ಮುಖ್ಯ ಶಿಕ್ಷಕರ ಪಾತ್ರ ಮಹತ್ವದ್ದು
ಮಧುಗಿರಿ: ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಮೂಡಿಸುವಲ್ಲಿ ಮುಖ್ಯ ಶಿಕ್ಷಕರ ಪಾತ್ರ ಅಮೂಲ್ಯ ಎಂದು ನಿವೃತ್ತ ಉಪನಿರ್ದೇಶಕ ಟಿ.ಎಸ್. ಆಂಜನಪ್ಪ ನುಡಿದರು.
ತಾಲೂಕಿನ ಗೊಂದಿಹಳ್ಳಿ ಸುವರ್ಣಮುಖಿ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಟಿ.ಎಸ್. ರುದ್ರಪ್ಪ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ, ರುದ್ರಪ್ಪ ಅವರ ಶಿಸ್ತುಬದ್ಧ ಜೀವನ ಕ್ರಮ, ಸೇವಾ ಮನೋಭಾವ, ಆದರ್ಶ ವ್ಯಕ್ತಿತ್ವ ಹಾಗೂ ಅವರ ಪಾಠ ಬೋಧನಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಸ್ವಚ್ಛತೆ ಮತ್ತು ಪರಿಸರ ಕಾಳಜಿಯನ್ನು ಹೀಗೆ ಮುಂದುವರಿಸಿಕೊಂಡು ಹೋಗುವ ಮೂಲಕ ಶೈಕ್ಷಣಿಕ ವಾತವರಣ ಮತ್ತಷ್ಟು ಉತ್ತಮಪಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಸುನಂದಸಿದ್ಧಪ್ಪ, ಸಂಸ್ಥಾಪಕ ಕಾರ್ಯದರ್ಶಿ ಆರ್.ಕೆ. ಧೃವಕುಮಾರ್, ವಿಷಯ ಪರಿವೀಕ್ಷಕ ಪಾಪಯ್ಯ, ಬಿಆರ್ಸಿ ಚಿತ್ತಯ್ಯ, ಗ್ರಾ.ಪಂ.ಅಧ್ಯಕ್ಷ ಶಿವಕುಮಾರ್, ಸದಸ್ಯ ಮೂರ್ತಿ, ನಿವೃತ್ತ ಶಿಕ್ಷಕ ಸಿದ್ದಲಿಂಗಯ್ಯ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಕುಮಾರ್, ತಾ. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್. ಹನುಮಂತರಾಯಪ್ಪ, ಉಪನ್ಯಾಸಕ ರಮೇಶ್, ಮುಖ್ಯ ಶಿಕ್ಷಕ ಸೂರ್ಯನಾರಾಯಣ ರೆಡ್ಡಿ, ಲಿಂಗಣ್ಣ, ಶಿಕ್ಷಕ ಗೋವಿಂದಪ್ಪ, ಆರ್. ಮಂಜಪ್ಪ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.ಪ್ರಭಾರ ಮುಖ್ಯ ಶಿಕ್ಷಕ ಸೈಯದ್ ಗೌಸ್ ಸ್ವಾಗತಿಸಿ, ಶ್ವೇತ ಪ್ರಾರ್ಥಿಸಿ, ಅನಿತಾಲಕ್ಷ್ಮೀ ವಂದಿಸಿದರು.
ಅನ್ನಭಾಗ್ಯ ಅದಾಲತ್ ಪ್ರಾರಂಭ: ಜಿಲ್ಲಾಧಿಕಾರಿ
ತುಮಕೂರು: ಸಾರ್ವಜನಿಕ ವಿತರಣಾ ಪದ್ಧತಿಯಡಿ ಆಹಾರ ಧಾನ್ಯಗಳನ್ನು ಸಮರ್ಥ ಹಾಗೂ ಪರಿಣಾಮಕಾರಿಯಾಗಿ ವಿತರಿಸಲು ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಅನ್ನಭಾಗ್ಯ ಅದಾಲತ್ಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ತಿಳಿಸಿದ್ದಾರೆ.
