ದಲಿತ ಕಾಲೋನಿಗಳಲ್ಲಿ ಅಗತ್ಯ ಸೌಲಭ್ಯಕ್ಕೆ ಅಧ್ಯಕ್ಷರ ಆಗ್ರಹ
ಪಾವಗಡ: ಜೀತ ಪದ್ಧತಿ ನಿರ್ಮೂಲನೆ ಸೇರಿದಂತೆ ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಜೀತ ಮಿಮುಕ್ತ ತಾ. ಅಧ್ಯಕ್ಷ ಸರವಾಟಪುರ ನರಸಿಂಹಪ್ಪ ಆಗ್ರಹಿಸಿದರು.
ಜೀತ ವಿಮುಕ್ತಿ ಕರ್ನಾಟಕ, ತಾಲೂಕು ಶಾಖೆಯಿಂದ ಶುಕ್ರವಾರ ತಾಲೂಕಿನ ನಲಿಗಾನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮೂಲಭೂತ ಸೌಲಭ್ಯ ಕುಂದುಕೊರತೆಗಳ ಅರಿವಿನ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಅವರು, ದಲಿತ ಕಾಲೋನಿಗಳು ಸೇರಿದಂತೆ ಸರ್ಕಾರದ ಅನುದಾನಗಳಲ್ಲಿ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡಿ ಎಂದರು.
ದಲಿತರು ಮತ್ತು ಜೀತದಾಳುಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಗ್ರಾಮಗಳಲ್ಲಿ ಇದುವರೆವಿಗೂ ಸಮರ್ಪಕ ಶೌಚಾಲಯಗಳಿಲ್ಲ. ಮನೆ ಹಂಚಿಕೆ ಸೇರಿದಂತೆ ವಿದ್ಯುತ್ ಸಮಸ್ಯೆ, ಕಾಲೋನಿಗಳಲ್ಲಿ ಸಿಸಿ ರಸ್ತೆಗಳ ದುರಸ್ತಿಗಳಿಲ್ಲ ಮತ್ತು ವಿಧವೆ, ನಿರ್ಗತಿಕರು ಹಾಗೂ ಅಂಗವಿಕಲರು ವೇತನದಿಂದ ವಂಚಿತರಾಗಿದ್ದಾರೆಂದು ಆರೋಪಿಸಿದರು.
ಪಡಿತರ ಚೀಟಿ,ಕುಡಿಯುವ ನೀರಿನ ಸಮಸ್ಯೆ,ಜಾತಿ ವ್ಯವಸ್ಥೆ,ಜೀತ ಪದ್ಧತಿ ಬಗ್ಗೆ ವಿವರಿಸಿ ಸಮಸ್ಯೆ ನಿವಾರಣೆ ಬಗ್ಗೆ ಗ್ರಾಪಂ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಗೆ ಮನವಿ ನೀಡಿದರು. ಗ್ರಾಪಂ ಅಧ್ಯಕ್ಷೆ ದುಗ್ಗಮ್ಮ ಮಾತನಾಡಿ ದಲಿತ ಪರ ಸಮಸ್ಯೆ ಸೇರಿದಂತೆ ಗ್ರಾಮದ ಮೂಲಭೂತ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಉಪ ತಹಶೀಲ್ಧಾರ್ ಅನಂತ್ರಾಜ್, ಕಂದಾಯ ಅಧಿಕಾರಿ ಗಿರೀಶ್, ಸಮಾಜ ಕಲ್ಯಾಣ ಇಲಾಖೆಯ ರಾಜ್ಕುಮಾರ್ ಮುಂತಾದವರು ಮೂಲಭೂತ ಸಮಸ್ಯೆ ನಿವಾರಣೆ ಬಗ್ಗೆ ವಿವರಿಸಿದರು. ತಾ. ಒಕ್ಕೂಟ ಅಧ್ಯಕ್ಷ ನರಸಿಂಹಪ್ಪ, ನಿಡಗಲ್ ಬಾಬು, ವೈ.ಎನ್.ಹೊಸಕೋಟೆ ಎಂ.ಎಲ್.ಕೃಷ್ಣಮೂರ್ತಿ,ನಾಗಲಮಡಿಕೆ ನರಸಿಂಹಪ್ಪ, ಕಸಬಾ ಅಂಜಿನಪ್ಪ ಮುಖಂಡ ದುಗ್ಗಪ್ಪ, ನರಸಿಂಹಪ್ಪ, ನಾಗಪ್ಪ,ಮುಂತಾದವರು ಉಪಸ್ಥಿತರಿದ್ದರು.
