ತುಮಕೂರು

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ಅಗತ್ಯ

Published On :

ಶಿರಾ: ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿ ನುಡಿದರು.
ನಗರದ ಲಕ್ಷ್ಮೀವೆಂಕಟೇಶ್ವರ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ನಿವೇದಿತಾ ಯುವತಿಯರ ಸಂಘಕ್ಕೆ ಚಾಲನೆ ನೀಡಿ, ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಲಾಗಿದ್ದ ಯುವ ಜಾಗೃತಿ ಸಮ್ಮೇಳನದಲ್ಲಿ ಮಾತನಾಡಿದರು. ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿ, ಭಾರತ ಮತ್ತು ಭಾರತೀಯರ ಸೇವೆ ಮಾಡಲು ಇಲ್ಲಿಗೆ ಬಂದ ಐರಿಶ್ ಮಹಿಳೆ ಮಾರ್ಗೆಟ್ ನೊಬಲ್ ಸಹೋದರಿ ನಿವೇದಿತಾ ಎನ್ನುವ ಹೆಸರಿನಿಂದ ಗುರುತಿಸಲ್ಪಟ್ಟರು. ಭಾರತದ ಅದರಲ್ಲೂ ಇಲ್ಲಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆಕೆ ನೀಡಿದ ಕೊಡುಗೆ ಅಪಾರ. ಅಂತಹ ಹೆಣ್ಣುಮಕ್ಕಳೊಬ್ಬಳ ಹೆಸರಿನಲ್ಲಿ ಇಂದು ಯುವತಿಯರ ಸಂಘಕ್ಕೆ ಚಾಲನೆ ನೀಡಲಾಗಿದೆ ಎಂದರು.
ಶಿಕ್ಷಣ ಶಕ್ತಿ: ಶಿಕ್ಷಣ ಎಂದರೆ ಕೇವಲ ಅಕ್ಷರ ಜ್ಞಾನ, ಬೌದ್ಧಿಕ ಕಸರತ್ತು, ಪುಸ್ತಕದ ತಿಳುವಳಿಕೆ ಅಲ್ಲ. ವ್ಯಕ್ತಿಯನ್ನು ಸರ್ವತೋಮುಖವಾಗಿ ರೂಪಿಸಬೇಕು. ವ್ಯಕ್ತಿತ್ವ ನಿರ್ಮಾಣ, ನೈತಿಕ ಬೌದ್ಧಿಕ ಸಾಮರ್ಥ್ಯದಿಂದ ಸಮಾಜಕ್ಕೆ ಒಳ್ಳೆಯದನ್ನು ಉಂಟುಮಾಡಬೇಕು. ಕಟ್ಟಿಗೆ ಅಥವಾ ಗಂಧದ ತುಂಡುಗಳನ್ನು ಹೊತ್ತ ಕತ್ತೆಗೆ ಭಾರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ಗಂಧದ ಸುಗಂಧವನ್ನು ಆಘ್ರಾಣಿಸುವ ಶಕ್ತಿ ಬೆಳೆಸುವುದು ಶಿಕ್ಷಣ ನೀಡುವ ಅರಿವಾಗಬೇಕು.
ಸಂಸ್ಕಾರ ಗುಣ: ಶಿಕ್ಷಣ ತಜ್ಞ ಮಿಲ್ಟನ್ ಪ್ರಕಾರ ಉತ್ತಮ ಶಿಕ್ಷಣದಿಂದ ಮೂಡಿಬಂದ ವಿದ್ಯಾರ್ಥಿ ತಮ್ಮ ಪಾಲಿನ ಕರ್ತವ್ಯವನ್ನು ಕೌಶಲ್ಯಪೂರ್ಣವಾಗಿ ಯಾವುದೇ ಕಾಲದಲ್ಲೂ ನಿರ್ವಹಿಸುತ್ತಾನೆ. ಪ್ಲೇಟೋ ಪ್ರಕಾರ ವ್ಯಕ್ತಿಯ ನಡವಳಿಕೆಯಿಂದ ಆತನಿಗೆ ಎಂಥ ಶಿಕ್ಷಣ ಸಿಕ್ಕಿದೆ ಎನ್ನುವುದನ್ನು ಗುರುತಿಸಬಹುದು. ಮಾತೃಭೂಮಿ ಬಗ್ಗೆ ಗೌರವ, ಆದರ, ಬದ್ಧತೆಯನ್ನು ರೂಪಿಸದ ಶಿಕ್ಷಣ ಶಿಕ್ಷಣವಲ್ಲ. ಶಿಕ್ಷಣದಿಂದ ಮನುಷ್ಯ ಸಂಸ್ಕಾರ ಗುಣಗಳ ಗಣಿಯಾಗಬೇಕು.
ಮೌಲ್ಯಗಳು: ಇಂದು ಅಕ್ಷರಸ್ಥರೇ ಅನಕ್ಷರಸ್ಥರಿಗಿಂತ ಹೇಯವಾಗಿ ನಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಕಲಿತ ಅಕ್ಷರಗಳು ಏನಾದವು? ಮೌಲ್ಯಗಳನ್ನು ರೂಪಿಸದ ಶಿಕ್ಷಣ ಪ್ರಯೋಜನವಿಲ್ಲ. ಆದರೆ ನಿಜವಾದ ಮೌಲ್ಯ ಮನೆಯಿಂದ ಪ್ರಾರಂಭವಾಗುತ್ತದೆ. ತಾಯಿ ಮಗುವಿಗೆ ಮೌಲ್ಯಗಳನ್ನು ಬೋಧಿಸುತ್ತಾಳೆ. ಭವಿಷ್ಯದಲ್ಲಿ ತಾಯಿ ಪಾತ್ರ ನಿರ್ವಹಿಸುವ ನೀವು ಮೌಲ್ಯಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕೆಂದರು.
ಡಿವೈಎಸ್‌ಪಿ ರಾಮಾನಾಯ್ಕ ಮಾತನಾಡಿ, ಹೆಣ್ಣು ಮಕ್ಕಳು ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ಇರುವ ವ್ಯತ್ಯಾಸ ಅರ್ಥ ಮಾಡಿಕೊಳ್ಳಬೇಕು. ವೈಯುಕ್ತಿಕ ಅಹಂ ಬದಿಗೊತ್ತಿ ಒಗ್ಗಟ್ಟಿನಿಂದ ಕೂಡಿದರೆ ಹೆಚ್ಚು ಸುರಕ್ಷಿತವಾಗಿರಬಹುದು ಎಂದರು. ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ ನೈತಿಕ ಮೌಲ್ಯ ರೂಪಿಸುವ ಶಿಕ್ಷಣದಿಂದ ಇಂದಿನ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ಮತ್ತಿತರ ದೌರ್ಜನ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ನಿರ್ಮಲಾ ಜಯಚಂದ್ರ, ತಹಸೀಲ್ದಾರ್ ಪದ್ಮನಾಭ ಶಾಸ್ತ್ರಿ, ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಮಲ್ಲೇಶಪ್ಪ, ಸರ್ಕಾರಿ ಕಿರಿಯ ಕಾಲೇಜು ಪ್ರಾಂಶುಪಾಲ ಜನಾರ್ದನಯ್ಯ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಎಚ್. ಮಹೇಂದ್ರಪ್ಪ, ಪ್ರೆಸಿಡೆನ್ಸಿ ಕಿರಿಯ ಕಾಲೇಜು ಪ್ರಾಂಶುಪಾಲ ಗುಣಶೇಖರ್, ಗ್ರಾಮಾಂತರ ಸಿಪಿಐ ಹನುಮಂತರಾಯ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.