ಕಡೆಗೂ ವಿವಿಗೆ ಜಾಗ ಸಿಗುವ ಸುಳಿವು
ತುಮಕೂರು: ತುಮಕೂರು ಸಮೀಪದ ಬಿದರೆಕಟ್ಟೆ ಕಾವಲ್ನಲ್ಲಿ ತುಮಕೂರು ವಿವಿಗೆ ಭರ್ತಿ 240 ಎಕರೆ ಜಾಗ ಸಿಗುವ ಸುಳಿವು ಸಿಕ್ಕಿದೆ.
ತುಮಕೂರು ವಿವಿ ಆರಂಭವಾದಾಗಿನಿಂದ ಜಾಗದ ಸಮಸ್ಯೆ ಎದುರಿಸುತ್ತಿದ್ದು ಈಗ ಜಾಗ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸಿದೆ.
ವಿವಿಗೆ ಜಾಗ ನೀಡಲು ಸಣ್ಣ ತಕರಾರು ತೆಗೆದಿದ್ದ ಅರಣ್ಯ ಇಲಾಖೆಯೇ ಈಗ ಜಾಗ ನೀಡಲು ಅಭ್ಯಂತರವಿಲ್ಲ ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ.
ಕೇಂದ್ರ ಸರ್ಕಾರ ಕೂಡ ತುಮಕೂರು ವಿವಿಗೆ ಜಾಗ ಮಂಜೂರು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆಗಸ್ಟ್ 7, 2013 ರಂದು ತುಮಕೂರು ವಿವಿಗೆ ಜಾಗ ನೀಡುವ ಸಂಬಂಧ ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ತುಮಕೂರು ವಿವಿ ಕುಲಪತಿ, ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ಸಂಸದರ ಸಭೆ ಕರೆಯಲಾಗಿತ್ತು. ನಂತರ ಸಭೆಯ ನಡಾವಳಿಕೆಗಳು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕಳುಹಿಸಲಾಯಿತು. ಅಲ್ಲಿಂದ ಅರಣ್ಯ ಇಲಾಖೆಗೆ ಪ್ರಸ್ತಾವನೆ ರವಾನಿಸಲಾಗಿತ್ತು.
ಈಗ ಅರಣ್ಯ ಇಲಾಖೆ ಜಾಗ ನೀಡಲು ತಮ್ಮದೇನೂ ತಕರಾರಿಲ್ಲವೆಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅತಿ ಶೀಘ್ರದಲ್ಲೇ ತುಮಕೂರು ವಿವಿಗೆ 240 ಎಕರೆ ಜಾಗ ಮಂಜೂರು ಆಗುವ ಲಕ್ಷಣಗಳು ಗೋಚರಿಸಿವೆ.
ವಿವಾದ: ತುಮಕೂರು ವಿವಿ ವಿವಾದದಿಂದಲೇ ಹುಟ್ಟಿಕೊಂಡಿತ್ತು. ಡಾ. ಜಿ. ಪರಮೇಶ್ವರ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ತುಮಕೂರಿಗೆ ವಿವಿ ಮಂಜೂರು ಮಾಡಿದ್ದರು. ಜಿಲ್ಲೆಗೊಂದು ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ತುಮಕೂರು ಸಮೀಪದ ದೇವರಾಯನದುರ್ಗದಲ್ಲಿ ಜಾಗ ಸಹ ನೀಡಲಾಗಿತ್ತು. ಆದರೆ ಪರಿಸರವಾದಿಗಳು ಕೋರ್ಟ್ ಮೊರೆ ಹೋಗಿದ್ದರಿಂದ ಈ ಜಾಗ ನೆನಗುದಿಗೆ ಬಿತ್ತು. ತುಮಕೂರು ಎಂ.