ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯ ಸ್ತುತ್ಯರ್ಹ: ಶಿವಪ್ಪ
ತುಮಕೂರು: ಗ್ರಾಹಕ ಸ್ನೇಹಿ ಠೇವಣಿ ಹಾಗೂ ಸಾಲ ಯೋಜನೆಗಳೊಂದಿಗೆ ಕಾವೇರಿ ಗ್ರಾಮೀಣ ಬ್ಯಾಂಕ್ ತನ್ನ ಸೇವಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಸಿ.ಎ.ಶಿವಪ್ಪ ಹೇಳಿದರು.
ಅವರು ಕಾವೇರಿ ಗ್ರಾಮೀಣ ಬ್ಯಾಂಕ್ನ ತುಮಕೂರಿನ ಗೋಕುಲ ಬಡಾವಣೆ ಶಾಖೆಯನ್ನು ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸುವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಉತ್ತಮ ಸೇವೆಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಮನೆ ಮಾತಾಗಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಇದೀಗ ನಗರ ಪ್ರದೇಶದಲ್ಲಿಯೂ ತನ್ನ ಶಾಖೆಗಳನ್ನು ವಿಸ್ತರಿಸುತ್ತಿರುವುದು ಸ್ತುತ್ಯರ್ಹ ಎಂದರು.
ಕಾವೇರಿ ಗ್ರಾಮೀಣ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ.ಎನ್.ಪ್ರಸನ್ನಸಿಂಹ ಮಾತನಾಡಿ, ಆಕರ್ಷಕ ಬಡ್ಡಿ ದರಗಳೊಂದಿಗೆ ಠೇವಣಿದಾರರಿಗೆ ಹೆಚ್ಚಿನ ಲಾಭವನ್ನು ತರುವ ಕನಕಧಾರ ಠೇವಣಿ ಯೋಜನೆ ಮತ್ತು ನಿಯಮಿತ ಆದಾಯವುಳ್ಳವರಿಗಾಗಿ ಕಾವೇರಿ ಲಕ್ಪತಿ ಎಂಬ ನೂತನ ಠೇವಣಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಎಸ್ಬಿಐ ಲೈಫ್ ಸಹಯೋಗದೊಂದಿಗೆ ವಿಮಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಕಾವೇರಿ ಗ್ರಾಮೀಣ ಬ್ಯಾಂಕ್ನ ತುಮಕೂರು ವಲಯದ ಪ್ರಾದೇಶಿಕ ವ್ಯವಸ್ಥಾಪಕ ಕೆ.ಟಿ.ಮಂಜುನಾಥಯ್ಯ ಮಾತನಾಡಿ, ತುಮಕೂರು ನಗರದಲ್ಲಿ ಐದು ಶಾಖೆಗಳು ಸೇರಿದಂತೆ ತುಮಕೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 57 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇನ್ನೂ ಐದು ನೂತನ ಶಾಖೆಗಳನ್ನು ಪ್ರಾರಂಭಿಸಲಾಗುವುದು ಎಂದರು. ಗ್ರಾಹಕರ ಅನುಕೂಲಕ್ಕಾಗಿ ಎನ್ಇಎಫ್ಟಿ, ಆರ್ಟಿಜಿಎಸ್, ಎಟಿಎಂ ಕಾರ್ಡ್ ಸೌಲಭ್ಯಗಳಿದ್ದು ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಸಾಲ ಒದಗಿಸಲಾಗಿದೆ ಎಂದರು.
ಶಾಖೆ ವ್ಯವಸ್ಥಾಪಕ ಬಿ.ಕಂಚಿರಾಯ, ಬ್ಯಾಂಕಿನ ಹಿರಿಯ ಅಧಿಕಾರಿ ಕೆ. ರಾಘವೇಂದ್ರ, ಎಂ.ಎನ್.ಸುರೇಶ್ ಬಾಬು, ವಿ. ಶ್ರೀನಾಥ್, ಎಂ.ಎನ್.ವೆಂಕಟೇಶಮೂರ್ತಿ, ಸಿ.ಶಿವಕುಮಾರ್, ಕೆ.ಬಿ.ಚಂದ್ರಶೇಖರ್, ಡಿ.ಆರ್. ಮೋಹನ್ ಕುಮಾರ್, ಬಿ.ಸಿ.ಶಿವಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

