ತುಮಕೂರು

ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Published On :

ಕ.ಪ್ರ.ವಾರ್ತೆ ,  ಕುಣಿಗಲ್ ,  ಜ.13
ಗಣರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಬಹುತೇಕ ಇಲಾಖಾಧಿಕಾರಿಗಳೇ ಗೈರುಹಾಜರಾಗಿದ್ದು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿ, ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಘಟನೆ ನಡೆಯಿತು.
ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯನ್ನು ಸೋಮವಾರ ಮಧ್ಯಾಹ್ನ 3 ಗಂಟೆಗೆ ಶಾಸಕರ ಅಧ್ಯಕ್ಷತೆಯಲ್ಲಿ ಕಂದಾಯಭವನದಲ್ಲಿ ಕರೆಯಲಾಗಿತ್ತು. ಸಭೆ ನಾಲ್ಕುಗಂಟೆಗೆ ಪ್ರಾರಂಭವಾಯಿತು. ಶಾಸಕರ ಗೈರುಹಾಜರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು. ಕಾರ್ಯಕ್ರಮ ಆಯೋಜನೆಗೆ ಪ್ರಮುಖವಾಗಿರಬೇಕಾದ ಪುರಸಭೆ, ಪೊಲೀಸ್, ಸೇರಿದಂತೆ ಬಹುತೇಕ ಇಲಾಖಾಧಿಕಾರಿಗಳು ಗೈರಾಗಿರುವುದರ ಬಗ್ಗೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೆಂಕಟೇಗೌಡ, ಕಸಾಪ ಅಧ್ಯಕ್ಷ ದಿನೇಶ ಕುಮಾರ್, ಕರವೇ ಅಧ್ಯಕ್ಷ ಮಂಜುನಾಥ ಇತರರು ಆಕ್ಷೇಪ ವ್ಯಕ್ತಪಡಿಸಿದರು.
ನಿರ್ಲಕ್ಷ್ಯ:  2103ರ ಸ್ವಾತಂತ್ರೋತ್ಸವ ಹಬ್ಬಾಚರಣೆಯ ಕಾರ್ಯಕ್ರಮದಲ್ಲೂ ಅಧಿಕಾರಿಗಳು ಗೈರಾಗಿರುವ ಬಗ್ಗೆ ಶಾಸಕರೇ ಖುದ್ದು ವೇದಿಕೆ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ನೋಡಿದರೆ ಪೂರ್ವ ಭಾವಿ ಸಭೆಗೂ ಗೈರಾಗುವ ಮೂಲಕ ರಾಷ್ಟ್ರೀಯ ಹಬ್ಬಾಚರಣೆ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತೋರಿದ್ದಾರೆ. ತಹಸೀಲ್ದಾರ್‌ಗೆ ಹೇಳಿದರೆ, ತಾವು ನೊಟೀಸ್ ನೀಡಿ, ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎನ್ನುತ್ತಾರೆ. ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಧಿಕಾರಿಗಳಿಗೆ ರಾಷ್ಟ್ರೀಯ ಹಬ್ಬಾಚರಣೆ ಬೇಕಿಲ್ಲ, ಸಭೆ ಅಥವಾ ಗಣರಾಜ್ಯೋತ್ಲವನ್ನು ಎಲ್ಲಾ ಅಧಿಕಾರಿಗಳಿಗೇ ಕೇಳಿ ಮಾಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಗ್ವಾದ: ತಹಸೀಲ್ದಾರ್ ಪುಟ್ಟನರಸಯ್ಯ, ನೊಟೀಸ್ ನೀಡಿ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ತಮ್ಮ ಕೈಲಾಗುವ  ಪ್ರಯತ್ನ ಮಾಡಿದ್ದೇನೆ. ಇನ್ನೇನು ಮಾಡಲಿ ಎಂಬ ಅಸಹಾಯಕತೆ ವ್ಯಕ್ತಪಡಿಸಿ, ಸಭೆ ಮುಂದುವರೆಸಿದಾಗ, ಕರವೇ ಅಧ್ಯಕ್ಷ ಮಂಜುನಾಥ, ಕಳೆದ ಗಣರಾಜ್ಯೋತ್ಸವ ಹಬ್ಬಾಚರಣೆಯಲ್ಲಿ ಪುರಸಭೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ,  ಠಾಣೆ ಮೆಟ್ಟಿಲೇರಿದ್ದು, ಪಿಎಸೈ ರಾಷ್ಟಧ್ವಜ ಯಾರ ಬಳಿ ಇರಬೇಕೆಂದು ಸ್ಪಷ್ಟನೆ ಕೋರಿ ತಹಸೀಲ್ಗಾರ್ ಕಚೇರಿಗೆ ಹಲವು ಬಾರಿ ಪತ್ರಬರೆದಿದ್ದಾರೆ. ವರ್ಷಕಳೆದರೂ ತಹಸೀಲ್ದಾರ್ ಕಚೇರಿಯಿಂದ ಉತ್ತರ ಬರದ ಕಾರಣ, ಕ್ರಮಕೈಗೊಂಡಿಲ್ಲ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸಿರುವ ಕಾರಣ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮತ್ತಷ್ಟು ನಡೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲವೆಂದು ತಹಸೀಲ್ದಾರ್ ಅವರೊಂದಿಗೆ ವಾಗ್ವಾದ ನಡೆಸಿದರು.
ತಹಸೀಲ್ದಾರ್ ಮಾತನಾಡಿ, ತಮ್ಮ ಗಮನಕ್ಕೆ ವಿಷಯ ಬಂದಿಲ್ಲ. ಈ ಬಗ್ಗೆ ಗಮನಹರಿಸಿ, ಕೂಡಲೆ ಅಗತ್ಯ ಕ್ರಮ ಕೈಗೊಳ್ಳಲಾಗುವ ಭರವಸೆ ನೀಡಿ, ತಾಲೂಕಿನಾದ್ಯಂತ ಯಾವುದೇ ರೀತಿಯಲ್ಲೂ ರಾಷ್ಟ್ರಧ್ವಜಕ್ಕೆ ಅವಮಾನವಾದಲ್ಲಿ ದೂರು ಬಂದ ಕೂಡಲೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಕೆಲಕಾಲ  ಚರ್ಚೆ ನಡೆದು, ಗಣರಾಜ್ಯೋತ್ಸವವನ್ನು ಅದ್ಧೂರಿಯಿಂದ ಅಚರಿಸುವ ಬಗ್ಗೆ  ತೀರ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.