ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಿಂದ ಬಲಿಷ್ಠ ರಾಷ್ಟ್ರ
ತುಮಕೂರು: ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಿಗೆ ದೇಶದ ನಾನಾ ಮೂಲೆಗಳಿಂದ ಆಗಮಿಸುವ ಯುವಕರು ತಮ್ಮ ನೋವು, ನಲಿವುಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಬಲಿಷ್ಠ ರಾಷ್ಟ್ರ ಕಟ್ಟಲು ನೆರವಾಗುತ್ತದೆ ಎಂದು ನೆಹರು ಯುವಕೇಂದ್ರದ ಕರ್ನಾಟಕ ವಿಭಾಗದ ನಿರ್ದೇಶಕ ಆರ್. ನಟರಾಜನ್ ತಿಳಿಸಿದ್ದಾರೆ.
ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಭಾರತೀಯ ಯುವಜನಸೇವೆ ಮತ್ತು ಕ್ರೀಡಾ ಮಂತ್ರಾಲಯದ ನೆಹರು ಯುವಕೇಂದ್ರದ ವತಿಯಿಂದ ಕರ್ನಾಟಕ ಸರಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಐದು ದಿನಗಳ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಅನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ವಿವಿಧೆತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರ. ದೇಶದಲ್ಲಿ ಐಕ್ಯತೆ ಉಳಿಯಬೇಕಾದರೆ ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ತೊಲಗಬೇಕು. ಪರಸ್ಪರರಲ್ಲಿ ನಂಬಿಕೆ ಮೂಡಬೇಕು. ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಈ ನಿಟ್ಟಿನಲ್ಲಿ ನೆರವಾಗಲಿದೆ ಎಂದರು.
ಯುವಜನರಲ್ಲಿ ಜಾತಿ, ಧರ್ಮ, ಭಾಷೆ, ಸಂಸ್ಕೃತಿಯ ಹೆಸರಿನಲ್ಲಿ ಇರುವ ಆಂಧಾಭಿಮಾನವನ್ನು ತೊಲಗಿಸಿ ಅವರಲ್ಲಿ ಭಾರತೀಯರು ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿಸುವ ನಿಟ್ಟಿನಲ್ಲಿ ಇಂತಹ ಭಾವೈಕ್ಯತಾ ಶಿಬಿರಗಳನ್ನು ಏರ್ಪಡಿಸುತ್ತಿದ್ದು, ಇಲ್ಲಿ ಭಾರತದ ಬೇರೆ ಬೇರೆ ಪ್ರದೇಶಗಳಿಂದ ಬರುವ ಜನರು ತಾವು ಅನುಭವಿಸುತ್ತಿರುವ ತೊಂದರೆಯ ಜೊತೆಗೆ ನಮ್ಮ ಮುಂದಿರುವ ಸವಾಲುಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ದೇಶದಲ್ಲಿ ಐಕ್ಯತೆ ಮೂಡಿಸಲು ಪ್ರಯತ್ನ ನಡೆಸಲಿದ್ದಾರೆ ಎಂದು ನಟರಾಜನ್ ತಿಳಿಸಿದರು.
ಆಯೋಜನೆ: ಯುವಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮತ್ತು ಐಕ್ಯತೆ ಮೂಡಿಸುವ ನಿಟ್ಟಿನಲ್ಲಿ 31 ರಾಜ್ಯಮಟ್ಟದ ಭಾವೈಕ್ಯತಾ ಶಿಬಿರಗಳನ್ನು, 5 ಜಿಲ್ಲಾ ಮಟ್ಟದ ಶಿಬಿರಗಳನ್ನು ಮತ್ತು 57 ರಾಷ್ಟ್ರೀಯ ಶಿಬಿರಗಳನ್ನು ಆಯೋಜಿಲಾಗುತ್ತಿದೆ. ಈಗಾಗಲೇ ಬೆಂಗಳೂರು, ಚಿತ್ರದುರ್ಗಗಳಲ್ಲಿ ರಾಜ್ಯ ಮಟ್ಟದ ಶಿಬಿರಗಳು ಮುಕ್ತಾಯವಾಗಿದ್ದು, ಐದು ದಿನಗಳ ಕಾಲ ತುಮಕೂರಿನಲ್ಲಿ ಶಿಬಿರ ನಡೆಯಲಿದೆ.
ಕೇರಳ, ತಮಿಳುನಾಡು, ಮಹಾರಾಷ್ಟ್ರ, ಸಿಕ್ಕಿಂ, ಆಂಧ್ರಪ್ರದೇಶ, ಪಂಜಾಬ್, ಜಮ್ಮು ಕಾಶ್ಮೀರ ಹಾಗೂ ಕರ್ನಾಟಕದ 180 ರಿಂದ 200 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಐದಕ್ಕೂ ಹೆಚ್ಚು ಹಿರಿಯ ಉಪನ್ಯಾಸಕರ ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಯನ್ನು ಕುರಿತು ಉಪನ್ಯಾಸ ನೀಡಲಿದ್ದಾರೆ.
ತಾವೆಲ್ಲರೂ ಸಹೋದರ ಭಾವನೆಯಿಂದ ಈ ಶಿಬಿರದಲ್ಲಿ ಭಾಗವಹಿಸಿ ದೇಶದ ಐಕ್ಯತೆ ಕಾಪಾಡಬೇಕೆಂದು ನಟರಾಜನ್ ಮನವಿ ಮಾಡಿದರು.
ಯುವಕರ ಪಾತ್ರ ಮಹತ್ವದ್ದು: ಪ್ರಾಸ್ತಾವಿಕವಾಗಿ ಮಾತನಾಡಿದ ನೆಹರು ಯುವಕೇಂದ್ರ ಬೆಳಗಾವಿ ಜಿಲ್ಲೆಯ ಸಂಯೋಜಕ ಜಮಾದಾರ್ ಅವರು, ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ರಾಷ್ಟ್ರದ ಐಕ್ಯತೆಯನ್ನು ಕಾಪಾಡುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಇಂದು 10 ರಾಜ್ಯಗಳ ಸುಮಾರು 200 ಯುವಕರನ್ನು ಒಂದೆಡೆ ಕಲೆಹಾಕಿ ಭವಿಷ್ಯದ ಭಾರತವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಉಪನ್ಯಾಸ, ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಹಲವು ಸಂಸ್ಕೃತಿ, ಭಾಷೆಗಳ ಸಂಗಮವಾಗಿರುವ ಈ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಐದು ದಿನಗಳ ಕಾಲ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ 2012-13 ನೇ ಸಾಲಿನ ಜಿಲ್ಲಾ ಯುವ ಪ್ರಶಸ್ತಿಯನ್ನು ತುಮಕೂರು ಜಿಲ್ಲೆಯ ಸತ್ಯಸಾಯಿ ಮಹಿಳಾ ಸಮಾಜಕ್ಕೆ ನೀಡಿ ಗೌರವಿಸಲಾಯಿತು. ಸಂಘದ ಪರವಾಗಿ ಸುನಂದ ಪ್ರಶಸ್ತಿ ಸ್ವೀಕರಿಸಿದರು. ವೇದಿಕೆಯಲ್ಲಿ ಜಿಲ್ಲಾ ನೆಹರು ಯುವಕೇಂದ್ರದ ಸಮನ್ವಯಾಧಿಕಾರಿ ಆಂಧಪ್ಪದೋನಿ, ಡಾ.ಸಂಜಯ್ ನಾಯಕ್, ಜಿ.ಜಗದೀಶ್, ಆರ್.ಉಮೇಶ್, ಕೆ.ಆರ್. ಕೌಶಿಕ್, ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