ಜಿ. ರಸ್ತೆಯ ಅಂಬೇಡ್ಕರ್ ಭವನದಲ್ಲಿ ವಿವಿ ಆಡಳಿತ ಕಚೇರಿ ಮಾಡಲಾಗಿತ್ತು. ಪ್ರಥಮ ಕುಲಪತಿಯಾಗಿ ಡಾ. ಓ. ಅನಂತರಾಮಯ್ಯ ನೇಮಕಗೊಂಡರು. ಅವರ ಕಾಲದಲ್ಲಿ ಬೇರೆ ವಿವಿಗೆ ಜಾಗ ಹುಡುಕಾಟ ನಡೆಸಲಾಯಿತು. ಕೊರಟಗೆರೆ, ಮಲ್ಲಸಂದ್ರ ಸುತ್ತಮುತ್ತ ಜಾಗ ನೀಡಲಾಗಿತ್ತು. ಅಲ್ಲದೇ ಬಿದರೆಕಟ್ಟೆ ಕಾವಲ್ನಲ್ಲೂ ಕೂಡ ಜಾಗ ನೋಡಲಾಗಿತ್ತು. ಆದರೆ ಅರಣ್ಯ ಇಲಾಖೆಯಿಂದ ತಕರಾರು ಬಂದಿದ್ದರಿಂದ ನೆನೆಗುದಿಗೆ ಬಿದ್ದಿತ್ತು. ನಂತರ ಕುಲಪತಿಯಾಗಿ ಬಂದ ಡಾ. ಎಸ್.ಸಿ. ಶರ್ಮಾ ಅವರು ತುಮಕೂರು ವಿವಿಗೆ ಸಂಯೋಜನಗೊಂಡ ಸರ್ಕಾರಿ ವಿಜ್ಞಾನ ಮತ್ತು ಕಲಾ ಕಾಲೇಜಿನಲ್ಲಿ ತುಮಕೂರು ವಿವಿ ಕ್ಯಾಂಪಸ್ ಮಾಡಿಕೊಂಡು ದಾನಿಗಳ ನೆರವಿನೊಂದಿಗೆ ಕಟ್ಟಡ ಕೂಡ ಕಟ್ಟಿದರು. ಆದರೆ ಜಾಗದ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಈಗ ಶರ್ಮಾ ಕೂಡ ನಿವೃತ್ತಿಯಾಗಿ ಆ ಜಾಗಕ್ಕೆ ಡಾ. ರಾಜಾಸಾಬ್ ಬಂದಿದ್ದಾರೆ. ಈಗಾಗಲೇ ಅರಣ್ಯ ಇಲಾಖೆಯವರು ಪ್ರಸ್ತಾವನೆಯನ್ನು ಕಳುಹಿಸಿದ್ದು ಶೀಘ್ರವೇ ವಿವೆಗೆ ಜಾಗ ಸಿಗುವ ಲಕ್ಷಣಗಳು ಇದೆ.
ಇಂದು ವಿವಿ ಘಟಿಕೋತ್ಸವ
ತುಮಕೂರು ವಿವಿಯ ಏಳನೇ ಘಟಿಕೋತ್ಸವ ಜ. 12 ರಂದು ವಿವಿಯ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ತುಮಕೂರು ವಿವಿ ಕುಲಾಧಿಪತಿಗಳು ಹಾಗೂ ರಾಜ್ಯಪಾಲರಾದ ಡಾ. ಎಚ್.ಆರ್. ಭಾರದ್ವಾಜ್ ಅಧ್ಯಕ್ಷತೆ ವಹಿಸಲಿದ್ದು ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು ವಿವಿ ಸಹ ಕುಲಾಧಿಪತಿ ಆರ್.ವಿ. ದೇಶಪಾಂಡೆ ಉಪಸ್ಥಿತರಿರುವರು. ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಪಿ. ಬಲರಾಮ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತುಮಕೂರು ವಿವಿ ಕುಲಪತಿ ಪ್ರೊ. ರಾಜಾಸಾಬ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
-ಉಗಮ ಶ್ರೀನಿವಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

