ತುಮಕೂರು

ಸಮನ್ವಯತೆ ಸಾಧಿಸುವ ಕೆಲಸ ಮಾಡಬೇಕಿದೆ

Published On :

ಕ.ಪ್ರ.ವಾರ್ತೆ ೤ ತುಮಕೂರು, ೤ ಜ.30
ವಿಭಿನ್ನ ಸಂಸ್ಕೃತಿ, ಭಾಷೆ, ಧರ್ಮವನ್ನು ಹೊಂದಿರುವ ಭಾರತದಲ್ಲಿ ಸಮನ್ವಯತೆ ಸಾಧಿಸುವ ಕೆಲಸವನ್ನು ಯುವಕರು ಮಾಡಬೇಕಾಗಿದೆ ಎಂದು ಸಾಹಿತಿ ಕೆ.ಬಿ.ಸಿದ್ದಯ್ಯ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾರತೀಯ ಯುವಜನಸೇವೆ ಮತ್ತು ಕ್ರೀಡಾ ಮಂತ್ರಾಲಯದ ನೆಹರು ಯುವಕೇಂದ್ರ ಹಾಗೂ ಕರ್ನಾಟಕ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ದಿಸೆಯಲ್ಲಿ ಯುವಕರು ಗ್ರಾಮೀಣ ಭಾಗಕ್ಕೆ ವಾಪಸಾಗುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಬಡವ-ಶ್ರೀಮಂತ, ಗ್ರಾಮೀಣ-ನಗರ, ವಿದ್ಯಾವಂತ-ಅವಿದ್ಯಾವಂತ ಹೀಗೇ ಹಲವು ರೀತಿಯ ಭಾರತಗಳಿವೆ. ಇವುಗಳು ಒಂದು ಗೂಡದಿದ್ದರೆ ಬಲಿಷ್ಠವೆಂಬುದು ಕನಸಿನ ಮಾತಾಗುತ್ತದೆ. ಇದನ್ನು ಪ್ರತಿಯೊಬ್ಬ ಯುವಕರು ಮನಗಾಣಬೇಕು ಎಂದು ಕೆ.ಬಿ.ಸಿದ್ದಯ್ಯ ಸಲಹೆ ನೀಡಿದರು.
ಒಳ್ಳೆಯ ಬೆಳವಣಿಗೆ: ಇದು ನನ್ನ ಪಾಲಿಗೆ ಬಹಳ ದೊಡ್ಡ ಸಭೆ. ದೇಶದ ವಿವಿಧ ಭಾಗಗಳಿಂದ ಹೊಸ ಅಲೋಚನೆಗಳನ್ನು ಹೊಂದಿರುವ ಯುವಕರು ಇಲ್ಲಿ ಸೇರಿ ಎಲ್ಲರನ್ನು ಒಳಗೊಂಡು ಬಲಿಷ್ಠ ಭಾರತ ಕಟ್ಟುವ ಕನಸು ಕಾಣುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನೆಹರು ಯುವಕೇಂದ್ರದ ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾದ ಎಂ.ವಿ.ಶ್ರೀನಿವಾಸಯ್ಯ ಅವರು ನಿರಂತರವಾಗಿ ನೆಹರು ಯುವ ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ ಈ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ನಡೆಸಲು ಕಾರಣಿಭೂತರಾಗಿದ್ದಾರೆ ಎಂದು ಶ್ಲಾಘಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್ ಶಿವಕುಮಾರ್ ಶಿಬಿರಾರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡುವುದರ ಜೊತಗೆ ಡಾ.ರಾಜ್ ಅವರ ಬಬ್ರುವಾಹನ ಸಿನಿಮಾದ ಕಂದಪದ್ಯವನ್ನು ಹೇಳಿ ರಂಜಿಸಿದರು.
ಜಿಲ್ಲಾ ನೆಹರು ಯುವಕೇಂದ್ರದ ಸಮನ್ವಯಾಧಿಕಾರಿ ಆಂಧಪ್ಪದೋನಿ, ಡಾ.ಸಂಜಯ್ ನಾಯಕ್, ಜಿ. ಜಗದೀಶ್, ಆರ್. ಉಮೇಶ್, ಕೆ.ಆರ್. ಕೌಶಿಕ್, ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಗರದ ಟೌನ್ ಹಾಲ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಗೆ ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡ ಚಾಲನೆ ನೀಡಿದರು. ಜಿಲ್ಲಾ ನೆಹರು ಯುವಕೇಂದ್ರದ ಸಮನ್ವಯಾಧಿಕಾರಿ ಆಂಧಪ್ಪದೋನಿ, ಜಿಲ್ಲಾ ಸಮಿತಿಯ ಸಲಹೆಗಾರ ಎಂ.ವಿ. ಶ್ರೀನಿವಾಸಯ್ಯ,ಡಾ. ಸಂಜಯ್ ನಾಯಕ್, ಜಿ.ಜಗದೀಶ್, ಆರ್. ಉಮೇಶ್, ಕೆ.ಆರ್. ಕೌಶಿಕ್, ದರ್ಶನ್ ಮತ್ತಿತರರು ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ತಮ್ಮದೇ ಸಾಂಪ್ರದಾಯಕ ಉಡುಗೆ-ತೊಡುಗೆಗಳೊಂದಿಗೆ ಭಾಗವಹಿಸಿ ಗಮನ ಸೆಳೆದರು. ನಗರದ ಟೌನ್ ಹಾಲ್ ವೃತ್ತದಿಂದ ಆರಂಭವಾದ ಮೆರವಣಿಗೆ ಆಶೋಕರಸ್ತೆ, ಎಂ.ಜಿ. ರಸ್ತೆ, ಕೆ.ಅರ್. ರಸ್ತೆಯ ಮೂಲಕ ಸರಕಾರಿ ಜೂನಿಯರ್ ಕಾಲೇಜು ಮೈದಾನ ತಲುಪಿದ್ದು ನಂತರ ಜಿಲ್ಲಾ ಪ್ರೇಕ್ಷಣಿಯ ಸ್ಥಳಗಳ ಪ್ರವಾಸ ಕೈಗೊಳ್ಳಲಾಯಿತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.