ತುಮಕೂರು

ಖಾಸಗಿಯವರಿಗೆ ವೈದ್ಯಕೀಯ ಕೋರ್ಸ್: ಸಮಸ್ಯೆ

Published On :

ಕ.ಪ್ರ.ವಾರ್ತೆ , ಕುಣಿಗಲ್ , ಜ.10
ಉನ್ನತ ವೃತ್ತಿ ಶಿಕ್ಷಣಗಳಾದ ವೈದ್ಯಕೀಯ, ವಿವಿಧ ಎಂಜಿನಿಯರಿಂಗ್ ಕೋರ್ಸ್‌ಗಳು, ಖಾಸಗಿ ಬಂಡವಾಳಶಾಹಿ ಕೈಗೆ ಸಿಕ್ಕು, ಸರ್ಕಾರಕ್ಕೆ ಸವಾಲಾಗುವಂತೆ ನಡೆದುಕೊಳ್ಳುತ್ತಿರುವುದು ಮುಂದಿನ ದಿನಗಳಲ್ಲಿ ಸಮಾಜದಲ್ಲಿ
ಗಂಭೀರ ಸಮಸ್ಯೆ ಉಂಟು ಮಾಡಿ, ಸಾಮಾಜಿಕ ಶೈಕ್ಷಣಿಕ ಅಸಮತೋಲನಕ್ಕೆ ಕಾರಣವಾಗಲಿದೆ ಎಂದು ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ ತಿಳಿಸಿದರು.
ಶುಕ್ರವಾರ, ಪಟ್ಟಣದ ಬಿಜಿಎಸ್ ಪ.ಪೂ.ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಮಾವೇಶ ಹಾಗೂ ಪಠ್ಯಾಧಾರಿತ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ,ಪ್ರೌಢಶಾಲಾ ಹಂತದ ವೃತ್ತಿ ಶಿಕ್ಷಕರು ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ ಶಿಕ್ಷಕರ ವೃತ್ತಿಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದಾರೆ. ಶಿಕ್ಷಣ ಬೌದ್ಧಿಕ ವಿಕಸನಕ್ಕೆ  ಕಾರಣವಾದರೆ, ವೃತ್ತಿಶಿಕ್ಷಣ ವಿದ್ಯಾರ್ಥಿ ಜೀವನ ನಿರ್ವಹಣೆಗೆ ಪೂರಕವಾದ ವೃತ್ತಿಕೌಶಲ್ಯತೆಗೆ ಸಹಕಾರಿಯಾಗುತ್ತದೆ ಎಂದರು.
ಆದರೆ, ಉನ್ನತ ವೃತ್ತಿ ಶಿಕ್ಷಣ ವಿಷಯಗಳನ್ನು ಬೋಧಿಸುವ ಬಹುತೇಕ ಕಾಲೇಜುಗಳು ಇಂದು ಖಾಸಗಿ ಬಂಡವಾಳಶಾಹಿಗಳ ಕೈಗೆ ಸಿಕ್ಕು, ಸರ್ಕಾರದ ಹಿಡಿತಕ್ಕೂ ಬಾರದೆ ತಮ್ಮದೇ ಆದ ಆಡಳಿತ ವ್ಯವಸ್ಥೆ ಜಾರಿಗೊಳಿಸುವ ಸ್ಥಿತಿಗೆ ಬಂದಿರುವುದು ನಿಜಕ್ಕೂ ಖೇದಕರ. ಈ ವ್ಯವಸ್ಥೆಯಿಂದಾಗಿ ಮುಂದಿನ ದಿನಗಳಲ್ಲಿ ಪಟ್ಟಣ, ಗ್ರಾಮಾಂತರ ಹಾಗೂ ನಗರ ಪ್ರದೇಶದ ಶಿಕ್ಷಣಗಳಲ್ಲಿ ತಾರತಮ್ಯ ಉಂಟಾಗಿ ಉಳ್ಳವರಿಗೊಂದು ಶಿಕ್ಷಣ, ಬಡವರಿಗೊಂದು ರೀತಿಯ ಶಿಕ್ಷಣ ದೊರೆತು ಸಾಮಾಜಿಕ ಶಿಕ್ಷಣ ವ್ಯವಸ್ಥೆ ಬುಡಮೇಲಾಗಿ ಹಲವು ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ. ಸರ್ಕಾರ ಎಚ್ಚೆತ್ತು, ಶಿಕ್ಷಣ ಕ್ಷೇತ್ರದಲ್ಲಿನ ಬಂಡವಾಳಶಾಹಿಗಳ ವ್ಯಾಪಾರೀಕರಣ ನೀತಿಗೆ ಕಡಿವಾಣ ಹಾಕಬೇಕೆಂದರು.
