ರೈತರ ಜಮೀನಿಗೆ ದರ ನಿಗದಿಗೆ ಸರ್ಕಾರದ ನಿರ್ಲಕ್ಷ್ಯ
ಕ.ಪ್ರ.ವಾರ್ತೆ ತುಮಕೂರು ಜ. 30
ರಾಯದುರ್ಗ-ತುಮಕೂರು, ದಾವಣಗೆರೆ-ತುಮಕೂರು ರೇಲ್ವೆ ಮಾರ್ಗಗಳಿಗೆ ರೈತರ ಭೂಸ್ವಾಧೀನ ಮಾಡುವ ಕ್ರಮದಲ್ಲಿ ರೈತರ ಜಮೀನಿಗೆ ಸ್ಥಳೀಯ ಮಾರುಕಟ್ಟೆ ದರ ನಿಗದಿಪಡಿಸಲು ಈ ಭಾಗದ ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಪ್ರೊಫೆಸರ್ ಎಂ.ಎಸ್. ಸ್ವಾಮಿನಾಥನ್ ಅಧ್ಯಕ್ಷತೆಯಲ್ಲಿ ರೈತರ ರಾಷ್ಟ್ರೀಯ ಸಮಿತಿ ಐದು ವರದಿಗಳನ್ನು ಸಲ್ಲಿಸಿದ್ದು ಮೊದಲ ನಾಲ್ಕು ವರದಿಗಳಿಗೆ ಪೂರಕವಾಗಿ ಕೊನೆಯ ವರದಿಯು ರೈತರ ಸಂಕಷ್ಟಗಳ ಹಾಗೂ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಲ್ಲದೆ ರಾಷ್ಟ್ರೀಯ ಪಾಲಿಸಿಯನ್ನು ರೈತರಿಗಾಗಿ ಶಿಪಾರಸು ಮಾಡಿದೆ. ಈ ಆಯೋಗದ ವರದಿಯನ್ನು ಈ ಕೂಡಲೇ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಸುಮಾರು 85 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. ಈ ಘೋಷಣೆಗೆ ಸರಿಯಾಗಿ ಮಾನದಂಡ ಇರುವುದಿಲ್ಲ. ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಲ್ಪಟ್ಟ ತಾಲೂಕಿನಲ್ಲಿ ಪಂಚಾಯ್ತಿ ಮತ್ತು ಹೋಬಳಿಗಳನ್ನು ಆಯ್ಕೆ ಮಾಡಿಕೊಂಡು ಕೇವಲ ರಾಜಕೀಯ ಹಿತದೃಷ್ಟಿಯಿಂದ ಘೋಷಿಸಲ್ಪಟ್ಟಿದೆ. ಇದುವರೆಗೂ ಇದರ ಅಡಿಯಲ್ಲಿ ರೈತರಿಗೆ ಸರಿಯಾದ ಪರಿಹಾರ ಸಿಗಲೇ ಇಲ್ಲ. ಈ ತಕ್ಷಣದಲ್ಲಿ ರಾಜ್ಯ ಸರ್ಕಾರ ಮಹಾರಾಷ್ಟ್ರ ರಾಜ್ಯದ ವಿದರ್ಭ ಮಾದರಿಯಲ್ಲಿ ಪರಿಹಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಜಾನುವಾರು ಸಾವು: ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಕಾಲಬಾಯಿ ರೋಗ ಹರಡಿದ್ದು, ಇದುವರೆಗೆ ಸರಿಸುಮಾರು 1500 ಕ್ಕೂ ಹೆಚ್ಚು ಜಾನುವಾರುಗಳು ಸಾವನಪ್ಪಿವೆ. ಸಾವಿರಾರು ಜಾನುವಾರುಗಳು ಕಾಯಿಲೆಗೆ ತುತ್ತಾಗಿವೆ. ಹಾಗಾಗಿ ಬಿಜೆಪಿ ರೈತ ಮೋರ್ಚಾದ ಪ್ರತಿಭಟನೆಗಳಿಂದಾಗಿ ರಾಜ್ಯ ಸರ್ಕಾರ ಸಾವನ್ನಪ್ಪಿದ ಪ್ರತಿ ಹಸುವಿಗೆ 2500 ರು. ಕೊಡಲು ನಿಶ್ಚಯಿಸಿದೆ. ಕಾಲಬಾಯಿರೋಗ ನಿಯಂತ್ರಣವಿಲ್ಲದೆ ಈ ಚಳಿಗಾಲದ ಅವಧಿಯಲ್ಲಿ ತೀವ್ರವಾಗಿ ಹರಡುತ್ತಿದ್ದು, ಸರ್ಕಾರ ಈ ಸಮಯದಲ್ಲಿ ಪರಿಹಾರ ಕೊಡುವುದನ್ನು ನಿಲ್ಲಿಸಿರುವುದು ರೈತ ವಿರೋಧಿ ನೀತಿಗೆ ಸ್ಪಷ್ಟ ಉದಾಹರಣೆ. ತಕ್ಷಣ ಪರಿಹಾರ ಹಣ ಬಿಡುಗಡೆ ಮಾಡಬೇಕು ರೋಗ ಮುಂದುವರೆದಿರುವುದರಿಂದ ಸರ್ಕಾರ ಪರಿಹಾರ ಕೊಡುವುದನ್ನು ಮುಂದುವರೆಸಬೇಕು ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಎಂ.ಬಿ. ನಂದೀಶ್, ಶಿವಪ್ರಸಾದ್, ಪ್ರೇಮಾ ಹೆಗ್ಗಡೆ ಇತರರು ಇದ್ದರು.
ಬೆಲೆ ಕುಸಿತದಿಂದ ರೈತ ಕಂಗಾಲು
ಬಿಜಾಪುರ ಜಿಲ್ಲೆಯಲ್ಲಿ ಅತ್ಯಂತ ಹೇರಳವಾಗಿ ತೊಗರಿ ಬೆಳೆಯನ್ನು ಬೆಳೆಯುತ್ತಿದ್ದು, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೊಗರಿ ಮಂಡಳಿಯಿಂದ ರೈತರ ತೊಗರಿಯನ್ನು ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ವಿಜಾಪುರ ಜಿಲ್ಲೆಯ ಸಿಂಧಗಿ, ಇಂಡಿ, ಬ.ಬಾಗೇವಾಡಿ, ಮುದ್ದೆಬಿಹಾಳ, ಬಿಜಾಪುರದಲ್ಲಿ ತೆರೆಯಲಾಗಿದ್ದು, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಖರೀದಿ ಪ್ರಾರಂಭಿಸಿದ್ದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ದಿನಾ ಖರೀದಿ ಕೇಂದ್ರಕ್ಕೆ 10 ಜನ ರೈತರಿಂದ ಖರೀದಿಸಿದರೆ, ಬಹಳ ದಿನಗಳ ವರೆಗೆ ಖರೀದಿ ಮುಂದುವರಿಸಬೇಕಾಗುತ್ತದೆ. ಸುಮಾರು 1500, 1600 ರೈತರು, ಪ್ರತಿಯೊಂದು ಕೇಂದ್ರದಲ್ಲಿ ಹೆಸರು ನೋಂದಾಯಿಸಿದ್ದಾರೆ.
ರೈತರಿಗೆ ಅನುಕೂಲ ಮಾಡಿ
ಆದಷ್ಟು ಬೇಗ ತೊಗರಿ ಮಂಡಳಿಯ ಎಂ.ಡಿ.ಅವರು ಹೆಚ್ಚಿನ ಪ್ರಮಾಣದಲ್ಲಿ ತೂಕದ ತಕ್ಕಡಿಯನ್ನು ಹೆಚ್ಚಿಸಿ, ಖರೀದಿಯನ್ನು ಫೆಬ್ರವರಿ ಕೊನೆಯ ವಾರದೊಳಗೆ ಮುಗಿಸಬೇಕು. ರೈತರಿಗೆ ಅನುಕೂಲ ಮಾಡಿಕೊಡಬೇಕು. ಹೆಸರು ನೋಂದಾಯಿಸಿರುವ ಎಲ್ಲಾ ರೈತರ ತೊಗರಿಯನ್ನು ಖರೀದಿಸಬೇಕು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

