ತುಮಕೂರು

ಸ.ಪ್ರ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಮಾವೇಶ

Published On :

ತುಮಕೂರು: ತುಮಕೂರು ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಮೊದಲ ಜಿಲ್ಲಾ  ಸಮಾವೇಶ ಇದೇ ತಿಂಗಳ 14 ರಂದು ಗುಬ್ಬಿ ವೀರಣ್ಣ ರಂಗತಾಲೀಮು ಕೇಂದ್ರದಲ್ಲಿ ಆಯೋಜಿಸಿದ್ದು ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ  ಟಿ.ಬಿ.ಜಯಚಂದ್ರ ಆಗಮಿಸಲಿದ್ದಾರೆ. ಹಾಗೆಯೇ ವಿಧಾನ ಪರಿಷತ್ ಸದಸ್ಯ ಡಾ. ಹುಲಿನಾಯ್ಕರ್, ಡಾ.ಶಿವಯೋಗಿಸ್ವಾವು, ಗುಬ್ಬಿ ಶಾಸಕ ಶ್ರೀನಿವಾಸು, ಕೊರಟಗೆರೆ ಶಾಸಕ ಸುಧಾಕರ್ ಲಾಲ್ , ಮದುಗಿರಿ ಶಾಸಕ ಕೆ.ಎನ್. ರಾಜಣ್ಣ, ಚೌಡರೆಡ್ಡಿ, ಇಸ್ಮತ್ ಉಲ್ಲ ಖಾನ್, ಕಾಮರಾಜು, ಪ್ರಗತಿಪರ ಚಿಂತಕ ದೊರೈರಾಜು, ತುಮಕೂರು ವಿಶ್ವವಿದ್ಯಾನಿಲಯ ಶಿಕ್ಷಕರ ಸಂಘದ ಅಧ್ಯಕ್ಷ  ಜಯಪ್ರಕಾಶ್, ಡಿ.ವೈ.ಎಫ್.ವೈ.ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮೂರ್ತಿ, ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ, ಅತಿಥಿ ಉಪನ್ಯಾಸಕರ ರಾಜ್ಯ ಸಂಘದ ಉಪಾಧ್ಯಕ್ಷ ಲೋಕೇಶ್ ಪಿ.ಸಿ, ಅತಿಥಿ ಉಪನ್ಯಾಸಕರ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಮಾನ್ಪಡೆ ಆಗಮಿಸಲಿದ್ದಾರೆ.

ಇಂದು ಕಟ್ಟಡ ಕಾರ್ಮಿಕರ ಸಮಾವೇಶ
ತುಮಕೂರು:  ತುಮಕೂರು ಸಮೀಪದ ರಂಗಾಪುರದ ಬಾಲವಿನಾಯಕ ದೇವಸ್ಥಾನದ ಎದುರು, ರಾಷ್ಟ್ರೀಯ ಹೆದ್ದಾರಿ 4 ರ ರಂಗಾಪುರದಲ್ಲಿ ಜ. 12 ರಂದು ಭಾನುವಾರ ಬೆಳಗ್ಗೆ 8.30 ಗಂಟೆಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ಕಟ್ಟಡ ಕಾರ್ಮಿಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತ ರೈತ ಸಂಘದ ಬಿ. ಉಮೇಶ್ ತಿಳಿಸಿದ್ದಾರೆ. ಈ ಸಮಾವೇಶಕ್ಕೆ ಜಿಲ್ಲಾಧ್ಯಕ್ಷ ಬಿ. ಉಮೇಶ್,  ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ, ಸಂಚಾಲಕ ಬಿ.ಟಿ. ಚಿಕ್ಕಣ್ಣ ಊರುಕೆರೆ ಘಟಕದ ಅಧ್ಯಕ್ಷ ರಂಗಯ್ಯ ಕಾರ್ಯದರ್ಶಿ ರವೀಶ್, ಜಿಲ್ಲಾ ಮುಖಂಡರಾದ ಶ್ರೀಧರ್, ರಾಮಚಂದ್ರ, ಲಕ್ಷ್ಮಣ್ ಮುಂತಾದವರು ಭಾಗವಹಿಸಲಿದ್ದಾರೆ. ಈ ಸಮಾವೇಶಕ್ಕೆ, ರಂಗಾಪುರ, ದಾಸಮುದ್ದಯ್ಯನಪಾಳ್ಯ, ಲಿಂಗಾಪುರ, ಊರುಕೆರೆ, ನರಸಾಪುರ, ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಹಾಗೂ ಬಡಾವಣೆಯ ಕಟ್ಟಡ ಕಾರ್ಮಿಕರು ಭಾಗವಹಿಸಬೇಕೆಂದು ಸಂಘಟನೆಯ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿಕೊಂಡಿದೆ.

ಅಯ್ಯಪ್ಪಸ್ವಾಮಿಗೆ ತುಪ್ಪದ ಅಭಿಷೇಕ
ತುಮಕೂರು: ತುಮಕೂರಿನ ಚಿಕ್ಕಪೇಟೆ ಗಾರ್ಡನ್ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ವತಿಯಿಂದ ಮಕರ ಜ್ಯೋತಿ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ  ಜ. 12 ಭಾನುವಾರ ಮಹಾ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಧ್ಯಾಹ್ನ 1 ಗಂಟೆಗೆ ಅನ್ನದಾನವಿದೆ. 14 ರಂದು ಮಂಗಳವಾರ ಮಧ್ಯಾಹ್ನ 12.30 ರಿಂದ 1.15 ರವರೆಗೆ ಶ್ರೀ ಸ್ವಾಮಿಗೆ ತುಪ್ಪದ ಅಭಿಷೇಕ, ಪಂಚಾಮೃತ ಅಭಿಷೇಕ ಮತ್ತು ಸಂಜೆ 6.45 ಕ್ಕೆ ಜ್ಯೋತಿ ವೀಕ್ಷಣೆಯೊಂದಿಗೆ ಅಯ್ಯಪ್ಪಸ್ವಾಮಿಗೆ ವಜ್ರಖಚಿತ ಸ್ವರ್ಣ ಕಿರೀಟ ಧಾರಣೆಯ ವಿಶೇಷ ಅಲಂಕಾರ ಏರ್ಪಡಿಸಲಾಗಿದೆ. ಅದೇ ದಿನ ಸಂಜೆ 7 ಗಂಟೆಗೆ ಚೆನ್ನೈನ ಕಲೈಮಾಮಣಿ, ಇರೈ ಇಸೈ ತೆಂಡ್ರಲ್  ಬಿರುದಾಂಕಿತ ಆಸ್ಥಾನ್ ವಿದ್ವಾಂಸರಾದ ಕೆ. ವೀರಮಣಿರಾಜು ಅವರಿಂದ ಅಯ್ಯಪ್ಪಸ್ವಾಮಿಯ ಭಕ್ತಿಗೀತೆ ಗಾಯನವನ್ನು ಏರ್ಪಡಿಸಲಾಗಿದೆ. 15 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಪೂಜೆ ಹಾಗೂ ಪ್ರಸಾದದ ವ್ಯವಸ್ಥೆಯನ್ನು ಟ್ರಸ್ಟ್‌ನ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮ
ತುಮಕೂರು: ತುಮಕೂರು ಸರ್ಕಾರಿ ಪ.ಪೂ. ಕಾಲೇಜಿನ 2013-14ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಸಮಾರಂಭ ಸಮಾರಂಭ ನಡೆಯಿತು. ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆ ನಿವಾರಿಸಿಕೊಂಡು ಬಡತನದಲ್ಲಿಯೇ ಅಪ್ರತಿಮೆ ಸಾಧನೆ ಮಾಡಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವ ಯಂತ್ರಗಳಾಗದೇ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಡಾ. ರಫೀಕ್ ಅಹಮದ್ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಬೇಕು. ನಮ್ಮಲ್ಲಿ ಸಿಗುವಂತಹ ಸೌಲಭ್ಯವನ್ನು ಬಳಸಿಕೊಂಡು ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಗರಪಾಲಿಕೆ ಮಹಾಪೌರರಾದ ಗೀತಾ ರುದ್ರೇಶ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ  ಭವಿಷ್ಯವನ್ನು ರೂಪಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ನುಡಿದರು.  

