ಗಂಗಾಕಲ್ಯಾಣ ಯೋಜನೆ: ಕಳಪೆ ಸಾಮಗ್ರಿ ಸರಬರಾಜು
ಚಿಕ್ಕನಾಯಕನಹಳ್ಳಿ: ಪುರಸಭೆಯ 22.25ರ ಅನುದಾನದಲ್ಲಿ ಪರಿಶಿಷ್ಟರಿಗೆ ವಿತರಿಸಲು ಖರೀದಿಸಿದ ಹೊಲಿಗೆ ಯಂತ್ರಗಳು ಉಗ್ರಾಣದಲ್ಲಿ ತುಕ್ಕುಹಿಡಿದು ಹಾಳಾಗುತ್ತಿದ್ದರೂ ಪುರಸಭೆಯ ಆಡಳಿತ ಅವುಗಳನ್ನು ವಿತರಿಸಲು ಕ್ರಮಕೈಗೊಂಡಿಲ್ಲದಿರುವುದರ ಬಗ್ಗೆ ಪರಿಶಿಷ್ಟಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ರಾಜ್ಯ ಮಾದಿಗ ದಂಡೋರ ಸಮಿತಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನ ಬಸವಯ್ಯನವರು ಲಕ್ಷಾಂತರ ರು.ಗಳ ಹೊಲಿಗೆ ಯಂತ್ರಗಳನ್ನು ಖರೀದಿಸಿ ಈಗಾಗಲೇ ನಾಲ್ಕಾರು ವರ್ಷಗಳಾಗಿವೆ. ಬಳಕೆಯಾಗದ ಕಾರಣ ಅವು ತುಕ್ಕು ಹಿಡಿದು ಹಾಳಾಗುತ್ತಿದ್ದರೂ ಪುರಸಭೆ ವಿತರಿಸಲು ಕ್ರಮಕೈಗೊಳ್ಳದಿರುವುದರ ಹಿಂದೆ ದಲಿತರ ನಿರ್ಲಕ್ಷ್ಯ ಅಡಗಿದೆ ಎಂದು ಟೀಕಿಸಿದರು. ಇದಲ್ಲದೆ ಸರ್ಕಾರ ಎಸ್ಸಿ ಮತ್ತು ಎಸ್ಟಿಗಳಿಗೆ ಗಂಗಾಕಲ್ಯಾಣ ಯೋಜನೆಯಡಿ ಕೃಷಿ ಪಂಪ್ಸೆಟ್ ಉಚಿತವಾಗಿ ನೀಡುತ್ತಿದ್ದು, ಅವು ಕಳಪೆಯಾಗಿವೆ. ಅವರು ಸರಬರಾಜು ಮಾಡುವ ಕಾಲರ್ಗಳನ್ನು ಅಳವಡಿಸಿದರೆ ಪಂಪ್ ಸಹಿತ ಮೋಟಾರು ಕಳಚಿ ಬೀಳುವುದು ಗ್ಯಾರಂಟಿ, ಇದಕ್ಕೆ ಹೊಣೆಗಾರರು ಯಾರು ಎಂದು ಅವರು ಪ್ರಶ್ನಿಸಿದರು.
ದುರುಪಯೋಗ ಇದಕ್ಕೆ ದನಿಗೂಡಿಸಿದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ರಘುನಾಥ್ ಇದು ರಾಜ್ಯ ಮಟ್ಟದ ದಂಧೆ, ಸರ್ಕಾರದ ಮಟ್ಟದಲ್ಲಿ ಟೆಂಡರ್ ಕರೆದು ಹೆಚ್ಚು ಕಮಿಷನ್ ನೀಡಿದವರಿಗೆ ಟೆಂಡರ್ ನೀಡುವುದರಿಂದ ಈ ರೀತಿ ಅನ್ಯಾಯವಾಗುತ್ತದೆ ಎಂದರು. ಈ ಕುರಿತು ಸಮಾಜಕಲ್ಯಾಣ ಸಚಿವರನ್ನೇ ಪ್ರಶ್ನಿಸಬೇಕಾಗುತ್ತದೆ ಎಂದರು.
ತನಿಖೆ ಮಾಡಿ: ಗ್ರಾಮಪಂಚಾಯ್ತಿ ಮಟ್ಟದಲ್ಲಿ ಅಸ್ಪೃಶ್ಯತಾ ಆಚರಣೆ ನಿವಾರಣೆಗಾಗಿ ಸರ್ಕಾರ ಕೊಡುವ 25ಸಾವಿರ ಅನುದಾನವನ್ನು ಗ್ರಾಮಪಂಚಾಯ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಇದನ್ನು ಇಓ ಅವರು ತನಿಖೆ ಮಾಡಿ ಅಂತಹ ಗ್ರಾಪಂಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಲಿಂಗದೇವರು ಆಗ್ರಹಿಸಿದರು.
