ತುಮಕೂರು

ಹಣತೆ ಆರಿದರೂ ಬೆಳಕು ಹರಿಸಿದ ರಾಷ್ಟ್ರಕವಿ

Published On :

ಸಾಮಗಾನದ ಕವಿ ಜಿಎಸ್ಎಸ್ ಸಂಸ್ಮರಣ, ಕವಿಗೋಷ್ಠಿ

ಕ.ಪ್ರ.ವಾರ್ತೆ    ತುಮಕೂರು    ಜ.21
ಅಸಮಾನ್ಯರ ಬದುಕೇ ಒಂದು ಅವಿಸ್ಮರಣೀಯ ಕಾವ್ಯವಾಗಿರುತ್ತದೆ. ಸಾಮಗಾನದ ಕವಿ ಜಿಎಸ್ಎಸ್ ಅಂತಹ ಶ್ರೇಷ್ಠ ರಸಋಷಿಗಳಾಗಿದ್ದರು. ಹಣತೆ ಆರಿದರೂ ಬೆಳಕು ಉಳಿಸಿದ ರಾಷ್ಟ್ರಕವಿ ಅವರಾಗಿದ್ದಾರೆಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಸ್ತುತಿಸಿದರು.
ನಗರದ ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರ ಆಯೋಜಿಸಿದ್ದ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಸಂಸ್ಮರಣ ಕವಿಗೋಷ್ಠಿ ಅಧ್ಯಕ್ಷೀಯ ಭಾಷಣ ಮಾಡಿದರು.ಮಾನವ ಧರ್ಮ ಪ್ರತಿಪಾದಕರಾದ ಪ್ರೀತಿಯ ಕವಿ ಹುಟ್ಟಿದ್ದು ಗ್ರಾಮೀಣ ಕುಸುಮವಾಗಿ, ವ್ಯಾಸಂಗ ಮಾಡಿದ್ದು ಶ್ರೀಮಠಗಳಲ್ಲಿ. ಸಾಗಿದ್ದು ಕವಿಗುರುಗಳ ಮಾರ್ಗದರ್ಶನದಲ್ಲಿ. ಎದೆತುಂಬಿ ಹಾಡಿದ ಭಾವಜೀವಿ ಈ ಕವಿಯ ಬದುಕೇ ಒಂದು ಭವ್ಯಗಾಥೆಯೂ ಇದೆ. ಪ್ರೀತಿಯನ್ನು ಬಿತ್ತಿ, ಬೆಳೆದು ಪ್ರೀತಿಲೋಕ ಸೃಷ್ಟಿಸುವ ಮೂಲಕ ವಿಶ್ವಮಾನತೆಯ ತತ್ವ ಸಾರಿದ ಪ್ರಾತಃಸ್ಮರಣೀಯರಾಗಿದ್ದಾರೆ ಎಂದರು.
ಧ್ರುವತಾರೆ: ಜೀವನಕ್ಕಿಂತ ದೊಡ್ಡಧರ್ಮವಿಲ್ಲ. ದೇವರೂ ಇಲ್ಲ. ಪ್ರೀತಿಯೇ ದೇವರೆಂದು ದಾರ್ಶನಿಕರಾಗಿದ್ದಾರೆ. ಕವಿತೆಗಳೆಲ್ಲ ನುಡಿಮುತ್ತುಗಳಂತಿವೆ. ಅವರ ಕಾವ್ಯಾರ್ಥಚಿಂತನ ಶ್ರೇಷ್ಠ ಕಾವ್ಯಮೀಮಾಂಸೆಯಾಗಿದೆ ಎಂದು ಶ್ಲಾಘಿಸಿದರು. ಗಾಂಧೀಜಿ, ವಿವೇಕಾನಂದ, ಕುವೆಂಪು ಅವರ ಸಶಕ್ತಿ, ಸದ್ಗುಣಗಳ ತ್ರಿವೇಣಿ ಸಂಗಮವಾದ ಜಿ.ಎಸ್.ಎಸ್. ಕನ್ನಡ ಸಾರಸ್ವತ ಲೋಕದ ಧ್ರುವತಾರೆ ಎಂದರು.
