ತುಮಕೂರು

ತನಿಖೆಗಾಗಿ ಹೂತ ಮಗು ಶವ ಹೊರ ತೆಗೆದರು!

Published On :

ಕುಣಿಗಲ್: ಆರೋಪಿಯ ಡಿಎನ್ಎ ಪತ್ತೆ ಹಚ್ಚಲು, ಮಗುವಿನ ಹೂತಿದ್ದ ಮೃತದೇಹದ ಅವಶೇಷಗಳನ್ನು, ದೊಡ್ಡಕೆರೆ ಅಂಗಳದಲ್ಲಿ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಹೊರ ತೆಗೆದು ಗುರುವಾರ ಪರಿಶೀಲಿಸಲಾಯಿತು.
ತಾಲೂಕಿನ ಯಡ್ಡಿಗೆರೆ ಗ್ರಾಮದ ಯುವತಿಯನ್ನು(20 ವರ್ಷ) ಇದೇ ಗ್ರಾಮದ ಶಂಕರ್ ಮದುವೆಯಾಗುವುದಾಗಿ ನಂಬಿಸಿ, ಸಲುಗೆಯಿಂದ ನಡೆದುಕೊಂಡ ಕಾರಣ ಆಕೆ ಗರ್ಭವತಿಯಾದಳು. ನಂತರ ಆಕೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯೆ ಹಾಗೂ ದಾದಿಯೊಬ್ಬರ ಸಹಕಾರದಿಂದ ಗರ್ಭಪಾತ ಮಾಡಿಸಿ ಮದುವೆಯಾಗಲು ನಿರಾಕರಿಸಿದನೆಂದು ಯುವತಿ ಅಮೃತೂರು ಠಾಣೆಗೆ ದೂರು ನೀಡಿದ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಹೊರಟ ಪೊಲೀಸರಿಗೆ ಗರ್ಭಪಾತ ಮಾಡಿಸುವ ಸಮಯದಲ್ಲಿ ಯುವತಿ ಎಂಟು ತಿಂಗಳ ಗರ್ಭ ಧರಿಸಿದ್ದರಿಂದ, ಚೆನ್ನಾಗಿ ಬೆಳೆದಿದ್ದ ಹೆಣ್ಣುಮಗುವನ್ನು ದಾದಿಯೊಬ್ಬರು ಮಕ್ಕಳಿಲ್ಲದವರಿಗೆ ಮಾರಾಟ ಮಾಡಿದ್ದಾರೆಂದು ವದಂತಿ ಹರಡಿತ್ತು. ಗರ್ಭಪಾತದ ನಂತರ, ಅನಾಮಿಕ ಕುಟುಂಬದವರೊಬ್ಬರು ತಾವೇ ಮಗು ಸಾಕುತ್ತೇವೆಂದು ಪಡೆದು, ಕೆಲ ದಿನದ ನಂತರ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಆ ಮಗುವನ್ನು ಪಟ್ಟಣದ ಮಧ್ಯ ಭಾಗದಲ್ಲಿರುವ ಕುಡಿಯುವ ನೀರು ಪೂರೈಕೆಯ ಸಂಗ್ರಹಾರ ದೊಡ್ಡಕೆರೆ ಅಂಗಳದಲ್ಲಿ ಹೂತಿರುವ ವಿಷಯ ತನಿಖೆಯಲ್ಲಿ ಬಹಿರಂಗಗೊಂಡಿತು.
ಅತ್ಯಾಚಾರ ಪ್ರಕರಣದ ತನಿಖೆಗೆ ಪೂರಕ ಸಾಕ್ಷಿ ಸಂಗ್ರಹಿಸುವ ಸಲುವಾಗಿ, ಹೂಳಲಾಗಿರುವ ಎಂಟು ತಿಂಗಳ ಮಗುವಿನ ಮೃತದೇಹವನ್ನು ಗುರುವಾರ ಉಪವಿಭಾಗಾಧಿಕಾರಿ ಅನಂದ್, ತಹಸೀಲ್ದಾರ್ ಪುಟ್ಟನರಸಯ್ಯ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಗಣೇಶಬಾಬು ಸಮ್ಮುಖದಲ್ಲಿ ಸಿಪಿಐ ಧರ್ಮೇದ್ರ, ಅಮೃತೂರು ಪಿಎಸೈ ಮಂಜುನಾಥ ಹೂಗಾರ್ ಮತ್ತು ಸಿಬ್ಬಂದಿ ಹೊರತೆಗೆದು ಮೂಳೆ ಸೇರಿದಂತೆ ಇತರೆ ಅವಶೇಷಗಳನ್ನು ವಶಕ್ಕೆ ಪಡೆದರು.
ಅಧಿಕಾರಿಗಳು ಕೆರೆ ಅಂಗಳದಲ್ಲಿ ಮಗುವಿನ ಮೃತದೆಹಕ್ಕಾಗಿ ಶೋಧ ನಡೆಸುತ್ತಿರುವ ವಿಷಯ ತಿಳಿದು, ಸ್ಥಳದಲ್ಲಿ ನೂರಾರು ಜನ ಜಮಾಯಿಸಿದರು. ಗರ್ಭಪಾತ ಕಾನೂನು ಬಾಹಿರವಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಹೇಗೆ ಮಾಡಿಸಲಾಯಿತೆಂಬ ವಿಷಯ ಗುರುವಾರ ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಯಿತು. ಈ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.