ತಂತ್ರಜ್ಞಾನ ಸಾಮಗ್ರಿ ಬಳಕೆ ಹೆಚ್ಚಾದರೆ ಅನಾನುಕೂಲ
ತುಮಕೂರು: ಮೊಬೈಲ್ ಫೋನ್, ಇಂಟರ್ನೆಟ್, ಫೇಸ್ಬುಕ್ ಮೊದಲಾದ ಆಧುನಿಕ ತಂತ್ರಜ್ಞಾನದ ಉಪಕರಣಗಳಿಂದ ಸಾಧ್ಯವಾದಷ್ಟೂ ಮಟ್ಟಿಗೆ ಮಕ್ಕಳನ್ನು ದೂರ ಇರಿಸುವುದು ಒಳ್ಳೆಯದು ಎಂದು ಮನೋವೈದ್ಯಕೀಯ ತಜ್ಞ ಡಾ.ಎಂ.ಟಿ. ಸತ್ಯನಾರಾಯಣ ಸಲಹೆ ನೀಡಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ ವತಿಯಿಂದ ತುಮಕೂರಿನ ನಳಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಾಪ್ತಾಹಿಕ ಜಾಗೃತಿ ಅಭಿಯಾನದಲ್ಲಿ ಅವರು ವಿಶೇಷ ಉಪನ್ಯಾನ ನೀಡುತ್ತಿದ್ದರು.
ಬದಲಾವಣೆ: 12 ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಮನಸ್ಸು ಚಂಚಲತೆ ಹೊಂದುವ ಸಾಧ್ಯತೆ ಇರುತ್ತದೆ. ಈ ಅವಧಿಯಲ್ಲಿ ಶಾರೀರಿಕವಾಗಿಯೂ ಬದಲಾವಣೆಗಳಾಗುತ್ತವೆ. ಇಂತಹ ಸಮಯದಲ್ಲಿ ಉತ್ತಮ ಅಭ್ಯಾಸ ಹಾಗೂ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಹೆಚ್ಚಾಗಿ ಉಪಯೋಗಿಸಿದರೆ ಅದರಿಂದ ಆಗುವ ಅನಾಹುತಗಳ ಅರಿವು ಇಲ್ಲದ ಕಾರಣ ಮುಂದೆ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಮನಸ್ಸನ್ನು ಕದಡುವ ಇಂತಹ ವಸ್ತುಗಳಿಂದ ದೂರ ಇರುವಂತೆ ಮಾಡಬೇಕು. ಬಳಕೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಪಯೋಗಿಸಬೇಕು ಎಂದರು.
ಮನಸ್ಸು ನೆಮ್ಮದಿಯಿಂದ ಇರಬೇಕೆಂದರೆ ಒಳ್ಳೆಯ ಆಹಾರದ ಜೊತೆಗೆ ಉತ್ತಮ ಅಭ್ಯಾಸಗಳು ಇರಬೇಕು. ಉತ್ತಮ ಚಿಂತನೆಗಳನ್ನು, ಉತ್ತಮ ಸ್ನೇಹಿತರನ್ನು ಹೊಂದಿರಬೇಕು ಎಂದ ಅವರು, ಯಾವುದೇ ಸಮಸ್ಯೆಗಳು ಎದುರಾದಾಗ ಅವುಗಳನ್ನು ಇತರರೊಂದಿಗೆ ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಇರಬೇಕು ಎಂದರು.
ಸೃಜನಶೀಲತೆ: ಮತ್ತೊಬ್ಬ ಉಪನ್ಯಾಸಕರಾದ ಮಲ್ಲಿಕಾ ಬಸವರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ತರಲೆಗಳು ನಡೆಯುತ್ತಿವೆ. ಮನಸ್ಸನ್ನು ಸೃಜನಶೀಲತೆ ಕಡೆಗೆ ಕೊಂಡೊಯ್ಯಬೇಕು. ಆಸಕ್ತಿ ಇರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಗುರಿ ಸಾಧಿಸುವತ್ತ ಮುನ್ನಡೆದಾಗ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಶಾಲೆಯಲ್ಲೂ ಇಂತಹ ವಾತಾವರಣ ಇರಬೇಕು. ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಿ ಅವರನ್ನು ನೈತಿಕ ನೆಲೆಗಟ್ಟಿನಲ್ಲಿಯೇ ಬೆಳೆಸಬೇಕು ಎಂದರು.