ಎಐಡಿಎಸ್‌ಓ, ಎಐಡಿವೈಓಯಿಂದ
ಪ್ರತಿಭಟನಾ ರ್ಯಾಲಿ
ತುಮಕೂರು: ಐಟಿಐನಲ್ಲಿ ತರಬೇತಿ ವಿರೋಧಿ ಸೆಮಿಸ್ಟರ್  ಪದ್ಧತಿ ವಿರೋಧಿಸಿ ಎಐಡಿಎಸ್‌ಓ ಮತ್ತು  ಎಐಡಿವೈಓ ವತಿಯಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಐಟಿಐ ವಿದ್ಯಾಸಂಸ್ಥೆಗಳಲ್ಲಿ ಸರಿಯಾದ ಸಮಾಲೋಚನೆ ನಡೆಸದೇ ದಿಢೀರನೆ ಹೇರಿರುವ ಅವೈಜ್ಞಾನಿಕ ಸೆಮಿಸ್ಟೆರ್ ಪದ್ಧತಿಯನ್ನು ವಿರೋಧಿಸಿ ಈ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಉಪಾಧ್ಯಕ್ಷ ಕಾಮ್ರೇಡ್ ಎನ್. ರವಿ ಮಾತನಾಡಿ ಕೋರ್ಸ್‌ನ ಪ್ರವೇಶಾತಿ ಸಂದರ್ಭದಲ್ಲಿ ಸೆಮಿಸ್ಟರ್ ಪದ್ಧತಿ ಜಾರಿಯ ಬಗ್ಗೆ ಯಾರಿಗೂ ತಿಳಿಸದೇ ತರಗತಿಗಳು ಪ್ರಾರಂಭವಾದ ಕೆಲ ತಿಂಗಳ ನಂತರ ಏಕಾಏಕಿ ಹೇರಲಾಗಿದೆ ಎಂದು ಆರೋಪಿಸಿದರು. ಶಿಕ್ಷಕರಿಗೆ ತ ರಬೇತಿ ನೀಡುವುದಿರಲಿ, ಪಠ್ಯಕ್ರಮ ಬದಲಾಗುವ ಬಗ್ಗೆಯೂ ಯಾವುದೇ ಮುನ್ಸೂಚನೆ ನೀಡದೆ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಿರುವುದು ಖಂಡನೀಯ ಎಂದು ತಿಳಿಸಿದರು. ಈ ಹೋರಾಟವನ್ನು ಇನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವ ಎಚ್ಚರಿಕೆ ಸಹ ನೀಡಿದರು. ಪ್ರತಿಭಟನೆಯಲ್ಲಿ ಎಐಎಂಎಸ್‌ಎಸ್ ಜಿಲ್ಲಾ ಸಂಘಟಕಿ ಎಂ.ವಿ. ಕಲ್ಯಾಣಿ, ಮಾದಪ್ಪ, ವೆಂಕಟೇಶ್, ಪುಷ್ಪಾವತಿ ಪಾಲ್ಗೊಂಡಿದ್ದರು.

