ಮಕ್ಕಳನ್ನು ಜಾತಿವಾದಿಗಳನ್ನಾಗಿ ಬೆಳೆಸಬೇಡಿ
ಕ.ಪ್ರ.ವಾರ್ತೆ , ತುಮಕೂರು , ಜ.19
ದೇವರು, ಧರ್ಮದ ಹೆಸರಿನಲ್ಲಿ ಮಕ್ಕಳನ್ನು ಉಗ್ರವಾದಿಗಳನ್ನಾಗಿ, ಜಾತಿವಾದಿಗಳನ್ನಾಗಿ ಬೆಳೆಸಬೇಡಿ ಎಂದು ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ದಾರ್ಶನಿಕ ಸಾಹಿತಿ ಡಾ. ರಂಜಾನ್ ದರ್ಗಾ ಮನವಿ ಮಾಡಿದರು.
ನಗರದ ವಿಜಯನಗರದಲ್ಲಿ ಶೈನಾ ಅಧ್ಯಯನ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡುತ್ತಿದ್ದ ಅವರು, ಧರ್ಮದ ಹೆಸರಿನಲ್ಲಿ ಹಿಂದಿನಿಂದಲೂ ಮಹಿಳೆಯರನ್ನು ಶೋಷಣೆ ಮಾಡುತ್ತಲೇ ಬರಲಾಗಿದೆ. ಅದು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಬಹಳ ಹಿಂದಿನಿಂದಲೂ ಬಂದಿರುವ ಇಂತಹ ಶೋಷಣೆಯನ್ನು ಮೆಟ್ಟಿನಿಲ್ಲುವಂತಹ ಎದೆಗಾರಿಕೆಯನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ಜಾತಿ, ಧರ್ಮ ಇವುಗಳನ್ನು ಮೀರಿದ ಮಾನವೀಯ ಗುಣಗಳನ್ನು ಹೊಂದಬೇಕಿದೆ. ಆ ಮೂಲಕ ಭವ್ಯ ಭಾರತವನ್ನು ನಿರ್ಮಿಸಬೇಕಿದೆ ಎಂದರು.
ಭಾರತದಲ್ಲಿ ತಾಂಡವವಾಡುತ್ತಿರುವ ಜಾತಿ ಮತ್ತು ಧರ್ಮದ ಬಗ್ಗೆ ಒಂದೊಂದೇ ಉದಾಹರಣೆಗಳನ್ನು ವ್ಯಾಖ್ಯಾನಿಸುತ್ತಿದ್ದ ಅವರು, ಈ ಸಾಮಾಜಿಕ ಪಿಡುಗಿನಿಂದಾಗಿ ಅದೆಷ್ಟು ಜನರು ಕ್ರೌರ್ಯಕ್ಕೆ ಬಲಿಯಾಗಿದ್ದಾರೆಂದು ವಿವರಿಸುತ್ತಾ ಕೆಲ ಕಾಲ ಭಾವಪರವಶರಾದರು, ಗದ್ಗದಿತರಾದರು. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಕುಷ್ಟರೋಗಕ್ಕಿಂತಲೂ ಕ್ರೂರವಾಗಿದೆ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಎಲ್ಲರೂ ತಿನ್ನವುದು ಅನ್ನವನ್ನೇ ಆದರೂ ಏಕೆ ಈ ತಾರತಮ್ಯ ಎಂದು ನುಡಿದರು.
ಜನಮುಖಿ ಸಾಹಿತ್ಯ: ಗುಲ್ಬರ್ಗಾ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶಿವಗಂಗಾ ರುಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಅವಘಡಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜನಮುಖಿ ಸಾಹಿತ್ಯ ಹೆಚ್ಚು ಪ್ರಸ್ತುತವಾಗಬೇಕಿದೆ ಎಂದರು.
ಮನುಷ್ಯ ಇಂದು ವೈಯಕ್ತಿಕ ಆಸೆಗಳಿಗೆ ಬಲಿಯಾಗಿ ಜನಪರ ಕಾರ್ಯಚಟುವಟಿಕೆಗಳು ಕಡಿಮೆಯಾಗುತ್ತಿವೆ. ಹಿಂದೆ ಸಾವಿರ ರು.ಗಳ ಭ್ರಷ್ಟಾಚಾರ ಸಮಾಜದಲ್ಲಿ ಕಂಡರೂ ಅದರ ವಿರುದ್ಧ ದೊಡ್ಡ ಅಸಹನೆ
ಉಂಟಾಗುತ್ತಿತ್ತು. ಇಂದು ಸಾವಿರಕ್ಕೆ ಬದಲಾಗಿ ಕೋಟಿ ಕೋಟಿ ರು.ಗಳ ಲೆಕ್ಕಾಚಾರದ ಭ್ರಷ್ಟಾಚಾರ ಬಹಿರಂಗವಾಗುತ್ತಿದ್ದು, ಇವೆಲ್ಲಾ ಸಾಮಾನ್ಯ ಸಂಗತಿ ಎನ್ನುವಂತಾಗಿದೆ ಎಂದರು.
20 ವರ್ಷಗಳ ಹಿಂದೆ ಮಹಿಳಾ ದೌರ್ಜನ್ಯ ಕಡಿಮೆ ಇತ್ತು. ಈಗ ದೌರ್ಜನ್ಯ ಪ್ರಕರಣಗಳು ಅತೀ ಹೆಚ್ಚಿನದಾಗಿವೆ. ಎಷ್ಟೋ ಪ್ರಕರಣಗಳು ದಾಖಲಾಗದೆಯೇ ಮುಚ್ಚಿ ಹೋಗುತ್ತಿವೆ. ಚಳವಳಿಗಳು ಸಹ ನಿಂತು ಹೋಗಿವೆ. ಬಸವಣ್ಣ ಅಸಮಾನತೆಯ ವಿರುದ್ಧ ಹೋರಾಡಿದ. ಇಂದು ಇಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಚಳುವಳಿಗಳು ಕಡಿಮೆಯಾಗುತ್ತಿವೆ ಎಂದರು.
ಮನುಷ್ಯ ದಿನೇ ದಿನೇ ಒಂಟಿಯಾಗುತ್ತಿದ್ದಾನೆ. ಇದು ಆಧುನಿಕ ಬದುಕಿನ ದುರಂತ ಎಂದು ಬಣ್ಣಿಸಿದ ಅವರು, ಕೋಟ್ಯಧಿಪತಿ ಆಗುವುದು ಮುಖ್ಯವಲ್ಲ. ಜ್ಞಾನಿಯಾಗಿ ಬದುಕುವುದು ಮುಖ್ಯ ಎಂದರು.
ದಾಂಡೇಲಿ ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಎಂಜಿನಿಯರ್, ವಚನ ತತ್ವ ಚಿಂತಕ ಶಂಕರ್ ದೇವನೂರು ಮಾತನಾಡಿ ದೀರ್ಘಕಾಲ ಬದುಕುವುದರಲ್ಲಿ ಮನುಷ್ಯನ ಜನ್ಮ ಸಾರ್ಥಕವಾಗುವುದಿಲ್ಲ. ಮಾನವೀಯ ಅಂತಃಕರಣ ಬದುಕು ಮುಖ್ಯವಾಗಬೇಕು. ಶರಣರು ಶ್ರಮ ಸಂಸ್ಕೃತಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಆ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕೆಂದರು.
ದೂರದರ್ಶನ ಚಂದನ ಹಿರಿಯ ಕಾರ್ಯಕ್ರಮ ನಿರ್ದೇಶಕಿ ನಿರ್ಮಲ ಯಲಿಗಾರ್, ಶೈನಾ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಶೈನಾ ಅಧ್ಯಯನ ಸಂಸ್ಥೆಯ ರೂವಾರಿ ಲೇಖಕಿ ಬಿ.ಸಿ. ಶೈಲಾ ನಾಗರಾಜ್ ಆಶಯ ನುಡಿಗಳನ್ನಾಡಿದರು. ಜಿಲ್ಲಾ ಮಹಿಳಾ ಸಂಘಟನೆ ಸಾಂಸ್ಕೃತಿಕ ಕಲಾವಿದರು ಹಾಡುಗಳನ್ನು ಪ್ರಸ್ತುತಪಡಿಸಿದರು. ರಂಗಕಲಾವಿದೆ ರಾಧಾ ಸಂಪತ್ ಪ್ರಾರ್ಥಿಸಿದರು. ರಂಗಮ್ಮ ಹೊದೇಕಲ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