ದಲಿತ ಮುಖಂಡ ಮಲ್ಲಿಕಾರ್ಜುನ ಮಾತನಾಡಿ ಅಂಬೇಡ್ಕರ್ ಕಾಲೋನಿಯಲ್ಲಿರುವ ಅಂಗನವಾಡಿಗಳಿಗೆ ದಲಿತರಲ್ಲದ ಹೊರಗಿನವರನ್ನು ಶಿಕ್ಷಕಿ ಮತ್ತು ಸಹಾಯಕಿಯರನ್ನು ನೇಮಕ ಮಾಡಿ ದಲಿತರಿಗೆ ಅನ್ಯಾಯವೆಸಗಿದ್ದಾರೆ. ಈ ತಾರತಮ್ಯ ನಿಲ್ಲಿಸಿ ಎಂದರು. ಮೀನುಗಾರಿಕೆ ಇಲಾಖೆಯಲ್ಲಿ ತಾಲೂಕಿನ ಪರಿಶಿಷ್ಟರಿಗೆ 250 ಮನೆಗಳನ್ನು ಕೊಡುವ ಅವಕಾಶವಿದ್ದರೂ ಇಲಾಖೆಯ ನಿರ್ಲಕ್ಷ್ಯದಿಂದ ಒಬ್ಬರಿಗೂ ಮನೆ ಮಂಜೂರಾಗಿಲ್ಲ. ಪ್ರತಿ ವರ್ಷ 25 ಮನೆಗಳನ್ನು ನೀಡುವ ಅವಕಾಶವಿದೆ ಎಂದರು. ಸಾರ್ವಜನಿಕರ ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಸಲು ದಲಿತರ ಜಮೀನನ್ನು ಕಿತ್ತುಕೊಂಡು ದಬ್ಬಾಳಿಕೆ ನಡೆಸಲಾಗುತ್ತದೆ, ಇದನ್ನು ನಿಲ್ಲಿಸಿ ಎಂದು ಅವರು ಆಗ್ರಹಿಸಿದರು.
ತಾರತಮ್ಯ: ತಾಲೂಕಿನ ನೀರುಗಂಟಿಗಳು ರಾಜಕೀಯ ಪುಡಾರಿಗಳಂತೆ ವರ್ತಿಸುತ್ತಾರೆ. ದಲಿತ ಕಾಲೊನಿಗಳಿಗೆ ನೀರು ಬಿಡುವಲ್ಲಿ ತಾರತಮ್ಯ ಮಾಡುತ್ತಾರೆ. ತಾಲೂಕಿನಲ್ಲಿ ಹಲವಾರು ಮುಜುರಾಯಿ ದೇವಾಲಯಗಳಿದ್ದು ಅವುಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ತಾಲೂಕು ಆಡಳಿತ ಈ ಬಗ್ಗೆ ಕ್ರಮಕೈಗೊಂಡು ದಲಿತರಿಗೆ ಪ್ರವೇಶವಕಾಶ ಕಲ್ಪಿಸಿ. ಮಾದಿಗ ಜನಾಂಗವನ್ನು ದೇವಾಲಯ ಧರ್ಮದರ್ಶಿ ಸಮಿತಿಗಳಿಗೆ ನೇಮಿಸಿ, ಆಗ ಈ ಅನ್ಯಾಯ ನಿಲ್ಲುತ್ತದೆ ಎಂದರು.
ದಲಿತ ಮುಖಂಡ ಲಿಂಗದೇವರು ಒಳಮೀಸಲಾತಿಗಾಗಿ ಸದಾಶಿವ ವರದಿ ಜಾರಿಗೆ ಸರ್ಕಾರವನ್ನು ಒತ್ತಾಯಿಸುವ ಮನವಿಯನ್ನು ಇದೇ ಸಂದರ್ಭದಲ್ಲಿ ಸಭೆಗೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್ ಕಾಮಾಕ್ಷಮ್ಮ ವಹಿಸಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ್, ವೃತ್ತನಿರೀಕ್ಷಕ ಜಯರಾಮಯ್ಯ, ಜಿಪಂ ಸದಸ್ಯೆ ಲೋಹಿತಾಬಾಯಿ, ತಾಪಂ ಸದಸ್ಯೆ ಚೇತನ ಗಂಗಾಧರ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