ಜಯಕರ್ನಾಟಕಕ್ಕೆ ಪದಾಧಿಕಾರಿಗಳ ನೇಮಕ
ತುಮಕೂರು: ಜಯ ಕರ್ನಾಟಕ ಮಧುಗಿರಿ ನಗರ ಹಾಗೂ ಮಧುಗಿರಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ  ನೇಮಿಸಲಾಯಿತು. ನಗರದ ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ಜಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ದೀಪಕ್, ಜಿಲ್ಲಾಧ್ಯಕ್ಷ ರಂಜನ್, ಜಿಲ್ಲಾ ಕಾರ್ಯಾಧ್ಯಕ್ಷ ಸೋಮಶೇಖರ್ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ಆಯ್ಕೆಮಾಡಿದರು ಮಧುಗಿರಿ ತಾಲೂಕು ಗೌರವಾಧ್ಯಕ್ಷರಾಗಿ ಎಂ. ಆರ್. ಜಗನ್ನಾಥ್, ಅಧ್ಯಕ್ಷರಾಗಿ ಚಂದನ್, ಕಾರ್ಯಾಧ್ಯಕ್ಷರಾಗಿ ಅಶ್ವತ್ಥನಾರಾಯಣ್, ಉಪಾಧ್ಯಕ್ಷರಾಗಿ ಮಿಲ್ ರಾಜಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಪುನಿತ್ ಸಂಘಟನಾ ಕಾರ್ಯದರ್ಶಿಯಾಗಿ ಮಹೇಶ್, ರಾಘವೇಂದ್ರ ಮಧುಗಿರಿ ನಗರ ಘಟಕದ ಗೌರವಾಧ್ಯಕ್ಷರಾಗಿ ಮಂಜುನಾಥ್, ಅಧ್ಯಕ್ಷರಾಗಿ ಆನಂದ ಕುಮಾರ್, ಕಾರ್ಯಾಧ್ಯಕ್ಷರಾಗಿ ತಿಮ್ಮರಾಜು, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜು ಅವರು ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ಮಕ್ಕಳ ನಾಟಕೋತ್ಸವ
ತುಮಕೂರು: ತುಮಕೂರಿನ ಶ್ರೀ ರಂಗರಂಗ ಹವ್ಯಾಸಿ ಕಲಾವೃಂದವು ತನ್ನ  ಬೆಳ್ಳಿ ರಂಗ ಸಂಭ್ರಮ ಆಚರಿಸಲು ಸಜ್ಜಾಗಿದೆ. ಜ. 14 ರಂದು ಬೆಳಿಗ್ಗೆಯಿಂದ ರಾತ್ರಿವರೆಗೂ ಹಕ್ಕಿಗಳ ಕಲರವದಂತೆ ಗಿಜಿಗುಡುವ 14 ವರ್ಷದೊಳಗಿನ ಮಕ್ಕಳಿಗೆ  ಚಿಲಿಪಿಲಿ  28 ನೇ ವರ್ಷದ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವವನ್ನು ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಿದೆ.ಅಂದು ಬೆಳಿಗ್ಗೆ 10-30 ಕ್ಕೆ ತುಮಕೂರು ಜಿಲ್ಲೆ ಮೆಳೆಹಳ್ಳಿಯ ಚಿರಂಜೀವಿ ಕಲಾಸಂಘದ ಮಕ್ಕಳು ಅಭಿನಯಿಸುವ ಜಂಗಮಜೋಗಿ ನಾಟಕ ಅಭಿನಯಿಸುವ ಮೂಲಕವೇ ಆರಂಭಗೊಳ್ಳಲಿದೆ. ಮಧ್ಯಾಹ್ನ 12-30 ಕ್ಕೆ ಅಮೂಲ್ಯ ಆಸ್ತಿ ನಾಟಕ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 11-45 ಕ್ಕೆ ಏವಂ ಏಕಲವ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 4.15 ಗಂಟೆಗೆ ನಾಟಕ ಜಂಟಲ್ ಮ್ಯಾನ್. ಮೂಲ ಮೋಲಿಯರ್‌ದು. ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಿದ್ದಾರೆ ನೀನಾಸಂನ ಸತ್ಯ. ಮೊದಲ ನಾಟಕಕ್ಕೆ ಹತ್ತು ಸಾವಿರ ರು. ನಗದು ಮತ್ತು   ಶಿಕ್ಷಣ ಭೀಷ್ಮ  ಪರ್ಯಾಯ ಪಾರಿತೋಷಕವನ್ನು, ಅತ್ಯುತ್ತಮ ದ್ವಿತೀಯ ನಾಟಕಕ್ಕೆ 7 ಸಾವಿರ ನಗದು ಮತ್ತು ತೃತೀಯ ನಾಟಕಕ್ಕೆ 5 ಸಾವಿರ ರು. ನೀಡಲಾಗುವುದು.

