ಶವವಿಟ್ಟು ಪೊಲೀಸರ ವಿರುದ್ಧ ಪ್ರತಿಭಟನೆ
ಕುಣಿಗಲ್: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ, ಮಗು ಆತ್ಮಹತ್ಯೆಗೆ ಕಾರಣವಾಗಿರುವ ಪೊಲೀಸ್ ಪೇದೆ ವಿರುದ್ಧ ಕ್ರಮಕೈಗೊಳ್ಳದೆ ಪೊಲೀಸರು ಪ್ರಕರಣದ ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಹಾಗೂ ಸಂಬಂಧಿಕರು ಶವಇಟ್ಟು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಮಧ್ಯರಾತ್ರಿ ನಿಡಸಾಲೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ನಿಡಸಾಲೆ ಸಮೀಪದ ಮದ್ದೂರು ತಾಲೂಕಿನ ಅರಕನಹಳ್ಳಿ ಗ್ರಾಮದ ರುದ್ರಯ್ಯ ಎಂಬವರ ಮಗಳು ಸೌಮ್ಯ ತನ್ನ 18 ತಿಂಗಳ ಮಗ ಅನೀಶ್ನೊಂದಿಗೆ ಶನಿವಾರ ಬೆಳಗ್ಗೆ ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸೀರೆಯ ಸೆರಗಿನಲ್ಲಿ ಮಗವನ್ನು ಕಟ್ಟಿಕೊಂಡು ನಿಡಸಾಲೆಯ ಶಿವನಹಳ್ಳಿ ಕೆರೆಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದರು. ಸೌಮ್ಯ ಆತ್ಮಹತ್ಯೆ ವಿಷಯ ತಿಳಿದ ಅರಕನಹಳ್ಳಿ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಹುಲಿಯೂರುದುರ್ಗ ಪೊಲೀಸರು ಮೃತಳ ಅಣ್ಣ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತಾಯಿ, ಮಗು ಶವದ ಮರಣೋತ್ತರ ಪರೀಕ್ಷೆ ಕೆರೆ ದಡದಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ನಡೆಸಿ ಶವ ಹಸ್ತಾಂತರಿಸಲು ಮುಂದಾದಾರು.
ಗ್ರಾಮಸ್ಥರು, ಮೃತಳ ಸಂಬಂಧಿಕರು ಸೌಮ್ಯಳ ಗಂಡ ಪೊಲೀಸ್ ಪೇದೆಯಾಗಿದ್ದು ಆತನನ್ನು ಬಂಧಿಸಿ ಇಲ್ಲಿಗೆ ಕರೆ ತರುವಂತೆ ಪಟ್ಟು ಹಿಡಿದರು. ಮೃತಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಶವಗಳನ್ನಿಟ್ಟುಕೊಂಡು ಶನಿವಾರ ಮಧ್ಯರಾತ್ರಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಡಿವೈಎಸ್ಪಿ ಗಣೇಶ್, ಸಿಪಿಐ ಧರ್ಮೇಂದ್ರ ಆಗಮಿಸಿ ಮನವೊಲಿಸಲು ಮುಂದಾದರು. ಈ ಹಂತದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು, ಮೃತಳ ಕುಟುಂಬದವರೊಂದಿಗೆ ಸಾಂತ್ವನ ಹೇಳುವ ಬದಲು, ಅಶ್ಲೀಲ ಶಬ್ದ ಬಳಸಿ ದ್ದಾರೆಂದು ಆರೋಪಿಸಿದ ಗ್ರಾಮಸ್ಥರು ಏಕಾಏಕಿ ಡಿವೈಎಸ್ಪಿ ಸೇರಿದಂತೆ ಪೊಲೀಸರೊಂದಿಗೆ ಜಟಾಪಟಿಗೆ ಇಳಿದರು. ಅಧಿಕಾರಿಗಳನ್ನು ಎಳೆದಾಡಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಹಿರಿಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ತಿಳಿಗೊಳಿಸಿದರು.
