ನಿರ್ದೇಶಕರ ವಿರುದ್ಧ ಕ್ರಮಕ್ಕೆ ಒತ್ತಾಯ
ತುಮಕೂರು: ಸರ್ಕಾರಿ ಮುದ್ರಣಾಲಯದ ನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ, ನಗರದ ಟೌನ್‌ಹಾಲ್ ವೃತ್ತದಲ್ಲಿ ತುಮಕೂರಿನ ಮುದ್ರಣ ಕಾರ್ಮಿಕರ ಸಂಘ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳಿಂದ ಅಣಕು ಶವಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಸರ್ಕಾರಿ ಮುದ್ರಣಾಲಯದ ನಿರ್ದೇಶಕರು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟ ಮಾಡಿ ವಂಚಿಸಿರುವುದು ಲೋಕಾಯುಕ್ತ ತನಿಖೆಯಿಂದ ದೃಢಪಟ್ಟಿದ್ದು, ಕೂಡಲೇ ಇಂತಹ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ನಷ್ಟ: ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು.ಗಳನ್ನು ನಷ್ಟ ಮಾಡಿ, ಈಗಲೂ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ. ಇಂತಹ ನಿರ್ದೇಶಕರ ವಿರುದ್ಧ ಕಾರ್ಮಿಕರು ಎಷ್ಟೇ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟ ಮಾಡಿರುವ ಹಾಗೂ ಮಾಡುತ್ತಿರುವ ಈ ನಿರ್ದೇಶಕರನ್ನು ಕೂಡಲೇ ಸೇವೆಯಿಂದ ವಜಾ ಮಾಡಿ, ಮುಚ್ಚಿರುವ ಮುದ್ರಣಾಲಯವನ್ನು ಪುನರ್ ಆರಂಭಿಸಿ, 10 ವರ್ಷಗಳಿಂದ ಯಾವುದೇ ಕನಿಷ್ಠ ಸೌಲಭ್ಯವಿಲ್ಲದೆ ದುಡಿದು ಇಂದು ಈತನ ಕೃತ್ಯದಿಂದ ಬೀದಿಗೆ ಬಿದ್ದಿರುವ ಬಡ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು.
ಆದೇಶ: ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಅವರೇ ತಿಳಿಸಿರುವ ಹಾಗೆ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಂಡು ಇಲ್ಲಿಂದ ಬೇರೆ ಕಡೆಗೆ ಹಾಕಿರುವ ಉತ್ತಮ ಯಂತ್ರಗಳನ್ನು ಪುನ- ಇಲ್ಲಿಗೇ ಜೋಡಿಸಿ ಯಥಾಸ್ಥಿತಿಯಲ್ಲಿ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿಕೊಡುವುದು. ಸರ್ಕಾರಿ ಆದೇಶದಂತೆ ಉಚಿತ ಪಠ್ಯಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸುವುದು. ಸರ್ಕಾರ ಹಾಗೂ ಇಲಾಖೆಯ ಕಡತಗಳಿಗೆ ಬೇಕಾಗಿರುವ ಎಲ್ಲ ರೀತಿಯ ಕಾಗದ ಪತ್ರಗಳನ್ನು ಸರ್ಕಾರಿ ಮುದ್ರಣಾಲಯಗಳಲ್ಲೇ ಮುದ್ರಿಸುವುದು, ಈ ಅಗತ್ಯತೆಗಳಿಗೆ ಬೇಕಾಗಿರುವ ಆದೇಶವನ್ನು ಸರ್ಕಾರ ಕೂಡಲೇ ರೂಪಿಸುವುದು, ಕಾರ್ಮಿಕರಿಗೆ ಶಾಶ್ವತ ಕೆಲಸ ನೀಡಿ, ಸೇವಾಭದ್ರತೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಲಾಗಿದ್ದು, ಪ್ರತಿಭಟನೆಯಲ್ಲಿ ಸೋಮಶೇಖರ್, ಹನುಮಂತರಾಜು, ಮಲ್ಲೇಶ್, ಕನ್ನಡ ಸೇನೆಯ ದನಿಯಾಕುಮಾರ್, ವೆಂಕಟಾಚಲ, ವಿಠ್ಠಲ್, ದೊಡ್ಡಯ್ಯ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

