ತುಮಕೂರು

ಖಾಸಗಿ ಹಾಲು ವಿತರಣಾ ವಾಹನದ ಮೇಲೆ ದಾಳಿ

Published On :

ಕ.ಪ್ರ. ವಾರ್ತೆ    ತುರುವೇಕೆರೆ    ಜ. 29
ಪಟ್ಟಣದಲ್ಲಿ ಬುಧವಾರ ಬೆಳಗಿನ ಜಾವ ವಾಹನವೊಂದರಲ್ಲಿ ಖಾಸಗಿ ಹಾಲನ್ನು ಮಾರಾಟ ಮಾಡಲಾಗುತ್ತಿತ್ತು.   ಇದನ್ನು ಗಮನಿಸಿದ ಜಿಲ್ಲಾ ಹಾಲು ಒಕ್ಕೂಟದ ತಾಲೂಕು ನಿರ್ದೇಶಕ ಸಿ.ಬಿ.ಮಹಲಿಂಗಯ್ಯ ವಾಹನದಲ್ಲಿ ಮಾರಾಟ ಮಾಡಲಾಗುತ್ತಿದ್ದ ಸಿಬ್ಬಂದಿಯನ್ನು ಹಾಲಿನ ಗುಣಮಟ್ಟದ ಬಗ್ಗೆ ಕೇಳಿದ್ದಾರೆ. ಒಂದು ಪಾಕೆಟ್ ಹಾಲಿಗೆ ಒಂದು ಉಚಿತ ಎಂದು ಸಾವಿರಾರು ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿತ್ತು. ಇದನ್ನು ಆಕ್ಷೇಪಿಸಿದ ಮಹಲಿಂಗಯ್ಯನವರಿಗೆ ಸಿಬ್ಬಂದಿಯಿಂದ ಸೂಕ್ತ ಉತ್ತರ ಬರಲಿಲ್ಲ.
 ಗುಣಮಟ್ಟದ ಬಗ್ಗೆ ಅನುಮಾನಗೊಂಡ ಮಹಲಿಂಗಯ್ಯ ಕೂಡಲೇ ತಮ್ಮ ಒಕ್ಕೂಟದ ಮಾರುಕಟ್ಟೆ ಅಧಿಕಾರಿಗಳಿಗೆ, ತಹಸೀಲ್ದಾರ್, ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಗಳು ಹಾಗೂ ಆಹಾರ ನಿರೀಕ್ಷಕರಿಗೆ ದೂರವಾಣಿ ಮೂಲಕ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡರು. ಖಾಸಗಿ ಕಂಪನಿ ಜನರಿಗೆ ವಿತರಣೆ ಮಾಡುತ್ತಿದ್ದ ಹಾಲಿನ ಪ್ಯಾಕೆಟ್ ಮೇಲೆ ಕೊಬ್ಬಿನ ಅಂಶ 4.5 ಅಂತ ಇತ್ತು. ಆದರೆ ಹಾಲನ್ನು ಖುದ್ದಾಗಿ ಪರಿಕ್ಷೆ ಮಾಡಲಾಗಿ ಕೇವಲ 3.4 ಅಂಶ ಮಾತ್ರ ಇರುವುದು ಖಚಿತವಾಯಿತು. ನಂತರ ಹಾಲು ಬಹಳ ಗಟ್ಟಿ ಇರುವ ಬಗ್ಗೆ ಅನುಮಾನ ಬಂದಿದ್ದರಿಂದ ಹಾಲಿನ ಮಾದರಿಯನ್ನು ಸಂಗ್ರಹಮಾಡಿ ಹೆಚ್ಚಿನ ತನಿಖೆಗಾಗಿ ಲ್ಯಾಬ್ಗೆ ಕಳಿಸಲಾಗಿದೆ.
ಆರೋಗ್ಯದ ಬಗ್ಗೆ ದುಷ್ಪರಿಣಾಮ: ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಹಲಿಂಗಯ್ಯ ಇತ್ತೀಚೆಗೆ ಕೆಲವು ಖಾಸಗಿ ಕಂಪನಿಗಳು ಬೇರೆ ರಾಜ್ಯಗಳಿಂದ ಹಾಲನ್ನು ಸರಬರಾಜು ಮಾಡಿಕೊಂಡು ವಿವಿಧ ರಾಸಾಯನಿಕ ಪದಾರ್ಥಗಳನ್ನು ಕಲಬೆರಕೆ ಮಾಡಿ ಹಾಲನ್ನು