ತುಮಕೂರು

ದಲ್ಲಾಳಿಗಳ ತಾಳಕ್ಕೆತಕ್ಕಂತೆ ಅಧಿಕಾರಿಗಳ ಕುಣಿತ

Published On :

ಕ.ಪ್ರ.ವಾರ್ತೆ ,  ಕುಣಿಗಲ್ ,  ಜ.19
ತಾಲೂಕಿನ ಹುಲಿಯೂರುದುರ್ಗದ ಸರ್ಕಾರಿ ರೇಷ್ಮೆಮಾರುಕಟ್ಟೆಯಲ್ಲಿ ದಲ್ಲಾಳಿಗಳ ತಾಳಕ್ಕೆತಕ್ಕಂತೆ ಮಾರುಕಟ್ಟೆ ಅಧಿಕಾರಿಗಳು ಕುಣಿಯುತ್ತಿರುವುದರಿಂದ ಲಂಚಾವತಾರ ಮಿತಿಮೀರಿ, ರೇಷ್ಮೆಗೂಡು ಬೆಳೆದ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ದಲ್ಲಾಳಿಗಳ ಹಾವಳಿ ನಿಯಂತ್ರಣಕ್ಕೆ ಇಲಾಖೆ ಮೇಲಾಧಿಕಾರಿಗಳು ಕಠಿಣ ಕ್ರಮಕೈಗೊಂಡು ರೇಷ್ಮೆಬೆಳೆಗಾರನ್ನು ರಕ್ಷಿಸುವಂತೆ ರೈತರು ಮನವಿ ಮಾಡಿದ್ದಾರೆ.
ಹುಲಿಯೂರುದುರ್ಗ ಸುತ್ತಮುತ್ತಲ ಪ್ರದೇಶದಲ್ಲಿ ಹಲವಾರು ರೈತರು, ಕಳೆದ ಹಲವು ದಶಕಗಳಿಂದ ರೇಷ್ಮೆ ಬೆಳೆಯನ್ನು ತಮ್ಮ ಜೀವನಾಧಾರವಾಗಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಆಗುತ್ತಿರುವ ಅಕ್ರಮಗಳಿಂದ ರೇಷ್ಮೆ ಬೆಳೆದ ರೈತರು ಪರದಾಡುವಂತಾಗಿದೆ. ಹುಲಿಯೂರುದುರ್ಗ ಸರ್ಕಾರಿ ರೇಷ್ಮೆಮಾರುಕಟ್ಟೆಗೆ ಬೀಚನಹಳ್ಳಿಗ್ರಾಮದ ಕರೀಗೌಡ, ಉತ್ತಮಗುಣಮಟ್ಟದ122 ಕೆಜೆ ರೇಷ್ಮೆಗೂಡನ್ನು ತಂದಿದ್ದು, ಮಾರುಕಟ್ಟೆ ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟಿಕೊಂಡಿರುವ ದಲ್ಲಾಳಿಯನ್ನು ಗಮನಿಸದ ಕಾರಣ, ರೈತನ ಗೂಡುಅತ್ತ ಬಿತ್ತನೆಗೂ ಖರೀದಿಸದೆ,ಇತ್ತ ರೀಲಿಂಗ್ ನೀಡದೆ, ಅಧಿಕಾರಿಗಳು ತಟಸ್ಥವಾಗಿರುವ ಕಾರಣ ರೈತ ಕಂಗಾಲಾಗಿದ್ದಾನೆ.
ಏಕಾಂಗಿ ಪ್ರತಿಭಟನೆ: ಮಾರುಕಟ್ಟೆ ಅಧಿಕಾರಿಗಳ ವರ್ತನೆಗೆ ಬೇಸತ್ತ ರೈತ ಶನಿವಾರದಿಂದಲೂ ಗೂಡನ್ನು ಮಾರುಕಟ್ಟೆಯಲ್ಲೆ ಹಾಕಿಕೊಂಡು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾನೆ. ಈತನ ಹೋರಾಟಕ್ಕೆ ಮಾರುಕಟ್ಟೆ ವ್ಯವಸ್ಥೆಯಿಂದ ರೋಸಿಹೋಗಿರುವ ಪುರ, ಸಿಂಗನೋಹಳ್ಳಿ ಇತರೆ ರೈತರು ಪಾಲ್ಗೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕರೀಗೌಡ, ಮಹೇಶ, ರಾಜಣ್ಣ, ರಾಜು ಇತರರು, ಸದರಿ ಮಾರುಕಟ್ಟೆ ವ್ಯವಸ್ಥೆ ಸಂಪೂರ್ಣವಾಗಿ ದಲ್ಲಾಳಿಗಳ ಕೈಯಲ್ಲಿ ನಿರ್ವಹಣೆಯಾಗುತ್ತಿದೆ. ಮಾರುಕಟ್ಟೆ ಅಧಿಕಾರಿ ನೆಪಮಾತ್ರಕ್ಕೆ ಇದ್ದಾರೆ. ಉತ್ತಮ ಗುಣಮಟ್ಟದ ಗೂಡುಗಳು ತಂದರೂ, ರೇಷ್ಮೆಗೂಡುಗಳ ವಿಲೆ ಆಗವುದಿಲ್ಲ. ಮಾರುಕಟ್ಟೆ ಅಧಿಕಾರಿಗಳಿಗೆ ಹೇಳಿದರೆ, ದಲ್ಲಾಳಿಗಳು ಏನು ಹೆಳ್ತಾರೋ ಕೇಳಿ ಅನ್ನುತ್ತಾರೆ, ಕಳಪೆ ಗುಣಮಟ್ಟದ ಗೂಡುಗಳನ್ನು ತಂದರೂ, ಉತ್ತಮ ಗೂಡೆಂದು ತೆಗೆದುಕೊಳ್ಳುತ್ತಾರೆ. ಬಿತ್ತನೆಗಾಗಿ ಸರ್ಕಾರ ಖರೀದಿಸುವಂತಿದ್ದರೂ, ರೀಲರ್‌ಗಳ ಲಾಬಿಗೆ ಮಣಿದು ರೈತರಿಗೆ ಅನ್ಯಾಯಮಾಡುತ್ತಿದ್ದಾರೆ. ಇಲ್ಲಿ ಲಂಚ ನೀಡ ಬೇಕು, ಇಲ್ಲವಾದಲ್ಲಿ ರಾಜಕೀಯ ಪ್ರಭಾವ ಬಳಸಿದ ರೈತರಿಗೆ ಮಾತ್ರ ನ್ಯಾಯದೊರಕುತ್ತಿದೆ. ಬಡರೈತರ ಗೋಳು ಕೇಳುವವರಿಲ್ಲ.
ಶನಿವಾರ ತಂದಗೂಡುಗಳನ್ನು ಭಾನುವಾರ ಮಧ್ಯಾಹ್ನವಾದರೂ ವಿಲೆ ಆಗದೆ, ಗೂಡುಗಳು ಚಿಟ್ಟೆ ಬರುವಂತಾಗಿದೆ. ಕಳೆದ 4 ವರ್ಷಗಳಿಂದಲೂ ರೇಷ್ಮೆಕೃಷಿ ಲಾಭದಾಯಕವಾಗಿಲ್ಲ, ಮೂರುವರೆ ಲಕ್ಷ ಸಾಲ ಮಾಡಿದ್ದೇವೆ. ಸಾಲ ತೀರಿಸಲಾಗುತ್ತಿಲ್ಲ, ಅಧಿಕಾರಿಗಳ ಶೋಷಣೆಯಿಂದ ಬೆಳೆಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ದಾರಿ ಎಂದು ಅಳಲು ತೋಡಿಕೊಂಡರು.
ಸ್ಪಷ್ಟನೆಗೆ ನಕಾರ
ಮಾರುಕಟ್ಟೆ ಅಧಿಕಾರಿ ಶಿವನಂಜಪ್ಪ, ಕಚೇರಿಯಲ್ಲಿ ಇರದೆ ಬೇರೆಡೆ ತೆರಳಿದ್ದು, ದೂರವಾಣಿ ಮೂಲಕ ಸಂಪರ್ಕಿಸಿದಾಗ, ರೈತರ ಆರೋಪಗಳಿಗೆ ಸ್ಪಷ್ಟನೆ ನೀಡಲು ನಿರಾಕರಿಸಿದರು. ಸಹಾಯಕ ನಿರ್ದೇಶಕ ಅಣ್ಣೋಜಿರಾವ್, ಸರ್ಕಾರದಿಂದ ಖರೀದಿ ನಿಲ್ಲಿಸಿದ್ದು, ರೈತರ ಗೂಡುಗಳನ್ನು ರೀಲರ್‌ಗಳು ತೆಗೆದುಕೊಳ್ಳಬೇಕು,ಅವರಿಗೆ ಬೇಕಾದರೆ ತಗೋತ್ತಾರೆ. ಇಲ್ಲ ಅಂದ್ರೆ ನಾವೇನು ಮಾಡೋದು ಎಂದಿದ್ದಾರೆ. ರೈತರ ಪ್ರತಿಭಟನೆ ವಿಷಯ ತಿಳಿದ ಜಿಪಂ ಸದಸ್ಯೆ ವಸಂತಮ್ಮ ಜಯರಾಮಯ್ಯ, ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರು ಬೆಳೆದ ಗೂಡುಗಳ ಖರೀದಿಗೆ ವ್ಯವಸ್ಥೆ ಮಾಡುವುದಾಗಿ, ಕಳೆದ 20 ವರ್ಷಗಳಿಂದಲೂ ಇಲ್ಲಿಯೇ ಕೆಲಸ ಮಾಡುತ್ತಿರುವ ಡಿ ಗ್ರೂಪ್ ನೌಕರನೇ ದಲ್ಲಾಳಿಯಾಗಿ ನಿರ್ವಹಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳಿದ್ದು, ಇಲಾಖಾಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಂಡು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.