 ಶೋಭಾ, ಸೋಮಣ್ಣಗೆ ಟಿಕೆಟ್ ನೀಡಿ
ತುಮಕೂರು: ಮುಂಬರುವ ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ವಿ. ಸೋಮಣ್ಣ ಅಥವಾ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ಮುಖಂಡ ನೇರಲಗುಡ್ಡಿ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಜಿಲ್ಲಾ ಸಮಿತಿ ಸೊಗಡು ಶಿವಣ್ಣ, ಬಿ.ಸಿ. ನಾಗೇಶ್, ಬಿ. ಸುರೇಶ್‌ಗೌಡ, ಕೆ.ಎಸ್. ಕಿರಣಕುಮಾರ್ ಹಾಗೂ ಎಂ.ಬಿ. ನಂದೀಶ್ ಅವರ ಹೆಸರನ್ನು ಶಿಫಾರಸು ಮಾಡಿ ರಾಜ್ಯ ಸಮಿತಿಗೆ ಕಳುಹಿಸಿದೆ. ಶಿವಣ್ಣ ಅವರು ವಿವಿಧ ತಾಲೂಕುಗಳಲ್ಲಿ ಹಿಂಬಾಲಕರನ್ನು ಬೆಳೆಸಲು ವಿಫಲರಾಗಿದ್ದಾರೆ. ಬರೀ ಯಡಿಯೂರಪ್ಪನವರನ್ನು ಟೀಕಿಸುತ್ತಲೇ ಕಾಲ ಕಳೆದಿದ್ದಾರೆ. ಇನ್ನು ನಾಗೇಶ್, ಬಿ. ಸುರೇಶ್‌ಗೌಡ, ಕೆ.ಎಸ್. ಕಿರಣಕುಮಾರ್ ಅವರೆಲ್ಲಾರೂ ಕೂಡ ಒಂದಲ್ಲಾ ಒಂದು ಕಾರಣಗಳಿಂದ ವಿಫಲರಾಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರು ಮಧ್ಯ ಪ್ರವೇಶಿಸಿ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಅವರನ್ನು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಮನವಿ ಮಾಡಿದ್ದಾರೆ.

ಜೆಡಿಎಸ್‌ನಿಂದ ನಿಂಗಪ್ಪಗೆ ಆಹ್ವಾನ
ತುಮಕೂರು: ಜೆಡಿಎಸ್ ತೊರೆದು ಕೆಜೆಪಿ ಸೇರಿದ್ದ ಮಾಜಿ ಶಾಸಕ ಎಚ್. ನಿಂಗಪ್ಪ ಅವರನ್ನು ಪುನಃ ಪಕ್ಷಕ್ಕೆ ಬರುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಂ. ಕೃಷ್ಣಪ್ಪ ಆಹ್ವಾನ ನೀಡಿದ್ದಾರೆ. ನಿಂಗಪ್ಪ ಅವರ ಮನೆಗೆ ಭೇಟಿ ನೀಡಿದ ಎಂ. ಕೃಷ್ಣಪ್ಪ ಅವರು ಮಾಜಿ ಶಾಸಕ ಎಚ್. ನಿಂಗಪ್ಪನವರ ಮನೆಗೆ  ತೆರಳಿ ಈ ಆಹ್ವಾನ ನೀಡಿದ್ದಾರೆ. ಕಳೆದ 10 ವರ್ಷಗಳ ನಿಂಗಪ್ಪ ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದರು. ಕಳೆದ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ವರಿಷ್ಠರು ನಿಂಗಪ್ಪಗೆ ಬದಲಾಗಿ ಚೆನ್ನಿಗಪ್ಪ ಪುತ್ರ ಗೌರಿಶಂಕರ್‌ಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೆಜೆಪಿ ಸೇರ್ಪಡೆಯಾಗಿದ್ದರು. ಪ್ರಸ್ತುತ ಯಡಿಯೂರಪ್ಪನವರು ಕೆಜೆಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರು ನಿಂಗಪ್ಪನವರ ನಿವಾಸಕ್ಕೆ  ಭೇಟಿ ನೀಡಿ ಪಕ್ಷಕ್ಕೆ ಬರುವಂತೆ ಮಾತುಕತೆ ನಡೆಸಿದರು.