ಅರ್ಹರಿಗೆ ಪಡಿತರ ಚೀಟಿ ದೊರೆಯದೇ ಇರುವುದು, ಆಹಾರ ಧಾನ್ಯಗಳ ಮಾರ್ಗಪಲ್ಲಟ, ತೂಕದಲ್ಲಿ ವ್ಯತ್ಯಯ ಇರುವುದು, ಹೆಚ್ಚಿನ ದರ ಪಡೆಯುವುದು, ಮುಂತಾದ ದೂರು ಪರಿಶೀಲಿಸಿ, ಕುಂದುಕೊರತೆಯನ್ನು ತಳಮಟ್ಟದಲ್ಲಿ ಪರಿಹರಿಸಲು ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಪ್ರತಿತಿಂಗಳು ಅನ್ನಭಾಗ್ಯ ಅದಾಲತ್ಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿ ತಿಂಗಳ 7ನೇ ತಾರೀಖಿನಂದು ಮತ್ತು ಆ ದಿನಾಂಕದಂದು ರಜೆ ಇದ್ದಲ್ಲಿ ಮುಂದಿನ ಕಾರ್ಯ ನಿರ್ವಹಣಾ ದಿನ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅನ್ನಭಾಗ್ಯ ಅದಾಲತ್ನ್ನು ನ್ಯಾಯಬೆಲೆ ಅಂಗಡಿಯ ಸಮೀಪದಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಅದಾಲತ್ ನಡೆಸುವ ಮತ್ತು ಅವುಗಳ ನಿರ್ವಹಣೆ ಕುರಿತು ತೀವ್ರ ನಿಗಾ ವಹಿಸಲು ಹಾಗೂ ಅದಾಲತ್ನಲ್ಲಿ ಸ್ವೀಕರಿಸಲಾಗುವ ದೂರುಗಳ ಕುರಿತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಯಮಂಗಲಿ ನದಿಗೆ ಶೀಘ್ರ ಬ್ಯಾರೇಜ್
ಮಧುಗಿರಿ: ಮಧುಗಿರಿ ತಾಲೂಕಿನ ಜಯಮಂಗಲಿ ನದಿಗೆ ಅಡ್ಡಲಾಗಿ ಬ್ಯಾರೇಜ್ ಕಟ್ಟಿ ನದಿ ಪಾತ್ರದ ಸುತ್ತ ಮುತ್ತಲ ಕೆರೆಗಳಿಗೆ ನೀರುಣಿಸುವ ಕಾಮಗಾರಿ ಕುರಿತು ಅಧಿಕಾರಿಗಳ ಜತೆ ಸಾಧಕ-ಬಾಧಕ ಚರ್ಚಿಸಿ ತಾಂತ್ರಿಕ ಒಪ್ಪಿಗೆ ಪಡೆದ ನಂತರ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಜಯಮಂಗಲಿ ನದಿಗೆ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ,ಈ ಬ್ಯಾರೇಜ್ ಕಟ್ಟುವುದರಿಂದ ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಈ ಬರಪೀಡಿತ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂದರು. 10 ಕೋಟಿ ವೆಚ್ಚವಾಗಲಿದ್ದು, ಇದರಿಂದ ಐ.ಡಿ. ಹಳ್ಳಿ,ಪುರವರ, ಕೊಡಿಗೇನಹಳ್ಳಿ, ಹೋಬಳಿ ಸಿಂಗನಹಳ್ಳಿ, ಮೊಸರಪಡಿ, ಪೋಲೇನಹಳ್ಳಿ ಸುತ್ತಮುತ್ತಲ ಕೆರೆಗಳಿಗೆ ನೀರುಣಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೊಡಿಗೇನಹಳ್ಳಿ ಮತ್ತು ಐ.ಡಿ. ಹಳ್ಳಿ ಭಾಗದಲ್ಲಿ ಶುದ್ಧ ಕುಡಿವ ನೀರಿನ ಸಮಸ್ಯೆ ಹೆಚ್ಚಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕಿದೆ ಎಂದರು.
ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಸಹಾಯಕ ಅಭಿಯಂತರ ಮಲ್ಲೇಶ್, ಸತ್ಯೇಂದ್ರರಾವ್, ಚಂದ್ರಶೇಖರ್, ರಮೇಶ್, ಆನಂದಪ್ಪ, ಮುಖಂಡ ಎಸ್.ಡಿ. ಕೃಷ್ಣಪ್ಪ, ರಾಜಗೋಪಾಲ್, ಇಂದಿರಾ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

