ತುಮಕೂರು

ಕೊಳೆಗೇರಿ ಭೂ ಸ್ವಾಧೀನಕ್ಕೆ ಒತ್ತಾಯ

Published On :

ತುಮಕೂರು: ನಗರದ ಎನ್.ಆರ್.ಕಾಲೋನಿಯ ಪಕ್ಕದಲ್ಲಿರುವ ಸರ್ವೆ ನಂಬರ್ 299/1ರ ಜಾಗವನ್ನು ಕೊಳಚೆ ನಿರ್ಮೂಲನಾ ಮಂಡಳಿ ಅಧಿನಿಯಮ 17ರ ಅನ್ವಯ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನೂರಾರು ಬಡವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ 20ನೇ ವಾರ್ಡ್‌ಗೆ ಸೇರಿದ ಅಂಬೇಡ್ಕರ್ ನಗರ ಬಡಾವಣೆಗೆ ಹೊಂದಿಕೊಂಡಂತೆ ಇರುವ ಸರ್ವೆ ನಂ.299/1 ಕರಾಬು ಭೂಮಿಯನ್ನು 1982ರಲ್ಲಿ ಅಂದಿನ ದಸಂಸ ಮುಖಂಡರು ಕಡು ಬಡತನದಲ್ಲಿದ್ದ ಸುಮಾರು 80 ಕುಟುಂಬಗಳಿಗೆ ಮನೆ ನಿರ್ಮಿಸಿಕೊಂಡು ವಾಸ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು.
ಆರಂಭದಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದ ಜನರಿಗೆ ಜಿಲ್ಲಾಡಳಿತ ಮತ್ತು ನಗರಸಭೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಚರಂಡಿ, ಯುಜಿಡಿ, ಪಡಿತರ ಚೀಟಿ, ಮತದಾರರ ಚೀಟಿ ಮತ್ತಿತರರ ಸೌಲಭ್ಯಗಳನ್ನು ಒದಗಿಸಿವೆ.
1997ರ ವರ್ಷದಲ್ಲಿ ಇಲ್ಲಿನ ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಗುಡಿಸಲುಗಳು ಬೆಂಕಿಗೆ ಅಹುತಿಯಾದ್ದರಿಂದ ಅಂದಿನ ಶಾಸಕರು, ಜಿಲ್ಲಾಧಿಕಾರಿಗಳು, ನಗರಸಭೆಯ ಅಧಿಕಾರಿಗಳು ನಿರ್ಗತಿಕರಿಗೆ ಮನೆ ನಿರ್ಮಿಸಿಕೊಡಲು ಅನುವು ಮಾಡಿಕೊಟ್ಟಿದ್ದರು ಎಂದರು.
ಅಲ್ಲದೆ 1998, ಮಾ.7ರಂದು ಸದರಿ ಅಂಬೇಡ್ಕರ್ ನಗರವನ್ನು ಕೊಳಚೆ ನಿರ್ಮೂಲನಾ ಮಂಡಳಿಯ ಅಧಿನಿಯಮ 3ರ ಪ್ರಕಾರ ಕೊಳಚೆ ಪ್ರದೇಶವೆಂದು ಘೋಷಿಸಿದ್ದಾರೆ. ಅಲ್ಲದೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಸುಮಾರು 26.88 ಲಕ್ಷ ಖರ್ಚು ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಜಿಲ್ಲಾಡಳಿತ ಈ ಜಾಗದಲ್ಲಿ ವಾಸವಿರುವ 157 ಕುಟುಂಬಗಳನ್ನು ಗುರುತಿಸಿ ಸುಮಾರು 122 ಫಲಾನುಭವಿಗಳನ್ನು ಪತ್ತೆ ಮಾಡಿ ಪ್ರತಿ ಮನೆಗೆ 3.69 ಲಕ್ಷ ಅಂದಾಜು ಯೋಜನಾ ಪಟ್ಟಿ ಸಿದ್ಧಪಡಿಸಿದೆ.
ಆದರೆ ಈಗ 9.19 ಗುಂಟೆ ಜಾಗವನ್ನು ತಮ್ಮ ಹೆಸರಿನ ನೋಂದಣಿ ಮಾಡಿ ನ್ಯಾಯಾಲಯದಿಂದ ತೆರವು ಅದೇಶ ತಂದು ಬಡವರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡದೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಲಂ 17ರ ಅನ್ವಯ ಸದರಿ ಜಾಗವನ್ನು ಭೂಸ್ವಾಧೀನ ಪಡಿಸಿಕೊಂಡು ಬಡವರಿಗೆ ಸದರಿ ಜಾಗದಲ್ಲಿಯೇ ವಾಸಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಜಾಗದ ದಾಖಲೆಗಳನ್ನು ಪರಿಶೀಲಿಸುತ್ತೇನೆ. ಅಲ್ಲಿಯವರೆಗೆ ನೀವುಗಳು ಜಾಗ ಬಿಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ಪ್ರತಿಭಟನೆಯ ನೇತೃತ್ವವನ್ನು ತುಮಕೂರು ನಗರಪಾಲಿಕೆಯ ವಿರೋಧಪಕ್ಷದ ನಾಯಕ ಹನುಮಂತರಾಯಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಗರ ಸಂಚಾಲಕ ವಿ.ಗೋಪಾಲ್ ವಹಿಸಿದ್ದರು. ನೂರಾರು ಜನ ಮಹಿಳೆಯರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.