ಕಾಂಗ್ರೆಸ್ ಯುವ ಘಟಕಕ್ಕೆ ಎಂ. ಮೈಲಾರರೆಡ್ಡಿ ಅಧ್ಯಕ್ಷ
ಪಾವಗಡ: ಪಾವಗಡ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿ ಪಾವಗಡ ಎಂ. ಮೈಲಾರರೆಡ್ಡಿ ಮರು ಆಯ್ಕೆಯಾಗಿದ್ದಾರೆ. ಶುಕ್ರವಾರ ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ನಡೆದ ಯುವ ಘಟಕದ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ 58 ಮಂದಿ ಮತ ಚಲಾಯಿಸಿದ ಮೇರೆಗೆ ಈ ಹಿಂದೆ ತಾ.ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿದ್ದ ಎಂ.ಮೈಲಾರರೆಡ್ಡಿ ಯುವ ಘಟಕದ ಅಧ್ಯಕ್ಷರಾಗಿ ಮತ್ತೆ ಮರು ನೇಮಕಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಾನು ಇಂದು ಕಾಂಗ್ರೆಸ್ ಪಕ್ಷದಲ್ಲಿ ಈ ಮಟ್ಟಕೆ ಬೆಳೆಯಲು ಹಾಗೂ  2ನೇ ಅವಧಿಯ ತಾ.ಯುವ ಘಟಕದ ಅಧ್ಯಕ್ಷನಾಗಿ ಆಯ್ಕೆಯಾಗಲು ಮಾಜಿ ಸಚಿವ ವೆಂಕಟರವಣಪ್ಪ, ತಾ. ಕಾಂಗ್ರೆಸ್ ಗ್ರಾಮೀಣ  ಅಧ್ಯಕ್ಷ ಎಚ್.ವಿ. ವೆಂಕಟೇಶ್, ತಾ.ಅಧ್ಯಕ್ಷ ಜಿ.ಎಸ್.ಡಿ. ಸುದೇಶ್‌ಬಾಬು ಕಾರಣರೆಂದು ಅವರನ್ನು ಸ್ಮರಿಸಿದರು. ಈ ಹಿಂದಿನಂತೆ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸದೃಢ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ತಿಳಿಸಿದರು.

ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಸೇವಾ ಮನೋಭಾವ ಅಪರೂಪ
ಕುಣಿಗಲ್: ವ್ಯಾಪಾರೀಕರಣವಾಗುತ್ತಿರುವ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಸೇವಾ ಮನೋಭಾವದಿಂದ ದುಡಿಯುವ ಉಪನ್ಯಾಸಕರು ಅಪರೂಪವಾಗುತ್ತಿದ್ದಾರೆಂದು ತುಮಕೂರು ರಾಮಕೃಷ್ಣಾಶ್ರಮದ  ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಟ್ಯುಟೋರಿಯಲ್ಸ್‌ನ ರಜಮಹೋತ್ಸವ ಅಂಗವಾಗಿ, ಟ್ಯುಟೋರಿಯಲ್‌ನ ಉಪನ್ಯಾಸಕ ಸತೀಶ್ ಮಾಸ್ಟರ್ ಅವರಿಗೆ, ತಾಲೂಕಿನ ಹಳೇ ವಿದ್ಯಾರ್ಥಿಗಳ ಗುರುವಂದನೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಗುರುವಂದನೆ ಸ್ವೀಕರಿಸಿ ಮಾತನಾಡಿದ ಸತೀಶ್ ಮಾಸ್ಟರ್, ತಮ್ಮಲ್ಲಿ ವಿದ್ಯೆ ಕಲಿತಿರುವ ವಿದ್ಯಾರ್ಥಿಗಳು ಅವರವರ ತಂದೆ ತಾಯಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದೇ ನೀವು ನನಗೆ ನೀಡುವ ನಿಜವಾದ ಗುರುಕಾಣಿಕೆ ಎಂದರು. ಚಲನಚಿತ್ರನಿದೇಶಕ ಪವನ್ ಒಡೆಯರ್, ಕ್ರೀಡಾಪಟು ಯಶೋಧರೆ, ಚನ್ನಮಾರಯ್ಯ ಇತರರು ಪಾಲ್ಗೊಂಡಿದ್ದರು.

ವೃತ್ತಿಶಿಕ್ಷಣ ಶಿಕ್ಷಕರ ಜಿಲ್ಲಾ ಮಟ್ಟದ ಸಮಾವೇಶ
ಕುಣಿಗಲ್: ಸರ್ಕಾರಿ ಶಾಲೆಗಳಲ್ಲಿನ ವೃತ್ತಿ ಶಿಕ್ಷಣ ಚಿತ್ರಕಲಾ ಶಿಕ್ಷಕರು ಮುಂದಿನ ದಿನಗಳಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಮಾತ್ರ ಕಲಿಸುವಂತೆ ಆದೇಶ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ತುಮಕೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಈಶ್ವರಯ್ಯ ತಿಳಿಸಿದರು. ಅವರು ವೃತ್ತಿಶಿಕ್ಷಣ ಶಿಕ್ಷಕರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು, ಮಾತನಾಡಿ, ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ, ಬಹುತೇಕ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರು ಸೇವೆಯಲ್ಲಿದ್ದು ವಿವಿಧ ವಿಷಯಗಳ ಬಗ್ಗೆ ಚಿತ್ರಗಳನ್ನು ಬರೆಯಲು ಕಲಿಸುತ್ತಿದ್ದಾರೆ. ಅದೇ ವಿಜ್ಞಾನ ವಿಷಯದಲ್ಲಿ ಬರುವ ವಿವಿಧ ಸಸ್ಯಶಾಸ್ತ್ರರಚನೆ, ಪ್ರಯೋಗಗಳ ಚಿತ್ರಗಳು, ಸಮಾಜ ಶಾಸ್ತ್ರದಲ್ಲಿ ಬರುವ ದೇಶದ, ರಾಜ್ಯದ ನಕ್ಷೆ, ಭೌಗೋಳಿಕ ರೇಖಾ ಚಿತ್ರಗಳನ್ನು ಚಿತ್ರಕಲಾ ಶಿಕ್ಷಕರು ಕಲಿಸಿದ್ದೇ ಆದಲ್ಲಿ ಅವು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ, ಮುಂದೆ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಆದೇಶ ಮಾಡಲಾಗಿದೆ ಎಂದರು.

