ಯುವಕರಿಗೆ ಸವಾಲುಗಳ ಸ್ಪಷ್ಟ ಅರಿವು ಅಗತ್ಯ
ಕ.ಪ್ರ.ವಾರ್ತೆ ತುಮಕೂರು ಜ. 31
ಭವಿಷ್ಯದ ಆಡಳಿತಗಾರರಾಗಿರುವ ಯುವಕರಿಗೆ ಭಾರತದ ಮುಂದಿರುವ ಸವಾಲುಗಳ ಬಗ್ಗೆ ಸ್ಪಷ್ಟ ಅರಿವು ಅಗತ್ಯ ಎಂದು ನೆಹರು ಯುವಕೇಂದ್ರದ ನವದೆಹಲಿಯ ಉಪಾಧ್ಯಕ್ಷೆ ಎಲ್. ತಿಲೋತ್ತಮ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕೇಂದ್ರದ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ನೆಹರು ಯುವಕೇಂದ್ರ ಆಯೋಜಿಸಿದ್ದ ಐದು ದಿನಗಳ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಮುಕ್ತಾಯ ಸಮಾರಂಭವನ್ನು ನಗಾರಿ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬೇರೆ ರಾಜ್ಯಗಳಿಂದ ಆಗಮಿಸುವ ಯುವಜನತೆ ಪರಸ್ವರ ವಿಚಾರ ವಿನಿಮಯದ ಮೂಲಕ ತಮ್ಮ ಮುಂದಿರುವ ಸವಾಲುಗಳೇನು, ಅವುಗಳಿಗೆ ಪರಿಹಾರಗಳನ್ನು ಹೇಗೆ ಕಂಡುಕೊಳ್ಳಬಹುದು ಎಂಬ ಉದ್ದೇಶದಿಂದಲೇ ದೇಶದಾದ್ಯಂತ ಇಂತಹ ಭಾವೈಕ್ಯತಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಲ್ಲಿ ಭಾಗವಹಿಸುವ ಯುವಕರು ಶಿಬಿರಗಳಲ್ಲಿ ದೊರೆಯುವ ಸೌಕರ್ಯಗಳನ್ನು ಬಳಸಿಕೊಂಡು, ಕಲಾಪ್ರದರ್ಶನಕ್ಕೆ ಸೀಮಿತವಾಗದೆ, ತಾವು ಗ್ರಾಮಗಳಿಗೆ ತೆರಳಿದ ನಂತರವೂ ಶಿಬಿರಗಳಲ್ಲಿ ಕಲಿತದ್ಧನ್ನು ಜೀವನದಲ್ಲಿ ಅಳವಡಿಸಿಕೊಂಡು, ಜನರಲ್ಲಿ ಕೋಮು ಸಾಮರಸ್ಯ, ಜಾತಿ ಸಾಮರಸ್ಯದ ಬಗ್ಗೆ ಅರಿವು ಮೂಡಿಸಿ ಪರಸ್ಪರರಲ್ಲಿ ನಂಬಿಕೆ, ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ತಿಲೊತ್ತಮ ಸಲಹೆ ನೀಡಿದರು.
ಮುಂದಾಗಲಿ: ಭಾರತದ ವಿವಿಧ ಸಂಸ್ಕೃತಿ, ಭಾಷೆ, ಧರ್ಮ, ಜಾತಿಯ ಜನರನ್ನು ಒಳಗೊಂಡು ದೇಶ. ಕೆಲವೊಮ್ಮೆ ಪಟ್ಟಭದ್ರ ಹಿತಾಸಕ್ತಿಗಳು ಇವರ ನಡುವೆ ವೈಮನಸ್ಸು ಮೂಡುವಂತೆ ಮಾಡಿ ಆ ಮೂಲಕ ತಮ್ಮ ಬೇಳೆ ಬೆಯಿಸಿಕೊಳ್ಳುವ ಕೆಲಸ ಮಾಡುತ್ತವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು. ವಿಭಿನ್ನ ಭಾಷೆ, ಸಂಸ್ಕೃತಿ, ಸಂಪ್ರದಾಯ, ಆಹಾರ ಪದ್ಧತಿ, ಜೀವನಶೈಲಿ, ಉಡುಗೆ-ತೊಡುಗೆಗಳಲ್ಲಿ ಕಾಣಬಹುದಾಗಿದೆ. ಇವುಗಳ ನಡುವೆ ಸಮನ್ವಯತೆಯನ್ನು ಸಾಧಿಸುವ ಕೆಲಸವನ್ನು ಯುವಕರು ಮಾಡಬೇಕು.ಈ ನಿಟ್ಟಿನಲ್ಲಿಯೇ ನೆಹರು ಯುವಕೇಂದ್ರ ನಿರಂತರ ಪ್ರಯತ್ನ ನಡೆಸುತ್ತಾ ಆಖಂಡ ಭಾರತ ಕಟ್ಟುವ ಕನಸು ಕಾಣುತ್ತಿದೆ ಎಂದರು.
