ತುಮಕೂರು

ಮರಳು ಅಕ್ರಮ ಸಾಗಣೆ ಮಾಡಿದ್ರೆ ಹುಷಾರ್!

Published On :

ಮಧುಗಿರಿ: ತಾಲೂಕಿನ ರೈತರ, ಕೃಷಿಕರ ಹಾಗೂ ಜನರ ಜೀವನಾಡಿ ಜಯಮಂಗಲಿ ಮತ್ತು ಕುಮುದ್ವತಿ ನದಿ  ಪಾತ್ರದ ಹಿಡಿ ಮರಳು ಯಾವುದೇ ಕಾರಣಕ್ಕೂ ಆಚೆ ಹೋಗಲು ಬಿಡುವುದಿಲ್ಲ. ಹರಾಜಿಗೂ ಅವಕಾಶವಿಲ್ಲ ಎಂದು ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಕೆ ನೀಡಿದರು.
ಇಲ್ಲಿನ ಮಾಲೀಮರಿಯಪ್ಪ ರಂಗಮಂದಿರದಲ್ಲಿ ಕಂದಾಯ ಇಲಾಖೆ ಮತ್ತು ತಾಪಂ ವತಿಯಿಂದ ಏರ್ಪಡಿಸಿದ್ದ ಸರ್ಕಾರದ ಸವಲತ್ತು ಅರ್ಹ ಬಡ ಫಲಾನುಭವಿಗಳಿಗೆ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮರಳು ಅಂತರ್ಜಲ ವೃದ್ಧಿಸುವ ನೈಸರ್ಗಿಕ ಸಂಪತ್ತು. ತಾಲೂಕಿನ ಜನತೆ ತಮ್ಮ ಸ್ವಂತ ಕಟ್ಟಡ, ಮನೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಯಾವುದೇ ತಕರಾರಿಲ್ಲ. ಆದರೆ ನಮ್ಮ ತಾಲೂಕಿಂದ ಬೆಂಗಳೂರು ಮತ್ತು ಬೇರೆ ಕಡೆ ಮರಳು ಮಾರಾಟ ಮಾಡುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವುದಲ್ಲದೆ ಈ ದಂಧೆಗೆ ಸಹಕರಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮರಳು ಸಂರಕ್ಷಣೆಗೆ ನಾನು ಕೂಡ ಈ ಭಾಗದ ಜನರ ಜತೆ ಕೈ ಜೋಡಿಸಿ ಉಗ್ರ ಹೋರಾಟ ನಡೆಸುತ್ತೇನೆ. ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಅರ್ಹ ಬಡ ಫಲಾನುಭವಿಗಳಿಗೆ ವಿತರಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಾಕೀತು ಮಾಡಿದರು.   ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿಕರ, ಕೂಲಿಕಾರ್ಮಿಕರ ಹಾಗೂ ಎಲ್ಲ ವರ್ಗದ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ ಬಡವರ ಬದುಕು ಹಸನು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. 1865 ಪಡಿತರ ಚೀಟಿ ಮತ್ತು 4833 ಸಣ್ಣ ಹಿಡುವಳಿ ರೈತರಿಗೆ ಬಾಕಿಯಿದ್ದ ಪರಿಹಾರ 71 ಲಕ್ಷವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿರುವುದು ರೈತರಲ್ಲಿ ಸಂತಸ ತಂದಿದೆ ಎಂದರು.
ಫಲಾನುಭವಿಗಳಿಗೆ ಸಬ್ಸಿಡಿ ಚೆಕ್, ಮಹಿಳಾ  ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿದ ಅವರು, ತಾಲೂಕಿನಲ್ಲಿ ಶೇ.95ರಷ್ಟು ಪಡಿತರ ಚೀಟಿ ನೀಡಿದ್ದು ಈ ವಿಚಾರದಲ್ಲಿ ನಮ್ಮ ತಾಲೂಕು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಸಿಎಂ ಪರಿಹಾರ ನಿಧಿ ಮತ್ತಿತರೆ ಸವಲತ್ತುಗಳನ್ನು ಚುನಾಯಿತ ಜನಪ್ರತಿನಿಧಿಗಳ ಸಮ್ಮುಖದಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗುವುದು. ತಾಲೂಕಿನಲ್ಲಿ ಜೂಜು, ಅಕ್ರಮ ಮದ್ಯ ಮಾರಾಟ ಮತ್ತು ಮಟ್ಕಾದಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಕೆ.ರಮೇಶ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ರಾಜ್ಗೋಪಾಲ್, ಎಂ.ಎಸ್.ಮಲ್ಲಿಕಾರ್ಜುನಯ್ಯ, ತಾಪಂ ಅಧ್ಯಕ್ಷೆ ಸುನಂದ ಸಿದ್ದಪ್ಪ, ಸದಸ್ಯೆ ಯಶೋಧ ರಾಜಣ್ಣ, ಜುಬೇದಬಾನು, ಮುಖಂಡರಾದ ಎಸ್.ಡಿ.ಕೃಷ್ಣಪ್ಪ, ಪಿಸಿಕೆ ರೆಡ್ಡಿ, ಟಿ.ರಾಮಣ್ಣ, ಎಂ.ಆರ್.ಮಂಜುನಾಥ್, ಎಂ.ಜಿ.ಶ್ರೀನಿವಾಸಮೂರ್ತಿ, ಇಒ ಮಹಾಲಿಂಗಯ್ಯ, ತಹಸೀಲ್ದಾರ್ ಕೆ.ರಮೇಶ್, ಪುರಸಭೆ ಸದಸ್ಯರಾದ ಗೋಪಿನಾಥ್, ಅಯೂಬ್, ಆಲೀಂ, ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.