ಧಾರ್ಮಿಕ ಪದ್ಧತಿ ಆಚರಣೆಗಳಿಂದ ಮಾನವನಿಗೆ ಶಾಂತಿ, ನೆಮ್ಮದಿ
ಕುಣಿಗಲ್: ಧಾರ್ಮಿಕ ಪದ್ಧತಿ ಆಚರಣೆಗಳಿಂದ ಮಾನವನಿಗೆ ಶಾಂತಿ, ನೆಮ್ಮದಿ ಲಭಿಸಿ, ಸಚ್ಚಾರಿತ್ರ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಾನೆಂದು ತಹಸೀಲ್ದಾರ್ ಪುಟ್ಟನರಸಯ್ಯ ತಿಳಿಸಿದರು. ಶನಿವಾರ, ಪಟ್ಟಣದ ತುಡಿಕೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಹಮ್ಮಿಕೊಳ್ಳಲಾದ ವಿಶೇಷ ಪೂಜೆ, ಅಷ್ಟಲಕ್ಷ್ಮೀವೈಭವ ದೃಶ್ಯಾವಳಿ ಪ್ರದರ್ಶನದಲ್ಲಿ ಪಾಲ್ಗೊಂಡು, ತಾಲೂಕಿನಲ್ಲಿ 445 ಮುಜರಾಯಿ ದೇವಾಲಯಗಳಿದ್ದು, ಎಲ್ಲಾ ದೇವಾಲಯಗಳಲ್ಲೂ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತಿವೆ. ಮುಜರಾಯಿ ದೇವಾಲಯಗಳ ಜೊತೆಯಲ್ಲಿ ಖಾಸಗಿ ದೇವಾಲಯಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ, ಉತ್ತಮ ಧಾರ್ಮಿಕ ಕಾರ್ಯಕ್ರಮಗಳನ್ನು ರೂಪಿಸಿ, ವಿಶೇಷ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಪೂಜೆಗಳನ್ನು ಹಮ್ಮಿಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

 ಒಕ್ಕಲಿಗರು ಸಂಘಟಿತರಾಗಬೇಕು: ಎಚ್.ಬಿ. ಪ್ರಕಾಶ್
ಚಿಕ್ಕನಾಯಕನಹಳ್ಳಿ: ಸಮಾಜದಲ್ಲಿರುವ ದುರ್ಬಲರನ್ನು ಮೇಲೆತ್ತಲು ಮೊದಲು ಸಮಾಜಕ್ಕೆ ಶಕ್ತಿತುಂಬುವ ಕೆಲಸವಾಗಬೇಕು ಎಂದು ಪುರಸಭಾ ಸದಸ್ಯ ಎಚ್.ಬಿ.ಪ್ರಕಾಶ್ ನುಡಿದರು. ಶನಿವಾರ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಒಕ್ಕಲಿಗ ಸಂಘ ಏರ್ಪಡಿಸಿದ್ದ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ನಮ್ಮ ಜಾತಿಯ ಸಂಘಟನೆ ಯಾವುದೇ ಜಾತಿಯ ವಿರುದ್ಧವಲ್ಲ. ಎಲ್ಲಾ ಸಮುದಾಯದವರೊಂದಿಗೆ ಒಂದು ಗೂಡಿ ಸಹಬಾಳ್ವೆಯನ್ನು ನಡೆಸುವಂತ ಕಾರ್ಯ ನಮ್ಮ ಸಂಘದಿಂದಾಗಬೇಕು. ಸಮಾಜವನ್ನು ಆರ್ಥಿಕವಾಗಿ ಬಲಯುತಗೊಳಿಸಲು, ಕೆಂಪೇಗೌಡ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವ ಇಚ್ಛೆ ಹೊಂದಿದ್ದೇವೆ. ಸಮಾಜದ ಎಲ್ಲಾ ಬಡವರ ಅಭಿವೃದ್ಧಿಯ ಮಾನದಂಡವನ್ನಿಟ್ಟುಕೊಂಡು ಸಮಾಜವನ್ನು ಒಗ್ಗೂಡಿಸೋಣ ಎಂದರು. ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೇಗೌಡ ಮಾತನಾಡಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.