23 ರಂದು ಸಿಐಟಿಯು ವಿಧಾನಸೌಧ ಮುತ್ತಿಗೆ
ಕ.ಪ್ರ.ವಾರ್ತೆ , ತುಮಕೂರು , ಜ.14
ವಿಧಾನಸೌಧ ಮುತ್ತಿಗೆಗೆ ಸಿಐಟಿಯು ಕಾರ್ಮಿಕ ಸಂಘಟನೆ ಸಜ್ಜಾಗುತ್ತಿದೆ. ಜ.23 ರಂದು ಸುಮಾರು 50 ಸಾವಿರ ಮಂದಿ ಕಾರ್ಮಿಕರು ಬೆಂಗಳೂರಿನಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಎಂದಿನಂತೆ ಚುನಾವಣಾ ಅಖಾಡಕ್ಕಿಳಿಯುವ ಕುರಿತಂತೆ ನಿರಾಸಕ್ತಿ ತೋರಿದರು. ಆದರೆ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ವಿಧಾನ ಸೌಧ ಮುತ್ತಿಗೆ ಹೋರಾಟ ನಡೆಸುವುದಾಗಿಯೂ, ಈ ರೀತಿಯ ಮುತ್ತಿಗೆ ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯುತ್ತಿರುತ್ತದೆ ಎಂದು ಮಾಹಿತಿ ನೀಡಿದರು.
ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ಕೂಲಿಗೆ ಒತ್ತಾಯ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಇಟಿಯು ನೇತೃತ್ವದಲ್ಲಿ ಬೆಂಗಳೂರು ರೇಲ್ವೆ ನಿಲ್ದಾಣದಿಂದ ಬೃಹತ್ ಮೆರವಣಿಗೆ ನಡೆಸಿ ನಂತರ ವಿಧಾನ ಸೌಧ ಮುತ್ತಿಗೆ ಹಾಕಲಾಗುವುದು ಎಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತ್, ಅಂಗನವಾಡಿ, ಗುತ್ತಿಗೆ ಕಾರ್ಮಿಕರು, ಹಮಾಲಿ, ಸಾರಿಗೆ, ಸೇರಿದಂತೆ ಖಾಸಗಿ ಕಾರ್ಖಾನೆಗಳಲ್ಲಿ ದುಡಿಯವ ಕಾರ್ಮಿಕರು ಸೇರಿದಂತೆ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವರು ಎಂದು ಮೀನಾಕ್ಷಿ ಸುಂದರಂ ತಿಳಿಸಿದರು.
ಮೀನಮೇಷ: ಬಿಸಿಯೂಟ ನೌಕರರಿಗೆ 500 ರೂಪಾಯಿ ಗೌರವಧನ ಹೆಚ್ಚಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಕಾರ್ಮಿಕರ ಕಲ್ಯಾಣವಾಗುವಂತಹ ಕಾನೂನುಗಳನ್ನು ರಚನೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದ ಅವರು, ಎಲ್ಲ ವರ್ಗದ ಕಾರ್ಮಿಕರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಎಸ್ಮಾ ಕಾಯ್ದೆ ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಯಾಗಿದ್ದು, ತಕ್ಷಣವೇ ಸರ್ಕಾರ ಕಾಯ್ದೆಯನ್ನು ಹಿಂಪಡೆಯಬೇಕು. ಹಾಗೆಯೇ ಬೇರೆ ರಾಜ್ಯಗಳಿಂತ ಆಟೋ ಎಲ್ಪಿಜಿ ಮೌಲ್ಯವರ್ಧಿತ ತೆರಿಗೆ ಹೆಚ್ಚಿದೆ. ಬೇರೆ ರಾಜ್ಯಗಳಲ್ಲಿ ಶೇ.5 ರಷ್ಟಿದ್ದರೆ ನಮ್ಮ ರಾಜ್ಯದಲ್ಲಿ ಶೆ. 14.5ರಷ್ಟಿದೆ. ಇದನ್ನು ತಕ್ಷಣ ಕಡಿಮೆ ಮಾಡಬೇಕು ಎಂದು ಮೀನಾಕ್ಷಿ ಸುಂದರಂ ಸರ್ಕಾರವನ್ನು ಒತ್ತಾಯಿಸಿದರು.
ಕಡಿಮೆ ಬೆಲೆಗೆ ವಿತರಿಸಿ: ಸರ್ಕಾರ ಎಪಿಎಲ್, ಬಿಪಿಎಲ್ ಎಂದು ವರ್ಗೀಕರಿಸದೆ ಎಲ್ಲ ವರ್ಗದ ಕಾರ್ಮಿಕರಿಗೆ ಪಡಿತರವನ್ನು ಕಡಿಮೆ ಬೆಲೆಗೆ ವಿತರಣೆ ಮಾಡಬೇಕು. ಎಲ್ಲ ಇಲಾಖೆಗಳ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತರ ಜಾರಿ ಮಾಡಬೇಕು. ಬೀಡಿ ಕಾರ್ಮಿಕರಿಗೆ ಕಾನೂನಿನ್ವಯ ಲಾಗ್ ಪುಸ್ತಕ, ಗುರುತಿನ ಚೀಟಿ ವಿತರಣೆ ಮಾಡಬೇಕು, ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಕಾರ್ಮಿಕರ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಗ್ರ ಕಾರ್ಮಿಕರ ಕಾನೂನು ರೂಪಿಸಬೇಕು ಎಂದು ಮೀನಾಕ್ಷಿ ಸುಂದರಂ ಒತ್ತಾಯಿಸಿದ್ದಾರೆ.
ಪಿಂಚಣಿ ವಿತರಣೆ ಮಾಡಿ: ಕಾರ್ಮಿಕರಿಗೆ ಸರಿಯಾಗಿ ಪಿಂಚಣಿ ವಿತರಣೆ ಮಾಡಬೇಕು ಎಂದ ಅವರು, ಜ. 23 ರ ಕಾರ್ಯಕ್ರಮದ ಅಂಗವಾಗಿ ಜ.5 ರಿಂದ ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿಯೂ ಪ್ರಚಾರಾಂದೋಲನಾ ಜಾಥಾಗಳನ್ನು ನಡೆಸಲಾಗಿದೆ. ಕಾರ್ಮಿಕರ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಹೊರಾಟ ಮಾಡುತ್ತಿರುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಜ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಬಿ. ಉಮೇಶ್ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