ಕವಿ ಪೌಳಿಶಂಕರಾನಂದಪ್ಪ ಅವರು ಭಾವಚಿತ್ರ ಅನಾವರಣ ಮಾಡಿ ಬಂದವರೆ ಬಂಧುಗಳು, ನಿಂತವರೆ ಬಾಂಧವರು ಎಂಬ ಕವಿತೆ ವಾಚಿಸಿದರು. ಅತಿಥಿ ಕವಿ ಗಣಪತಿ ಹೆಗಡೆ ಮಾತನಾಡುತ್ತಾ ದೇಶದಲ್ಲಿ ಸ್ವಾತಂತ್ರ್ಯ ಚೆಲ್ಲಾಟದಿಂದ ಭಯದ ವಾತಾವರಣ ಕವಿದಿದೆ. ಕವಿ ಜಿ.ಎಸ್.ಎಸ್ರ ಪ್ರೀತಿ ನಮ್ಮ ಬದುಕಿನ ದಾರಿದೀಪವಾದರೆ ಶಾಂತಿ ಮೂಡಿತು ಎಂದು ನುಡಿದರು.
ಹೆಣ್ಣಿನ ಬಗ್ಗೆ ಗೌರವ: ಕರವೇ ಅಧ್ಯಕ್ಷೆ ಸುನೀತಮೂರ್ತಿ ಅವರು ಜಿಎಸ್ಎಸ್ ತಾಯಿ ಕುರಿತು ಕವಿತೆ ರಚಿಸಿದರು. ಪದ್ಯಗಳಲ್ಲಿ ವಾತ್ಸಲ್ಯ ಭಾವ ತುಂಬಿದೆ. ಹೆಣ್ಣಿನ ಬಗ್ಗೆ ಗೌರವವೂ ಇದೆ ಎಂದರು. ಆಶಯ ನುಡಿಗಳನ್ನಾಡಿದ ಮಹಿಳಾ ಮಕ್ಕಳ ಸಾಹಿತ್ಯ ಕೂಟದ ಅಧ್ಯಕ್ಷೆ ಕಮಲಾ ಬಡ್ಡಿಹಳ್ಳಿ ಅವರು ರಾಜಕಾರಣಿಯೋರ್ವ ಅಳಿದರೆ ಅಂತಹ ರಾಜಕಾರಣಿ ಹುಟ್ಟಬಹುದು. ಓರ್ವ ಕವಿ ಅಳಿದರೆ ಅಂತದ್ದೇ ಕವಿ ಹುಟ್ಟಲು ಸಾಧ್ಯವಿಲ್ಲ ಎಂದರು.
ಕವಿ ಗೌಡನಕಟ್ಟೆ ತಿಮ್ಮಯ್ಯ, ಎಂ.ಡಿ. ಶ್ರೀನಿವಾಸ್, ಜಯಲಕ್ಷ್ಮೀಗುಪ್ತ, ಉಮಾಶರ್ಮ, ಪಾವಗಡ ಸಣ್ಣರಂಗಮ್ಮ ಕವಿತೆಗಳನ್ನು ವಾಚಿಸಿದರು. ಕವಯತ್ರಿ ಪದ್ಮಾಕೃಷ್ಣಮೂರ್ತಿ ಜಿ.ಎಸ್.ಎಸ್. ಗದ್ಯ ಬರೆಹ ಕುರಿತು ಚಿಂತನೆ ನಡೆಸಿದರು. ಸೀಗೆಹಳ್ಳಿ ನಾರಾಯಣ ಪುಷ್ಪನಮನ ಸಲ್ಲಿಸಿ ನಾ ನಮಿಸುವೆ ನಿನ್ನ ಕಾವ್ಯಧ್ವನಿಗೆ ಕವಿತೆ ವಾಚಿಸಿದರು. ಎಂ.ಪಿ. ಉಷಾ, ಪಾರ್ವತಿರಾಜ್, ಅಂಚೆ ರಾಮಣ್ಣ, ಜಯಸುಧಾ, ಎ.ವಿ. ಗಣೇಶ್, ಸ್ವರಚಿತ ಕವನ ವಾಚಿಸಿ ನುಡಿ ನಮನ ಸಲ್ಲಿಸಿದರು.
ಜಯಸುಧ ಪ್ರಾರ್ಥಿಸಿದರು. ಪದ್ಮಾಕೃಷ್ಣಮೂರ್ತಿ ಸ್ವಾಗತಿಸಿದರು. ಎಂ.ಪಿ. ಉಷಾ ವಂದಿಸಿದರು. ಹೊನ್ನೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.