ನೆಹರು ಯುವಕೇಂದ್ರ ರಾಜ್ಯ ಸಲಹಾ ಸಮಿತಿ ಸದಸ್ಯ ಬಿ. ಮೋಹನ್ ಕುಮಾರ್ ಮಾತನಾಡಿ, ಕಳೆದ ಐದು ದಿನಗಳಿಂದ ಇಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಸಿಕ್ಕಿಂ, ಆಂಧ್ರಪ್ರದೇಶ, ಛತ್ತೀಸ್ಘಡ, ಪಂಜಾಬ್ ಮತ್ತು ಕರ್ನಾಟಕದ ಆರು ರಾಜ್ಯ ಮತ್ತು ಕರ್ನಾಟಕ ಐದು ಜಿಲ್ಲೆಗಳ ಯುವಕರು ಇಲ್ಲಿ ಭಾಗವಹಿಸಿ ಪರಸ್ವರ ವಿಚಾರ ವಿನಿಮಯದ ಜೊತೆಗೆ ದೇಶಿಯ ಕಲೆ ಪ್ರದರ್ಶನ ನೀಡಿದ್ದಾರೆ. ಇವರಿಗೆ ಅತ್ಯುತ್ತಮವಾಗಿ ವ್ಯವಸ್ಥೆ ಮಾಡಿಕೊಟ್ಟ ನೆಹರು ಯುವಕೇಂದ್ರ ಹಾಗೂ ಅವರ ಸಿಬ್ಬಂದಿಗಳಿಗೆ ಧನ್ಯವಾದ ಆರ್ಪಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ದಾರ್ಥ ಎಜುಕೇಷನ್ ಸೊಸೈಟಿಯ ಆಡಳಿತಾಧಿಕಾರಿ ಸಿ.ಎನ್. ನರಸಿಂಹಮೂರ್ತಿ ಮಾತನಾಡಿ, ವಿವಿಧತೆಯಿಂದ ಕೂಡಿರುವ ಭಾರತದ ಯುವಕರಿಗೆ ಪರಸ್ವರ ಪರಿಚಯಿಸುವ ಒಳ್ಳೆಯ ಕೆಲಸವನ್ನು ನೆಹರು ಯುವಕೇಂದ್ರ ಮಾಡುತ್ತಿದೆ. ಒಂದು ಬಲಿಷ್ಠ ಭಾರತ ಕಟ್ಟುವ ಕೆಲಸ ನಿರಂತರವಾಗಿ ನಡೆಯಲಿ ಎಂದರು.
ವಿವಿಧೆಡೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.ವೇದಿಕೆಯಲ್ಲಿ ಅಡಿಟರ್ ನಾಗರಾಜು, ನೆಹರು ಯುವಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಎಂ.ವಿ.ಶ್ರೀನಿವಾಸಯ್ಯ, ಜಿ. ಜಗದೀಶ್, ಆರ್. ಉಮೇಶ್, ಕೆ.ಆರ್. ಕೌಶಿಕ್, ಮಹಮದ್ ಹಸೀಬ್ವುಲ್ಲಾ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸೀಬಿ ರಂಗಯ್ಯ, ನೆಹರು ಯುವಕೇಂದ್ರದ ಸಮನ್ವಯಾಧಿಕಾರಿ ಎ. ಅಂದಪ್ಪ ದೋಣಿ, ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