ಸವಲತ್ತಿಗೆ ತಕ್ಕಂತೆ ನಿಷ್ಠೆಯಿಂದ ಕೆಲಸ ಮಾಡಿ
ಕೊರಟಗೆರೆ: ಸರ್ಕಾರಿ ನೌಕರರಿಗೆ ಎಲ್ಲ ಸವಲತ್ತು ನೀಡುತ್ತಿದ್ದು ಅದಕ್ಕೆ ತಕ್ಕಂತೆ ನಿಷ್ಠೆಯಿಂದ ಉತ್ತಮ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ಅಭಿಮಾನಕ್ಕೆ ಪಾತ್ರರಾಗಬೇಕೆಂದು ನಿವೃತ್ತ ಉಪನಿರ್ದೇಶಕ ಟಿ.ಎಸ್.ಅಂಜಿನಪ್ಪ ತಿಳಿಸಿದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಉಪನಿರ್ದೇಶಕರಾಗಿ ನಿವೃತ್ತರಾದ ಹಿನ್ನೆಲೆಯಲ್ಲಿ ಕೊರಟಗೆರೆ ತಾಲೂಕು ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ನೌಕರರು ಸಮಸ್ಯೆಗಳಿರುವ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿದರೆ ಅವರಿಗೆ ಉತ್ತಮ ಅನುಭವ ಬರುವುದರೊಂದಿಗೆ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗುತ್ತಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್.ಮಹೇಶ್ ಮಾತನಾಡಿದರು. ಅಧ್ಯಕ್ಷತೆಯನ್ನು ತಾಲೂಕು ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪಾಂಡುರಂಗ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀನಿವಾಸರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೀರಕ್ಯಾತರಾಯ, ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ವೇದಮೂರ್ತಿ, ಪಾಪಯ್ಯ, ಶೈಲಜಾ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಲ್.ಕಾಮಯ್ಯ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎಲ್.ರಮೇಶ್, ಪದಾಧಿಕಾರಿಗಳಾದ ಎಸ್.ಕೆ.ನಾಗರಾಜು, ಶಿವಣ್ಣ, ಗಂಗಮ್ಮ, ಸಚಿದಾನಂದ, ಸಿದಲಿಂಗಾರಾಧ್ಯ, ಪುಪ್ಪವಲ್ಲಿ ಉಪಸ್ಥಿತರಿದ್ದರು.
ಕೊಳ್ಳುಬಾಕ ಸಂಸ್ಕೃತಿಯಿಂದ ಸಾಲದ ಶೂಲ
ತುಮಕೂರು: ಜಾಗತೀಕರಣದ ಫಲವಾಗಿ ಕೊಳ್ಳುಬಾಕ ಸಂಸ್ಕೃತಿ ತಲೆ ಎತ್ತಿದ್ದು, ಹೆಚ್ಚಿನ ಕುಟುಂಬಗಳು ಸಾಲದ ಶೂಲದಲ್ಲಿ ಸಿಲುಕಿವೆ ಎಂದು ಲೇಖಕಿ ಪದ್ಮಾಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.
ತುಮಕೂರಿನ ಸುನಿತಾ ಮೂರ್ತಿ ಸ್ನೇಹ ಬಳಗದ ವತಿಯಿಂದ ಏರ್ಪಡಿಸಿದ್ದ “ÑÚy| ಉಳಿತಾಯ ಸುಖ ಸಂಸಾರಕ್ಕೆ @t®Û¾Úß’ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಮಕ್ಕಳಿಗಂತೂ ಉಳಿತಾಯ ಎಂಬುದೇ ಗೊತ್ತಿಲ್ಲ. ಮಕ್ಕಳಲ್ಲೂ ಉಳಿತಾಯ ಮನೋಭಾವ ಬೆಳೆಸುವುದು ಪೋಷಕರ ಕರ್ತವ್ಯ. ಮಹಿಳೆಯರು ತಮ್ಮ ಕುಟುಂಬದ ಬೇಕು-ಬೇಡಗಳನ್ನು ಗ್ರಹಿಸಿ, ಅಗತ್ಯವಿದ್ದಷ್ಟೇ ಖರ್ಚು ಮಾಡಿ, ಮಿಕ್ಕ ಉಳಿತಾಯದ ಹಣವನ್ನು ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿ, ಜಾಣತನ ಮೆರೆಯಬೇಕು ಎಂದರು. ಹನಿ ಹನಿಗೂಡಿದರೆ ಹಳ್ಳ, ತೆನೆ ತೆನೆಗೂಡಿದರೆ ಬಳ್ಳ ಎಂಬ ಗಾದೆ ಮಾತನ್ನು ಉದಾಹರಿಸಿದ ಪದ್ಮಾಕೃಷ್ಣಮೂರ್ತಿ, ಸಣ್ಣ ಉಳಿತಾಯ ಕಷ್ಟದ ದಿನಗಳಲ್ಲಿ ನೆರವಿಗೆ ಬರುತ್ತದೆ ಎಂದು ಅಂಚೆ ಇಲಾಖೆಯ ಅನೇಕ ಯೋಜನೆಗಳನ್ನು ಉದಾಹರಿಸಿದರು. ಕಾರ್ಯಕ್ರಮದ ಆಯೋಜಕಿ ಸುನಿತಾ ಮೂರ್ತಿ, ಹಿರಿಯ ನಾಗರಿಕ ಮಂದಾರಯ್ಯ, ಮೃತ್ಯುಂಜಯ ಕುಮಾರ್ ಮಾತನಾಡಿದರು. ವಿದ್ಯಾವತಿ, ಲತಾ, ಲಲಿತಾ, ವಿಜಯ, ಕಲಾವತಿ, ಸಿದ್ದರಾಜೇಶ್ವರಿ, ಶೋಭಾ, ದಾಕ್ಷಾಯಿಣಿ, ಮೋಹನ್ ತಿರುಮಲೇಶ್ವರಿ, ಮೋಹನ್ ಮುಂತಾದವರಿದ್ದರು. ಯುವಪ್ರತಿಭೆ ಮಂಗಳಗೌರಿ ಮತ್ತು ಹಿರಿಯ ನಾಗರಿಕರಾದ ಮಂದಾರಯ್ಯ ಹಾಗೂ ಮೃತ್ಯುಂಜಯ ಅವರನ್ನು ಗೌರವಿಸಲಾಯಿತು. ವಿದ್ಯಾವತಿ ಪ್ರಾರ್ಥಿಸಿ, ಲತಾ ಸ್ವಾಗತಿಸಿ, ಲಲಿತಾ ವಂದಿಸಿ, ಕಲಾವತಿ ಕ್ರಮ ನಿರೂಪಿಸಿದರು.
ನಿರುದ್ಯೋಗ ಹೋಗಲಾಡಿಸಲು ಕ್ರಮ
ಗುಬ್ಬಿ: ತುಮಕೂರನ್ನು ಕೈಗಾರಿಕಾ ಸ್ಮಾರ್ಟ್ ಸಿಟಿಯನ್ನಾಗಿ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಘೋಷಿಸಿದೆ. ಹೊಸ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ಶಾಶ್ವತವಾಗಿ ಹೋಗಲಾಡಿಸಲು ಚಿಂತನೆ ನಡೆಸಲಾಗಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ಲೋಕೋಪಯೋಗಿ ಇಲಾಖೆ ವತಿಯಿಂದ 3.50 ಕೋಟಿ ವೆಚ್ಚದಲ್ಲಿ ಗುಬ್ಬಿ ರೈಲ್ವೆ ನಿಲ್ದಾಣದಿಂದ ಸಾತೇನಹಳ್ಳಿ ಗೇಟ್ವರೆಗೆ 6.5 ಕಿಲೋ ಮೀ. ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, “OæÐÞ}ÚÃ¥Ú ಗ್ರಾಮೀಣ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಿದ್ದು, ವಿಶೇಷ ಅಭಿವೃದ್ಧಿ ಯೋಜನೆಯಡಿ 6.30 ಕಿ.ಮೀ. ಗ್ರಾಮ ಸಂಪರ್ಕ ರಸ್ತೆಯನ್ನು 96.48 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಗುಬ್ಬಿ-ಚೇಳೂರು ರಸ್ತೆಯನ್ನು 3.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ತಾಲೂಕಿನ ತುಮಕೂರು-ಚೇಳೂರು-ಬುಕ್ಕಾಪಟ್ಟಣ ರಸ್ತೆಯನ್ನು 1.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಪಂ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ತಾಪಂ ಪ್ರಭಾರ ಅಧ್ಯಕ್ಷ ತೀರ್ಥಪ್ರಸಾದ್, ಗ್ರಾಪಂ ಅಧ್ಯಕ್ಷೆ ವಸಂತಮ್ಮ, ಮುಖಂಡರಾದ ಹೊನ್ನಗಿರಿಗೌಡ, ಎಚ್.ಆರ್.ಗುರುರೇಣುಕಾರಾಧ್ಯ, ಶಿವಲಿಂಗಯ್ಯ, ಮೂರ್ತಪ್ಪ, ಚಂದ್ರಪ್ಪ, ಡಿ.ರಘು, ಚೆನ್ನಬಸವಯ್ಯ, ಪ್ರಭಾಕರ್, ಎಇಇ ತಿಮ್ಮೇಗೌಡ, ಇಂಜಿನಿಯರ್ ಸುರೇಶ್ ಇದ್ದರು.
ಕನ್ನಡ ಕವಿ ಕಾವ್ಯಗೋಷ್ಠಿ
ಹುಳಿಯಾರು: ಜೀವರಾಶಿಗಳಲ್ಲಿ ಶ್ರೇಷ್ಠನಾಗಿರುವ ಮಾನವನಿಗೆ ಜೀವನದಲ್ಲಿ ಹಲವು ಅನುಭವಗಳಿದ್ದು ಅವುಗಳನ್ನು ಲಿಖಿತ ರೂಪದಲ್ಲಿ ದಾಖಲಿಸುವುದೇ ಅನುಭಾವ ಸಾಹಿತ್ಯ ಎಂದು ಬಸವಕೇಂದ್ರ ಶರಣ ಗಂಗಾಧರಯ್ಯ ತಿಳಿಸಿದರು.
ಹೋಬಳಿಯ ಕೆಂಕೆರೆ ನಂದ್ಯಪ್ಪನ ಬಸವರಾಜು ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ನಿಂದ ಆಯೋಜಿಸಿದ್ದ ಮನೆಮನೆಯಲ್ಲಿ ಕನ್ನಡ ಕವಿ ಕಾವ್ಯಗೋಷ್ಠಿ ಪಾಕ್ಷಿಕ ಕಾರ್ಯಕ್ರಮದಲ್ಲಿ ಶಿವಶರಣರ ಅನುಭಾವ ಸಾಹಿತ್ಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಕೆ.ಬಿ. ಶಂಕರಯ್ಯ, ಆದಿಕವಿ ಪಂಪ ರಚಿಸಿದ ಆದಿಪುರಾಣ ಉಲ್ಲೇಖಿಸಿ ಅವುಗಳಲ್ಲಿ ಅಡಕವಾಗಿದ್ದ ಅನುಭಾವ ಸಾಹಿತ್ಯದ ಪರಂಪರೆ ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕಳೆದ ವಾರ ನಿಧನರಾದ ತುಮಕೂರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಿ.ರಾ. ಸದಾನಂದ ಅವರಿಗೆ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ತ.ಶಿ.ಬಸವಮೂರ್ತಿ, ಯಲ್ಲಪ್ಪ, ನಾರಾಯಣ್ಣ, ಉಪನ್ಯಾಸಕ ನಟರಾಜ್, ಹೊನ್ನಪ್ಪ, ಕುಮಾರಸ್ವಾಮಿ, ಬಸವರಾಜು ಇದ್ದರು.
ಯುವಜಾಗೃತಿ ಸಮ್ಮೇಳನ 23ಕ್ಕೆ
ತುಮಕೂರು: ಶಿರಾ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಮಕೃಷ್ಣ ಶಾರದಾ ಸತ್ಸಂಗ ಕೇಂದ್ರ ಸಮಾಜದ ಯುವತಿಯರಿಗೆ ಜೀವನ ಮೌಲ್ಯ ಕುರಿತಾದ ಮಾರ್ಗದರ್ಶನ ನೀಡಲು ಜು.23 ಬುಧವಾರ ನಿವೇದಿತಾ ಯುವತಿಯರ ಸಂಘ ಪ್ರಾರಂಭಿಸುತ್ತಿದ್ದು ಈ ಸಂಬಂಧ ಅಂದು ಬೆಳಗ್ಗೆ 10.30 ಕ್ಕೆ ಶಿರಾ ನಗರದ ಲಕ್ಷ್ಮೀ ವೆಂಕಟೇಶ್ವರ ಸಭಾ ಭವನದಲ್ಲಿ ಯುವಜಾಗೃತಿ ಸಮ್ಮೇಳನ ಆಯೋಜಿಸಲಾಗಿದೆ.
ಸಮ್ಮೇಳನದ ಸಾನ್ನಿಧ್ಯ ವಹಿಸಿ, ಸಂಘ ಉದ್ಘಾಟಿಸಿ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀಯವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರರವರು ಯುವಜಾಗೃತಿ ಸಮ್ಮೇಳನ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ. ಅನುರಾಧಾ, ತಹಸೀಲ್ದಾರ್ ಪದ್ಮನಾಭ ಶಾಸ್ತ್ರಿ, ಪತ್ರಕರ್ತ ಎಸ್. ನಾಗಣ್ಣ ಮುಂತಾದವರು ಭಾಗವಹಿಸುವರು. ಶಿರಾನಗರದ ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಪ್ರೊ. ಮಲ್ಲೇಶಪ್ಪ, ಜನಾರ್ದನಯ್ಯ, ಮಹೇಂದ್ರಪ್ಪ, ಗುಣಶೇಖರ್, ಸೋಮಶೇಖರ್ ಹಾಗೂ ಆರಕ್ಷಕ ಅಧಿಕಾರಿಗಳಾದ ರಾಮಾನಾಯಕ್, ಹನುಮಂತರಾಯಪ್ಪ ಮತ್ತು ರಾಮಕೃಷ್ಣಯ್ಯ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದು ಸುಮಾರು ಒಂದು ಸಹಸ್ರಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿನಿಯರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವರೆಂದು ಸತ್ಸಂಗ ಕೇಂದ್ರದ ಪ್ರಕಟಣೆ ತಿಳಿಸಿದೆ.