ಬದ್ಧತೆಯಿಂದ ಶ್ರಮಿಸಿ: ಪ್ರಾಸ್ತಾವಿಕ ಭಾಷಣ ಮಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ತುಮಕೂರು ದಕ್ಷಿಣ ಜಿಲ್ಲೆಯ ಡಿಡಿಪಿಐ ಈಶ್ವರಪ್ಪ, ರಾಜ್ಯದಲ್ಲೆ ಶಿಕ್ಷಣನಗರಿ ಎಂದು ಖ್ಯಾತವಾಗಿರುವ ತುಮಕೂರು ಜಿಲ್ಲೆಯ ಶೇಕಡಾ ನೂರರಷ್ಟು ಸಾಕ್ಷರ ಪ್ರಗತಿಗೆ ಶಿಕ್ಷಕರು ಬದ್ಧತೆಯಿಂದ ಶ್ರಮಿಸಬೇಕಿದೆ. ಶಿಕ್ಷಕರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ, ತಮ್ಮ ಪಾಲಿನ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸಿ, ಉತ್ತಮ ಶಿಕ್ಷಣ ಕೂಡುವ ನಿಟ್ಟಿನಲ್ಲಿ ಪರಿಣಾಮಕಾರಿ ಕೆಲಸ ನಿರ್ವಹಿಸಬೇಕೆಂದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಡಿ.ಕೃಷ್ಣಕುಮಾರ್ ಕಾರ್ಯಕ್ರಮ ಉದ್ಘಾಟಿಸಿದ್ದು, ತಹಸೀಲ್ದಾರ್ ಪುಟ್ಟನರಸಯ್ಯ, ಶಿಕ್ಷಣಾಧಿಕಾರಿ ವಿ.ಜಿ.ಲೋಕೇಶ್, ವಿಷಯ ನಿರೀಕ್ಷಕರಾದ ರಾಜಣ್ಣ, ರೂಪಾ, ಮುನಿಯಪ್ಪ,ಬಿಇಒ ಸಿದ್ದಯ್ಯ, ತಾಲೂಕು ಕಸಾಪ ಅಧ್ಯಕ್ಷ ದಿನೇಶಕುಮಾರ, ಜಿಲ್ಲಾವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಪದಾಧಿಕಾರಿಗಳಾದ ಜಯಣ್ಣ, ಶಿವಾನಂದ, ತಾಲೂಕು ಸಂಘದ ಜಿಡಿ ಗಂಗಾಧರ, ಮಂಜುನಾಥ, ಮಹಾದೇವಸ್ವಾಮಿ, ಪ್ರಮುಖರಾದ ಗವಿಗೌಡ, ಗೋಪಾಲಕೃಷ್ಣ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಡಿ.ಕೃಷ್ಣ, ಬಿಜಿಎಸ್ ಕಾಲೇಜು ಪ್ರಾಚಾರ್ಯ ಚೌಡಪ್ಪ ಇತರರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ತಾಲೂಕಿನ ಹಲವು ಶಾಲೆಗಳಿಂದ ಪಠ್ಯಾಧಾರಿತ ವಿವಿಧ ವಸ್ತುಗಳ, ಪರಿಕರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.