ಗಟ್ಟಿ ಎಂದು ನಂಬಿಸುತ್ತಿವೆ. ಇದರಿಂದ ಜನರೂ ಸಹ ಗಟ್ಟಿ ಹಾಲೆಂದು ನಂಬಿ ವಿಷಕಾರಿ ಹಾಲನ್ನು ತಮಗೆ ಅರಿವಿಲ್ಲದೇ ಕೊಂಡೊಯ್ಯುತ್ತಿದ್ದಾರೆ. ಹಾಲಿನ ಬಗ್ಗೆ ಪಟ್ಟಣ ಪ್ರದೇಶದಲ್ಲಿ ಅರಿವು ಹೆಚ್ಚಾಗಿದ್ದು ಖಾಸಗಿ ಕಂಪನಿಗಳಿಗೆ ಬಹಳ ಹೊಡೆತ ಬಿದ್ದಿದೆ. ಇದನ್ನು ಗಮನಿಸಿರುವ ಖಾಸಗಿ ಹಾಲು ಮಾರಾಟಗಾರರು ಈಗ ಗ್ರಾಮಾಂತರ ಪ್ರದೇಶ ಹಾಗೂ ಕೊಳಚೆ ಪ್ರದೇಶಗಳಲ್ಲಿ ತಮ್ಮ ಹಾಲನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಆರಂಭದಲ್ಲಿ ಕಡಿಮೆ ಹಣದಲ್ಲಿ ಹಾಲು ಕೊಡುವ ನಾಟಕ ಮಾಡುವ ಖಾಸಗಿ ಹಾಲಿನ ಮಾರಾಟಗಾರರು ನಂತರ ಮನಸೋ ಇಚ್ಛೆ ಹಾಲಿನ ದರವನ್ನು ಏರಿಕೆ ಮಾಡಿ ಮೋಸಗೊಳಿಸುವರು ಎಂದು ಮಹಲಿಂಗಯ್ಯ ದೂರಿದರು. ಜನರೂ ಹಣ ಕೊಟ್ಟು ಅನಾರೋಗ್ಯವನ್ನು ಕೊಂಡುಕೊಳ್ಳುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಸ್ತು ಕ್ರಮಕ್ಕೆ ಶಿಫಾರಸು: ಖಾಸಗಿ ಹಾಲು ಮಾರಾಟಗಾರರು ಸಾರ್ವಜನಿಕರಿಗೆ ವಿತರಣೆ ಮಾಡಲು ತಂದಿದ್ದ ಹಾಲು ದೋಷ ಪೂರಿತ ಹಾಗೂ ವಂಚನೆ ಎಂಬುದು ತಪಾಸಣೆಯಿಂದ ದೃಢಪಟ್ಟಲ್ಲಿ ಆ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ತಾವು ಶಿಫಾರಸು ಮಾಡಿರುವುದಾಗಿ ಮಹಲಿಂಗಯ್ಯ ತಿಳಿಸಿದರು. ಸಾರ್ವಜನಿಕರೂ ಕಡಿಮೆ ಹಣಕ್ಕೆ ಸಿಗುವ ಹಾಲನ್ನು ಕೊಳ್ಳಬಾರದು ಹಾಗೂ ರಾಜ್ಯದ ಹಾಗೂ ಗ್ರಾಮಾಂತರ ಪ್ರದೇಶದ ಲಕ್ಷಾಂತರ ರೈತರ ಬೆವರಿನ ಫಲವಾಗಿ ಜನ್ಮತಾಳಿರುವ ನಂದಿನಿ ಹಾಲಿನ ಉತ್ಪನ್ನಗಳನ್ನೇ ಬಳಕೆ ಮಾಡಬೇಕು ಎಂದು ಮಹಲಿಂಗಯ್ಯ ಜನರಲ್ಲಿ ವಿನಂತಿಸಿಕೊಂಡರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ಮಾರುಕಟ್ಟೆ ಅಧಿಕಾರಿಗಳು, ಹಾಗೂ ಸ್ಥಳೀಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಣ್ಣ ಉಪಸ್ಥಿತರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.