಿಕರ ಕೂಲಿ ಹೆಚ್ಚಳಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಕೂಡಲೆ ಕೂಲಿ ಹೆಚ್ಚಳ ಮಾಡದಿದ್ದರೆ ಅನಿರ್ದಿಷ್ಟಾವಧಿ ಕೆಲಸ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕಾರ್ಮಿಕರಾದ ನಾಗರಾಜು, ಸುಬ್ಬಣ್ಣ, ಶಾಂತಕುಮಾರ್, ದಾದಾಪೀರ್, ಹಮೀದ್, ಅಮೀರ್ ಸಾಬ್, ಕೆ.ಟಿ.ಮಾರುತಿ, ಜಬೀಉಲ್ಲಾ, ಕೆ.ಆರ್. ಶ್ರೀನಿವಾಸ್, ಮಹೇಶ್, ಶಮೀ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

