ನಾಮದ ಚಿಲುಮೆ ಎಂಬ ಜುಗಾರಿ ಸರ್ಕಲ್!
ಉಗಮ ಶ್ರೀನಿವಾಸ್
ತುಮಕೂರು: ಸಮೀಪದ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡೇ ಇರುವ ನಾಮದ ಚಿಲುಮೆ ಅಕ್ಷರಶಃ ಜುಗಾರಿಗಳ ಅಡ್ಡೆಯಾಗಿದೆ.
ರಾಮ, ಲಕ್ಷ್ಮಣ, ಸೀತೆ ಬಂದು ಹೋಗಿರುವ ಐತಿಹ್ಯ ಹೊಂದಿರುವ ನಾಮದಚಿಲುಮೆಯಲ್ಲಿ ಅಪರೂಪದ ಜೀವ ಸಂಕುಲವಿದೆ. ಪ್ರತಿ ಶನಿವಾರ, ಭಾನುವಾರ ನಾಮದ ಚಿಲುಮೆಗೆ ಸಾವಿರಾರು ಮಂದಿ ಪ್ರವಾಸಿಗರು ಬಂದು ಹೋಗುತ್ತಾರೆ.
ಈ ಹಿಂದೆ ತುಮಕೂರು ಜಿಲ್ಲೆಯನ್ನು ಪ್ರವಾಸಿ ಮಂದಿರವನ್ನಾಗಿ ರೂಪಿಸಬೇಕು ಎಂಬ ಯೋಚನೆ ಬಂದಾಗ ಜಿಲ್ಲಾಡಳಿತಕ್ಕೆ ಮೊದಲು ನೆನಪಾಗಿದ್ದೇ ಈ ನಾಮದ ಚಿಲುಮೆ ಮತ್ತು ದೇವರಾಯನದುರ್ಗ. ಆದರೆ, ಈಗ ನಾಮದ ಚಿಲುಮೆ ಆವರಣ ಹಾಗೂ ಸುತ್ತಮುತ್ತ ವಾರಂತ್ಯದಲ್ಲಿ ಮೋಜು ಮಸ್ತಿಯ ತಾಣವಾಗಿದೆ. ನಾಮದ ಚಿಲುಮೆಯಿಂದ ಆರಂಭವಾಗಿ ದೇವರಾಯನದುರ್ಗ ಬೆಟ್ಟದವರೆಗೂ ಎಗ್ಗಿಲ್ಲದೆ ನಡೆಯುತ್ತಿದೆ. ರಾತ್ರಿ ವೇಳೆ ಪಾನಗೋಷ್ಠಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ದೇವರಾಯನದುರ್ಗ ಬೆಟ್ಟದಲ್ಲಿ ಪೊಲೀಸ್ ಠಾಣೆ ಇದ್ದರೂ ಕೂಡ ಮೋಜು ಮಸ್ತಿಗೆ ಕಡಿಮೆ ಇಲ್ಲ.
ನಿರಂತರ ಬೇಟೆ: ಅಪರೂಪದ ಸಸ್ಯಸಂಪತ್ತು, ವನ್ಯಜೀವಿಗಳ ತಾಣವಾಗಿರುವ ದೇವರಾಯನದುರ್ಗ ಹಾಗೂ ನಾಮದಚಿಲುಮೆ ಸುತ್ತಮುತ್ತ ನಿರಂತರವಾಗಿ ಬೇಟೆ ನಡೆಯುತ್ತಲೇ ಇದೆ. ಔಷಧೀಯ ವನ, ಬೆಟ್ಟದ ಹಿಂಬದಿ, ಕಣ್ಣಂಚಿಗೂ ಸಿಗದಷ್ಟು ಹಬ್ಬಿಕೊಂಡಿರುವ ಅರಣ್ಯದ ಒಳಗೆ ಗುಂಡು ಪಾರ್ಟಿಗಳು ನಡೆಯುತ್ತಲೇ ಇವೆ. ಈ ಅರಣ್ಯ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಮದ್ಯದ ಬಾಟಲಿಗಳು ಬಿದ್ದಿರುತ್ತವೆ.
ಗಾರ್ಡ್ಗಳು ಇಲ್ಲ: 42.5 ಚ.ಕಿ.ಮೀ. ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ದೇವರಾಯನದುರ್ಗ ಅರಣ್ಯವನ್ನು ಐದು ಕಡೆಯಿಂದಲೂ ಪ್ರವೇಶಿಸಬಹುದು. ಇಲ್ಲಿ ಎಲ್ಲೂ ಚೆಕ್ಪೋಸ್ಟ್ಗಳು ಇಲ್ಲ. ಹಾಗಾಗಿ ರಾತ್ರಿ ವೇಳೆ ಸುಲಭವಾಗಿ ಕಾಡನ್ನು ಪ್ರವೇಶಿಸಬಹುದು. ಅಲ್ಲದೇ ಅರಣ್ಯ ಇಲಾಖೆಯಲ್ಲಿ ಗಾರ್ಡ್ಗಳ ಸಂಖ್ಯೆ ಕಡಿಮೆಯಿದೆ. ಹಾಗಾಗಿ ಅಷ್ಟು ದೊಡ್ಡ ಕಾಡನ್ನು ಹೇಗೆ ನೋಡಿಕೊಳ್ಳುವುದು ಎಂಬುದು ಹಾಲಿ ಇರುವ ಗಾರ್ಡ್ಗಳ ಗೋಳಾಗಿದೆ.