ನಾಳೆ ಸಿದ್ದಗಂಗಾ ಮಠದಲ್ಲಿ ಗಣರಾಜ್ಯೋತ್ಸವ
ತುಮಕೂರು: ಸಿದ್ದಗಂಗಾ ಮಠದ ಸಂಯುಕ್ತ ವಿದ್ಯಾರ್ಥಿ ಸಂಘದವತಿಯಿಂದ ಜ.26 ರಂದು ಬೆಳಗ್ಗೆ 7 ಗಂಟೆಗೆ ಸಿದ್ದಗಂಗಾ ಮಠದ ಆವರಣದಲ್ಲಿ 65 ನೇ ಗಣರಾಜ್ಯೋತ್ಸವ ಸಮಾರಂಭ ಏರ್ಪಾಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಜಿಪಂ ಸಿಇಓ ಗೋವಿಂದರಾಜು ಪಾಲ್ಗೊಳ್ಳಲ್ಲಿದ್ದಾರೆ. ಸಾನಿಧ್ಯವನ್ನು ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮಿಗಳು ವಹಿಸಲಿದ್ದು, ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ ಉಪಸ್ಥಿತರಿರುವರು.
ರಿಫಿಲ್ಲಿಂಗ್ ತಾಣಗಳ ಮೇಲೆ ದಾಳಿ: ಮೂವರ ಸೆರೆ
ಕುಣಿಗಲ್: ಗೃಹಬಳಕೆ ಅಡುಗೆ ಅನಿಲ ಸಿಲೆಂಡರ್ಗಳನ್ನು ಅಕ್ರಮವಾಗಿ ರಿಫಿಲ್ಲಿಂಗ್ ದಂಧೆಗೆ ಬಳಸುತ್ತಿದ್ದ ರಿಫಿಲ್ಲಿಂಗ್ ತಾಣಗಳ ಮೇಲೆ ಗುರುವಾರ ರಾತ್ರಿ ಎಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೆ.ಆರ್.ಎಸ್.ಅಗ್ರಹಾರದ ಪ್ರಕಾಶ್, ಬಿಳಿ ದೇವಾಲಯದ ಹೈದರ್ ಆಲಿ ಮತ್ತು ಮದ್ದೂರು ರಸ್ತೆಯ ಚೇತನ್ ಎಂದು ಗುರುತಿಸಲಾಗಿದೆ. ಪಟ್ಟಣದ ಗ್ಯಾಸ್ ರಿಫಿಲ್ಲಿಂಗ್ ಹೆಸರಾಂತ ತಾಣ ದೊಡ್ಡಕೆರೆ ಸಮೀಪದ ಆಟೋಶೆಡ್ನಲ್ಲಿ ತುಂಬುತ್ತಿದ್ದ ಇರ್ಫಾನ್ ಪರಾರಿಯಾಗಿದ್ದಾನೆ. ಬಹುತೇಕ ರಿಫಿಲ್ಲಿಂಗ್ ಘಟಕಗಳು ವಸತಿ ಪ್ರದೇಶಕ್ಕೆ ಹೊಂದಿಕೊಂಡಿದ್ದವಾಗಿದ್ದು, ಈ ಬಗ್ಗೆ ವ್ಯಾಪಕ ದೊರುಗಳು ಬಂದ ಹಿನ್ನೆಲೆಯಲ್ಲಿ, ಗುರುವಾರ ರಾತ್ರಿ ಎಎಸ್ಪಿ ಕಾರ್ತೀಕ್ ನೇತೃತ್ವದಲ್ಲಿ ಸಿಪಿಐ ಧರ್ಮೇಂದ್ರ, ಪಿಎಸೈ ಗುರುಪ್ರಸಾದ್ ಸಿಬ್ಬಂದಿ ಧಾಳಿ ನಡೆಸಿದರು.
ನಾಲ್ಕೂ ತಾಣಗಳಿಂದ 25 ಸಿಲೆಂಡರ್, ಮೂರು ಎಲೆಕ್ಟ್ನಾನಿಕ್ ತೂಕದ ಯಂತ್ರಗಳು, ಒಂದು ತೂಗುತಕ್ಕಡಿ, ಒಂದು ಮೋಟಾರ್ ಪಂಪ್ ವಶಕ್ಕೆ ಪಡೆದಿದ್ದಾರೆ.
ಗ್ಯಾಸ್ ಬೆಲೆ ಏರಿಕೆಯಿಂದಾಗಿ, ಬಹುತೇಕ ರಿಫಿಲ್ಲಿಂಗ್ ದಂಧೆಕೊರರು ಗೃಹಬಳಕೆ ಸಿಲೆಂಡರ್ಗಳನ್ನು ತಂದು ಅಕ್ರಮವಾಗಿ ಆಟೋಗಳಿಗೆ ತುಂಬುತ್ತಿದ್ದರು. ರಿಫಿಲ್ಲಿಂಗ್ ತಾಣಗಳ ನಿಯಂತ್ರಣಕ್ಕೆ ಪಟ್ಟಣದಲ್ಲಿ ಗ್ಯಾಸ್ ಬಂಕ್ ಸ್ಥಾಪನೆಗೆ ತಾಲೂಕು, ಜಿಲ್ಲಾಡಳಿತ ಸೇರಿದಂತೆ ಶಾಸಕರು, ಸಂಸದರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಟೋ ಚಾಲಕರಾದ ರಾಮು, ಜಗ, ಬಾಷ ಇತರರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

