ಚಿಕ್ಕಪ್ಪಯ್ಯ ವಿರುದ್ಧದ ಟೀಕೆಗೆ ಖಂಡನೆ
ತುಮಕೂರು: ರಾಜ್ಯ ಕಾಡುಗೊಲ್ಲರ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಬಿ. ಚಿಕ್ಕಪ್ಪಯ್ಯ ಅವರ ವಿರುದ್ಧ ಯಾದವ ಜಾಗೃತಿ ವಿದ್ಯಾರ್ಥಿ ವೇದಿಕೆ, ಯಾದವ ಸೇನೆ ಹಾಗೂ ಇತರೆ ಸಂಘಟನೆಗಳು ಮಾಡಿರುವ ಟೀಕೆಗಳಿಗೆ ಜಿಲ್ಲಾ ಕಾಡುಗೊಲ್ಲರ ಹಿತರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ತುಮಕೂರಿನಲ್ಲಿ ಸಭೆ ಸೇರಿದ ಸಮಿತಿ ಸದಸ್ಯರು ಈ ರೀತಿಯ ಅಸಂಬದ್ಧ ಹೇಳಿಕೆ ನೀಡಿರುವವರ ವಿರುದ್ಧ ಹರಿಹಾಯ್ದಿದ್ದಾರೆ. ಇದೇ ರೀತಿ ಸುಳ್ಳು ಆರೋಪಗಳನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸೇರಿದಂತೆ ರಾಷ್ಟ್ರ ಮತ್ತು ವಿದೇಶಗಳಲ್ಲಿ ನೆಲೆಸಿರುವ ಸಮುದಾಯದವರು ತಮ್ಮ ಸಮಿತಿಗೆ ಸದಸ್ಯರಾಗಬಹುದು ಎಂದು ತಮ್ಮ ಸಮಿತಿಯ ನಿಯಮ ನಿಬಂಧನೆಗಳಲ್ಲಿ ತಿಳಿಸಿದ್ದು, ಈ ಸಂಬಂಧ ತಮ್ಮ ಸಮಿತಿಯ ಸಭೆ ಮತ್ತು ಸ್ಮರಣೆ ಸಂಚಿಕೆ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಇದರಿಂದ ಸಮುದಾಯದ ಪ್ರಮಾಣಿಕ ಸೇವೆ ಮಾಡಲು ಯಾರು ಬಂದರೂ ತಮ್ಮ ಸಮಿತಿ ಸ್ವಾಗತಿಸುತ್ತದೆ ಎಂದು ಸಮಿತಿಯ ಗೌರವಾಧ್ಯಕ್ಷ ಗುಡ್ಡದಹಳ್ಳಿ ಬಸವರಾಜು ಸ್ಪಷ್ಟಪಡಿಸಿದ್ದಾರೆ.
ಚಿಕ್ಕಪ್ಪಯ್ಯ ಅವರು ತುಮಕೂರಿನ ಯಾದವ (ಗೊಲ್ಲ) ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ, ಬೆಂಗಳೂರಿನ ಯಾದವ ಕಾಲೇಜು ಮತ್ತು ಚಿತ್ರದುರ್ಗದ ಯಾದವ (ಗೊಲ್ಲ) ಮಠಕ್ಕೆ ಧನ ಸಹಾಯ, ಶಿರಾ ಬಳಿಯ ಕಾಡುಗೊಲ್ಲರ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರ ಹಾಗೂ ವೀರ ಪುರುಷ ಬಂದ್ಕುಂಟೆ ಈರಚಿಕ್ಕಣ್ಣ ಸ್ವಾಮಿ ಪೌಳಿ ನಿರ್ಮಾಣಗಳು ಸೇರಿದಂತೆ ಮತ್ತಿತರ ಸೇವಾ ಕಾರ್ಯಗಳು ಕರ್ನಾಟಕದಲ್ಲಿರುವುದು ಆರೋಪ ಮಾಡಿರುವವರಿಗೆ ತಿಳಿದಿಲ್ಲವೆ. ಸೇವಾ ಕಾರ್ಯ ಮಾಡುವ ಮನಸಿರುವರು ರಾಷ್ಟ್ರದ ಯಾವುದೇ ಮೂಲೆಯಲ್ಲಿಯಾದರು ಮಾಡಬಹುದು ಎಂದರು.
ತಮ್ಮ ಸಮಿತಿಯ ಪದಾಧಿಕಾರಿಗಳು ಎರಡೂವರೆ ತಿಂಗಳು ಸಮೀಕ್ಷೆ ನಡೆಸಿ, ರಾಜ್ಯದ ಎಲ್ಲಾ 10 ಜಿಲ್ಲೆಯ 37 ತಾಲೂಕಿನ ಕಾಡುಗೊಲ್ಲರ ಹಟ್ಟಿಗಳನ್ನು ಪ್ರಥಮ ಬಾರಿಗೆ ಗುರುತಿಸಿದ್ದು, ಆ ಹಟ್ಟಿಗಳ ಹೆಸರುಗಳು ಸೇರಿದಂತೆ
ಅಂಕಿ ಅಂಶಗಳನ್ನು ಸರ್ಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ತಮ್ಮ ಸಮಿತಿಯು ಶ್ರೀ ಭರಮಗಿರಿ ಈರಣ್ಣ ಸ್ವಾಮಿ ಸ್ಮರಣೆ ಸಂಚಿಕೆಯಲ್ಲಿ ತಿಳಿಸಲಾಗಿದೆ. ಜತೆಗೆ ಕಾಡುಗೊಲ್ಲರ ಹಟ್ಟಿಗಳ ಮೂಲಭೂತ ಸೌಲಭ್ಯಗಳು ಹಾಗೂ ಶೈಕ್ಷಣಿಕ ಮಟ್ಟದ ಬಗ್ಗೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಯಾರ ಬಳಿಯಾದರು ಮಾಹಿತಿ ಇದ್ದರೆ ತಮ್ಮ ಸಮಿತಿಗೆ ತಿಳಿಸಬಹುದು. ಇಲ್ಲದಿದ್ದರೆ ಸ್ಥಳ ದಿನಾಂಕ ತಿಳಿಸಿದರೇ ತಮ್ಮ ಸಮಿತಿಯೇ ಆರೋಪ ಮಾಡಿರುವವರಿಗೆ ಮಾಹಿತಿ ನೀಡಲಾಗುವುದು ಎಂದು ಬಸವರಾಜು ಅವರು ಹೇಳಿದರು. ಸಭೆಯಲ್ಲಿ ರಾಜ್ಯ ಸಮಿತಿ ವಕ್ತಾರರಾದ ಕೆ.ಟಿ.ಕೆ.ಪ್ರಭು, ಜಂಟಿ ಕಾರ್ಯದರ್ಶಿ ಮಾಗೋಡ ನಾಗರಾಜ್, ಜಿಲ್ಲಾಧ್ಯಕ್ಷ ಹಾರೋಗೆರೆ ಮಾರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಕೆ. ಗಂಗಾಧರ್, ಶಿರಾ ಸಮಿತಿ ಅಧ್ಯಕ್ಷ ಗೌಡಗೆರೆ ಚಂದ್ರಶೇಖರ್, ಚಿಕ್ಕನಾಯಕನಹಳ್ಳಿ ತಾಲೂಕು ಸಮಿತಿ ಅಧ್ಯಕ್ಷ ಕದರೆಗೌಡ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