ದೌರ್ಜನ್ಯಕ್ಕೆ ವಿರೋಧ: ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಮಾತನಾಡಿ, ಮಕ್ಕಳಲ್ಲಿ ನೈತಿಕ ಶಿಕ್ಷಣವನ್ನು ಹೆಚ್ಚಾಗಿ ಬೋಧಿಸುವ ಅವಶ್ಯಕತೆ ಇದೆ ಎಂದರು. ಮತ್ತೊಬ್ಬ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ದೌರ್ಜನ್ಯವನ್ನು ವಿರೋಧಿಸುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಸಮಾಜ ಸೇವಕಿ ಗೀತಾ ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟಿ.ಆರ್. ಅನಸೂಯ, ಲಲಿತ ಮಲ್ಲಪ್ಪ, ರಾಜೇಶ್ವರಿ ಚಂದ್ರಶೇಖರ್, ಮಮತ ರವಿಕುಮಾರ್, ಪಾರ್ವತಮ್ಮ ರಾಜಕುಮಾರ್, ಸಾಂತ್ವನ ಕೇಂದ್ರದ ಅಂಬುಜಾಕ್ಷಿ, ಅಕ್ಕಮ್ಮ, ಮುಖ್ಯೋಪಾಧ್ಯಾಯ ರಂಗಪ್ಪ ಮೊದಲಾದವರು ಇದ್ದರು. ಶಿಕ್ಷಕ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಜಾತ ಸ್ವಾಗತಿಸಿ, ಚಂದ್ರಕಲಾ ವಂದಿಸಿದರು.
ಮುಕ್ತಾಯ ಸಮಾರಂಭ ಇಂದು: ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ಜಾಗೃತಿ ಅಭಿಯಾನ ಸಪ್ತಾಹ ಕಾರ್ಯಕ್ರಮದ ಮುಕ್ತಾಯ ಸಮಾರಂಭವು ಇಂದು ಎಂಪ್ರೆಸ್ ಪಪೂ ಕಾಲೇಜಿನಲ್ಲಿ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಸಮಾರಂಭವನ್ನು ಶಾಸಕ ಡಾ.ಎಸ್. ರಫೀಕ್ ಅಹಮದ್ ಉದ್ಘಾಟಿಸಲಿದ್ದಾರೆ. ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸಿದ್ದಲಿಂಗಪ್ರಭು ಸಮಾರೋಪ ನುಡಿಗಳನ್ನಾಡುವರು. ಅನ್ನಪೂರ್ಣ ವೆಂಕಟನಂಜಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ದೊಡ್ಡಹಾಲಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಎಸ್. ನಟರಾಜು, ಎಂಪ್ರೆಸ್ ಪಪೂ ಕಾಲೇಜು ಪ್ರಾಂಶುಪಾಲ ಬಿ. ಮರುಳಯ್ಯ ಭಾಗವಹಿಸುವರು ಎಂದು ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ್ ತಿಳಿಸಿದ್ದಾರೆ.
ಅತ್ಯಾಚಾರಿ ಬಂಧನ
ಹೆಬ್ಬೂರು: ಯುವತಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಹೆಬ್ಬೂರು ಹೋಬಳಿಗೆ ಸೇರಿದ ರಾಯಪುರ ಗ್ರಾಮದಲ್ಲಿ ಬಂಧಿಸಲಾಗಿದೆ. ದೇವರಾಜು ಬಂಧಿತ ಆರೋಪಿ. ಸ್ಥಳಕ್ಕೆ ಎಸ್ಪಿ ರಮಣಗುಪ್ತ, ಕ್ಯಾತ್ಸಂದ್ರ ಸಿಪಿಐ ರವಿಕುಮಾರ್, ಹೆಬ್ಬೂರು ಎಸ್ಐ ಕಿರಣಕುಮಾರ್ ಭೇಟಿ ನೀಡಿದ್ದರು. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