ಸಂದರ್ಶನ ಮುಂದೂಡಿಕೆ
ತುಮಕೂರು: ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿ ಆಫೀಸ್ ಅಟೆಂಡೆಂಟ್ ಹುದ್ದೆಗಾಗಿ ಜು.21ರಿಂದ 26ರವರೆಗೆ ಕರೆಯಲಾಗಿದ್ದ ಸಂದರ್ಶನ ಪ್ರಕ್ರಿಯೆಯನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ. ಈ ಬಗ್ಗೆ ಸಂದರ್ಶನ ಪತ್ರ ಪಡೆದಿರುವ ಅಭ್ಯರ್ಥಿಗಳು ಮುಂದಿನ ದಿನಾಂಕ ನಿಗದಿಪಡಿಸುವವರೆಗೂ ಕಾಯುವಂತೆ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.
ಕಾಲೇಜು ಸಿಬ್ಬಂದಿ ಜಾರಿಗೆ ತಂದಿದ್ದ ದ್ವಿಪಾಳಿ ಪದ್ಧತಿಗೆ ವಿರೋಧ: ಹಳೇ ವೇಳಾಪಟ್ಟಿ ಮುಂದುವರಿಕೆ
ಕುಣಿಗಲ್: ಇತ್ತೀಚೆಗೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಸಿಬ್ಬಂದಿ ಜಾರಿಗೆ ತಂದಿದ್ದ ವೇಳಾಪಟ್ಟಿಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಹಳೇ ವೇಳಾಪಟ್ಟಿಯನ್ನೇ ಮುಂದುವರೆಸಲಾಗಿದೆ.
ಶನಿವಾರ ಶಾಸಕ ಡಿ.ನಾಗರಾಜಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾಲೇಜು ಅಭಿವೃದ್ಧಿ ಮಂಡಳಿ ಸಭೆಯಲ್ಲಿ, ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿಂದಾಗಿ ಪಾಳಿ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಕಾಲೇಜಿನ ಸಿಬ್ಬಂದಿ ತಮ್ಮ ಕ್ರಮ ಸಮರ್ಥಿಸಿದರು. ಇದಕ್ಕೆ ಶಾಸಕರು ಸೇರಿದಂತೆ ಮಂಡಳಿಯ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿ ಇತ್ತೀಚೆಗೆ ಗ್ರಾಮಾಂತರ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿದರು. ಕೊಠಡಿಗಳ ಕೊರತೆ ಇದ್ದಲ್ಲಿ ಪಟ್ಟಣದಲ್ಲಿನ ಖಾಸಗಿ ಕಾಲೇಜು ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿನ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಿ. ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಉಪನ್ಯಾಸಕರುಗಳಿಗೂ ತೊಂದರೆಯಾಗುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಪರಿಸ್ಥಿತಿ ಅವಲೋಕಿಸಿದರೆ ವಿದ್ಯಾರ್ಥಿನಿಯರಿಗೆ ಪಾಳಿಯ ವ್ಯವಸ್ಥೆ ಸರಿ ಹೊಂದುವುದಿಲ್ಲ. ಆದ್ದರಿಂದ ಹೊಸ ವೇಳಾಪಟ್ಟಿ ಕೈಬಿಟ್ಟು ಹಳೇ ವೇಳಾಪಟ್ಟಿಯನ್ನೇ ಮುಂದುವರೆಸುವಂತೆ ಶಾಸಕರು ಸೂಚಿಸಿದರು. ಪ್ರಾಚಾರ್ಯೆ ಡಾ.ಶಶಿಕಲಾ, ಕಾಲೇಜು ತರಗತಿಗಳು ಪ್ರಾರಂಭವಾಗಿ 20 ದಿನಗಳಾದರು ತರಗತಿಗಳನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಅತಿಥಿ ಉಪನ್ಯಾಸಕರು ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ನಾಪತ್ತೆಯಾಗುತ್ತಿದ್ದಾರೆ. ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಪುರಸಭಾ ಅಧ್ಯಕ್ಷ ಕೆ.ಎಲ್.ಹರೀಶ್ ಸೇರಿದಂತೆ ಉಪನ್ಯಾಸಕರುಗಳು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