ಕೊಲೆಗಳು ನಡೆಯುತ್ತಿವೆ: ಅರಣ್ಯದಲ್ಲಿ ಆಗಾಗ ಕೊಲೆಗಳು ನಡೆಯುವುದು ಸಾಮಾನ್ಯವಾಗಿದೆ. ದೇವರಾಯನದುರ್ಗದಲ್ಲಿ ಆಗಾಗ ಕೊಳೆತ ಶವಗಳು ಪತ್ತೆಯಾಗುತ್ತಲೇ ಇರುತ್ತವೆ. ಅಲ್ಲದೇ ಕಾಡು ಪ್ರಾಣಿಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ ಎನ್ನುತ್ತಾರೆ ಪರಿಸರ ತಜ್ಞರು. ಇದಕ್ಕೆ ಮುಖ್ಯ ಕಾರಣ ಬೇಟೆ. ಕಾಡು ಹಂದಿ, ಜಿಂಕೆ, ಉಡ, ಮೊಲವನ್ನು ನಿರಂತರವಾಗಿ ಬೇಟೆಯಾಡಲಾಗುತ್ತಿದೆ. ಹೀಗಾಗಿ ನಾಮದ ಚಿಲುಮೆ ಒಂದರ್ಥದಲ್ಲಿ ಜುಗಾರಿಗಳ ಅಡ್ಡೆಯಾಗಿದೆ. ಪಶ್ಚಿಮಘಟ್ಟದಲ್ಲಿರುವ ಇರುವ ಹಲವು ಅಪರೂಪದ ಜೀವವೈವಿಧ್ಯಗಳು ಕೂಡ ನಾಮದ ಚಿಲುಮೆಯಲ್ಲಿದೆ. ಹೀಗಾಗಿ ಈ ಅರಣ್ಯ ಪ್ರದೇಶವನ್ನು ರಕ್ಷಿಸಬೇಕು ಎಂಬುದು ಎಲ್ಲರ ಆಂಬೋಣವಾಗಿದೆ. ಆದರೆ, ಈ ಅರಣ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಗೋಜಿಗೆ ಯಾರೂ ಹೋಗುವುದಿಲ್ಲ. ಬೆಟ್ಟದ ಮೇಲಿರುವ ಪ್ರವಾಸಿ ಮಂದಿರದ ಹಿಂಬದಿಗೆ ಹೋದರೆ ಎತ್ತರ ಪ್ರದೇಶ ಸಿಗುತ್ತದೆ. ಆ ಜಾಗ ಒಂದರ್ಥದಲ್ಲಿ ವ್ಯೂ ಪಾಯಿಂಟ್. ಈ ಭಾಗದಲ್ಲಿ ಮದ್ಯದ ಬಾಟಲ್ಗಳ ರಾಶಿ ರಾಶಿಯೇ ಕಾಣಸಿಗುತ್ತದೆ. ಕಾಡು ಉಳಿಸಿ, ಬೆಳೆಸಬೇಕೆಂಬ ಘೋಷಣೆಯನ್ನು ಅರಣ್ಯ ಇಲಾಖೆ ಹೊರಡಿಸುತ್ತಿದೆ. ಆದರೆ, ಇರುವ ಅರಣ್ಯವನ್ನು ಉಳಿಸುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ತುಮಕೂರು ಸಮೀಪ ಇರುವ ಈ ಅಪರೂಪದ ಜೀವವೈವಿಧ್ಯವಿರುವ ನಾಮದ ಚಿಲುಮೆ ಹಾಗೂ ದೇವರಾಯನದುರ್ಗವನ್ನು ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಇದು ಇತಿಹಾಸದ ಪುಟಕ್ಕೆ ಸೇರುತ್ತದೆ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದೆ.
ರಕ್ಷಣೆಗೆ ಗೃಹ ಸಚಿವರ ಸೂಚನೆ
ನಾಮದಚಿಲುಮೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗಾಗಿ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಹಾಗೂ ಎಲ್ಲ ಸಾರ್ವತ್ರಿಕ ರಜಾ ದಿನಗಳಂದು ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಲು ಗೃಹ ಸಚಿವ ಕೆ.ಜೆ. ಜಾರ್ಜ್ ಸೂಚಿಸಿದ್ದಾರೆ. ತುಮಕೂರಿನ ಸರಸ್ ಮಾಧ್ಯಮ ಸಂಪರ್ಕದ ಆರ್. ವಿಶ್ವನಾಥನ್ ಅವರು ಗೃಹಸಚಿವ ಕೆ.ಜೆ. ಜಾರ್ಜ್ ಅವರಿಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿರುವ ಸಚಿವರು, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತುಮಕೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

